ಡೈರಿ ::ಕೊನೆಯ ಕಂತು
ಹಿಂದಿನ ಕಂತು : http://sampada.net/blog/kamathkumble/11/11/2010/28998
೧೨
ಡೈರಿ ನಾನು ಮುಚ್ಚ್ಚಿ ಬದಿಗಿಟ್ಟೆ, ನನ್ನ ಹಿಂದೆ ನಡೆದಿದ್ದ ಅದೆಷ್ಟೋ ವಿಚಾರಗಳು ನನ್ನ ಮುಂದೆ ಬಂದಾಗಿತ್ತು, ಮನಸ್ಸಲ್ಲಿ ನನ್ನ ಸಹನಾ ನನ್ನಿಂದ ದೂರವಾಗಿರುವುದು ಎಂಬ ಮಾತು ಖಾತ್ರಿಆಯಿತು. ಅವಳ ಬಗೆಗೆ ನನಗಿದ್ದ ಪ್ರೀತಿ ಇಂದು ಇನ್ನೂ ಎರಡು ಪಟ್ಟು ಹೆಚ್ಚಾಯಿತು,ನಾನು ನಿನ್ನೆ ಹೋಗಿದ್ದರೆ ಅವಳನ್ನು ಬೇಟಿಯಾಗುತಿದ್ದೆ ಅವಳು ಬೇರೆ ಏನೋ ಕಾರಣ ಹೇಳಿ ನನ್ನಿಂದ ದೂರ ಆಗುತಿದ್ದಳು ಎಂದೆನಿಸಿತು. ಅವಳಿಗೆ ದೂರ ಹೋಗುವ ವಿಷಯ ಗೊತ್ತಿದ್ದರು ಯಾಕಾಗಿ ನನ್ನನ್ನು ನಿನ್ನೆ ಭೇಟಿಮಾಡಲು ಕರೆದದ್ದು ಆಕೆ ..?
ಎರಡು ತಿಂಗಳಿಂದ ಅವಳು ತೋರಿಸುತಿದ್ದ ನನ್ನ ಬಗೆಗಿನ ಆಲಸ್ಯದ ಮೂಲ ಅಂದು ಜೊತೆಯಾಗಿ ಕುಡಿದ ಕಾಫಿ ಎಂದು ಇವತ್ತು ತಿಳಿಯಿತು. ಅಂದು ಪ್ರೇಮಿಗಳ ದಿನದಂದು ಸ್ನೇಹಳಿಗೆ ನಿರಾಕರಿಸಿ ಅವಳಿಗೆ ಪ್ರೇಮ ನಿವೇದನೆ ಮಾಡಿದಾಗ ಅವಳು ಉತ್ತರಿಸದೆ ಇದ್ದ ಕಾರಣ, ಒಂದು ತಿಂಗಳ ಹಿಂದೆ ನಾನು ಒಮ್ಮೆ ಅವಳಿಗೆ ಕರೆ ಮಾಡಿದಾಗ ಅವಳು "ನಾನು ಮನೆಯಲ್ಲಿ ಇದ್ದೇನೆ, ಹಿರಿಯರ ಎದುರಲ್ಲಿ ಮಾತಾಡುವುದು ನನಗೆ ಸರಿ ಅನಿಸಲ್ಲ, ಮಂಗಳೂರಿಗೆ ಬಂದ ನಂತರ ನಾನೇ ನಿನಗೆ ಕರೆ ಮಾಡುತ್ತೇನೆ. "ಅಂದ ಮಾತಿನ ಅರ್ಥ, ಅವಳು ೨ ತಿಂಗಳಿಂದ ನಾನು ಓದಿನಲ್ಲಿ ಬ್ಯುಸಿ ಇದ್ದೇನೆ ಮೆಸ್ಸೇಜ್ ಮಾಡಲು ಪುರುಸೊತ್ತಿಲ್ಲ ಅಂದ ವಿಚಾರ ಇಂದು ಮನದಟ್ಟಾಯಿತು. ನಾನು ಇನ್ನು ಸ್ನೇಹಳ ಪ್ರೀತಿಯನ್ನು ಸ್ವಿಕರಿಸ ಬೇಕೇ ..? ಇಲ್ಲ ನನ್ನ ಬಿಟ್ಟು ಹೋದ ಸಹನಳನ್ನು ಪಡಕೊಳ್ಳಲು ಪ್ರಯತ್ನಿಸ ಬೇಕೇ ಎಂಬ ದ್ವಂದ್ವ ಆವರಿಸಿತು. ನನಗರಿವಿಲ್ಲದಂತೆ ನನ್ನನ್ನು ಬಿಟ್ಟು ಅವಳು ಹೋಗಿದ್ದರೆ ಬೇಜಾರಿರಲಿಲ್ಲ, ಈಗ ನನಗೆ ಎಲ್ಲ ವಿಚಾರ ತಿಳಿಯಿತಲ್ಲಾ ಅದಕ್ಕೆ ಈ ತರಹದ ವೇದನೆ ಕಾಡುತಿತ್ತು. ಕೊನೆ ಪಕ್ಷ ಅವಳು ಡೈರಿಯ ಮೊದಲ ಪುಟದಲ್ಲಿ ಬರೆದ "ಇದು ನನ್ನ ಮನಸ್ಸು ,ನೀವು ನನ್ನವ( ಳು/ನು ) ಆದರೆ ಮುಂದೆ ಹೋಗುವ ಮುಂಚೆ ಒಂದು ಕ್ಷಣ ಆಲೋಚಿಸು ...." ವಾಕ್ಯದ ಬಗ್ಗೆ ಚಿಂತಿಸಿದ್ದರೆ ನನಗೆ ಈ ಪರಿಸ್ತಿತಿ ಬರುತ್ತಿರಲಿಲ್ಲಾ , ಡೈರಿ ಓದುವುದು ತಪ್ಪೆಂದು ಗೊತ್ತಿದ್ದರು ಯಾಕಾದರೂ ನಾನು ಅವಳ ಮನಸನ್ನು ತಿಳಿಯುವ ಹುಚ್ಚು ಪ್ರಯತ್ನಕ್ಕೆ ಕೈಹಾಕಿದೇನೋ ... ಎಂದನಿಸಿತು.
ಆದದ್ದು ಸಾಕು ಇನ್ನೂ ಮುಂದೆ ಈ ಡೈರಿ ಓದುವುದು ಬೇಡ ಅಂದು ಕೊಂಡಿದ್ದೆ, ಆದರೆ ಅವಳ ಮನಸ್ಸಲ್ಲಿ ನನ್ನ ಸ್ಥಾನ ನಾ ಕಳಕೊಂಡೆನೇ ಎಂಬ ಪ್ರಶ್ನೆ ಕಾಡಲಾರಂಬಿಸಿತು. ಓದುವುದು ತಪ್ಪಲ್ಲಾ, ಓದಿದರೆ ಈಗ ಅವಳೆಲ್ಲಿರುವಳು , ಸ್ನೇಹಳ ಮನಸ್ತಿತಿ ಏನಾಗಿರುವುದು ಎಲ್ಲ ತಿಳಿದಂತಾಗುತ್ತದೆ ಎಂದು ಮುಚ್ಚಿಟ್ಟ ಡೈರಿ ತೆರೆದೆ
ಫೆಬ್ರವರಿ ೧೪ ರ ನಂತರ ಹಲವು ಪೇಜ್ ನಲ್ಲೂ ಕೆಂಪು ಬಣ್ಣದ ಲೇಖನ ವಿರಲಿಲ್ಲ, ಹಿಂದಿನಂತೆ ಪುಟದ ಕೆಳಗೆ ನನ್ನ ಕುರಿತಾಗಿ ಬರೆದ ವಾಕ್ಯಗಳೇ ಮಾಯವಾಗಿದ್ದವು. ನಾನು ನನ್ನನ್ನೇ ಪ್ರಶ್ನಿಸಿದೆ ನಾನು ಅವಳನ್ನು ಆ ದಿನಗಳಲ್ಲಿ ಸಂಪರ್ಕಿಸದೆ ಇದ್ದೇನೆ ..? ಇಲ್ಲ ಪ್ರತಿ ದಿನ ಅವಳಿಗಾಗಿ ಹೊಸ ಹೊಸ ಮೆಸ್ಸೇಜ್ ಗಳನ್ನೂ ಹುಡುಕಿ ಕಳುಹಿಸುತಿದ್ದೆ, ಅದರೂ ಅವಳ್ಯಾಕೆ ಈ ವಿಚಾರವನ್ನು ಅಲ್ಲಿ ನೋಟ್ ಮಾಡಲಿಲ್ಲ...?
ಪುಟ ತಿರುವುತ್ತಾ ಹೋದೆ, ಎಲ್ಲೂ ನನ್ನ ಕುರಿತಾದ ಇಲ್ಲವೇ ಸ್ನೇಹಳ ಕುರಿತಾದ ಮಾತಿರಲಿಲ್ಲ,ಹಿಂದಿನ ಬರವಣಿಗೆಗೂ ಈಗಿನ ಬರವಣಿಗೆಗೂ ಅಜಗಜಾಂತರ ವ್ಯತ್ಯಾಸವಿತ್ತು. ೬೦ ದಾಟಿದ ಒಬ್ಬ ಮೇಧಾವಿಯ ದಿನಚರಿಯಂತೆ ಇತ್ತು ಎಲ್ಲಹ ಬರವಣಿಗೆ. ಮನುಷ್ಯರ ಚಿತ್ರ ವಿಚಿತ್ರ ನಡುವಳಿಕೆ, ರಾಜಕಾರಣಿಗಳ ಮರ ಕೊತಿಯಾಟದ ನಾಟಕ,ರೈತರ ಸಮಸ್ಸೆ, ಶೋಷಣೆಗೆ ಒಳಗಾದ ಮಹಿಳೆಯ ಕುರಿತಾದ ಬರಹಗಳು ಅಲ್ಲಿ ತುಂಬಿದ್ದವು. ನನ್ನ ಸಹನಾ ತಪ್ಪಾಯಿತು ಶ್ರಾವಣಿ ತುಂಬಾ ಬದಲಾಗಿದ್ದಳು ಆ ಘಟನೆಯ ಬಳಿಕ, ನನ್ನನ್ನು ಮರೆಯಲು ಇಂತಹ ಹವ್ಯಾಸದಲ್ಲಿ ತೊಡಗಿದ್ದಳು.
ಓದುತ್ತಾ ಓದುತ್ತಾ ಅವಳು ಬರೆದ ಕೊನೆಯದಿನ ಅಂದರೆ ಏಪ್ರಿಲ್ ೨೫ ನಿನ್ನೆಯ ಲೇಖನದ ವರೆಗೆ ಬಂದೆ ಪುಟ ತಿರುಗಿಸಿದೆ, ಅದು ಕೆಂಪುಬಣ್ಣದ ಲೇಖನಿ ಇಂದ ಬರೆದಿತ್ತು .ಅವ್ವು ನನ್ನ ಕುರಿತಾದ ಮಾತಾಗಿತ್ತು.
೧೩
ನನ್ನ ಮನಸ್ಸು ಇಷ್ಟು ಗಟ್ಟಿಯಾದದ್ದು ಎಂದು ನನಗೆ ಗೊತ್ತಿರಲಿಲ್ಲ, ನೋಡು ೨ ತಿಂಗಳಿಂದ ಅವನಬಗ್ಗೆ ಯಾವುದೇ ವಿಚಾರ ಮಾಡಲಿಲ್ಲ ಆದರೆ ನಾಳೆ ಅವನನ್ನು ಬಿಟ್ಟು ಬಹುದೂರ ಹೋಗುವ ನಾನು ಇಂದು ಅವನಿಗೆ ನಾಳೆ ನನ್ನನ್ನು ಮಂಗಳೂರಿನಲ್ಲಿ ಬೇಟಿಆಗುವಂತೆ ಹೇಳಿ ಮೆಸ್ಸೇಜ್ ಮಾಡಿದೆ, ನಾಳೆ ನನ್ನ ಎಲ್ಲಾ ಕಥೆಗೂ ಒಂದು ಸುಂದರ ಪೂರ್ಣ ವಿರಾಮ ಹಾಕುತ್ತೇನೆ, ಯಾರಿಗೂ ಗೊತ್ತಾಗದಂತೆ ಸ್ನೇಹಳಿಗೆ ಅವನನ್ನು ಸೇರಿಸುವಂತೆ ಮಾಡುತ್ತೇನೆ, ನನ್ನ ಸ್ನೇಹಿತೆ ಚೆನ್ನಾಗಿರಬೇಕು, ಅವನು ಅವಳಿಗೆ ಸಿಕ್ಕುವುದರಲ್ಲೇ ಹೆಚ್ಚಿನ ಅರ್ಥ ವಿರುವುದು.
ನಾನು ಅವನಲ್ಲಿ ಕಳೆದ ಎರಡು ತಿಂಗಳಿಂದ ಮಾತಾಡಿರಲಿಲ್ಲ, ಅವನಂತೂ ದಿನಕ್ಕೆ ೩-೪ ಮೆಸ್ಸೇಜ್ ಕಳುಹಿಸುತ್ತ ಇದ್ದ ಮೊದಲಿಗೆ ಅವನ ಮೆಸ್ಸೇಜ್ ಗಾಗಿ ಕಾಯುತಿದ್ದ ನನಗೆ ದಿನ ಕಳೆದಂತೆ ವೈರಾಗ್ಯ ಹೆಚ್ಚಿತು, ಇದು ಹದ್ದು ಮೀರುವುದು ಬೇಡ ಹೇಳಿ ನಾನು ನನ್ನ ನೆಚ್ಚಿನ ವಿಷಯವಾವ ಮನಶಾಸ್ತ್ರ ದ ಬಗ್ಗೆ Phd ಮಾಡುವಂತ ತೀರ್ಮಾನಕ್ಕೆ ಬಂದೆ, ಮೈಸೂರ್ ವಿಶ್ವವಿದ್ಯಾನಿಲಯದಲ್ಲಿ ಸೀಟ್ ಸಿಕ್ಕಿತ್ತು, ಅದರೂ ಅಲ್ಲಿ ಇದ್ದರೆ ಮನಸ್ಸು ಮತ್ತೆ ಮಂಗಳೂರಿನ ಕಡೆಗೆ ವಾಲುವುದರಲ್ಲಿ ಸಂಶಯವಿಲ್ಲ, ವಿದೇಶದಲ್ಲಿ ಹೋಗಿ ಓದುವ ಆಶೆ ಇದ್ದರು ಕೆಳ ಮದ್ಯಮ ವರ್ಗದ ತಂದೆ ಸತ್ತ ಮಗಳಿಗೆ ಅಷ್ಟು ಹಣ ಹೊಂದಿಸಿ ಕೊಡುವವರು ಯಾರು ಇರಲಿಲ್ಲ. ಅದಕ್ಕಾಗಿಯೇ ಎರ್ನಾಕುಲಂ ಆರಿಸಿ ಕೊಂಡೆ. ನನ್ನ ಸಣ್ಣ ಮಾಮನವರು ಅಲ್ಲಿ ಬ್ಯಾಂಕ್ ಉದ್ಯೋಗಿ ಮದುವೆ ಆಗದ ಕಾರಣ ನನ್ನ ಓದಿಗೆ ಅವರೇ ಆರ್ಥಿಕ ಸಹಾಯ ಒದಗಿಸುವವರು.ತಂದೆ ಸತ್ತಾಗಿಂದ ಅಮ್ಮ ಅಲ್ಲೇ ಇದ್ದರು, ನಾನು ಅಲ್ಲೇ ಹೋಗುವ ನಿರ್ಧಾರಕ್ಕೆ ಬಂದೆ.
ನಾಳೆ ಅವ ಬಂದೇ ಬರುತ್ತಾನೆ ಎಂಬ ನಂಬಿಕೆ ನನ್ನಲ್ಲಿದೆ. ಅವನಿಗೆ ೨ ಗಂಟೆಗೆ ಬಾ ಎಂದು ಮೆಸ್ಸೇಜ್ ಮಾಡಿದ್ದೇನೆ. ನಾಲ್ಕು ಗಂಟೆಯವರೆಗೆ ಅವನನ್ನು ಅಲ್ಲಿ ಕಾಯುತ್ತೇನೆ, ಅವ ಬಾರದೆ ಇದ್ದರೆ ನಾನು ನನ್ನ ಟ್ರೈನ್ ಹಿಡಿದು ಕೊಂಡು ಎರ್ನಾಕುಲಂ ಸೇರುತ್ತೇನೆ, ಅವ ಸ್ವಲ್ಪ ಸಮಯ ನನ್ನ ಮೊಬೈಲ್ ಗೆ ಫೋನ್ ಆಯಿಸಬಹುದು,ಆದರೆ ನಾನು ಟ್ರೈನ್ ಹತ್ತುತಿದ್ದಂತೆ ಆ ಸಿಂ ಬದಲಾಯಿಸಿ ಬಿಡುತ್ತೇನೆ, ಕೆಲದಿನದ ಬಳಿಕ ನನ್ನ ಹತಾಶೆಯಲ್ಲೇ ಅತ್ತೆ ಮಗಳಾದ ಸ್ನೇಹಳ ಸೇರಿದರು ಸೇರಿಯಾನು.
ಒಂದು ವೇಳೆ ಅವನು ಅಲ್ಲಿ ಬಂದರೆ ಅವನಿಗಾಗಿ ನಾನು ಶ್ರಾವಣಿಯಾಗೆ ಎದುರಿಸುತ್ತೇನೆ.ಅವನಿಗಾಗಿ ನಾನು ಬರೆದಿಟ್ಟ ಪತ್ರ ಕೊಟ್ಟು ನಾನು ನನ್ನಷ್ಟಕ್ಕೆ ಟ್ರೈನ್ ಹತ್ತುತ್ತೇನೆ, ಅವನು ಆ ಪತ್ರ ಓದಿದ ಬಳಿಕ ಸ್ನೇಹಳನ್ನು ಸೇರಿಯೇ ಸೇರುತ್ತಾನೆ.
ಸ್ನೇಹ ಪೂರ್ಣ ಮನಸ್ಸಿಂದ ಅವನನ್ನು ಪ್ರೀತಿಸುತ್ತಾಳೆ ಅವಳಿಗೆ ಅವನು ಸಿಗಬೇಕು, ನಾನು ಅವಳಿಗೆ ಕೊಟ್ಟ ಮಾತು ಉಳಿಸಬೇಕು
ಶ್ರಾವಣಿ
೧೪
ಈ ಪುಟ ತಿರುಗಿಸುತಿದ್ದಂತೆ ಮುಂದಿನ ಪುಟಗಳ ನಡುವೆ ನನಗಾಗಿಯೇ ಇಟ್ಟಪತ್ರ ಕಣ್ಣಿಗೆ ಬಿತ್ತು, ಅದನ್ನು ನಾನು ಕುತೂಹಲದಿಂದಲೇ ಕೈಗೆತ್ತಿ ಕೊಂಡೆ, ಡೈರಿಯಲ್ಲಿದ್ದ ಕೈಬರಹವೇ ಅದರಲ್ಲಿತ್ತು.ಓದಲು ಶುರು ಮಾಡಿದೆ,
ಪ್ರಿಯ
ನಿನ್ನ ಪ್ರಿಯತಮೆಯ ಸಹನಾಳ ಪ್ರೀತಿಯ ನಮಸ್ಕಾರಗಳು, ಇದೇನು ಸಹನಾ ಶ್ರಾವಣಿಯ ಕೈಯಲ್ಲಿ ಪತ್ರ ಕಳುಹಿದ್ದಾಳೆ ಎಂದು ಆಶ್ಚರ್ಯವೇ,ಎಲ್ಲಾ ವಿಚಾರವನ್ನು ನಿನ್ನಲ್ಲಿ ಮುಚ್ಚುಮರೆ ಇಲ್ಲದೆ ಹೇಳುತ್ತಿದ್ದೇನೆ, ಅಸಲಿಗೆ ನಿನ್ನ ಕಲ್ಪನೆಯಲ್ಲಿರುವ ಸಹನಾ ನಾನೇ, ನಿನ್ನ ಅತ್ತೆಮಗಳು ಸ್ನೇಹ, ಮೊದಲಿಗೆ ನಿನ್ನನ್ನು ಆಡಿಸಲೆಂದು ನಾನು ನನ್ನ ಗೆಳತಿಯ ಶ್ರಾವಣಿಯ ಮೊಬೈಲ್ ನಿಂದ ಮೆಸ್ಸೇಜ್ ಮಾಡಲು ಶುರು ಮಾಡಿದ್ದೆ, ಆದರೆ ನನ್ನ ಹುಡುಗಾಟ ಕ್ರಮೇಣ ನಿನ್ನನ್ನು ನನ್ನೆಡೆಗೆ ಅಂದರೆ ನನ್ನಲ್ಲಿನ ಸಹನಾ ನೆಡೆಗೆ ಆಕರ್ಷಿಸುವಂತೆ ಮಾಡಿದ್ದು ನನಗೆ ಅರಿವಾಯಿತು,
ನಿನಗಾಗಿ ನಾನು ಹಿಂದೊಮ್ಮೆ ಪ್ರೊಪೋಸ್ ಮಾಡಿದಾಗ ನೀನು ಒಲ್ಲೆ ಎಂದಿದ್ದೆ, ಅದಕ್ಕಾಗಿ ನಿನ್ನ ಮನಸ್ಸಲ್ಲಿ ಏನಿದೆ ಎಂದು ತಿಳಿಯುವ ಕುತೂಹಲದಲ್ಲೇ ನಾನು ಆ ಹುಡುಗಾಟ ಆಡಿದ್ದು
ಆದರೆ ಅದು ನಿನ್ನನ್ನು ನನ್ನಿಂದ ತುಂಬಾ ದೂರ ಕೊಂಡು ಹೋಗುತ್ತದೆ ಎಂದು ಕೊಂಡಿರಲಿಲ್ಲ.
ನಾನು ಪ್ರೇಮಿಗಳ ದಿನದಂದು ನೀನು ನನ್ನನ್ನು ನಾನಾಗಿಯೇ ಅಂದರೆ ಸ್ನೇಹಳನ್ನು ಸ್ವೀಕರಿಸುತ್ತಿ ಅಂದುಕೊಂಡಿದ್ದೆ,ಆದರೆ ನಾನು ಸ್ನೇಹ ಆಗಿರುವಾಗ ನೀನು ಅಂದೂ "ನನ್ನಲ್ಲಿ ಪ್ರೀತಿ ಇಲ್ಲ.." ಅಂದೆ, ಬೇಜಾರಾಯಿತು, ಗೆಳತಿ ಶ್ರಾವಣಿ ನನ್ನನ್ನು ಸ್ವೀಕರಿಸು ಅಪರಿಚಿತ ಸಹನಳನ್ನು ಮರೆ ಅಂದಾಗಲು ನೀನು ನಿನ್ನ ನಿರ್ಧಾರ ಬದಲಿಸಲಿಲ್ಲ, ಆದುದರಿಂದ ನಾನು ಅಂದೂ ನಿನ್ನಲ್ಲಿ ನನ್ನ(ಸಹನಳ) ನಿಜವಾದ ಅಸ್ತಿತ್ವ ಮನವರಿಕೆ ಮಾಡುವುದು ಬೇಡ ಎಂದೆನಿಸಿತು, ಅಂದು ಒಂದು ಚುರಾದರು ನೀನು ನನ್ನ(ಸ್ನೇಹಳ ) ಬಗ್ಗೆ ಕನಿಕರ ಪಡಲಿಲ್ಲ, ನೀನು ಅದೇ ಸಹನಾಳ ಗುಂಗಲ್ಲಿದ್ದದ್ದು ನನ್ನ ಗಮನಕ್ಕೆ ಬಂತು.
ಅದಕ್ಕಾಗಿಯೇ ನಾನು ನಿನಗೆ ಮೆಸ್ಸೇಜ್ ಕಳುಹಿಸುವುದನ್ನು ವಿವಿಧ ಕಾರಣ ನೀಡಿ ನಿಲ್ಲಿಸಿಬಿಟ್ಟೆ, ಆದರೆ ನೀನು ಶ್ರಾವಣಿಯ ಮೋಬಾಯಿಲ್ ಗೆ ಮೆಸ್ಸೇಜ್ ಕಳುಹಿಸುತ್ತ ಇದ್ದೆ, ಇತ್ತ ಶ್ರಾವಣಿ ಎಲ್ಲದಕ್ಕೂ ಮೂಕ ಸಾಕ್ಷಿಯಾಗಿದ್ದಳು.ನಾನು (ಸ್ನೇಹ) ಆಗಿ ನಿನಗೆ ನನ್ನ ಮೊಬೈಲ್ ನಿಂದ ಮೆಸ್ಸೇಜ್ ಮಾಡಲು ತೊಡಗಿದೆ, ನೀನು ನನ್ನಲ್ಲಿ ಇಗಲೂ ಅದೇ ತಾತ್ಸಾರ ಭಾವ ಮುಂದುವರೆಸಿದ್ದೆ, ಆದರೆ ದಿನ ಕಳೆದಂತೆ ನನಗೆ ನಿನ್ನಲ್ಲಿ ಸಹನಾಳ ಬಗೆಗಿನ ಅನುಕಂಪ ಕಮ್ಮಿ ಅದಂತೆ ಭಾಸ ವಾಗುತಿತ್ತು, ಆದರೂ ನೀನು ನನಗೆ ಹತ್ತಿರ ವಾಗಲು ಮುಜುಗರ ತೋರಿಸುತಿದ್ದೆ. ಎಲ್ಲಾ ಹೇಳಿದರೆ ನೀನು ನನ್ನನ್ನು ಸ್ವೀಕರಿಸಿದರು ಸ್ವೀಕರಿಸಬಹುದು ಎಂದು ಇಲ್ಲಿ ಎಲ್ಲಾ ವಿಚಾರ ಬರೆದಿದ್ದೇನೆ.
ನಿನ್ನಲ್ಲಿ ಈ ಎಲ್ಲಾ ವಿಚಾರ ಹೇಳುವಷ್ಟು ಧೈರ್ಯ ಇಲ್ಲ, ಆದಕಾರಣ ಪತ್ರ ಬರೆದು ಶ್ರಾವಾಣಿಯಲ್ಲಿ ಒಪ್ಪಿಸಿದ್ದೇನೆ, ನನ್ನ ಮೊಬೈಲ್ ನಿಂದ ನಿನಗೆ ಮೆಸ್ಸೇಜ್ ಮಾಡಿದರೆ ನೀನು ನಮ್ಮ ಬೇಟಿಗೆ ಒಪ್ಪುವುದಿಲ್ಲ ಅಂತ ಗೊತ್ತು ಅದಕ್ಕಾಗಿಯೇ ಶ್ರಾವಣಿಯ ಮೊಬೈಲ್ ನಲ್ಲಿ ನಾನು ನಿನಗೆ ಮೆಸ್ಸೇಜ್ ಕಳುಹಿಸಿದ್ದು, ಆಗಲಾದರೂ ನೀನು ನಿನ್ನ ಕಲ್ಪನೆಯ ಸಹನಾಳನ್ನು ನೋಡಲು ಬಂದೇ ಬರುತ್ತಿಯಾ ಸಹನಾ ಕೊಟ್ಟ ಈ ಪತ್ರ ಓದೇ ಓದುತ್ತಿಯಾ ಅಂತ ನನಗೆ ಗೊತ್ತು.
ಈ ಪತ್ರ ಓದಿದ ಬಳಿಕ ಅಸಲಿನ ಸಹನಾಳನ್ನು ಅಂದರೆ ನಿನ್ನ ಅತ್ತೆ ಮಗಳು ಸ್ನೇಹಳನ್ನು ಪ್ರೀತಿಸುತ್ತೀಯ ಎಂದು ನಂಬಿದ್ದೇನೆ.ನಿನ್ನ ಮುಗುಳ್ನಗೆ ತುಂಬಿದ ನಗುವಿನೊಂದಿಗೆ ನನ್ನನ್ನು ಸ್ವೀಕರಿಸುತ್ತಿಯಾ ಎಂದು ನಂಬಿರುವ
ನಿನ್ನ ಸ್ನೇಹ (ಸಹನಾ)
೧೫
ಅಬ್ಬಾ ಎಂಥಹ ಹುಡುಗಿ ಈ ಶ್ರಾವಣಿ, ತನ್ನ ಗೆಳತಿಗೆ ಕೊಟ್ಟ ಮಾತು ಉಳಿಸಲು ತನ್ನ ಪ್ರಿಯಕರನಿಗೆ ಗೊತ್ತಿಲ್ಲದಂತೆ ಮೋಸಮಾಡಿ, ಗೆಳೆತನಕ್ಕೆ ಜೈಕಾರ ಹಾಹುವ ಬಯಕೆ!!! ಎಂದೆನಿಸಿತು, ಈಗ ನನ್ನಲ್ಲಿ ನನ್ನ ಪ್ರೇಮ ಕಥೆಯ ಎರಡೂ ಮುಖ ತಿಳಿದಂತಾಯಿತು, ಎರಡೂ ಓದಿದ ಕಾರಣ ನನಗೆ ಶ್ರಾವಣಿ ಮಾಡಿದ ತಪ್ಪಾದರೂ ಏನು ಎಂದೆನಿಸಿತು, ಯಾವುದೇ ತಪ್ಪಿರಲಿಲ್ಲ ಆ ನನ್ನ ಸಹನಾ/ ಶ್ರಾವಣಿಯದ್ದು !!!
ನಾನು ನಿನ್ನೆ ಬೇಟಿ ಆಗದ್ದು ಒಳ್ಳೇದೆ ಆಯಿತು. ಹೋಗಿದ್ದರೆ ಆ ಶ್ರಾವಣಿ ನನ್ನಲ್ಲಿ ಈ ಪತ್ರ ಕೊಡುತಿದ್ದಳು, ನಾನು ಅವಳು ಬರೆದ ಕಥೆ ನಿಜವೆಂದು ಮೆಲ್ಲನೆ ಸ್ನೇಹಳ ಪ್ರೀತಿಯಲ್ಲಿ ಜಾರುತಿದ್ದೆ, ಆಗ ಈ ಶ್ರಾವಣಿಯ ತ್ಯಾಗದ ಕಥೆ ಈಚೆಗೆ ಬರುತ್ತಿರಲೇ ಇಲ್ಲ, ನಾ ಹೋಗದೆ ಇದ್ದ ಕಾರಣ ಅವಳು ಅವಸರದಲ್ಲಿ ಡೈರಿ ಬಿಟ್ಟು ಹೋದಳು, ಅವಳ ಪ್ರೇಮದ ಎಲ್ಲಾ ಮಜಲು ನನಗೆ ತಿಳಿಸಿ ನನ್ನಿಂದ ದೂರವಾದಳು.
ಎಲ್ಲಾ ಓದಿದ ನನಗೆ ಅವಳಲ್ಲಿ ಇನ್ನೂ ಪ್ರೀತಿ ಹೆಚ್ಚಿತು. ಅವಳನ್ನು ಹೇಗಾದರೂ ಹುಡುಕಬೇಕು ಎಂದು ಸ್ನೇಹಾಳಿಗೆ ಫೋನ್ ಆಯಿಸಿದೆ ಅವಳು "ಅವಳು ಎರ್ನಾಕುಲಂ ಗೆ ಹೋಗಿದ್ದಾಳೆ ಆದರೆ ಅಲ್ಲಿ ತಲುಪಿದ ನಂತರ ಫೋನ್ ನಂಬರ್ ಕೊಡುತ್ತೇನೆ ಅಂದಿದ್ದಳು ಈಗ ತಲುಪಿರಬಹುದು ಆದರೆ ಇಲ್ಲಿವರೆಗೆ ಅವಳ ಫೋನ್ ಬರಲಿಲ್ಲ , ಆದರೆ ಅವಳಬಗ್ಗೆ ನೀನು ಯಾಕೆ ವಿಚಾರಿಸುತ್ತಿ ?"ಅಂದಳು. ಈಗ ಯಾರಿಗೆ ಕೇಳಲಿ...? ನನಗವಳನ್ನು ಎಷ್ಟೇ ಕಷ್ಟವಾದರೂ ಪಡೆಯಬೇಕು ಎಂಬ ಹಂಬಲ ಹೆಚ್ಚಾಯಿತು.
ಸೋಮವಾರ ದೊಳಗೆ ಎಲ್ಲಾ ಓದಿ ಮುಗಿಸಿದ್ದೆ ನನ್ನ ಪ್ರಿಯತಮೆಯ ಅಂತರಾಳ, ಮಂಗಳೂರಿಗೆ ಹೋಗಿ ದಾಮೋದರ್ ರವರಿಗೆ ಫೋನ್ ಮಾಡಿದೆ. ಅವರು ತಮ್ಮ ಸ್ಟಾಂಡ್ ಗೆ ಬರುವಂತೆ ನನ್ನಲ್ಲಿ ಹೇಳಿದರು, ನಾನು ಅಲ್ಲಿ ಹೋಗಿ ಅವರೊಂದಿಗೆ ಪಕ್ಕದ ಹೋಟೆಲ್ ನಲ್ಲಿ ಕಾಫೀ ಸವೆಯುತ್ತಾ ಈ ಒಂದು ದಿನದಲ್ಲಿ ಆದ ನನ್ನ ಎಲ್ಲಾ ಅನುಭವ ಹೇಳಿದೆ, ಅವಳನ್ನು ಭೇಟಿ ಮಾಡುವ ಹಂಬಲವನ್ನೂ ವ್ಯಕ್ತ ಪಡಿಸಿದೆ.ಆದರೆ ಅವರೇನು ಮಾಡಿಯಾರು ಅವಳು ನಮ್ಮನ್ನೆಲ್ಲ ಬಿಟ್ಟು ದೂರವಾಗಿದ್ದಳು.
ಅಂತು ಇಂತು ನನ್ನ ಇಂಜಿನಿಯರಿಂಗ್ ಮುಗಿಯಿತು, ಕೆಲಸವೂ ಸಿಕ್ಕಿತು, ಆದರೆ ಆ ಶ್ರಾವಣಿಯ ಬಗ್ಗೆ ಹಂಬಲ ಕಡಿಮೆ ಆಗಲಿಲ್ಲ, ಎಲ್ಲಿದ್ದಾಳೋ ಎಂಬ ಪ್ರಶ್ನೆ ..? ಯಾರಿಗೂ ಗೊತ್ತಾಗದಂತೆ ಎಲ್ಲೋ ದೂರದಲ್ಲಿದ್ದಾಳೆ. ನಾನೇ ಸರ್ವಸ್ವ ಎನ್ನುತಿದ್ದ ಸ್ನೇಹ ಎರಡೂ ತಿಂಗಳ ಹಿಂದೆ ಅವಳ ತಂದೆ ತಾಯಿ ನೋಡಿದ ಗಂಡನ್ನೇ ಮದುವೆ ಆಗಿ ಹೋದಳು. ಅವಳಿಗೆ ನಾನು ಕೊಟ್ಟ ಮಾತಂತೆ ೨ ವಾರ ರಜೆ ಗಿಟ್ಟಿಸಿ ಊರಿಗಿ ಹೋಗಿ ಎಲ್ಲದರ ಮೇಲ್ವಿಚಾರಣೆ ನೋಡಿದ್ದೆ.
ಇವ್ವೆಲ್ಲದರ ನಡುವೆ ನಮ್ಮ ಪ್ರೇಮ ಕಥೆಯಲ್ಲಿನ ಇನ್ನೊಂದು ಪಾತ್ರ ಡ್ರೈವರ್ ದಾಮೋದರ್ ಅನ್ನು ಬೇಟಿಯಾಗಿದ್ದೆ, ಅವರು ಈಗ ರಿಕ್ಷಾ ಓಡಿಸುತ್ತಿಲ್ಲ , ೪ ತಿಂಗಳ ಹಿಂದೆ ರಿಕ್ಷಾ ಆಕ್ಸಿಡೆಂಟ್ ನಲ್ಲಿ ತನ್ನ ಒಂದು ಕಾಲಿನ ಹಿಡಿತವನ್ನೇ ಕಳಕೊಂಡಿದ್ದರು, ಪಾಪ ೨ ಹೆಣ್ಣು ಮಕ್ಕಳು ಆ ವಯ್ಯನಿಗೆ, ಅವರ ಮನೆಯ ಪರಿಸ್ಥಿತಿ ನೋಡಿದರೆ ಬೇಜಾರೆನಿಸುತ್ತದೆ. ಹೋದಾಗ ಶ್ರಾವಣಿ ಸಿಕ್ಕಳೆ..? ಎಂದು ಹೇಳಿ ಗೇಲಿ ಮಾಡುತಿದ್ದರು, ಅವಳ ಆ ಡೈರಿ ಎಲ್ಲಿದೆ ಎಂದು ಹುಡುಕಿದೆ, ನನ್ನ ಹುಡುಕುವ ನೋಟ ನೋಡಿ ಅವರು ಮಗಳಲ್ಲಿ "ಶಾರದ ಆ ಡೈರಿ ತಕೊಂಡು ಬಾ "ಅಂದರು .ಆ ಬಡ ಜೀವ ಇದನ್ನು ತುಂಬಾ ಜೋಪಾನವಾಗಿ ಒಂದು ಟ್ರಂಕ್ ನಲ್ಲಿ ಇಟ್ಟಿದ್ದರು. ಶಾರದ ಆ ಡೈರಿ ತೆಗೆದು ಕೊಂಡು ಬಂದಳು.
ನಾನು "ಒಮ್ಮೆ ಓದಿ ನಿಮಗೆ ಹಿಂತಿರುಗಿಸುವೆ "ಅಂದೆ
ಅವರು "ಸರಿಯಪ್ಪ ..." ಅಂದರು
ಒಮ್ಮೆಗೆ ಎಲ್ಲಾ ಕೆಂಪು ಪುಟಗಳು, ಅವಳು ಸ್ನೇಹ ಆಗಿಬರೆದ ಪತ್ರ ಎಲ್ಲಾ ಓದಿದೆ, ನನಗರಿವಿಲ್ಲದಂತೆ ಒಂದು ಹನಿ ಕಣ್ಣೇರು ಜಾರಿತು. ಇದನ್ನು ಕಂಡ ಅವರು "ನಿನ್ನಲ್ಲೇ ಇರಲಿ ಆ ಡೈರಿ, ಶ್ರಾವಣಿ ನನಗಿಂತ ನಿನಗೆ ಹೆಚ್ಚು ಹತ್ತಿರವಾದವಳು ... ನೀನು ತೆಗೆದು ಕೊಂಡು ಹೋಗು ಆ ಪವಿತ್ರ ಗ್ರಂಥ !!! " ಅಂದರು.
ನಿಜಕ್ಕೂ ಅದು ಪ್ರೇಮ ಗ್ರಂಥವೇ ಆಗಿತ್ತು
ಊರಿನಿಂದ ಬಂದಮೇಲೆ ನಡ ನಡುವೆ ದಾಮೋದರ್ ರಿಗೆ ಫೋನ್ ಆಯಿಸಿ ಅವರ ಕಷ್ಟ ಸುಖ ವಿಚಾರಿಸುತಿದ್ದೆ .
ಹೀಗಿರಬೀಕಾದರೆ ಮೊನ್ನೆ ದಾಮೋದರ್ ಫೋನ್ ಮಾಡಿದ್ದರು, ನಾನು ಕಾಲ್ ಕಟ್ ಮಡಿ ತಿರುಗಿ ಅವರಿಗೆ ಕಾಲ್ ಮಾಡಿದೆ
ಅವರು"ನಿನಗೊಂದು ಸಿಹಿ ಸುದ್ದಿ ಇದೆ,"ಅಂದರು
ನಾನು "ಏನು ಶ್ರಾವಣಿಯನ್ನು ಮತ್ತೆ ಮಂಗಳೂರಿನಲ್ಲಿ ಬೇಟಿ ಆದಿರೆ..? "ಅಂದೆ
ಅದಕ್ಕೆ ಅವರು "ಹಾಗೆಯೇ ಅನ್ನ ಬಹುದು ..." ಅಂದರು
ನನ್ನಲ್ಲಿ ಇನ್ನೂ ಕುತುಹಲ ಹೆಚ್ಚಿತು, ನಮ್ಮಲ್ಲಿನ ಪವಿತ್ರ ಪ್ರೇಮ ನಿಜವಾಗುವ ಗಳಿಗೆ ಬಂತಲ್ಲಾ ಎಂದು ಖುಷಿ ಪಟ್ಟೆ, ಅವರಲ್ಲಿ "ಹೇಳಿ ನೀವು ... ಏನಾಯ್ತು...?"
ಅವರು "ಇವತ್ತು ಶ್ರಾವಣಿ ನನಗೆ ಕಾಲ್ ಮಾಡಿದ್ದಳು .."
ನಾನು ಮದ್ಯದಲ್ಲೇ ಅವರನ್ನು ತಡೆದೆ "ಕಾಲಾ ...? ಅವಳಿಗೆ ನಿಮ್ಮ ನಂಬರ್ ಎಲ್ಲಿಂದ ಸಿಕ್ಕಿತು ...?"ಅಂದೆ
ಅವರು "ಅದೇ ಕಣಪ್ಪ ಆ ಸಂಜೆ ನಾನು ಅವಳನ್ನು ರಿಕ್ಷಾದಲ್ಲಿ ರೈಲ್ವೆ ಸ್ಟೇಷನ್ ಗೆ ಕರೆದು ಕೊಂಡು ಹೋಗಬೇಕಾದರೆ, ಮಾತಿನ ನಡುವೆ ನನ್ನಲ್ಲಿ ಅವಳು ನನ್ನ ನಂಬರ್ ಕೇಳಿದ್ದಳಂತೆ, ಎಲ್ಲಿಯೋ ಬರೆದಿಟ್ಟಿದ್ದೆ ಅದು ಇವತ್ತು ಸಿಕ್ಕಿತು ಅಂತ ಹೇಳಿದಳು..."
ನಾನು "ಅರ್ರೆ ನನಗೆ ಕೊಡಿ ಆ ನಂಬರ್!!!" ಅಂದೆ
ಅವರು "೯೯೯... "ಎಂದು ನಂಬರ್ ಹೇಳಿದರು.
ನಾನು "ನೀವು ನನ್ನ ಬಗ್ಗೆ ಹೇಳಿದಿರೆ..?"ಅಂದೆ
ಅವರು ಅಲ್ಲಿಂದ "ಇಲ್ಲ ಕಣಪ್ಪ .. ನಿನ್ನ ಬಗ್ಗೆ ಹೇಳಿದರೆ ಅವಳೆಲ್ಲಿ ಕೊರಗುವಳೋ ಅಂದು ಹೇಳಲಿಲ್ಲ .. ನೀನೆ ಮಾತಾಡು .."ಅಂದರು
ನಾನು "ನಿಮ್ಮ ಈ ಉಪಕಾರ ಯಾವತ್ತು ಮರೆಯಲ್ಲಾ.. ನನ್ನ ಪ್ರೀತಿಯ ನನಗೆ ದಕ್ಕಿಸಿಕೊಟ್ಟ ದೇವರಾದಿರಿ ..."
"ಈಗ ಅದೆಲ್ಲಾ ಯಾಕಪ್ಪಾ ... ಅವಳನ್ನು ವರಿಸು ... ನೀನು ಈ ಒಂದು ವರ್ಷ ಪಟ್ಟ ಪಾಡು ಯಾವ ಪ್ರೇಮಿಗೂ ಬೇಡ ..."ಅಂದರು
"ಸರಿ , ಅವಳಲ್ಲಿ ಮಾತಾಡಿ ನಿಮಗೆ ಮತ್ತೆ ಫೋನ್ ಮಾಡುತ್ತೇನೆ ... ಮತ್ತೊಮ್ಮೆ ಧನ್ಯವಾದಗಳು "ಎಂದು ಕಾಲ್ ಕಟ್ ಮಾಡಿದೆ .
೯೯೯ ಒತ್ತುತಿದ್ದಂತೆ ನನ್ನ ಎದೆಯ ಬಡಿತ ಹೆಚ್ಚಾಗ ತೊಡಗಿತು, ಅವಳಿಗೆ ನಾನು ಮೊದಲ ಬಾರಿಗೆ ಪ್ರೊಪೋಸ್ ಮಾಡುವಾಗ ಇಂಥಹ ಯಾವುದೇ ಅನುಭವ ವಾಗಿರಲಿಲ್ಲ, ಆದರೆ ಯಾಕೋ ಇಂದು ಸಂತಸ,ಹೆದರಿಕೆ ಎರಡೂ ಒಟ್ಟಿಗೆ ಆಗುತಿತ್ತು.
"ಯಾರ ಸಂಸಾರಿಕ್ಕುನದ್ ...?" ಅಂದಳವಳು, ಅದೇ ಮೊದಲದಿನದ ಕಂಪು ಇಂದೂ ಇತ್ತು.ಒಂದು ವರುಷದಲ್ಲಿ ಅವಳು ಮಲೆಯಾಳಂ ಕಲಿತಿದ್ದಳು ಎನ್ನುದಕ್ಕೆ ಅವಳ ಮಾತಿನ ಧಾಟಿಯೇ ಉತ್ತರ ನೀಡುತ್ತಿತ್ತು.
ನಾನು ಉತ್ತರಿಸಲಿಲ್ಲ.
ನನಗೆ ಮಲಯಾಳಂ ನಲ್ಲಿ ಉತ್ತರಿಸಲೇ, ಇಲ್ಲ ಇಂಗ್ಲಿಷ್ನಲ್ಲಿ ಉತ್ತರಿಸಲೇ ...?ಬೇಡ ಕನ್ನಡ ದಲ್ಲಿ ಉತ್ತರಿಸೋಣ...
"ಶ್ರಾವಣಿ ...?"
"ಅದೇ ಯಾರ ಸಂಸಾರಿಕ್ಕುನದ್ ...?"
"ಅಮ್ಮ ನಾನು ಕನ್ನಡದ ಹುಡುಗ ..."
ಒಂದು ಕ್ಷಣ ಅವಳು ಮೌನ ವಾದಳು, ಅವಳು ನನ್ನ ಧನಿಯನ್ನು ಗುರುತಿಸಿದಳು ಎಂದುಕೊಂಡೆ.
ಎರಡನೇ ಕ್ಷಣಕ್ಕೆ ಅವಳು "ನೀವು ...ಯಾರಿಂದ ನಿಮಗೆ ನನ್ನ ನಂಬರ್ ಸಿಕ್ಕಿತು ...? ನನ್ನ ಹೆಸರು ಶ್ರಾವಣಿ ಅಂತ ಹೇಗೆ ಗೊತ್ತಾಯಿತು ..?"
ನಾನು "ಹುಂ .. ನನ್ನ ನಿನ್ನ ಬೇಟಿ ಆಗಲೇ ಬೇಕಿತ್ತು, ಆ ಪ್ರೀತಿ ಬರೆಯ ನೆನಪಲ್ಲಿ ಅಳಿಸಿ ಹೋಗುವಂತದಲ್ಲಾ , ನಾವಿಬ್ಬರು ಸಮನಾಗಿ ಹಂಚಿ ಜೀವನಪೂರ್ತಿ ಅನುಭವಿಸ ಬೇಕಾದದ್ದು ... "
ಅವಳು "ಆದರೆ ನಾನು ನಿಮ್ಮ ಬಿಟ್ಟು ಬದುಕುವ ಕಲೆ ಕರಗತ ಮಾಡಿದ್ದೆ ... ಯಾರ ಸಂಪರ್ಕದಲ್ಲಿರ ಬಾರದು ಎಂದು ಪ್ರಾಣ ಸ್ನೇಹಿತೆ ಸ್ನೇಹಳಿಗೂ ನನ್ನ ನಂಬರ್ ಕೊಟ್ಟಿರಲಿಲ್ಲ,ಆದರೆ ಅದು ನಿಮಗೆ ಹೇಗೆ ಸಿಕ್ಕಿತು ...?"
ನಾನು "ಸಮಯ ಬಂದಾಗ ಹೇಳುತ್ತೇನೆ ಎಲ್ಲಾ ಕಥೆ ...ನೀನು ಹೇಗಿದ್ದೀಯ ..?"
ಅವಳು "ಚೆನ್ನಾಗಿದ್ದೇನೆ ...ನನ್ನ Phd ಮುಗಿಯಿತು, ಬೆಂಗಳೂರಲ್ಲಿ ಕೆಲಸ ಸಿಕ್ಕಿದೆ , ಮುಂದಿನ ವಾರವೇ ಅಮ್ಮನೊಂದಿಗೆ ಬೆಂಗಳೂರು ಸೇರುವೆನು "ಅಂದಳು
"ಬೆಂಗಳೂರೇ ... ಮುಂದಿನವಾರ !!!!... ಒಳ್ಳೆಯದ್ದೆ ಆಯಿತು, ದೂರ ಹೋಗಿ ಹತ್ತಿರ ಆದಿ ನೀನು ... "ಅಂದೆ
"ಹುಂ ..."
"ಬೇಟಿ ಆಗುವ ಮುಂದಿನ ವಾರವೇ ... ಯಾವುದರಲ್ಲಿ ಬರುತಿದ್ದಿಯ ...?"
"ಫ್ಲೈಟ್ .. ಅಮ್ಮನಿಗೆ ಹೆಚ್ಚು ಹೊತ್ತು ಕುಳಿತು ಪ್ರಯಾಣಿಸಲಾಗದು.. "
"ಸರಿ ಹಾಗಾದರೆ ನಾನು ನಿನಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಾಲಿರುವೆ ..."
"ಸರಿ ಹಾಗಾದರೆ ನಾನು ಅದೇ ಹಳೆಯ ಕೆಂಪು ಟಾಪ್ ಮತ್ತು ಕಡು ನೀಲಿಯ ಜೀನ್ಸ್ ನಲ್ಲಿರುತ್ತೇನೆ ... ನನ್ನನು ಆ ಜನ ಜಂಗುಳಿಯಲ್ಲಿ ಪತ್ತೇ ಹಚ್ಚು... "ಅಂದಳು
"ಕಳೆದ ನಿನ್ನನ್ನೇ ನಾನು ಹುಡುಕಿರುವಾಗ,ಪಡೆದ ನಿನ್ನನ್ನು ನಾನು ಗುರುತಿಸಲಾರೆನೆ ...?" ಅಂದೆ
ಈಗ ಆ ಮರೂನ್ ಬಣ್ಣದ ಗ್ರಂಥ ನನ್ನ ಕ್ಯುಬಿಕಲ್ ನ ಶೋಭೆ ಹೆಚ್ಚಿಸುತ್ತಾ ಇದೆ.ಮೊದಲ ಪೇಜ್ ನಲ್ಲಿ ಅವಳ ಹಸ್ತಾಕ್ಷರದ ಕೆಳಗೆ ಸದಾ ಮುಗುಳ್ನಗುವ ಅವಳ ಫೋಟೋ ...
*************** ಮುಕ್ತಾಯ *********************************
Comments
ಉ: ಡೈರಿ ::ಕೊನೆಯ ಕಂತು
In reply to ಉ: ಡೈರಿ ::ಕೊನೆಯ ಕಂತು by sm.sathyacharana
ಉ: ಡೈರಿ ::ಕೊನೆಯ ಕಂತು
ಉ: ಡೈರಿ ::ಕೊನೆಯ ಕಂತು
In reply to ಉ: ಡೈರಿ ::ಕೊನೆಯ ಕಂತು by Jayanth Ramachar
ಉ: ಡೈರಿ ::ಕೊನೆಯ ಕಂತು
In reply to ಉ: ಡೈರಿ ::ಕೊನೆಯ ಕಂತು by kamath_kumble
ಉ: ಡೈರಿ ::ಕೊನೆಯ ಕಂತು
In reply to ಉ: ಡೈರಿ ::ಕೊನೆಯ ಕಂತು by Jayanth Ramachar
ಉ: ಡೈರಿ ::ಕೊನೆಯ ಕಂತು
In reply to ಉ: ಡೈರಿ ::ಕೊನೆಯ ಕಂತು by kamath_kumble
ಉ: ಡೈರಿ ::ಕೊನೆಯ ಕಂತು
In reply to ಉ: ಡೈರಿ ::ಕೊನೆಯ ಕಂತು by prashanth kanichar
ಉ: ಡೈರಿ ::ಕೊನೆಯ ಕಂತು
In reply to ಉ: ಡೈರಿ ::ಕೊನೆಯ ಕಂತು by kamath_kumble
ಉ: ಡೈರಿ ::ಕೊನೆಯ ಕಂತು
ಉ: ಡೈರಿ ::ಕೊನೆಯ ಕಂತು