ಕಲ್ಲಪ್ಪನ ಮಗ ಡಾಕುಟರ್ ....
ಕಲ್ಲಪ್ಪ ತನ್ನ ಮಗನನ್ನು ಕಷ್ಟ ಪಟ್ಟು ಓದಿಸಿ, ವಿದ್ಯಾವಂತನನ್ನಾಗಿ ಮಾಡಿದ್ದ. ಮಗ ಎಂ ಬಿ ಬಿ ಎಸ್ ಮಾಡಿ ಬೆಂಗಳೂರು ಸೇರಿದ್ದ. ತನಗೆ ಒಪ್ಪತ್ತು ಗಂಜಿ ಇದ್ದರು ಮಗನಿಗೆ ಸರಿಯಾಗಿ ದುಡ್ಡು ಕಳುಹಿಸುತ್ತಿದ್ದ. ಅವನ ಒಂದೇ ಆಸೆ ತಮ್ಮ ಕಷ್ಟಗಳಿಗೆ ಮಗ ನೆರವಿಗೆ ಬರುತ್ತಾನೆ ಎಂದು. ಅವನಿಗೆ ಡಾಕ್ಟರ್ ಎಂದು ಅನ್ನಲು ಬರದಿದ್ದರೂ ಊರ ತುಂಬಾ ನನ್ನ ಮಗ ಡಾಕುಟರ್ ಎಂದು ಹೇಳೋಕೆ ಎಮ್ಮೆ ಅನ್ನಿಸುತ್ತದೆ ಎಂದು ಎಲ್ಲರಲ್ಲಿಯೂ ಕೊಚ್ಚಿಕೊಳ್ಳುತ್ತಿದ್ದ. ಮೊದಮೊದಲು ಸ್ವಲ್ಪು ದುಡ್ಡು ಕಳುಹಿಸುತ್ತಿದ್ದ ಮಗ, ಅನಂತರ ಕಡಿಮೆ ಮಾಡುತ್ತಾ ಬಂದ. ಮತ್ತೆ ಕೆಲವೊಂದು ತಿಂಗಳು ಕಳಿಸುತ್ತಲೇ ಇರಲಿಲ್ಲ. ಫೋನ್ ಮಾಡಿದರೆ ನಾನು ಆಮೇಲೆ ಮಾಡುತ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಕಲ್ಲಪ್ಪ ಇನ್ನೂ ಕಲ್ಲಿನ ಹಾಗೆ ಕುಳಿತರೆ ಏನು ನಡೆಯುವದಿಲ್ಲ ಎಂದು ಮಗನನ್ನು ನೋಡಲು ತಾನೇ ಬೆಂಗಳೂರಿಗೆ ಹೊರಟು ನಿಂತ. ಅವನಿಗೆ ಇಷ್ಟ ಎಂದು ಒಂದು ನಾಟಿ ಕೋಳಿ ತೆಗೆದುಕೊಂಡು ಹೊರಟ. ಬಸ್ ನಲ್ಲಿ ಎಲ್ಲರೂ ಅವನಿಗೆ ಛೀಮಾರಿ ಹಾಕಿದರು, ಕೋಳಿ ತೆಗೆದುಕೊಂಡು ಬಂದಿದ್ದಕ್ಕೆ. ಆದರೂ ಅದರ ಬಾಯಿಗೆ ಒಂದು ಅರಿವೆ ಕಟ್ಟಿ ಅದನ್ನು ಇಟ್ಟ.
ಮರುದಿನ ಬೆಂಗಳೂರು ಬಂದು ತಲುಪಿದ್ದ. ಮಗನಿಗೆ ಹೇಳದೇ ಬಂದಿದ್ದ. ಇಳಿದೊಡನೆ ಮಗನಿಗೆ ಫೋನ್ ಮಾಡಿದ, "ನೀವು ಕರೆ ಮಾಡುತ್ತಿದ್ದ ಚಂದಾದರರು ಸ್ವಿಚ್ ಆಫ್ ಮಾಡಿದ್ದಾರೆ" ಎಂಬ ಸಂದೇಶ ಹೊರ ಬರುತಿತ್ತು. ಏ ನನ್ನ ಮಗನಿಗೆ ಫೋನ್ ಕೊಡಮ್ಮಿ ಎಂದು ಕಿರುಚುತ್ತಿದ್ದ ಕಲ್ಲಪ್ಪ. ನೆರೆದವರೆಲ್ಲರೂ ಇವನನ್ನೇ ನೋಡುತ್ತಿದ್ದರು ಅದರ ಅರಿವು ಅವನಿಗೆ ಇರಲಿಲ್ಲ. ಕೊನೆಗೆ ಒಬ್ಬ ಹುಡುಗನಿಗೆ ಅವನ ವಿಳಾಸ ತೋರಿಸಿದ, ಆ ಹುಡುಗನ ಸಹಾಯದಿಂದ ಬಸ್ ಹತ್ತಿ ಹೊರಟ. ಅವನು ಕುಳಿತಿದ್ದು ಮುಂದಿನ ಸೀಟ್ ನಲ್ಲಿ, ಪ್ರತಿ ಸ್ಟಾಪ್ ಗೆ ಬಸ್ ಚಾಲಕನಿಗೆ ಕೇಳುತ್ತಾ ಇದ್ದ. ಅಷ್ಟರಲ್ಲಿ ಒಬ್ಬ ಹುಡುಗಿ ಬಂದು ಏಳಿ... ಎದ್ದೇಳಿ.. .ಎಂದಳು. ಏಕಮ್ಮ ಇದು ನನ್ನ ಸೀಟ್ ಎಂದ. ಏ .. ಏಳಿ ಲೇಡಿಸ್ ಸೀಟ್ ಎಂದಳು. ಏನೂ ಅರಿಯದ ಅವ ಹಾಗೆ ಎಂದರೆ ಅಂದ. ಹೆಂಗಸರ ಸೀಟ್ ಎಂದಳು. ಅವನ ಊರಿನಲ್ಲಿ ಈ ರೀತಿ ಎಂದು ಆಗಿರಲಿಲ್ಲ. ವಯೋ ವೃದ್ಧರ ಸೀಟ್ ಇದ್ದರು, ಅದರ ಬಗ್ಗೆ ಅವನಿಗೆ ಅರಿವು ಇರಲಿಲ್ಲ ಮತ್ತು ಓದಲು ಬರುತ್ತಿರಲಿಲ್ಲ. ಅದರಲ್ಲಿ ಕೆಲ ಹುಡುಗರು ಕುಳಿತಿದ್ದರು. ಕಡೆಗೆ ಬಸ್ ಸ್ಟಾಪ್ ಬಂತು. ಇಳಿದುಕೊಂಡು ಮಗನ ಪತ್ತೆ ಬಗ್ಗೆ ಎಲ್ಲರಲ್ಲಿಯೂ ಕೇಳುತ್ತಾ ಹೊರಟ. ಕೈಯಲ್ಲಿ ಚಿಕ್ಕ ಚೀಲ ಮತ್ತು ಕೋಳಿ ಇವನನ್ನು ನೋಡಿ ಕೆಲವರು ಅವನನ್ನು ಬಿಕ್ಷುಕ ಎಂದು ತಿಳಿದಿದ್ದು ಇದೆ.
ಕಡೆಗೂ ಮನೆ ಸಿಕ್ಕಿ ಬಿಟ್ಟಿತು. ಮನೆ ಒಳಗೆ ಹೆಜ್ಜೆ ಇಟ್ಟ ಕಲ್ಲಪ್ಪ , ಕೂಡಲೇ ಒಂದು ಹುಡುಗಿ ಹೂ ಆರ್ ಯೂ ಎಂದಳು. ಹೌಹಾರಿ ಬಿಟ್ಟ ಕಲ್ಲಪ್ಪ. ಪಿಕಿ ಪಿಕಿ ಎಂದು ಅವಳನ್ನೇ ನೋಡುತ್ತಾ ನಿಂತು ಬಿಟ್ಟ. ಮತ್ತೆ ಕೇಳಿದಳು ಹೂ ಆರ್ ಯೂ ಎಂದು. ನನ್ನ ಮಗ .... ಎಂದ. ವಾಟ್ ಎಂದಳು. ಸುರೇಶ ಎಂದು ಕೇಳಿದ, ಅದನ್ನು ಕೇಳಿದ ಆ ಹುಡುಗಿ ಒಳಗೆ ಹೋಗಿ ಮಲಗಿದ್ದ ಸುರೇಶ್ ನನ್ನು ಕರೆ ತಂದಳು. ಐ ಟೋಲ್ಡ್ ಯೂ ನಾಟ್ ಟೂ ವೇಕ್ ಮಿ ಎನ್ನುತ್ತಾ ಬರ್ಮುಡಾ ಏರಿಸುತ್ತಾ ಹೊರಗಡೆ ಬಂದ. ಅಪ್ಪ ನೀನು ಯಾವಾಗ ಬಂದೆ ಅಂದ. ಆ ಹುಡುಗಿಗೆ ಹಿ ಈಸ್ ಮೈ ಫಾದರ್ ಕಲಪ್ಪ ಎಂದ. ಓ ಯುವರ್ ಫಾದರ್ ಓಕೇ... ಓಕೇ...ಐ ಥಾಟ್ ಸಮ್ ಪೇಶೆಂಟ್ ಎಂದಳು. ಕಳ್ಳ ಅಪ್ಪ ವೇರಿ ಗುಡ್ ನೇಮ್ ಎಂದಳು. ಅವರಿಬ್ಬರು ಹಿಂದಿ, ಇಂಗ್ಲೀಶ್ ನಲ್ಲಿ ಏನೇನೋ ಮಾತನಾಡುತ್ತಾ ಇದ್ದರು. ಕಲ್ಲಪ್ಪನಿಗೆ ಏನು ಅರ್ಥವಾಗದೆ ಸುಮ್ಮನೇ ನಿಂತು ಬಿಟ್ಟ. ಅವನಿಗೆ ಇವನ ಮೇಲೆ ಅನುಮಾನ ಮದುವೆ ಮಾಡಿಕೊಂಡಿದ್ದಾನೆ ಎಂದು. ಮಗಾ.. ಮದುವೆ ಮಾಡಿಕೊಂಡಿದ್ದೀಯಾ? ಎಂದು ಕೇಳಿದ. ಹಾಗೇನೂ ಇಲ್ಲ ಎಂದ. ಮತ್ತೆ ಇವಳು?.... ಅದು... ಅದು.. ಎಂದು ತಡವರಿಸಿದ. ಏಕೆಂದರೆ ಅಪ್ಪನಿಗೆ ಹೇಗೆ ತಿಳಿಯಬೇಕು ಲಿವಿಂಗ್ ಟುಗೆದರ್ ಎಂದರೆ. ಸುಮ್ಮನೇ ಜೊತೆಗೆ ಇದ್ದೇವೆ ಎಂದ. ಅಪ್ಪನಿಗೆ ಕೋಪ ನೆತ್ತಿಗೆ ಏರಿತು, ಮಗ ತಪ್ಪು ದಾರಿ ಹಿಡಿದಿದ್ದಾನೆ ಎಂದು. ನಾಚಿಕೆ ಆಗೋಲ್ಲ ಎಂದೆಲ್ಲ ಬೈಯಲು ಶುರು ಮಾಡಿದ. ನಾಚಿಕೆ ಯಾಕೆ? ಇದೆಲ್ಲ ಕಾಮನ್ ಅಂದ. ಅವನಿಗೆ ತಿಳಿಯಲಿಲ್ಲ. ಅಂದರೆ ಏನೋ ಕಾಮಣ್ಣ ಎಂದು ಬೈದ. ಅಷ್ಟರಲ್ಲಿ ಒಳಗಡೆ ಇಂದ ಬಂದ ಆ ಹುಡುಗಿ ವಾಟ್ ಈಸ್ ದಿಸ್ ಸ್ಮೆಲ್ ಎಂದಳು. ಕಲ್ಲಪ್ಪ ತಂದ ನಾಟಿ ಕೋಳಿ ಅವನು ಕಟ್ಟಿದ್ದ ಬಿಗಿ ಅರಿವೇಗೆ ಸತ್ತು ಹೋಗಿ ನಾರುತಿತ್ತು. ಕಡೆಗೆ ಅದನ್ನು ಎಸೆದು ಸ್ನಾನ ಮಾಡಿ ಬಾ, ಎಲ್ಲ ಹೇಳುತ್ತೇನೆ ಎಂದ.
ಸ್ನಾನ ಮಾಡಿದ ಮೇಲೆ ಕೂಡ ಅದೇ ಪ್ರಶ್ನೆ ಯಾರು ಅವಳು ಎಂದು. ಮದುವೆ ಮಾಡಿಕೊ ಮಗ ಎಂದ. ಸುಮ್ಮನೇ ಜೊತೆಗೆ ಇದ್ದರೆ ಬೇರೆಯರು ತಪ್ಪು ತಿಳಿಯುತ್ತಾರೆ ಮಗ ಎಂದ. ಅದೆಲ್ಲ ಏನು ಇಲ್ಲ ನಮ್ಮಲ್ಲಿ ಹೊಂದಾಣಿಕೆ ಆದರೆ ಮಾತ್ರ ಮದುವೆ ಆಗುತ್ತೇವೆ ಎಂದ. ಇನ್ನೂ ಒಂದು ವರ್ಷ ಕಾಯಿರಿ ಎಂದ. ಆಮೇಲೆ ಬೇಡ ಎಂದರೆ ಅವಳು ಅವಳ ಪಾಡಿಗೆ , ನಾನು ನನ್ನ ಪಾಡಿಗೆ ಎಂದ. ಹಾಗೆಲ್ಲಾ ಮಾಡಬೇಡ ಮಗ ಅದು ಒಂದು ಹೆಣ್ಣು ಮಗಳ ಭವಿಷ್ಯದ ಪ್ರಶ್ನೆ . ಮುಂದೆ ಅವಳನ್ನ ಯಾರು ತಾನೇ ಮದುವೆ ಆಗುತ್ತಾರೆ ಎಂದ. ಹುಡುಗಿ ತುಂಬಾ ಚೆನ್ನಾಗಿ ಇದ್ದಾಳೆ, ಆದರೆ ಮೂಗಿನ ನತ್ತು (ಮೂಗನತ್ತು) ಮಾತ್ರ ಬಾಯಿಗೆ ಹಾಕಿಕೊಂಡಿದ್ದಾಳೆ. ಟ್ಯಾಟ್ಯೂ ನೋಡಿ ಕರಿ ಗೊರಂಟೆ ಚೆನ್ನಾಗಿ ಕಾಣಲ್ಲ ಅವಳಿಗೆ ಎಂದು ಹೇಳು ಮದುವೆ ಮಾಡಿಕೊ ಎಂದು ಹೇಳಿದ. ಅವಳಿಗೆ ಸೀರೆನೇ ಉಟ್ಟು ಕೊಳ್ಳೋಕೆ ಹೇಳು. ಚಡ್ಡಿ ಹಾಕಿಕೊಂಡು ಮನೇಲಿ ಇದ್ರೆ ಏನು ಚೆನ್ನ ನೀನೆ ಹೇಳು ಎಂದ. ಕಲ್ಲಪ್ಪನ ಮಾತಿಗೆ ಸುಮ್ಮನೇ ತಲೆ ಅಲ್ಲಾಡಿಸಿ ಊಟಕ್ಕೆ ಹೊರಗಡೆ ಹೋದರು. ಹೊಟೆಲ್ ಊಟದಿಂದ ಕಲ್ಲಪ್ಪನ ಹೊಟ್ಟೆ ಕೆಟ್ಟು ಹೋಗಿತ್ತು. ಮನೆಗೆ ಬಂದು ಹುಡುಗಿ ಸಿಗರೇಟ್ ಸೇದುತ್ತಾ ಇತ್ತು. ಹನೀ... ವೆನ್ ದಿಸ್ ಫೆಲೊ ಈಸ್ ಗೋಯೀಂಗ್ ಎಂದು ಕೇಳಿತು. ಸುರೇಶ್ ಟೂಮಾರೊ ಎಂದು ಹೇಳಿದ.
ಮರುದಿನ ಬೆಳಿಗ್ಗೆ ಅಪ್ಪನಿಗೆ ಸ್ವಲ್ಪ ದುಡ್ಡು ಕೊಟ್ಟು, ಇನ್ನೂ ಮುಂದೆ ಪ್ರತಿ ತಿಂಗಳು ಸ್ವಲ್ಪ ದುಡ್ಡು ಕಳುಹಿಸುತ್ತೇನೆ ಯೋಚನೆ ಮಾಡಬೇಡ ಎಂದು ಹೇಳಿ ಟ್ರೈನ್ ಹತ್ತಿಸಿದ. ಕಲ್ಲಪ್ಪ ಮಾತ್ರ ಮಗನೆ ಯೋಚನೆಯಲ್ಲೇ ಮುಳುಗಿ ಹೋಗಿದ್ದ. ಅಷ್ಟರಲ್ಲಿ ರಾಮಸಂದ್ರ ಬಂದಿತ್ತು. ನಿಜವಾಗಿಯೂ ಕಲ್ಲಪ್ಪನಿಗೆ ಮಗ ಡಾಕು ತರಹ ಎಂದು ಅನ್ನಿಸಿದ್ದ.
Comments
ಉ: ಕಲ್ಲಪ್ಪನ ಮಗ ಡಾಕುಟರ್ ....
In reply to ಉ: ಕಲ್ಲಪ್ಪನ ಮಗ ಡಾಕುಟರ್ .... by malathi shimoga
ಉ: ಕಲ್ಲಪ್ಪನ ಮಗ ಡಾಕುಟರ್ ....
ಉ: ಕಲ್ಲಪ್ಪನ ಮಗ ಡಾಕುಟರ್ ....
In reply to ಉ: ಕಲ್ಲಪ್ಪನ ಮಗ ಡಾಕುಟರ್ .... by manju787
ಉ: ಕಲ್ಲಪ್ಪನ ಮಗ ಡಾಕುಟರ್ ....
ಉ: ಕಲ್ಲಪ್ಪನ ಮಗ ಡಾಕುಟರ್ ....
In reply to ಉ: ಕಲ್ಲಪ್ಪನ ಮಗ ಡಾಕುಟರ್ .... by ಗಣೇಶ
ಉ: ಕಲ್ಲಪ್ಪನ ಮಗ ಡಾಕುಟರ್ ....