ಸದ್ದಾಂಗಳ ಪತ್ತೆ : ಬಿಹಾರದ ಮೇಲೆ ಅಮೆರಿಕ ಕೆಂಗಣ್ಣು

ಸದ್ದಾಂಗಳ ಪತ್ತೆ : ಬಿಹಾರದ ಮೇಲೆ ಅಮೆರಿಕ ಕೆಂಗಣ್ಣು

ಬೊಗಳೂರು, ಜ.19- ಸದ್ದಾಂ ಹುಸೇನ್‌ನನ್ನು ಮುದ್ದಾಂ ಆಗಿ ಗಲ್ಲಿಗೇರಿಸಿದ ಬಳಿಕ ವಿಶ್ವದ ದೊಡ್ಡಣ್ಣನಾಗಲು ಹೊರಟ ದೇಶದ ಮುಂದಿನ ಗುರಿ ಭಾರತ ಎಂದು ಗೊತ್ತಾಗಿದೆ. (bogaleragale.blogspot.com)

ಈಗಾಗಲೇ ಗಲ್ಲಿಗೇರಿಸಲ್ಪಟ್ಟು ಸತ್ತು ಬದುಕಿದಂತಿರುವ ಸದ್ದಾಂನ ಹಲವಾರು ಅವತಾರಗಳು ಭಾರತದಲ್ಲಿ ಪತ್ತೆಯಾಗಿರುವುದೇ ಇದಕ್ಕೆ ಕಾರಣವಾಗಿದ್ದು, ತಾವು ಗಲ್ಲಿಗೇರಿಸಿರುವುದು ನಿಜವಾದ ಸದ್ದಾಂನನ್ನೇ ಎಂಬುದು ಅಮೆರಿಕದ ಶಂಕೆಗೆ ಈಗ ಕಾರಣವಾಗಿದೆ!

ಉತ್ತರ ಭಾರತಕ್ಕೆ ಪ್ರವಾಸ ಮಾಡಿದ ಸಂದರ್ಭ ಅಲ್ಲಿ ನೂರಾರು ಸದ್ದಾಂ ಹುಸೇನ್‌ಗಳಿರುವುದನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ದೊಡ್ಡಣ್ಣನ ಸಂತಾನಿಗರ ಕಣ್ಣು ಉತ್ತರ ಭಾರತದ ಮೇಲೆ ಬಿದ್ದಿದೆ.

1991ರಲ್ಲಿ ಇರಾಕ್ ಮೇಲೆ ಅಮೆರಿಕ ನಡೆಸಿದ ದಾಳಿ ಸಂದರ್ಭದಲ್ಲೂ ಸದ್ದಾಂ ಹುಸೇನ್‌ನ ಅದೆಷ್ಟೋ ತದ್ರೂಪಿಗಳು ಮುದ್ದಾಂ ಆಗಿ ಅಂದಿನ ಬುಷ್ ಎದುರು ಭುಸುಗುಟ್ಟಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ.

ಅಂತೆಯೇ ಕಳೆದ ವರ್ಷ ಮುದ್ದಾಂ ಬಂಧನವಾದ ಸಂದರ್ಭದಲ್ಲಿ ಕೂಡ ಈತ ನಿಜವಾದ ಸದ್ದಾಂ ಹೌದೇ ಅಲ್ಲವೇ ಎಂಬುದರ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಅಮೆರಿಕ, ಡಿಎನ್ಎ ಪರೀಕ್ಷೆಗೂ ಮುಂದಾಗಿದ್ದುದನ್ನು ನಮ್ಮ ಬ್ಯುರೋ ಬಹಿರಂಗಪಡಿಸಲು ಇಚ್ಛಿಸುತ್ತಿಲ್ಲ.

ಇದೀಗ, ಈಗಾಗಲೇ ಕನಿಷ್ಠ 2 ಕ್ರಿಕೆಟ್ ತಂಡ ಕಟ್ಟಬಲ್ಲಷ್ಟು ಸದ್ದಾಂಗಳನ್ನು ಹೊಂದಿರುವ ಬಿಹಾರದ ಗಯಾ ಜಿಲ್ಲೆಯ ಲಖನೌ ಹಳ್ಳಿಯಲ್ಲಿ ಶೀಘ್ರವೇ ಮತ್ತಷ್ಟು ಸದ್ದಾಂಗಳನ್ನು ಸೃಷ್ಟಿಸಿ ಪೂರ್ತಿ ಹಳ್ಳಿಯನ್ನು ಸದ್ದಾಂಮಯವಾಗಿಸುವ ಯತ್ನಗಳು ಭರದಿಂದ ಸಾಗಿದೆ.

Rating
No votes yet