“ಚಿಲ್ಲರೆ”ಜನರ ದೇಶಕಟ್ಟಾಣಿಕೆ
“ಚಿಲ್ಲರೆ ಜನರು ದೇಶ ಕಟ್ಟಲಾರರು” ಎಂದು ಹಿರಿಯ ಚಿಂತಕರೊಬ್ಬರು ಕಳಕಳಿಸಿದ್ದಾರೆ. ಈ ಅನುಭವವೇದ್ಯ ವಿಷಯ ಓದಿದಾಗ, ಅದು ಇನ್ನಷ್ಟು ಆಲೋಚಿಸುವಂತೆ ಮಾಡಿತು.
ಚಿಲ್ಲರೆ ಜನ ದೇಶ ಕಟ್ಟಲಾರರು, ನಿಜ. ಆದರೇನು ಮಾಡುವುದು, ನಮ್ಮ ಚುನಾವಣಾ ವ್ಯವಸ್ಥೆಯೇ, ಇಡೀ ದೇಶವನ್ನು ಚಿಲ್ಲರೆ ಜನರ ಕೈವಶಕ್ಕೆ ಒಪ್ಪಿಸಿಕೊಡುವಂತಿದೆಯಲ್ಲಾ?! ಈ ಜನ ದೇಶ ಕಟ್ಟುವವರಲ್ಲ್ಲ; ಕುಟ್ಟಿ ಒಡೆಯುವವರು. ಕುಟ್ಟಿ ಹುಡಿ-ಹುಡಿ ಮಾಡಿದಷ್ಟೂ, ಅಷ್ಟೂ ಇವರು ಚುನಾವಣೆಗಳಲ್ಲಿ ಯಶಸ್ವಿಯಾಗುತ್ತಾರೆ! ಮಹಾಭಾರತ, ರಾಮಾಯಣಗಳಂಥಾ ಪುರಾಣೇತಿಹಾಸಗಳಲ್ಲೂ ಛಿದ್ರಾನ್ವೇಷೀ ಪೋಲೀ ಪಟಾಲಂ ಖಳನಾಯಕರ ಚಿತ್ರಣವಿದೆ. ಆದರೆ ಕಡೆಯಲ್ಲಿ ಅವರೆಲ್ಲಾ ಹುಡಿ ಮಣ್ಣು ಮುಕ್ಕಿ ಹಾಳಾದರೆಂದೇ ಅವೆಲ್ಲಾ ನೀತಿ ಹೇಳುತ್ತವೆ. ಆದರೆ ನಮ್ಮ ಕಾಲದ ದುಷ್ಟರಾದರೋ, ನಾವೇ ನಿರ್ಮಿಸಿದ ಕಾಯ್ದೆ-ಕಾನುನು ಪ್ರಕಾರವೇ, ಛಿದ್ರಿಕರಣ ಸ್ಪರ್ಧೆಯಲ್ಲಿ ಗೆದ್ದು ಐಭೋಗದ ಮೇಲುಮೇಲಿನ ಮೆಟ್ಟಿಲೇರುತ್ತಲೇ ಹೋಗುತ್ತಾರೆ!
ಸಕ್ರಿಯ ಚುನಾವಣಾ ರಾಜಕೀಯದಲ್ಲಿರುವವರೆಲ್ಲರಿಗೆ ಛಿದ್ರೀಕರಣದ ಚಿಲ್ಲರೆತನ, ಹಲ್ಕಾತನಗಳು ಇಂದು ಅನಿವಾರ್ಯ! ಜಾತಿ-ಒಳಜಾತಿ-ಉಪಜಾತಿ, ಕೋಮು, ಗಡಿ, ನೆಲ, ಜಲ ಇತ್ಯಾದಿ ಹಿತಾಸಕ್ತಿಗಳನ್ನು ಹುಟ್ಟಿಸಿ ಹಿಡಿದಿಟ್ಟುಕೊಳ್ಳಬಲ್ಲವರೇ ಇಂದಿನ ಯಶಸ್ವೀ ಮುಖಂಡರು. ಆ ಕಿರುಸಂಖ್ಯೆಯ ಬೆಂಬಲದಿಂದಲೇ ಅವರು ಎಂಪಿ/ಎಮ್ಮೆಲೆಗಳೂ ಆಗಿಬಿಡುವುದು! ಇವರ್ಯಾರು, ಎಂದಿಗೂ ಆ ಮತಕ್ಷೇತ್ರದ ಬಹುಮತವನ್ನೂ, ನೈಜ ಹಿತಾಸಕ್ತಿಯನ್ನೂ ಪ್ರತಿನಿಧಿಸಬೇಕಾದ್ದೇ ಇರುವುದಿಲ್ಲ! ತನಗೆ ವೋಟು ಹಾಕದ ಶೇ. 65-70 ಮತದಾರರ ಗೋಳಿಗಾಗಲೀ, ಶಾಪಕ್ಕಾಗಲೀ ಅವರು ವಿಚಲಿತರಾಗುವುದೂ ಇಲ್ಲ!
ಇವರು, ಶೇ. 25-30 “ಚಿಲ್ಲರೆ” ವೋಟಿನ ಸರದಾರರೇ ಇರಬಹುದು. ಆದರೂ ಈ ಮಹಾಮಹಿಮರು, ಕೋಟ್ಯನುಕೋಟಿ ಲಂಚ ತಿಂದರೂ, ಕೊಲೆ-ಸುಲಿಗೆಗಳಲ್ಲಿ ರಾಜಾರೋಷವಾಗಿ ತೊಡಗಿಸಿಕೊಂಡರೂ ಬಹುಮಂದಿ ಸಭ್ಯರು ಅವರನ್ನೇನೂ ಮಾಡಲಾಗುವುದಿಲ್ಲ!