ನೆಲದ ನಡೆಯ ವಿಧಾನ
ನೆಲದ ನಡೆಯ ವಿಧಾನ
ಈ ಇದೇ ಮಣ್ಣು ನೆಲವನ್ನಗೆಯತೊಡಗಿದರೆ;
ಸ್ವರ್ಣ ಖಚಿತ ಸಿಂಹಾಸನದ ಜೊತೆಜೊತೆಗೇ
ಬತ್ತೀಸ ಪುತ್ಥಳಿಗಳು ತಡೆ ತಡೆದು ಹೇಳಿದ ಕತೆ-
ಕೇಳ ಕೇಳುತ್ತಲೇ ಗುರಿಯಿಂದ ದೂರವಾದವರ ವ್ಯಥೆ.
ಈ ಇದೇ ಮಣ್ಣು ನೆಲವನ್ನು ಚಣಕಾಲ ದಿಟ್ಟಿಸಿದರೆ;
ನೆಲದ ಮರೆಯ ನಿಧಾನವನ್ನನುಸರಿಸಿ
ಪ್ರಭುವಾಗಿ ಬೆಳೆದ ಅಲ್ಲಮನ ಕಾಮಲತೆ
ತಿರು ತಿರುಗಿ ಅನಾಥವಾಗುತ್ತಲೇ ಉಳಿದ ಭಾವ-ಗೀತೆ.
ಈ ಇದೇ ಮಣ್ಣು ನೆಲವನ್ನುತ್ತತೊಡಗಿದರೆ;
ನೇಗಿಲ ಚೂಪಿಗೆ ಸಿಕ್ಕು ನರಳುವಳು ಸೀತೆ
ಪುರುಷೋತ್ತಮನ ಮಡದಿಯಾದರೂ ಕುಲಟೆ
ಅಗ್ನಿ ಪರೀಕ್ಷೆಗೆ ದಬ್ಬುವುದು ನಾಲಿಗೆಯ ತೀಟೆ.
ಈ ಇದೇ ಮಣ್ಣು ನೆಲವನ್ನಳೆಯತೊಡಗಿದರೆ;
ಹೆಜ್ಜೆ ಹೆಜ್ಜೆಗೂ ತೊಡರುವ ವೀರಗಲ್ಲುಗಳು
ಒಬ್ಬನ ಹೆಸರನ್ನಳಿಸಿ ಕೆತ್ತಿಸಿದ ಮತ್ತೊಬ್ಬನ ಫಲಕಗಳು
ಆಚಂದ್ರಾರ್ಕ ಕಾಡುತ್ತಲೇ ಇರುವ ಶ್ರೇಷ್ಟತೆಯ ವ್ಯಸನಗಳು.
ಈ ಇದೇ ಮಣ್ಣು ನೆಲವನ್ನಗೆದಗೆದು ,
ಸವೆದು ಮೊಂಡಾಗಿರುವ ಹಾರೆ,ಗುದ್ದಲಿ,ಸನಿಕೆ
ಅರಗಿನರಮನೆಯಿಲ್ಲಿ ತಡೆಯಲಾರದ ಸೆಖೆ
ಗಡುವು ಮೀರಿದರೂ, ಮುಂದುವರಿಯುವುದು ತನಿಖೆ!
ಈ ಇದೇ ಮಣ್ಣು ನೆಲದ ಪರಿಧಿಯೊಳಗೇ ಸುಳಿಸುಳಿದು,
ಬಿಡದೇ ಬೆಂಬತ್ತಿರುವ ಪೂರ್ವ ಸೂರಿಗಳ ಬಿಕ್ಕುಗಳು
ಸುಖದ ಉಷ್ಣದ ಜೊತೆಗೇ ಶೀತ ಮಾರುತದ ವಾಕ್ಕುಗಳು
ಮಥುರೆಯ ದಬ್ಬಾಳಿಕೆಯಲ್ಲರಳಿದ ದ್ವಾರಕೆಯ ನಕಾಶೆಗಳು.
ಈ ಇದೇ ಮಣ್ಣು ನೆಲದ ಘಮವನ್ನಾಸ್ವಾದಿಸತೊಡಗಿದರೆ;
ಪುಳಕ ಮೈಯಲ್ಲೆಲ್ಲ ಹರಡಿ, ಕನಸು ಕಾಮರಥಿ
ತಡೆಯಿಂದಿಳಿದಿಳಿದು ಹೊರ ಚಿಮ್ಮುವ ಬಾಗೀರಥಿ
ರಂಗು ರಂಗಿನುತ್ಸವಕೆ ಕಾಯ ಕರ್ಪೂರದಾsರತಿ!
(ಪ್ರಜಾವಾಣಿ ಪತ್ರಿಕೆಯ ದಿನಾಂಕ ೨೪.೧೦.೨೦೧೦ರ ಸಾಪ್ತಾಹಿಕದಲ್ಲಿ ಪ್ರಕಟಿತ ಕವಿತೆ)