ಪುಣ್ಯಕೋಟಿಯ ಸಾವಿನಲ್ಲೇ ನಮ್ಮ ರಾಜಕೀಯ ಅಡಗಿದಂತಿದೆ..

ಪುಣ್ಯಕೋಟಿಯ ಸಾವಿನಲ್ಲೇ ನಮ್ಮ ರಾಜಕೀಯ ಅಡಗಿದಂತಿದೆ..

ನೋಡಿ ಅವೈಜ್ಞಾನಿಕ ಕಸಾಯಿಖಾನೆ ಹೀಗಿರುತ್ತದೆ.

 

ಹಾದಿ ಬೀದಿಯಲಿನ ಹುಲ್ಲು, ಕಸವನು

ಮೇಯ್ದು, ಮನೆಗೈಯ್ದು ನಾನಾಂಮೃತವನೀಯ್ವೆ..

ಅದನುಂಡು ನನಗೆರಡು ಬಗೆವ ಮಾನವ ಹೇಳು,

ನೀನಾರಿಗಾದೆಯೋ ಎಲೈ ಮಾನವ?

 

‘ತಬ್ಬಲಿಯು ನೀನಾದೇ ಮಗನೇ’ -ಎಸ್.ಎಲ್.ಭೈರಪ್ಪನವರ ಬಹುಚರ್ಚಿತ ಕಾದಂಬರಿ. ಅಲ್ಲಿ ಕಾಳಿಂಗೇಗೌಡನಿಗೆ ಪುಣ್ಯಕೋಟಿ ಮುಗ್ಧವಾಗಿ ಈ ಪ್ರಶ್ನೆ ಕೇಳುತ್ತದೆ. ಕಾರಣ ಈ ದೇಶದ ‘ದನ ಕಾಯುವವನ’, ಹಾಗೆಯೇ ‘ದನ ಸಾಕುವವನ’ ‘ಎಕಾನಮಿ’ ಈಗ ಬದಲಾಗಿದೆ. ಲಾಭ ಲೆಕ್ಕಿಸಿ ‘ಔದ್ಯಮಿಕ ದನ ಸಾಕುವ ಉದ್ದಿಮೆದಾರರು’ ಈ ಹೊತ್ತಿನ ತುರ್ತು..

 

ಐದು ವರ್ಷಗಳ ಹಿಂದೆ ಬ್ರಿಟನ್ನಿನ ಹೆಸರಾಂತ ‘ನ್ಯೂ ಸೈಂಟಿಸ್ಟ್’ ಪತ್ರಿಕೆಯ ವರದಿಗಾರ ಫ್ರೇಡ್ ಪಿಯರ್ಸ್ ಗುಜರಾತಿಗೆ ಭೇಟಿ ನೀಡಿದ್ದ. ಅಮುಲ್ ಡೈರಿ ಇರುವ ಆನಂದ್ ಪಟ್ಟಣದ ಸುತ್ತ ಅಡ್ಡಾಡಿ "ಇಲ್ಲಿ ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ಎರಡು ಸಾವಿರ ಲೀಟರ್ ನೀರನ್ನು ಬಳಸುತ್ತಾರೆ" ಎಂದು ಖಚಿತ ಲೆಕ್ಕಾಚಾರಗಳ ಮೂಲಕ ವರದಿ ಮಾಡಿದ್ದ. ನೀರು ಅವಿನಾಶಿ ನಿಜ. ಆದರೆ ಪ್ರತಿ ಬಾರಿ ಕೊಳವೆ ಬಾಯಿಯಿಂದ ನೀರನ್ನು ಎತ್ತಿ ಬಳಸಿದಾಗಲೂ ಒಂದಿಷ್ಟು ನೀರು ಆವಿಯಾಗಿ ಆಕಾಶಕ್ಕೆ ಹೋಗುತ್ತದೆ. ನಾವು ಅಗಾಧ ಪ್ರಮಾಣದಲ್ಲಿ ಹಾಲಿಗಾಗಿ ನೀರನ್ನು ಎತ್ತಿ ಬಳಸುತ್ತ ಋತುಮಾನದ ಅಸಮತೋಲನೆಗೆ ಕಾರಣವಾಗುತ್ತಿದ್ದೇವೆ..

 

ಹೈನುಗಾರಿಕೆಗೆ ಅತಿ ಆದ್ಯತೆ ಕೊಟ್ಟಿದ್ದರಿಂದ ಇನ್ನೂ ಅನೇಕ ಬಗೆಯ ಅಸಮತೋಲನ ಕಾಣಿಸಿಕೊಳ್ಳುತ್ತಿದೆ. ಹಿಂದೆಲ್ಲ ಪಶು ಸಂಗೋಪನೆ ಎನ್ನುವುದು ಒಟ್ಟಾರೆ ಗ್ರಾಮೀಣ ಬದುಕಿನ ಭಾಗವಾಗಿತ್ತು. ಸ್ಥಳೀಯ ತಳಿಗಳಿದ್ದವು. ಗೋಮಾಳವಿತ್ತು. ಕೆರೆಗಳಿದ್ದವು. ಹೊಲದ ಬದುವಿನ ಮೇಲೆ, ಬೆಟ್ಟದಲ್ಲಿ ಮೇವಿರುತ್ತಿತ್ತು. ಹೋರಿಗಳಿಗೆ ಹೊಲದಲ್ಲಿ ಕೆಲಸವೂ ಇತ್ತು. ಈಗ ಎಲ್ಲವೂ ಏರುಪೇರಾಗಿವೆ. ಸ್ಥಳೀಯ ಗೋ-ತಳಿಗಳು ಕಣ್ಮರೆಯಾಗುತ್ತಿವೆ. ಹೊಲಗಳಿಗೆ ಟ್ರಾಕ್ಟರ್, ಟ್ರಿಲ್ಲರ್ ಬಂದಿವೆ. ಜರ್ಸಿ ಅಥವಾ ಎಚ್.ಎಫ್. ಹಸುಗಳಿಗೆ ಹೋರಿ ಕರು ಹುಟ್ಟಿದರೆ ಅದನ್ನು ಇಟುಕೊಳ್ಳುವಂತಿಲ್ಲ. ಏಕೆಂದರೆ ಚಕ್ಕಡಿಗೆ ಹೂಡುವಂತಿಲ್ಲ. ನೇಗಿಲಿಗೆ ಕಟ್ಟುವಂತಿಲ್ಲ. ಇನ್ನು ಇತ್ತ ಗೋಮಾಳವೂ ಇಲ್ಲ. ಬೆಟ್ಟಗಳಲ್ಲಿ ಜಾಲಿ, ಲಂಟಾನಾ ತುಂಬಿದೆ. ಇಂಥ ಸ್ಥಿತಿಯಲ್ಲಿ ಹೈನುಗಾರಿಕೆಗೆ ನಾವು ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದೇವೆ. 

 

ಕರುಳು ಕಿತ್ತು ಬರುವ ಅಮಾನವೀಯ ದೃಷ್ಯ.

 

ನಮ್ಮ ರಾಸುಗಳಿಗೆ ನಾವು ಈಗ ನೀಡುತ್ತಿರುವ ಮೇವು ಎಂಥದ್ದು? ಹೊಲದ ಭತ್ತ-ರಾಗಿಯ ಹುಲ್ಲಿನಲ್ಲಿ ಯೂರಿಯಾ, ಡಿಎಪಿ ಮತ್ತು ಕೀಟನಾಶಕ ವಿಷ ಭರಪೂರ ಸಂಚಾರವಾಗುತ್ತಿದೆ. ಸರಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿರುವ ಕಾಳು-ಕಡಿಗೆ ಕಸಾಯಿಖಾನೆಯ ತ್ಯಾಜ್ಯಗಳನ್ನು ಸೇರಿಸಿ ಫ್ಯಾಕ್ಟರಿಗಳಲ್ಲಿ ತಯಾರಿಸಿದ ಪಶು ಆಹಾರವನ್ನು ಹಸುಗಳಿಗೆ ತಿನ್ನಿಸಿ, ಆಗಾಗ ಹಾರ್ಮೋನ್ ಚುಚ್ಚುಮದ್ದು ನೀಡಿ, ಕೃತಕ ಗರ್ಭಧಾರಣೆ ಮಾಡಿಸಿ ಹಾಲು ಉತ್ಪಾದನೆಗೆ ಇಳಿದಿದ್ದೇವೆ. ಹಾಲನ್ನು ತಾಜಾ ಇಡಲೆಂದು ಹೈಡ್ರೋಜನ್ ಪೆರಾಕ್ಸಾಯಿಡ್ ಸೇರಿಸಿ, ಯೂರಿಯಾ ಬೆರೆಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ..ಅಂಥ ಅನೈಸರ್ಗಿಕ ಹಾಲು-ಹೈನು ಸೇವಿಸಿ ನನ್ನಂಥ ನಗರವಾಸಿಗಳ ಆರೋಗ್ಯ ಎಷ್ಟು ಸಧಾರಿಸಿತೋ ಗೊತ್ತಿಲ್ಲ? ಆದರೆ ಈಗ ಗ್ರಾಮೀಣ ಜನರಿಗೆ ದಪ್ಪ ಹೊಟ್ಟೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಲಕ್ವ, ಹೃದ್ರೋಗ, ಕಿಡ್ನಿ ವೈಫಲ್ಯ ಮುಂತಾದ ಮಾರಣಾಂತಿಕ ಕಾಯಿಲೆಗಳು ಅಮರಿಕೊಳ್ಳುತ್ತಿವೆ. 

 

ಔದ್ಯಮಿಕ ಮಾದರಿಯ ಪಶು ಸಂಗೋಪನೆ ಎಂಬುದು ಇಡೀ ಭೂಮಿಗೆ ಅತಿ ದೊಡ್ಡ ಹೊರೆಯಾಗುತ್ತಿದೆ. ಜಗತ್ತಿನ ಒಟ್ಟು ಕೃಷಿ ಭೂಮಿಯ ಶೇಕಡಾ ೭೦ಭಾಗ ಬರಿ ಪಶುಗಳ ಆಹಾರ ಬೆಳೆಯುವ ಉದ್ದೇಶಕ್ಕೇ ಮೀಸಲಾಗಿದೆ. ಪ್ರತಿ ವರ್ಷ ಸರಾಸರಿ ೫೦ ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಹೊಸದಾಗಿ ಶುಸಂಗೋಪನೆಗೆ ಬಲಿಯಾಗುತ್ತಿದೆ. ಪ್ರಪಂಚದ ಪ್ರತಿ ವ್ಯಕ್ತಿ ದಿನಕ್ಕೆ ಎಂಟು ಬಾರಿ ಸ್ನಾನ ಮಾಡಿದರೆ ಬೇಕಾಗುಷ್ಟು ನೀರು (ಪ್ರತಿ ಸೆಕೆಂಡಿಗೆ ೨೮ ಲಕ್ಷ ಲೀಟರ್ ) ಪಶು ಸಂಗೋಪನೆಗೆ ವ್ಯಯವಾಗುತ್ತಿದೆ ಎಂದು ಅಂಕಿ-ಸಂಖ್ಯೆಗಳು ಹೇಳುತ್ತವೆ. ಒಂದು ಲೀಟರ್ ಹಾಲಿನ ಉತ್ಪಾದನೆಗೆ ಸರಾಸರಿ ೯೦೦ ಲೀಟರ್ ನೀರು ವ್ಯಯವಾಗುತ್ತಿದೆ. ಕರ್ನಾಟಕ ಇಡೀ ದೇಶದಲ್ಲಿಯೇ ಹೈನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ನಮ್ಮ ದೇಶದಲ್ಲಿ ಮಾಂಸಕ್ಕೆಂದೇ ದನಗಳನ್ನು ಬೆಳೆಸುವುದಿಲ್ಲ. ಹಾಗಾಗಿ ಹೈನೋದ್ಯಮ ಹೊರೆಯಾಗಿ ಪರಿಣಮಿಸಿದೆ.

 

ಭೀಭತ್ಸ, ಕರುಣಾಜನಕ ದೃಷ್ಯ. ಇನ್ನಾದರೂ ನಾವು ಈ ಬೆಳವಣಿಗೆಗಳಿಗೆ ಇತಿಶ್ರೀ ಹಾಡಲಾದೀತೇ?

 

ಕಸಾಯಿಖಾನೆ ಎಂಬ ಅಕ್ಷಯ ಪಾತ್ರೆ ?: ವೈದ್ಯಕೀಯ ರಂಗಕ್ಕೆ ಮಾತ್ರವಲ್ಲ, ಉದ್ಯಮ ರಂಗಕ್ಕೆ ಮತ್ತು ನಮ್ಮ ದಿನ ಬಳಕೆಯ ಸಾವಿರಾರು ವಸ್ತುಗಳಿಗೆ ಬೇಕಾಗುವ ಕಚ್ಚಾ ಸಾಮಗ್ರಿ ಕಸಾಯಖಾನೆಗಳಿಂದಲೇ ಲಭಿಸುತ್ತದೆ. ಒಂದು ಹಸು, ಎತ್ತು ಅಥವಾ ಎಮ್ಮೆ ಸತ್ತರೆ ಅದರ ಚರ್ಮ ಸುಲಿದು ಯಾರೋ ಚಪ್ಪಲಿ, ಜಾಕೀಟು ಅಥವಾ ಬೆಲ್ಟ್ ಮಾಡಲು ಒಯ್ಯುತ್ತಾರೆ. ಮಾಂಸದ ಆಯ್ದ ಭಾಗಗಳನ್ನು ಕೆಲವರು ಆಹಾರಕ್ಕೆ ಬಳಸುತ್ತಾರೆ. ದನಗಳ ಗೊರಸು, ಕೋಡುಗಳಿಂದಲೇ ‘ಜೆಲ್ಲಿ’ ಎಂಬ ಅಂಟು ವಸ್ತು ತಯಾರಿಸಲಾಗುತ್ತದೆ. ಪುಡಿ ಮಾಡಿದ ಮೂಳೆಗಳನ್ನು ಸಕ್ಕರೆಯನ್ನು ಬಿಳಿ ಮಾಡಲು ಬಳಸುತ್ತಾರೆ. ರಸಗೊಬ್ಬರಕ್ಕೆ ಬೇಕಾಗುವ ಕ್ಯಾಲ್ಸಿಯಂ ಮತ್ತು ರಂಜಕವನ್ನು ‘ಬೋನ್ ಮಿಲ್’ಫ್ಯಾಕ್ಟರಿಗಳಿಂದಲೇ ಪೂರೈಸಲಾಗುತ್ತದೆ.

 

ದನಗಳ ಶ್ವಾಸಕೋಶ ಮತ್ತು ಶ್ವಾಸನಾಳದ ಒಳ ಪೊರೆಯಿಂದ ಹೆಪಾರಿನ್ ಎಂಬ ಔಷಧ ತಯಾರಿಸುತ್ತಾರೆ. ಮಾನವರ ಸರ್ಜರಿ ಮಾಡುವಾಗ ರಕ್ತ ಗರಣೆಗಟ್ಟದಂತೆ ತಡೆಯಲು, ವಿಶೇಷವಾಗಿ ಗ್ಯಾಂಗ್ರಿನ್ ಆಗದಂತೆ ತಡೆಯಲು ಈ ಔಷಧ ಬಳಕೆಯಾಗುತ್ತದೆ. ದನದ ಆಡ್ರಿನಾಲಿನ್ ಗ್ರಂಥಿಗಳಿಂದ ತೀವ್ರತೆರನಾದ ಅಸ್ತಮಾದಂತಹ ಕಾಯಿಲೆಗಳ ಶಮನಕ್ಕೆ ಸ್ಟಿರಾಯಿಡ್ ಗಳ ತಯಾರಿಕೆಗೆ ಬಳಸಲಾಗುತ್ತದೆ. ಇದೇ ಗ್ರಂಥಿಗಳಿಂದ ಎಪಿನೆಫ್ರಿನ್ ಎಂಬ ಮದ್ದು ಉತ್ಪಾದಿಸಿ ಅದನ್ನು ರಕ್ತದ ಒತ್ತಡ ಹೆಚ್ಚಿಸಲು ಬಳಸುತ್ತಾರೆ.  ಹೃದ್ರೋಗ ಸಂಬಂಧಿ ಕಾಯಿಲೆಗಳ ಚಿಕಿತ್ಸೆಯಲ್ಲಿ ಇದು ಅನಿವಾರ್ಯ. ದನದ ಯಕೃತ್ತಿನಿಂದ ಬಿ-೧೨, ಲಿವರ್ ‘ಎಕ್ಸ್ ಟ್ರ್ಯಾಕ್ಟ್’ ನಿಂದ ಬಹುಮೂಲ್ಯ ಔಷಧಿ ತಯಾರಾಗುತ್ತದೆ. ಹಾಗೆಯೇ ಮಧುಮೇಹಿಗಳಿಗೆ ಬೇಕಾದ ಇನ್ಸುಲಿನ್, ದನಗಳ ಮೇದೋಜ್ಜೀರಕ ಗ್ರಂಥಿಯಿಂದ ಪಡೆಯಲಾಗುತ್ತದೆ. ಸಂಧಿವಾತ, ಕೀಲುನೋವಿನಿಂದ ಬಳಲುವವರಿಗೆ ಕೊಡುವ ಕೊಂಡ್ರಾಯಿಟಿನ್ ಸಲ್ಫೇಟ್ ಎಂಬ ಔಷಧಿ ದನದ ಮೂಗಿನ ಹೊರಳೆಗಳ ನಡುವಿನ ಮೃಧ್ವಸ್ಥಿಯಿಂದ ತಯಾರಿಸುತ್ತಾರೆ. ದನದ ಮಿದುಳಿನ ದಟ್ಟ ನಾರಿನಂಥ ಹೊರಗವಚವನ್ನು (ಡ್ಯುರಾಮೇಟರ್) ಮನುಷ್ಯರ ಮಿದುಳಿನ ಶಸ್ತ್ರ ಚಿಕಿತ್ಸೆ ಮಾಡುವಾಗ ತಲೆಬುರುಡೆಯ ಖಾಲಿ ಜಾಗವನ್ನು ತುಂಬಲು ಬಳಸಲಾಗುತ್ತದೆ.

 

ದನದ ಕರಳು ಉಪ್ಪಿನಲ್ಲಿ ಒಣಗಿಸಿ ಕೊಳವೆಯಂತೆ ಕತ್ತರಿಸಿ ಅದರಲ್ಲಿ ಮಸಾಲೆ ಮಾಂಸ ತುಂಬಿ ಕರಿದು ‘ಸಾಸೇಜ್’ ಎಂಬ ತಿಂಡಿಯನ್ನು ತಯಾರಿಸಲಾಗುತ್ತದೆ. ಕರುಳನ್ನು ದಾರದಂತೆ ಸೀಳಿ, ಗಾಯಕ್ಕೆ ಹೊಲಿಗೆ ಹಾಕುವ ದಾರವನ್ನಾಗಿ ಬಳಸಲಾಗುತ್ತದೆ. ದನಗಳ ಪಿತ್ತಕೋಷದಲ್ಲಿನ ಕಲ್ಲುಗಳನ್ನು ಪಾಲಿಷ್ ಮಾಡಿ ಆಭರಣ ತಯಾರಕರು ಹರಳುಗಳಂತೆ ಉಂಗುರದಲ್ಲಿ ಬಳಸುತ್ತಾರೆ. ಪ್ಲೈವುಡ್ ನಲ್ಲಿ ಕಟ್ಟಿಗೆಯ ತೆಳು ಹಾಳೆಗಳನ್ನು ಅಂಟಿಸಲು ದನಗಳ ರಕ್ತವನ್ನು ಗೋಂದಿನಂತೆ ಸಾಂದ್ರೀಕರಿಸಿ ಬಳಸುತ್ತಾರೆ. ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಉಪಯೋಗಿಸುವ ಅಗ್ನಶಾಮಕ ನೊರೆಯನ್ನು ದನಗಳ ರಕ್ತದ ಪುಡಿಯಿಂದಲೇ ತಯಾರಿಸಲಾಗುತ್ತದೆ. ಮಿಕ್ಕಿದ ರಕ್ತದ ಪುಡಿ ರಸಗೊಬ್ಬರದ ಉತ್ಪಾದನೆಗೆ ಬಳಕೆಯಾಗುತ್ತದೆ. ಹೊಲದ ದುಡಿಮೆ ನಿರತಳಾದ ಮಹಿಳೆ ತೀರ ದುರ್ಬಲಳಾಗಿದ್ದರೆ ಅನೀಮೀಯಾ ಕಾಯಿಲೆ ಇದೆಯೆಂದು ವೈದ್ಯರು ಬರೆದು ಕೊಡುವ ಐರನ್ ಟ್ಯಾಬ್ಲೆಟ್ ತಯಾರಿಕೆಗೆ ದನದ ರಕ್ತವೇ ಮೂಲದ್ರವ್ಯ. ಇಡೀ ದೇಶದ ತಾಯಂದಿರಿಗೆ ಇಂದು ವಿತರಣೆಯಾಗುವ ಐರನ್ ಟ್ಯಾಬ್ಲೇಟ್ ಗಳಿಗೆ ಇದೇ ಮೂಲವಸ್ತು.

 

ನಮ್ಮ ಕಳಕಳಿ ಪುಣ್ಯಕೋಟಿಯನ್ನು ಉಳಿಸಬಲ್ಲುದು..

 

ಹಾಗಾಗಿ ಪಶು ವಧೆ ..ಅನಿವಾರ್ಯ! ಹಾಗಾಗಿ ಕಸಾಯಿ ಖಾನೆಗಳು ಆಧುನೀಕರಣ ಗೊಳ್ಳಬೇಕು. ಧಾರ್ಮಿಕ ವಿಧಿಗಳಿಗೆ ಚ್ಯುತಿ ಬಾರದ ಹಾಗೆ ಸಾಧ್ಯವಾದಷ್ಟು ನೋವಿಲ್ಲದ ‘ಸ್ಟನ್ನಿಂಗ್’ ವಿಧಾನದಲ್ಲೇ ಪಶು ವಧೆ ಕಡ್ಡಾಯವಾಗಿ ನಡೆಯುವಂತಾಗಬೇಕು. ನಂತರ ಮಾಂಸ ಮೂಲ ಸಂಸ್ಕರಣೆಯ ಪ್ರತಿ ಹಂತದಲ್ಲೂ ಕಟ್ಟುನಿಟ್ಟಾಗಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಕಡ್ಡಾಯಗೊಳಿಸಬೇಕು. ಗಲ್ಲಿ, ಮೊಹೊಲ್ಲಾಗಳ ಸಂದುಗೊಂದಿನಲ್ಲಿ ಪಶುವಧೆಗೆ ಅವಕಾಶ ನೀಡಬಾರದು. (ಚಿತ್ರಗಳನ್ನು ನೋಡಿ) ಈಗಿನ ಸ್ಥಿತಿಯಲ್ಲಿ ಅದಕ್ಕೆ ನಿರ್ಬಂಧ ಹೇರುವುದು ಕಷ್ಟಸಾಧ್ಯ. ಏಕೆಂದರೆ ಕಸಾಯಿಖಾನೆಗಳು ತೀರ ದೂರದಲ್ಲಿವೆ. ಅಚ್ಚುಕಟ್ಟಾದ, ಮಾಲಿನ್ಯದ ಲವಲೇಶವೂ ಇಲ್ಲದ ಚಿಕ್ಕ-ಚಿಕ್ಕ ಕಸಾಯಖಾನೆಗಳನ್ನು ಆರಂಭಿಸಲು ಸಾಧ್ಯವಿದೆ. ಅಂಥವನ್ನು ಸೂಕ್ತ ಜಾಗೆಯಲ್ಲಿ ನಿರ್ಮಿಸಬೇಕು. ಅಲ್ಲಿಂದ ಹೊರಬರುವ ಶೇಷ ದ್ರವ್ಯಗಳು ಚರಂಡಿಗೆ ಸೇರದಂತೆ ಪ್ರತ್ಯೇಕವಾಗಿ ಸಾಗಿಸಬೇಕು. ಅಲ್ಲಿ ಶಿಸ್ತಿನ ಮೇಲ್ವಿಚಾರಣೆ ನಡೆಯುತ್ತಿರಬೇಕು. 

 

ತಟ್ಟಿದರೆ ಕುರುಳಾದೆ; ಸುಟ್ಟರೆ

ನೊಸಲಿಗೆ ವಿಭೂತಿಯಾದೆ, ನೀರೆರೆದು

ಪೋಷಿಸಿದರೆ ಮೇರು ಗೊಬ್ಬರವಾದೆ; ನೀನಾರಿಗಾದೆಯೋ

ಎಲೈ ಮಾನವ?

 

ಬೀದಿಬದಿಗಳಲ್ಲಿ, ತೆರೆದ ಅಂಗಡಿಗಳಲ್ಲಿ ಮಾಂಸದ ಪ್ರಾಣಿಗಳ ವಿವಿಧ ಅಂಗಗಳ ಪ್ರದರ್ಶನವನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಯಾವ ಹಂತದಲ್ಲೂ ಸೈಕಲ್ ಮತ್ತು ದ್ವಿಚಕ್ರ ವಾಹನಗಳ ಮೇಲೆ ಮೂಕ-ಪ್ರಾಣಿ, ಹಕ್ಕಿಗಳ ಸಾಗಾಟಕ್ಕೆ ಅವಕಾಶ ಕೊಡಬಾರದು. ಇಂಥ ವ್ಯವಸ್ಥೆಯಲ್ಲಿ ಸಾಮಾಜಿಕ ನೆಮ್ಮದಿ ನೆಲೆಸುತ್ತದೆ. ವಾಸ್ತವದ ನೆಲೆಗಟ್ಟಿನಲ್ಲಿಯೇ ಈಗಿರುವ ಲೋಪಗಳನ್ನು ಸರಿ ಪಡಿಸಲು ಸಾಧ್ಯವಾಗುತ್ತದೆ. ಗೋವುಗಳು ಸೇರಿದಂತೆ ಎಲ್ಲ ಜೀವಿಗಳ ಮೇಲೆ ನಮಗಿರುವ ಮಾನವೀಯ ಅನುಕಂಪ, ಅಂತ:ಕರಣ ಹಾಗೂ ಸಂವೇದನೆಗೆ ಭಂಗ ಬರಲಾರದು. ಇಲ್ಲಿ ಅತ್ಯಂತ ಘೋರ/ ಮನಕಲಕುವ ಚಿತ್ರ ಪ್ರಕಟಿಸಿದ್ದೇನೆ. ಘೋರತೆ  ತಿಳಿಯಲಿ ಎಂಬ ಉದ್ದೇಶ. ದಯವಿಟ್ಟು ಮನ್ನಿಸಿ ಎಂಬ ಅರಿಕೆ. ಗೋ ಹತ್ಯೆ ಕುರಿತು ಆರೋಗ್ಯಕರವಾದ, ನಿರ್ಭಾವುಕ ಚರ್ಚೆಯ ಅಗತ್ಯವಿದೆ. ಸಂಪದ ವೇದಿಕೆಯಾಗಬಹುದು ಎಂಬ ಅಭಿಲಾಷೆ.

 

ಹೆಚ್ಚಿನ ಮಾಹಿತಿಗಾಗಿ: ನವಕರ್ನಾಟಕ ಪ್ರಕಾಶನ ಪ್ರಕಟಿಸಿದ, ಪರಿಸರ ಪತ್ರಕರ್ತ ನಾಗೇಶ್ ಹೆಗಡೆ ಬರೆದ, ಕೇವಲ ೨ ರೂಪಾಯಿ ಬೆಲೆಯ ಕಿರು ಹೊತ್ತಿಗೆ ‘ಗೋ ಹತ್ಯೆ ಒಂದು ಪರಾಮರ್ಶೆ’ ಓದಿ. ನಾನು ಆ ಕಿರು ಹೊತ್ತಿಗೆಯ ಆಯ್ದ ಕೆಲ ಬಿಂದುಗಳನ್ನು ಮಾತ್ರ ಸಾಂದರ್ಭಿಕವಾಗಿ ಇಲ್ಲಿ ಉಲ್ಲೇಖಿಸಿದ್ದೇನೆ.

   

 




 
   
 

Comments