ನಾಯಕತ್ವದ ವಿಲಕ್ಷಣ ಜಿಗಿತ!
ಹಿರಿತಲೆಮಾರಿನ ಪತ್ರಕರ್ತರ ಪೈಕಿ ಒಬ್ಬರಾದ ವಿ. ಎನ್. ಸುಬ್ಬರಾವ್, ಸಂಯುಕ್ತ ಕರ್ನಾಟಕ ಅಂಕಣವೊಂದರಲ್ಲಿ, ತಾವು ತುಂಬಾ ಹತ್ತಿರದಿಂದ ಕಂಡ 15 ಮುಖ್ಯಮಂತ್ರಿಗಳ ಪೈಕಿ ಇಂದಿನವರು, ಆತಂಕದಿಂದ ಆತಂಕಕ್ಕೇ ಜಿಗಿಯುವ ವಿಲಕ್ಷಣ ತೋರುತ್ತಿರುವ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ನಿರ‍್ಲಿಪ್ತ ನಿಲವಿನ Observerಗಳಿಗೂ, ‘ಹೌದಲ್ಲವಾ?’ ಎನಿಸುತ್ತದೆ. ಆದರಿದಕ್ಕೆ, ಯಡಿಯೂರಪ್ಪನವರ ನಾಯಕತ್ವ ಅಥವಾ ವ್ಯಕ್ತಿತ್ವಕ್ಕಿಂತಲೂ ಹೆಚ್ಚಾಗಿ ಯುಗ ಧರ್ಮದ ಅಷಡ್ಡಾಳತನವೇ ಕಾರಣವಾಗಿರಬಹುದಲ್ಲವೇ?
ಈ ಹಿಂದಿನ ಮುಖ್ಯಸ್ಥರುಗಳು, ಅಂದರೆ, ಬೆರಕೆ ಸರಕಾರಗಳ ಯುಗಕ್ಕೆ ಮುಂಚಿನವರು, ಅಷ್ಟೂ-ಇಷ್ಟು ಸ್ವಂತದ ಮಾನ-ಮರ‍್ಯಾದೆ ಹೊಂದಿರುತ್ತಿದ್ದರು; ಕೇವಲ ಕಾಯ್ದೆ-ಕಾನೂನು, ಸಂವಿಧಾನದ ವಿಧಿಗಳ ಕೂದಲೆಳೆಯ Loop-holeಗಳಲ್ಲೇ ಮುಖ ಮುಚ್ಚಿಕೊಳ್ಳಲು ಯತ್ನಿಸದೆ, ಅವರ ತಮ್ಮ ಆ Personal ಮಾನಕ್ಕೆ ಮುಕ್ಕಾದಂತೆ ಎಚ್ಚರ ವಹಿಸುತ್ತಿದ್ದರು. ಹಾಗೆ ನೋಡಿದರೆ ನಮ್ಮ ಎಷ್ಟೋ ಆಡಳಿತ ವಿಧಿ-ಸಂಹಿತೆಗಳು ಸಹ, ಸಾರ್ವಜನಿಕ ಜೀವನದ ಆಡಳಿತಗಾರರಲ್ಲಿ, ಮನುಷ್ಯತ್ವದ ಮರ‍್ಯಾದೆಯನ್ನು Taken for granted ನಿಲವು ತಳೆದಿರುವಂತೆನಿಸುತ್ತದೆ! ಈಗಲಾದರೋ ಅದನ್ನು ಕೂಡಾ ದಿಟ್ಟ ಕಾಯ್ದೆ-ಕಾನೂನುಗಳಿಂದಲೇ ಕಾಪಾಡಬೇಕಾಗಿಬಂದಿರುವುದನ್ನು ನಮ್ಮ ಪ್ರಜಾಸತ್ತೆಯ ಸುದೈವವೆನ್ನಬೇಕೇ?
ರಾಜಕೀಯವೆನ್ನುವುದೇ ನೀತಿಗೆಟ್ಟ ನಡಾವಳಿಗೆ ಪರವಾನಗಿ ಎಂಬಮತಾಗಿರುವುದಕ್ಕೆ ಮೂಲಕಾರಣ, ಮೊದಲನೆಯದಾಗಿ ಶಾಸಕರಾಗಲೀ, ಸಂಸದರಾಗಲೀ ಸಮಾಜದ ಬಹುಮತವನ್ನು ಪ್ರತಿನಿಧಿಸದೇ ಇರುವುದು. ಒಟ್ಟು ಚಲಾಯಿತ ಮತದ ಶೇ. 20-25ರಷ್ಟನ್ನೂ ಪಡೆಯಲಾರದವರೂ ಜನಪ್ರತಿನಿಧಿಗಳಾಗುವ ಘನ ಅವಕಾಶ ನಮ್ಮ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿದೆ! ತಮ್ಮ ವರ್ತನೆಯ ಬಗ್ಗೆ ತುಂಬಾ ಬೀದಿಜನ ಏನೇನು ಆಡಿಕೊಳ್ಳುತ್ತಾರೆ ಎಂಬ ಬಗ್ಗೆ ಇವರ Don’t Care ಸಹಜವೇ ಎನಿಸುತ್ತದೆ! ಪಕ್ಷಾಂತರ, Whip ಉಲ್ಲಂಘನೆ, ‘ಆಪರೇಷನ್-ಅದು’, ‘ಆಪರೆಷನ್-ಇದು’ ಇತ್ಯಾದಿಗಳು ‘ಬೀದಿ ಹಾದರ’ ಎಂದು ಇವರಿಗನ್ನಿಸುವದೇ ಇಲ್ಲ! ಇಂಥವಕ್ಕೆ ನಾಚಬೇಕೆಂಬ ಕಾನೂನೇನೆಲ್ಲಿದೆ? ಎಂದು ಪ್ರಶ್ನಿಸುತ್ತಾರೆ; ಕೋರ್ಟಿಗೇ ಹೋಗಿ ಗೆಲ್ಲುವುದೂ ಇದೆ! ಆದ್ದರಿಂದಲೇ, ತಮ್ಮೆಲ್ಲಾ ಓಲೈಕೆಯನ್ನೂ ಈಜನ, ಶೇ. 20-25ರ ಆ Committed Marginಗೇ ಮೀಸಲಿಡುತ್ತಾರೆ. ಪರಿಣಾಮವನ್ನು ನಾ ಕಂಡುಂಡನುಭವಿಸುತ್ತಿದ್ದೇವೆ!
ಕಡ್ಡಾಯ ಮತದಾನ, ಪಕ್ಷಾಂತರ ನಿಷೇಧ ಕಾಯ್ದೆಗೆ ಹರಿತ ಹಲ್ಲುಗಳ ಜೋಡನೆ, ಭ್ರಷ್ಟ ಪ್ರತಿನಿಧಿಗಳನ್ನು ವಾಪಸ್ ಕರೆಸುವ ಅವಕಾಶ ಇತ್ಯಾದಿ ವೀರಾವೇಶಗಳೆಲ್ಲಾ ಇಂದು ಅನುರಣಿತವಾಗಿ ಕೇಳಿಬರುತ್ತಿದೆ. ಸಾರ್ವಜನಿಕ ಜೀವನಕ್ಕೆ ಮರ‍್ಯಾದೆ ಎನ್ನುವುದು ಇನ್ನೂ ಲೇಶಮಾತ್ರವಾದರೂ ಉಳಿದಿರುವುದೇ ಆದರೆ, ಮೂಲಭೂತವಾಗಿ ಪ್ರಜಾಪ್ರತಿನಿಧಿ ಕಾಯ್ದೆಗೇ ತಿದ್ದುಪಡಿ ತರುವ ಬಗ್ಗೆ ಅದು Serious ಆಗಿ ಅಲೋಚಿಸಬೇಕು!