ಅವಳಿಲ್ಲದ ಮನೆ
ಕವನ
ಎಲ್ಲಿ ನೋಡಿದರಲ್ಲಿ ಕಸವಿದೆ
ಧೂಳು-ಕಸ ಸ್ವಾಗತಕ್ಕೆ ನಿಂತಿವೆ
ನೀನಿಲ್ಲದಾ ಮನೆ ಹೀಗಿದೆ ನೋಡು\\
ಪಾತ್ರೆ ಪಡಿಗಗಳು ನಿದ್ದೆ ಮಾಡುತ್ತಿವೆ
ಬಿಸಿಯಾಗದ ಒಲೆ ಕಣ್ಣೀರಿಡುತ್ತಿದೆ
ಅಕ್ಕಿಯ ಕಾಳುಗಳು ನಿನ್ನ ಬೆರಳುಗಳ ಸ್ಪರ್ಶಕ್ಕೆ ಹಾತೊರೆಯುತ್ತಿವೆ
ನೀನಿಲ್ಲದಾ ಮನೆ ಹೀಗಿದೆ ನೋಡು\\
ದೇವರಿಲ್ಲದ ಮನೆ ಬೆಳಕಿಲ್ಲದ ಗೂಡಾಗಿದೆ
ಕಂಡಾಗಲೆಲ್ಲಾ ದೀಪ ಕೇಳುವುದು ನಿನ್ನನು
ಪುಸ್ತಕಗಳ ರಾಶಿ ರಾಶಿ ನಿನ್ನ ಅಂಜಿಕೆಯಿಲ್ಲದೆ ಹೊರಬಂದಿವೆ
ನೀನಿಲ್ಲದಾ ಮನೆ ಹೀಗಿದೆ ನೋಡು\\
ಲಂಗು ಲಗಾಮಿಲ್ಲದೆ ಬಟ್ಟೆಗಳು ಹರಡಿಕೊಂಡಿವೆ
ಕನ್ನಡಿಯಂತಿದ್ದ ನೆಲ ನಿನ್ನ ನೆನಪಲ್ಲಿ ಕಪ್ಪುಗಟ್ಟಿದೆ
ಕನ್ನಡಿ ನಿನ್ನ ಕಾಣದೆ ಮೌನವಾಗಿದೆ
ನೀನಿಲ್ಲದಾ ಮನೆ ಹೀಗಿದೆ ನೋಡು\\