“ಅಟ್ಟ” ಅಂದ್ರೆ ಮೇಲ್ಚಾವಣಿ ತಾನೇ?

“ಅಟ್ಟ” ಅಂದ್ರೆ ಮೇಲ್ಚಾವಣಿ ತಾನೇ?

ಪ್ರತಿ ಸಾರಿ ಅಂಗಡಿಗೆ ಅಡಿಗೆ ಸಾಮಗ್ರಿಗಳನ್ನ ತರಲು ಹೋದಾಗ ನನಗೆ ಸಿಕ್ಕಾಪಟ್ಟೆ ಗೊಂದಲ. ದಾಲ್ ಅಂದ್ರೆ ಏನು, ತೂರ್ದಾಲ್ ಅಂದ್ರೆ ಏನು, ಚಾವಲ್ ಅಂದ್ರೇನು ಅಂತ. ಸುಮಾರು ದಿನಗಳ ಮೇಲೆ ತಿಳಿಯಿತು ದಾಲ್ ಎಂದರೆ ಬೇಳೆ ಎಂದು. ‘ತೊಗರಿ ಬೇಳೆ’, ‘ಕಡಲೆ ಬೇಳೆ’ ಎಂದು ಕನ್ನಡ ಹೆಸರುಗಳನ್ನಿಡಲು ಇವರಿಗೇನು ದಾಡಿ ಎಂದುಕೊಳ್ಳುತ್ತಿದ್ದಂತೆಯೇ ಇನ್ನೊಂದು “ಅಟ್ಟ” ಎಂಬ ಪದಾರ್ಥ ಕಾಣಿಸಿತು. ಅಟ್ಟ ಎಂದರೆ ಮೇಲ್ಚಾವಣಿ ಎಂದರ್ಥ ಕನ್ನಡದಲ್ಲಿ. “ಇದ್ಯಾವ್ದಪ್ಪ ಇದು ಅಟ್ಟ?” ಅಂತ ಅಂಗಡಿಯವನನ್ನು ಕೇಳಿದ್ರೆ, “ಅದು ಗೋಧಿ ಹಿಟ್ಟು ಸಾರ್” ಎನ್ನೋದೇ.

 

ಕನ್ನಡಿಗರ ಮೇಲೆ ಯಾಕೆ ಈ ತರ ಗೊಂದಲಗೊಳಿಸುವ ಪದಪ್ರಯೋಗ ಅಂತ ಇನ್ನೂ ಅರ್ಥವಾಗಿಲ್ಲ. ಎರಡನೆಯದಾಗಿ ಗ್ರಾಹಕನಿಗೆ ಯಾವುದೇ ವಸ್ತು/ಆಹಾರ ಪದಾರ್ಥದ ಹೆಸರು/ಮಾಹಿತಿ (ಉಧಾ: ಪೌಷ್ಟಿಕಾಂಶಗಳ ವಿವರ, ಮಾಡುವ ವಿಧಾನ) ತನ್ನ ಭಾಷೆಯಲ್ಲಿ ಇಲ್ಲದಿದ್ದರೆ, ಅವನು ಕೊಳ್ಳಲು ಹಿಂಜರಿಯುತ್ತಾನೆ.  ಹಾಗೆಯೇ ಗೋಧಿ ಹಿಟ್ಟನ್ನು “ಅಟ್ಟ” ಎಂದರೆ “ಅದು ಏನೋ ಹೆಂಗೋ, ಯಾಕಪ್ಪ ನನಗದು” ಎನ್ನುತ್ತಾನೆ. ಈ ತರದ ಹೆಸರುಗಳಿಂದ ಕೊಳ್ಳುಗರಿಗೆ ತೊಂದರೆಯಷ್ಟೇ ಅಲ್ಲದೇ, ಪದಾರ್ಥಗಳನ್ನು ತಯಾರಿಸುವ ಕಂಪನಿಗಳೂ ಮಾರಾಟ ಹೆಚ್ಚಿಸಲು ಕಷ್ಟಪಡಬೇಕಾಗಬಹುದು.

 

ಅಟ್ಟ, ದಾಲ್, ಸೂಜಿ ಇಂತಹ ಕೆಲು ಅರ್ಥವಾಗದ ಪದಗಳ ಬದಲು ಕನ್ನಡ ಪದಗಳು ಮೂಡುವಂತೆ ಬದಲಾಯಿಸುವ ಶಕ್ತಿ ಕನ್ನಡ ಗ್ರಾಹಕರಿಗೆ ಮಾತ್ರ ಇರುವುದು. ಗ್ರಾಹಕರಾದ ನಾವೆಲ್ಲರೂ ಅಂಗಡಿಗಳಿಗೆ, ಸೂಪರ್ ಮಾರ್ಕೆಟ್‍ಗಳಿಗೆ ಹೋದಾಗಲೆಲ್ಲಾ “ನಮಗೆ ಅಟ್ಟ ಬೇಡ, ಗೋಧಿ ಹಿಟ್ಟು ಬೇಕು” ಅಥವಾ “ಬೇಳೆ ಬೇಕು, ದಾಲ್ ಬೇಡ” ಎನ್ನೋಣ, ಅದನ್ನೇ ಚಲಾಯಿಸೋಣ. ಈ ಪದಾರ್ಥಗಳನ್ನು ತಯಾರಿಸುವ ಕಂಪನಿಗಳಿಗೂ ಮಿಂಚೆ ಬರೆದು, ಪೊಟ್ಟಣಗಳ ಮೇಲೆ ಕನ್ನಡ ಹೆಸರು ನಮೂದಿಸುವಂತೆ ಒತ್ತಾಯಿಸೋಣ.

 

ಆಗ ಮಾತ್ರ ಅಟ್ಟ, ದಾಲ್, ಚಾವಲ್ ಸೂಜಿಗಳು ಮಾಯವಾಗಿ, ಗೋಧಿಹಿಟ್ಟು, ಬೇಳೆ, ಅಕ್ಕಿ ರವೆಗಳು ಮಾರುಕಟ್ಟೆಯಲ್ಲಿ ಕಾಣಿಸತೊಡಗುತ್ತವೆ.

Rating
No votes yet