ಸೇವಾ ಪುರಾಣ -25: ಮರಳಿ ಹಾಸನಕ್ಕೆ -3
ವಿಷಾದ ಉಳಿಯಿತು!
ನಾನು ಅಮಾನತ್ತಾಗಿದ್ದ ಅವಧಿಯಲ್ಲಿ ಪೋಲಿಸ್ ಕೇಸುಗಳು ಬಿಟ್ಟರೆ ನನ್ನ ವಿರುದ್ಧ ಯಾವುದೇ ಇಲಾಖಾ ವಿಚಾರಣಾ ಪ್ರಕರಣಗಳನ್ನು ದಾಖಲಿಸಿರಲಿಲ್ಲ. ಹೀಗಾಗಿ ಕೇಸುಗಳು ನನ್ನ ಪರವಾಗಿ ಮುಗಿದ ನಂತರ ನಿಂತಿದ್ದ ನನ್ನ ಬಾಕಿ ವೇತನ, ವಾರ್ಷಿಕ ವೇತನ ಬಡ್ತಿಗಳನ್ನು ಕೊಡುವಂತೆ ಮನವಿ ಸಲ್ಲಿಸಿ ಹಿರಿಯ ವಯಸ್ಸಿನ ಸಿಬ್ಬಂದಿ ಗುಮಾಸ್ತರನ್ನು ಬೇಗ ಕೆಲಸ ಮಾಡಿಕೊಡುವಂತೆ ಕೋರಿದೆ. ನನಗೆ ಸುಮಾರು ನಾಲ್ಕು ವರ್ಷಗಳ ಬಾಕಿ ಬರಬೇಕಿತ್ತು. ಅವರು ನನ್ನಿಂದ ಹಣ ಬಯಸಿದ್ದರೋ, ಯಾವ ಕಾರಣಕ್ಕೋ ಬೇಗ ಕೆಲಸ ಮಾಡಿಕೊಡಲಿಲ್ಲ. ಕೇಳಿದಾಗಲೆಲ್ಲಾ ಕೆಲಸ ಜಾಸ್ತಿಯಿದೆ. ೮ ದಿನಗಳ ಒಳಗೆ ಮಾಡಿಕೊಡುತ್ತೇನೆ ಎಂತಲೇ ಹೇಳುತ್ತಿದ್ದರು. ನಾನೂ ಅವರು ಹೇಳಿದ ದಿನಗಳವರೆಗೆ ಕಾಯ್ದು ಭೇಟಿ ಮಾಡಿದರೆ ಪುನಃ ಸಬೂಬು ಹೇಳುತ್ತಿದ್ದರು. ಈ ರೀತಿ ಸುಮಾರು ಒಂದು ವರ್ಷದವರೆಗೆ ಸತಾಯಿಸಿದರು. ಅಲ್ಲಿಯವರೆಗೆ ನಾನು ತಾಳ್ಮೆಯಿಂದಲೇ ಅವರು ಹೇಳಿದ್ದನ್ನು ಕೇಳಿ ತಪ್ಪದೆ ಕೆಲಸ ಮಾಡಿಕೊಡುವಂತೆ ಕೋರುತ್ತಲೇ ಇದ್ದೆ ಮತ್ತು ಅವರು ಹೇಳಿದ ದಿನ ಬಂದು ವಿಚಾರಿಸುತ್ತಲೇ ಇದ್ದೆ. ಅಕ್ಕಪಕ್ಕ ಇದ್ದ ಗುಮಾಸ್ತರುಗಳು ಇದನ್ನು ನೋಡಿ ಸುಮ್ಮನಿರುತ್ತಿದ್ದರು. ನಂತರದಲ್ಲಿ ಒಂದು ದಿನ ಅವರು ಉದಾಸೀನದಿಂದ ಇದೇ ಉತ್ತರ ನೀಡಿದಾಗ ನನಗೆ ಕೆರಳಿಹೋಯಿತು. ಅನಾಮತ್ತಾಗಿ ಅವರ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಕುರ್ಚಿಯ ಆಚೆಗೆ ಎಳೆದುಕೊಂಡು "ಕೆಲಸ ಮಾಡಲು ಆಗುತ್ತದೆಯೋ, ಇಲ್ಲವೋ? ನಡಿ, ಜಿಲ್ಲಾಧಿಕಾರಿಯವರ ಹತ್ತಿರ ಹೋಗೋಣ. ಇವತ್ತು ಎರಡರಲ್ಲಿ ಒಂದು ಇತ್ಯರ್ಥವಾಗಲೇಬೇಕು" ಎಂದಾಗ ಆತ ಗರಬಡಿದು ಹೋಗಿದ್ದ. ಉಳಿದವರೂ ಸುಮ್ಮನೇ ಇದ್ದರು. ಆತ "ತಪ್ಪಾಯಿತು. ತಕ್ಷಣ ಮಾಡುತ್ತೇನೆ" ಎಂದ. ನಾನು "ನಿನಗೆ ಒಂದು ದಿನ ಮಾತ್ರ ಅವಕಾಶ ಕೊಡುತ್ತೇನೆ. ನಾಳೆ ಬೆಳಿಗ್ಗೆ ನಾನು ಬರುವ ವೇಳೆಗೆ ಕೆಲಸ ಆಗದಿದ್ದರೆ ಏನು ಆಗುತ್ತದೆಯೋ ಆಗಲಿ, ಚಪ್ಪಲಿಯಲ್ಲಿ ಹೊಡೆಯುತ್ತೇನೆ" ಎಂದು ಗದರಿಸಿ ವಾಪಸು ನನ್ನ ಕೊಠಡಿಗೆ ಹೋದೆ. ಟಿಪ್ಪಣಿ ಬರೆದು ಅದೇಶ ಪಡೆಯುವುದು, ಬಿಲ್ಲು ಮಾಡುವುದು, ಸಹಿ ಪಡೆಯುವುದು, ಖಜಾನೆಗೆ ಕೊಟ್ಟು ಚೆಕ್ಕು ತರಿಸುವುದು, ಇತ್ಯಾದಿಗಳಿಗೆ ಸಾಮಾನ್ಯ ಸ್ಥಿತಿಯಲ್ಲಿ ಒಂದು ವಾರವಾದರೂ ಆಗುತ್ತದೆ. ಆತ ಹೇಗೆ ಮಾಡಿದನೋ ಗೊತ್ತಿಲ್ಲ, ಮರುದಿನ ಬೆಳಿಗ್ಗಯೇ ಆತನೇ ಖುದ್ದಾಗಿ ಬಂದು ನನಗೆ ಬರಬೇಕಾಗಿದ್ದ ನಾಲ್ಕು ವರ್ಷಗಳ ಬಾಕಿ ವೇತನದ ಹಣವನ್ನು ನನಗೆ ಕೊಟ್ಟು ಹೋದ. ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿದ ಆದೇಶ ಸಹ ಸಿಕ್ಕಿತು. ಧನ್ಯವಾದ ಹೇಳಿದೆ. ನನ್ನ ಧನ್ಯವಾದ ಆತನಿಗೆ ಬೇಕಿರಲಿಲ್ಲ. ಕೆಲಸ ಮಾಡಿಕೊಡದಿದ್ದರೆ ನಾನೇನಾದರೂ ಮಾಡಿಬಿಡುತ್ತಿದ್ದೆ, ಅದರಿಂದ ತಪ್ಪಿಸಿಕೊಂಡೆನಲ್ಲಾ ಎಂಬ ಭಾವ ಆತನ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಆ ಹಿರಿಯ ಸಿಬ್ಬಂದಿ ಗುಮಾಸ್ತರು ಹೊಸದಾಗಿ ಮನೆ ಕಟ್ಟಿದ್ದರು. ಹೊಸಮನೆಗೆ ವಾಸ ಹೋಗದೆ ಅದನ್ನು ಬಾಡಿಗೆಗೆ ಕೊಟ್ಟು ತಾವು ಇದ್ದ ಹಳೆಯ ಬಾಡಿಗೆ ಮನೆಯಲ್ಲೇ ವಾಸವಿದ್ದರು. ಮಳೆಗಾಲದಲ್ಲಿ ಒಂದು ದಿನ ಅವರ ಮಕ್ಕಳಿಬ್ಬರು ಮನೆಯಲ್ಲಿ ಓದುತ್ತಾ ಕುಳಿತಿದ್ದಾಗ ಗೋಡೆ ಕುಸಿದು ಇಬ್ಬರು ಮಕ್ಕಳೂ ಸ್ಥಳದಲ್ಲೇ ಸತ್ತರು. ತಾಯಿ ಉಪಾಧ್ಯಾಯಿನಿಯಾಗಿದ್ದು ಅವರೂ ಆ ಸಮಯದಲ್ಲಿ ಮನೆಯಲ್ಲಿರಲಿಲ್ಲ. ವಿಷಯ ತಿಳಿದು ಎದೆಯೊಡೆದು ಅವರೂ ಮೃತರಾದರು. ಆರು ತಿಂಗಳು ಕೊರಗಿನಲ್ಲೇ ಕಳೆದ ಹಿರಿಯ ಗುಮಾಸ್ತರೂ ಹ್ರದಯಾಘಾತದಿಂದ ಮೃತರಾದರು. ಇಡೀ ಸಂಸಾರ ನಿರ್ನಾಮವಾದ ಘಟನೆ ನನ್ನ ಮನಸ್ಸನ್ನು ತುಂಬಾ ಕಲಕಿತ್ತು. ಸಕಾರಣವಾಗಿಯಾದರೂ ಅವರ ವಿರುದ್ಧ ಒರಟಾಗಿ ಹಿಂದೊಮ್ಮೆ ನಡೆದುಕೊಂಡಿದ್ದ ಬಗ್ಗೆ ಮನಸ್ಸಿನಲ್ಲಿ ವಿಷಾದ ಉಳಿಯಿತು.
(ಕಾಲಘಟ್ಟ: 1978: ಸ್ಥಳ: ಹಾಸನ).)
Comments
ಉ: ಸೇವಾ ಪುರಾಣ -25: ಮರಳಿ ಹಾಸನಕ್ಕೆ -3
In reply to ಉ: ಸೇವಾ ಪುರಾಣ -25: ಮರಳಿ ಹಾಸನಕ್ಕೆ -3 by santhosh_87
ಉ: ಸೇವಾ ಪುರಾಣ -25: ಮರಳಿ ಹಾಸನಕ್ಕೆ -3
ಉ: ಸೇವಾ ಪುರಾಣ -25: ಮರಳಿ ಹಾಸನಕ್ಕೆ -3
ಉ: ಸೇವಾ ಪುರಾಣ -25: ಮರಳಿ ಹಾಸನಕ್ಕೆ -3
ಉ: ಸೇವಾ ಪುರಾಣ -25: ಮರಳಿ ಹಾಸನಕ್ಕೆ -3