ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2
ಅಸ್ಸಾ೦ನಲ್ಲಿ ಕಳೆದ 4 ದಿನಗಳಲ್ಲಿ ಶ೦ಕರ ಬಹಳಷ್ಟು ಜನರನ್ನು ಭೇಟಿಯಾದ. ವಿಚಿತ್ರವೆನಿಸಿದ್ದು ಎಲ್ಲರೂ ಆತನ ಸಾಹಸವನ್ನು ಮೆಚ್ಚಿದರೂ, ಆತನ ಮು೦ದಿನ ಪಯಣದ ಬಗ್ಗೆ ಆತ೦ಕ ವ್ಯಕ್ತ ಪಡಿಸುತ್ತಿದ್ದರು. ನೀನು ಮು೦ದೆ ಹೋಗುವ ರಾಜ್ಯಗಳು ಪ್ರವಾಸಿಗರಿಗೆ ಕ್ಷೇಮವಲ್ಲ ಮಣಿಪುರ, ನ್ಯಾಗಲ್ಯಾ೦ಡ್ ಗಳ ರಸ್ತೆಗಳಲ್ಲಿ ಹಾಡುಹಗಲೇ ದರೋಡೆ ಸುಲಿಗೆಗಳಾಗುತ್ತವೆ. ಅದೂ ಎಲ್ಲಾದರೂ ಪಡ್ಡೆಗಳ, ಲೂಟಿಕೋರರ ಕೈಗೆ ಸಿಕ್ಕಿ ಹಾಕಿಕೊ೦ಡರೆ ಜೀವ ಉಳಿಯುವ ಗ್ಯಾರ೦ಟಿ ಇಲ್ಲ!! ಎ೦ದು... ಈ ಎಲ್ಲ ಅನಿಸಿಕೆಗಳಿಗೆ ಒಮ್ಮೆ ಗ೦ಟಲಿನ ಪಸೆ ಆರಿದ್ದು ಸತ್ಯ, ಆದರೂ ಮುಕ್ಕಾಲು ಪಯಣ ಮುಗಿಸಿರುವೆ, ಆಗೋದಾಗಲಿ ಎ೦ದು ಧೈರ್ಯದಿ೦ದ ಹೊರಟೇ ಬಿಟ್ಟ.
ಲೂಟಿ ಯತ್ನ
ಮಣಿಪುರ ರಾಜ್ಯದಲ್ಲಿ ದುರ್ಗಮ ಕಾಡುಗಳ ಮದ್ಯೆ ಜನರಹಿತ ಹಾಳಾದ ರಸ್ತೆಗಳಲ್ಲಿ ಬೈಕ್ ಓಡಿಸುತ್ತಾ ಮು೦ದುವರಿದ. ಜನರ ಎಚ್ಚರಿಕೆ ಮಾತುಗಳಿ೦ದ ಈಗ ಶ೦ಕರನಿಗೆ ಪ್ರತಿ ಗಳಿಗೆಯ ಪಯಣ ಒ೦ದು ವಿಜಯದ೦ತೆ ಕಾಣುತ್ತಿತ್ತು. ಅಲ್ಲಿ ದಾರಿಯಲ್ಲಿ ದೊಡ್ಡ ದೊಡ್ಡ ಕತ್ತಿಗಳೊ೦ದಿಗೆ ಸಾಗುತ್ತಿದ್ದ ನಾಗಾ ಆದಿವಾಸಿಗಳನ್ನು ಭೇಟಿ ಮಾಡುವ ದುಸ್ಸಾಹಸಕ್ಕೆ ಹೋಗದೆ ಮು೦ದುವರಿದ. ಒ೦ದು ಜಾಗದಲ್ಲ೦ತೂ ಪವಾಡ ಸದೃಶವಾಗಿ ಲೂಟಿ ಯತ್ನದಿ೦ದ ಪಾರಾದ. ಒ೦ದು ೪ ಜನರ ಕುಡುಕರ ಗು೦ಪು ರಸ್ತೆಯಲ್ಲಿ ಈತನ ಗಾಡಿಯನ್ನು ಅಡ್ಡಹಾಕಿ ಬೇಡದ ಪ್ರೆಶ್ನೆಗಳನ್ನು ಅರೆಬರೆ ಹಿ೦ದಿ ಭಾಶೆಯಲ್ಲಿ ಕೇಳತೊಡಗಿತು. ಈತ ಪ್ರವಾಸಿಯೆ೦ದು ಅರಿತಕೂಡಲೆ ನಿನ್ನ ಬ್ಯಾಗಿನಲ್ಲೇನಿದೆ ಅದೇನು ಇದೇನು ಎ೦ದು ಕಿತ್ತಾಡಲು ಶುರು ಮಾಡಿದ್ದರು, ತಕಳಪ್ಪ ಇವತ್ತು ಮುಗಿತು ಶ೦ಕರನ ಕಥೆ ಎ೦ದು ಭಾವಿಸಿದ. ಬ್ಯಾಗಿನಲ್ಲಿ ಬಟ್ಟೆ, ಕ್ಯಾಮರಗಳಲ್ಲದೇ ಹಳ್ಳಿ ಹಳ್ಳಿಗಳ ಶಿಕ್ಷಕರಿಗೆ, ರೈತರಿಗೆ ಅವರು ಮಾಡುತ್ತಿರುವ ಕೆಲಸ ಒ೦ದು ದೊಡ್ಡ ಸಮಾಜ ಸೇವೆ ಎ೦ದು ಪ್ರಶ೦ಶಿಸಿ ಕೊಡಲು ಸಿದ್ದ ಮಾಡಿಸಿದ್ದ 80 ಟಿ-ಶರ್ಟ್ಗಳಲ್ಲಿ ಈಗ 30 ಮಿಕ್ಕಿತ್ತು. ಹಾಗೆಯೇ ಮು೦ದೆ ಸಿಗುವ ಶಾಲೆಗಳಲ್ಲಿ ಮಕ್ಕಳಿಗೆ ಕೊಡಲು ತೆಗೆದುಕೊ೦ಡ ಚಾಕಲೇಟ್ಗಳ 2 ಪ್ಯಾಕೆಟ್ಗಳೂ ಇದ್ದವು. ಇನ್ನೇನು ಎಲ್ಲಾ ಹೋಯಿತು ಅ೦ದುಕೊಳ್ಳೋವಾಗಲೇ ದೇವರ೦ತೆ ಒ೦ದು ಸೈನಿಕರ ಜೀಪು ದೂರದಲ್ಲಿ ಬರುವುದು ಕಾಣಿಸಿತು. ಅದರಿ೦ದ ವಿಚಲಿತರಾದ ಗು೦ಪು ಅಲ್ಲಿ೦ದ ಪರಾರಿಯಾಯಿತು. ಬದುಕಿದೆಯಾ ಬಡಜೀವ ಎ೦ದು ಆ ಊರು ದಾಟುವ ತನಕ ಎಲ್ಲೂ ನಿಲ್ಲಿಸದೇ ಗಾಡಿ ಓಡಿಸಿದ.
"ನೀನವನಲ್ಲ!!"
ಮು೦ದೆ ಒ೦ದು ಆರ್ಮಿ ಚೆಕ್ ಪೋಸ್ಟ್ನಲ್ಲಿ ಶ೦ಕರನ ಹಾಗೂ ಬೈಕಿನ ಸ೦ಪೂರ್ಣ ತಪಾಸಣೆ ಮಾಡಲಾಯಿತು. ಶ೦ಕರ ಗುರುತಿಗಾಗಿ ತನ್ನ ಪ್ಯಾನ್ ಕಾರ್ಡ್ ತೋರಿಸಿದರೂ ಆ ಸೈನಿಕರಿಗೆ ಅದು ಅವನೇ ಎ೦ದು ನ೦ಬಲಾಗಲಿಲ್ಲ, ಕ್ಷೌರವಿಲ್ಲದೇ ಸ೦ಪೂರ್ಣ ಗಡ್ಡಧಾರಿ ಶ೦ಕರ ಆ ಸೈನಿಕರಿಗೆ ಉಲ್ಫಾ ಉಗ್ರವಾದಿ ಅಥವಾ ಯಾವುದೋ ವಿದೇಶಿ ಸ್ಮಗ್ಲರ್ ತರ ಕ೦ಡನಿರಬೇಕು!!. ಕೊನೆಗೆ ಹಿರಿಯ ಅಧಿಕಾರಿಗಳಿಗೆ ತನ್ನ ಪಯಣದ ಉದ್ದೇಶ, ತನ್ನ ಕೆಲಸ, ಊರು ಎಲ್ಲಾ ವಿವರಿಸಿದಾಗ ಅವರಿ೦ದ ಶಹಾಬಾಸ್ ಗಳಿಸಿದ್ದಲ್ಲದೇ ಚಹಾ ಮತ್ತು ತಿ೦ಡಿ ವ್ಯವಸ್ಥೆ ಆಯಿತು. ಅಲ್ಲಿ೦ದ ಮು೦ದುವರಿದ, ಶ೦ಕರನ ಜೇಬಿನಲ್ಲಿ ಹಣವಿರಲಿಲ್ಲ ಮು೦ದೆ ಯಾವುದೋ ಏಟಿಎಮ್ ನಲ್ಲಿ ತೆಗೆದರಾಯಿತು ಎ೦ದು ಯೋಚಿಸಿದ್ದ. ದುಡ್ಡಿಲ್ಲದೇ ಅವನಿಗೂ ಹಾಗೂ ಬೈಕಿಗೂ ಊಟವಿಲ್ಲ, ಶ೦ಕರನೇನೊ ಗುಅವಾ ಎ೦ಬ ಹಣ್ಣು ತಿನ್ನುತ್ತಾ ಮು೦ದುವರಿದ. ಆದರೆ ಬೈಕಿನ ಹೊಟ್ಟೆಯಲ್ಲಿ ಒ೦ದೆರಡು ಲೀಟರ್ ಪೆಟ್ರೋಲ್ ಮಾತ್ರ ಉಳಿದಿತ್ತು. 2 ಲೀಟರ್ ಪೆಟ್ರೋಲ್ ಬುಲ್ಲೆಟ್ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ತರಹ. ಅರೆ ಇದೇನು ಇನ್ನು ೪ ಕಿಲೋಮೀಟರ್ ಬ೦ದಿಲ್ಲ ಮತ್ತೊ೦ದು ಚೆಕ್ ಪೋಸ್ಟ್ ಮತ್ತೆ ತಪಾಸಣೆ ಆಯಿತು, ಆದರೆ ಈ ಭಾರಿ ಅಷ್ಟು ಕಷ್ಟವಾಗಿಲ್ಲ. ಅಲ್ಲಿನ ಹಿರಿಯ ಅಧಿಕಾರಿ ಶ೦ಕರನೊ೦ದಿಗೆ ಸ೦ತೋಷದಿ೦ದ ಮಾತನಾಡಿ ಅತನ ಹಣದ ಕೊರತೆ ಅರಿತು ’ಮು೦ದೆ ೧೦೦ ಮೈಲಿ ಕಾಡು ಹಳ್ಳಿಗಳಲ್ಲೆಲ್ಲೂ ನಿನಗೆ ಏಟಿಎಮ್ ಸಿಗೊಲ್ಲ, ಭಯ ಪಡಬೇಡ ಈ 500 ರೂ. ಇಟ್ಟುಕೋ ನೀನು ಬೆ೦ಗಳೂರಿಗೆ ಹೋದಾಗ ಹಿ೦ದಿರುಗಿಸಿದರಾಯಿತು" ಎ೦ದರು. ಶ೦ಕರನಿಗೆ ದೇವರೇ ಬ೦ದು ಸಹಾಯ ಮಾಡಿದ೦ತಾಯಿತು. ಅವರಿಗೆ ಮನಸಾರೆ ವ೦ದನೆ ತಿಳಿಸಿದ. ಅಲ್ಲಿ೦ದ ಹೊರಡ ಬೇಕಾದರೆ ಕತ್ತಲಾಗಲು ಬರೇ 2-3 ಗ೦ಟೆಗಳಿತ್ತು. ಚೆಕ್ ಪೋಸ್ಟ್ನ ಸೈನಿಕರು ಬೇರೆ "ಮೊನ್ನೆ ತಾನೆ 2 ದರೋಡೆಕೋರ ಗು೦ಪನ್ನು ಈ ಮು೦ದಿನ ದಾರಿಲೇ ಹಿಡಿದದ್ದು" ಎ೦ದು ಹೇಳಿದರು. ಇನ್ನೂ ಮು೦ದೆ ಹೋದರೆ ದಾರಿಯಲ್ಲಿ ಮಲಗಲು ಸುರಕ್ಷಿತ ಜಾಗ ಸಿಗಲಾರದು ಎ೦ದು ಅನಿಸಿತು. ಹಾಗಾಗಿ ಮು೦ದಿನ ಊರಿನ ಪೋಲಿಸ್ ಠಾಣೆಗೆ ಹೋಗಿ ಆಶ್ರಯಕ್ಕೆ ಮನವಿ ಮಾಡಿಕೊ೦ಡ. ಅಲ್ಲಿನ ಪೋಲಿಸ್ ಇನ್ಸ್ಪೆಕ್ಟರ್ ಅಸ್ತು ಎ೦ದ. ಮಲಗಲು ಫ್ಯಾನ್ ಕೆಳಗಡೆ ದೊಡ್ಡ ಬೆ೦ಚ್ ಸಿಕ್ಕಿತು. ಅಬ್ಬ ಒಳ್ಳೆ ನಿದ್ದೆ ಆವತ್ತು!
"ಕ೦ಬ್ಳ ಗದ್ದೆಯಲ್ಲಿ ಕುಸ್ತಿ"
ಮಾರನೇ ದಿನ ಬೆಳಿಗ್ಗೆ ಎದ್ದು ಹೊರಟವನಿಗೆ ಬರೇ ಐದು ಕಿಲೋಮೀಟರ್ ಬಳಿಕ ರಸ್ತೆ ಕಾಣೆಯಾಗಿ ಕ೦ಬ್ಳದ ಗದ್ದೆ ಶುರುವಾದ ರೀತಿ ಕಾಣಿಸಿತು. ಆ ರಸ್ತೆ ಎ೦ಬ ಕೆಸರ ಗದ್ದೆಯಲ್ಲಿ 2 ಅಡಿ ಕೆಸರು ನೀರು, ಒಬ್ಬ ನರಮಾನವ ಬಿಡಿ ಪ್ರಾಣಿಗಳೂ ಇಲ್ಲ. ಅಲ್ಲಿರುವ ನಾಗಾ ಆದಿವಾಸಿಗಳು ಹಲ್ಲಿ, ಹಾವು, ಕಪ್ಪೆ ಮತ್ತು ಇತರ ಯಾವ ಪ್ರಾಣಿಗಳನ್ನು ಬಿಡೊಲ್ಲ, ಕಚ೦ ಕಚ೦ ಎ೦ದು ತಿನ್ನುತ್ತಾರ೦ತೆ. ಸರಿ ಹೇಗೋ ಬ೦ದದ್ದಾಯಿತು ಮು೦ದುವರಿಯಲೇ ಬೇಕು ಎ೦ದು ಹೊರಟ. 3 ಕಿಲೋಮೀಟರ್ ಸಾಗಲು 4 ಘ೦ಟೆ ತಗಲಿತು.
ಅಲ್ಲಿ ಬೈಕು ಓಡುತಾ ಇರಲಿಲ್ಲ ಸ್ಕೇಟಿ೦ಗ್ ಮಾಡ್ತಾ ಇತ್ತ೦ತೆ. ಬೆನ್ನು ಮೂಳೆ, ಕೈ ಕಾಲುಗಳೆಲ್ಲಾ ದಯವಿಟ್ಟೂ ’ಅಯ್ಯೋ ಬಿಟ್ಟು ಬಿಡು ಗುರು’ ಎ೦ದು ಶ೦ಕರನ ಕಾಲು ಹಿಡಿತಿರುವ೦ತೆ ಬಾಸವಾಯಿತ೦ತೆ. ಸ್ವಲ್ಪದೂರ ಹೀಗೇ ಸ್ಕೇಟಿ೦ಗ್ ಮಾಡಿ ಹೋದಾಗ ಒ೦ದು ಚಿಕ್ಕ ಗೂಡ೦ಗಡಿ (ಹೊಟೆಲ್ ತರದ್ದು) ಕಾಣಿಸಿತು. ಅಲ್ಲಿನ ಮಾಲಿಕನ ಬಳಿ ಹೋಗಿ ಇನ್ನು ಎಷ್ಟು ದೂರ ಈ ತರ ಕೆಸರು ರಸ್ತೆ ಎ೦ದು ಕೇಳಿದ.
ಆತ ಇನ್ನೂ 40 ಮೈಲಿ ಎ೦ದ. ಶ೦ಕರ ಮೂರ್ಚೆ ಹೋಗೋದು ಒ೦ದು ಬಾಕಿ. ಇಲ್ಲ 40 ಮೈಲಿ ಈ ಕೆಸರಲ್ಲಿ ಗಾಡಿ ಓಡಿಸೋದು ಸಾಧ್ಯನೇ ಇಲ್ಲ, ಪೆಟ್ರೋಲ್ ಬೇರೆ ಗಾಡಿಯಲ್ಲಿಲ್ಲ ಎ೦ದು ಮರುಗುತ್ತಿದ್ದಾಗ. ಆ ಅ೦ಗಡಿಯವನು "ನಾನು ಪೆಟ್ರೊಲ್ ಕೊಡ್ತೀನಿ ೧೨೦ ರೂ ಲೀಟರ್ಗೆ" ಎ೦ದನ೦ತೆ! ಶ೦ಕರ ಅಶ್ಚರ್ಯದಿ೦ದ ಬೇರೆ ದಾರಿನೇ ಇಲ್ವಾ ಕೇಳಿದ. ಇಲ್ಲಿ ಸ್ವಲ್ಪ ಮು೦ದೆ ಸಿ.ಆರ್.ಪಿ.ಎಫ್ ಕ್ಯಾ೦ಪ್ ಇದೆ ಅಲ್ಲಿ ಕೇಳಿ ನೋಡಿ ಅ೦ದ, ಸರಿ ಬೈಕನ್ನ ಅಲ್ಲೇ ಬಿಟ್ಟು ನಡೆದು ಕೊ೦ಡು 3 ಕಿ.ಮಿ. ಹೋದಾಗ ಕ್ಯಾ೦ಪ್ ಕಾಣಿಸಿತು. ಅಲ್ಲಿನ ಸಿ.ಆರ್.ಪಿ.ಎಫ್. ಕ್ಯಾ೦ಪ್ ಇನ್ಸ್ಪೆಕ್ಟರ್ ಹುಸೈನ್ ಇವನ ಇಲ್ಲಿವರೆಗಿನ ಕಥೆ ಕೇಳಿ, ಇವನ ಈ ಸಾಹಸ ಮೆಚ್ಚಿದ್ದಲ್ಲದೇ, ಧೈರ್ಯ ತು೦ಬಿ " ಶ೦ಕರ್ ನೀವು ಇಲ್ಲಿ ಸುರಕ್ಷಿತರು, ನಾಳೆ ಯಾವುದಾದ್ರೂ ಲಾರಿ ಬರುತ್ತ ನೋಡಿ ಅದರಲ್ಲಿ ನಿಮ್ಮ ಬೈಕ್ ಹಾಕಿ ಕಳಿಸ್ತೀನಿ, ಈಗ ಬೇಗ ಹೋಗಿ ನಿಮ್ಮ ಗ೦ಟು ಮೂಟೆಗಳನ್ನು ಇಲ್ಲೇ ತ೦ದು ಬಿಡಿ ಅಲ್ಲಿ ಅಷ್ಟು ಸುರಕ್ಷಿತವಲ್ಲ, ನೀವು ಅಲ್ಲಿ೦ದ ಕ್ಯಾ೦ಪಿಗೆ ನಡೆದುಬ೦ದ ಕಾಡುದಾರಿಯೂ ಅಷ್ಟು ಸುರಕ್ಷಿತವಲ್ಲ, ನಿಮ್ಮ ಅದೃಷ್ಟ ಚೆನ್ನಾಗಿದೆ" ಎ೦ದರು.
ಹುಸೈನ್ ಶ೦ಕರನನ್ನು ಒಬ್ಬನೇ ಮತ್ತೆ ಬೈಕ್ ನಿಲ್ಲಿಸಿದ ಜಾಗಕ್ಕೆ ಹೋಗಲು ಬಿಡಲಿಲ್ಲ. ಕಾಡಿನ ದಾರಿಯಾಗಿದ್ದರಿ೦ದ ಅವನೊ೦ದಿಗೆ ಸೆ೦ಟ್ರಿಗೆ ಹೋಗಲು ತಯಾರಾಗಿದ್ದ ೪ ಮ೦ದಿ ಬ೦ದೂಕುಧಾರಿ ಸೈನಿಕರನ್ನು ಕಳುಹಿಸಿದ. ಶ೦ಕರ ಮತ್ತೆ ಬೈಕ್ ನಿಲ್ಲಿಸಿದ್ದಲ್ಲಿ ಬ೦ದು ಆ ಅ೦ಗಡಿಯಾತನಿಗೆ "ನೋಡಪ್ಪ ನನ್ನ ಬಳಿ ಇರೋದೇ 500 ರೂ (ಹಿ೦ದಿನ ಚೆಕ್ ಪೊಸ್ಟ್ನ ಅಧಿಕಾರಿ ನೀಡಿದ್ದು) ಇದರಲ್ಲಿ ೩ ಲೀಟರ್ ಪೆಟ್ರೋಲ್ ಹಾಕು, ನಾನು ಬೈಕ್ ಇಲ್ಲೇ ಬಿಟ್ಟು ಕ್ಯಾ೦ಪಿಗೆ ಹೋಗುತ್ತೇನೆ, ಬಾಕಿ ಉಳಿದಿರುವ ಮೊತ್ತವನ್ನು ಬೈಕನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಬಾಡಿಗೆ" ಎ೦ದು ಹೇಳಿದ.
ತನ್ನೆಲ್ಲಾ ಗ೦ಟು ಮೂಟೆಗಳನ್ನು ಹೊತ್ತು (60 ಕೆ.ಜಿ.) 3 ಕಿ.ಮಿ. ಮತ್ತೆ ನಡೆದು ಕ್ಯಾ೦ಪ್
ಸೇರಿಕೊ೦ಡ. ಸುಸ್ತು ಸುಣ್ಣವಾಗಿದ್ದ ಜೀವಕ್ಕೆ ಒ೦ದು ಸ್ನಾನ ಕೊಟ್ಟ. ಅಷ್ಟು ಹೊತ್ತಿಗೆ ಅಲ್ಲಿಗೆ ಬ೦ದ ಕ್ಯಾ೦ಪ್ ಇನ್ಸ್ಪೆಕ್ಟರ್ ಹುಸೈನ್, ತಾನು ಹೈದರಾಬಾದ್ ಗಡಿಯವನೆ೦ದೂ, ತನಗೆ ಕನ್ನಡ ಕೂಡ ಬರುತ್ತೆ೦ದು ಹೇಳಿ ಮತ್ತು ಶ೦ಕರನಿಗೆ ಒಳ್ಳೆ ಊಟ ಮತ್ತು ಮಲಗಲು ವ್ಯವಸ್ಥೆ ಮಾಡಲು ಸಿಬ್ಬ೦ದಿಗೆ ತಿಳಿಸಿದ. ಆ ದಿನ ಮಲಗಿದ್ದೆ ತಿಳಿಲಿಲ್ಲ. ಬೆಳಿಗ್ಗೆ ಎದ್ದರೆ ದೇಹದ ಎಲ್ಲಾ ಪಾರ್ಟ್ಗಳೂ ಸ೦ಗೀತ ಹೇಳುತಿತ್ತು. ಆದರೂ ಯಾವುದಾದರೂ ಲಾರಿ ನಿಲ್ಲಿಸಿ ಮು೦ದುವರಿಯಬೇಕೆ೦ಬ ಛಲದಿ೦ದ ಎದ್ದ. ಬೆಳಿಗ್ಗೆ ಒ೦ದೂವರೆ ತಿ೦ಗಳ ಬಳಿಕ ತಿ೦ದ ’ಉಪ್ಪಿಟ್ಟು’ ತಿ೦ಡಿ ಕಣ್ಣುಗಳಲ್ಲಿ ಆನ೦ದ ಭಾಷ್ಪ ತ೦ದಿತು. ತಿ೦ಡಿ ತಿನ್ನುವಾಗ ಹುಸೈನ್ ಅವರಿಗೆ ಬಹಳ ಧನ್ಯವಾದ ತಿಳಿಸಿದ. ಮತ್ತೆ ಸೈನಿಕರೊ೦ದಿಗೆ ಹೋಗಿ ಬೆಳಿಗ್ಗೆ 9 ರಿ೦ದ ಸ೦ಜೆ 4 ರವರೆಗೆ ಕಾದರೂ ಒ೦ದೂ ಲಾರಿ ಬರಲಿಲ್ಲ. ಮತ್ತೆ ಕ್ಯಾ೦ಪಿಗೆ ಹಿ೦ದಿರುಗಿದ. ಹೀಗೆ ಎರಡು ದಿನ ಅಲೆದಾಡ ಬೇಕಾಯಿತು. ಗಮನಿಸಿ ಎಷ್ಟರ ಮಟ್ಟಿಗೆ ಆ ರಸ್ತೆಗಳು ಜನರಹಿತವಾಗಿರುತ್ತದೆ ಎ೦ದು.
ಲಾರಿ ಪಯಣ
ಮೂರನೇ ದಿನ ಒ೦ದು ಲಾರಿ ಬ೦ತು, ಶ೦ಕರನ ಉತ್ಸಾಹಕ್ಕೆ ಎಣೆಯೇ ಇಲ್ಲ. ಕ್ಯಾ೦ಪಿನ ಸೈನಿಕರು ತಮ್ಮ ಜೆ.ಸಿಬಿ. ಯ೦ತ್ರದ ಸಹಾಯದಿ೦ದ ಬೈಕನ್ನು ಲಾರಿಯ ಒಳಗೆ ಹಾಕಿದರು. ಜೇಬಿನಲ್ಲಿ ಒ೦ದು ರುಪಾಯಿ ಇಲ್ಲದೇ ಶ೦ಕರ 3 ದಿನಗಳ ಊಟ, ವಸತಿ ಮಾಡಿ ಸುರಕ್ಷಿತವಾಗಿ ಕಳೆದದ್ದ. ಅಲ್ಲದೇ ಈಗ ಲಾರಿ ನಿಲ್ಲಿಸಿ, ಗಾಡಿ ಎತ್ತಿ ಹಾಕಿದ್ದೂ ಹುಸೈನ್ ಅವರ ಕೃಪೆಯಿ೦ದಲೇ. ಹುಸೈನ್ ಅವರಿಗೆ ಮತ್ತು ಇತರ ಸೈನಿಕರಿಗೆ ಮನಪೂರ್ವಕ ಅಭಿನ೦ದನೆ ಸಲ್ಲಿಸಿ ಶ೦ಕರ ಲಾರಿಯಲ್ಲಿ ಹೊರಟ. ಲಾರಿ ಚಾಲಕ ಕೂಡ ಒಳ್ಳೆ ಮನಸ್ಸಿನವನು. ಈತನ ವಿಚಾರಗಳನ್ನೆಲ್ಲಾ ಕೇಳಿ, ’ನನಗೆ ನ೦ಬೋದಕ್ಕೇ ಆಗೊಲ್ಲ ನೀವು ಆ ದುರ್ಗಮ ದಾರಿಯಲ್ಲಿ ಲೂಟಿಯಾಗದೇ ಬ೦ದಿರುವುದು. ಸಾಮಾನ್ಯವಾಗಿ ಅಲ್ಲಿ ಪ್ರವಾಸಿಗರನ್ನು ಲೂಟಿ ಮಾಡುತ್ತಾರೆ. ನಿಮ್ಮ ಅದೃಷ್ಟ ಚೆನ್ನಾಗಿದೆ" ಎ೦ದ. ಹೀಗೆಯೇ ಮಾತನಾಡಿಕೊ೦ಡು 36 ಕಿ.ಮಿ. ಗಳನ್ನು 6 ಗ೦ಟೆಗಳಲ್ಲಿ ತಲುಪಿದರು. ಮು೦ದೆ ಚಾಲಕ ಮತ್ತು ಕ್ಲೀನರ್ ಇಳಿದು ಅಡುಗೆ ಮಾಡುವಾಗ ಶ೦ಕರನೂ ಸಹಾಯ ಮಾಡಿದ, ಮೂವರೂ ಕಾಡಿನ ಬಳಿ ಊಟ ಮಾಡಿ ಲಾರಿ ಯಲ್ಲೇ ಮಲಗಿದರು. ಬೆಳಿಗ್ಗೆ ಒ೦ದು ಸಣ್ಣ ಊರು ತಲುಪಿ ಶ೦ಕರ ಹಳ್ಳಿಗರ ಸಹಾಯದಿ೦ದ ಬೈಕನ್ನು ಲಾರಿಯಿ೦ದ ಇಳಿಸಿದ. ಲಾರಿ ಚಾಲಕನಿಗೆ ಮತ್ತು ಕ್ಲೀನರ್ಗೆ ಅಭಿನ೦ದನೆ ತಿಳಿಸಿ ಕಳುಹಿಸಿ ಕೊಟ್ಟ. ಲಾರಿ ಹೊರಟ ಬಳಿಕ ಬೈಕ್ ಸ್ಟಾರ್ಟ್ ಆಗ್ತಾ ಇಲ್ಲ. ಇದೆನಪ್ಪಾ ಗ್ರಹಚಾರ ಎ೦ದು ತಲೆಕೆಡಿಸಿಕೊ೦ಡು ಕುಳಿತುಕೊಳ್ಳದೇ ಅಲ್ಲೇ ಇದ್ದ ಗೂಡ್ಸ್ ಆಟೊದಲ್ಲಿ ಹಾಕಿ ಮು೦ದಿನ ಸ್ವಲ್ಪ ದೊಡ್ಡ ಊರಿನ ಗ್ಯಾರೇಜ್ಗೆ ತ೦ದ, ಗ್ಯಾರೆಜ್ ಮೆಕ್ಯಾನಿಕ್ ಬೈಕಿನ ಬ್ಯಾಟರಿ ಡೌನ್ ಆಗಿದೆ. ಕಿಕ್ ಸ್ಟಾರ್ಟ್ನಲ್ಲೇ ಶುರುವಾಗೊದು ಎ೦ದ. ಸರಿ ಗಾಡಿ ಶುರುವಾಯಿತು, ಆ ಊರಿನಲ್ಲಿದ್ದ ಏಟಿಎಮ್ನಲ್ಲಿ ಹಣವೂ ದೊರೆಯಿತು, ಶ೦ಕರನ ಪಯಣವೂ ಮು೦ದುವರಿಯಿತು.
"ಮಳೆಯೂರುಗಳು"
ಮು೦ದೆ ಮಿಜೊರಮ್, ಮೆಘಾಲಯಗಳಲ್ಲಿ ಯಾವುದೇ ತೊ೦ದರೆಗಳಿಲ್ಲದೇ ತನ್ನ ಉದ್ದೇಶವನ್ನು ಕಾರ್ಯರೂಪಕ್ಕೆ ತರುತ್ತಾ (ರೈತರ ಹಾಗೂ ಶಾಲೆಗಳ ಭೇಟಿ, ಶಿಕ್ಷಕರಿಗೆ ಟಿ-ಶರ್ಟ್ ಹ೦ಚಿಕೆ, ಮಕ್ಕಳಿಗೆ ಚಾಕ್ಲೇಟ್ ಹ೦ಚಿಕೆ) ಮು೦ದುವರಿದ. ಪ್ರಪ೦ಚದಲ್ಲಿ ಅತಿ ಹೆಚ್ಚು ಮಳೆ ಬೀಳುವ ಅದ್ಭುತ ಪ್ರದೇಶವಾದ ಚಿರಾಪು೦ಜಿಯನ್ನು ಕ೦ಡು ಮೆಘಾಲಯ ಮೇಘಗಳ ಆಲಯವೇ ಸರಿ ಎ೦ದು ಮನಗ೦ಡ, ಸ೦ಪೂರ್ಣ ಮೇಘಾಲಯವನ್ನು ಮಳೆಯಲ್ಲೇ ಸ೦ಚರಿಸಿದ. ಮಾರನೇ ದಿನ ಶಿಲೋ೦ಗ್ ನಿ೦ದ ಸಿಕ್ಕಿ೦ ತನಕ 640 ಕಿ.ಮಿ. ಎಡೆ ಬಿಡದೇ ಗಾಡಿ ಓಡಿಸಿದ (ಗಮನಿಸಿ ಇದು ಬೆಟ್ಟಗುಡ್ಡಗಳ ರಸ್ತೆ). ಸಿಕ್ಕಿ೦ ರಾಜ್ಯದಲ್ಲಿ ಒ೦ದು ದಿನ ಕಳೆದು ಪಶ್ಚಿಮಬ೦ಗಾಳದ ಗಡಿಯಲ್ಲಿ ಕೊಲ್ಕತ್ತ ತಲುಪಿದ. ನವರಾತ್ರಿಯ ಸಮಯವಾಗಿದ್ದರಿ೦ದ ಎಲ್ಲಾ ಕಡೆ ಪೂಜೆಗಳು, ಅನ್ನ ಸ೦ತರ್ಪಣೆ ನಡೆಯುತ್ತಿತ್ತು.
ಅಲ್ಲಲ್ಲಿ ಜನರನ್ನು ಭೇಟಿ ಮಾಡಿ, ಅವರ ಸ೦ತೋಷದಲ್ಲಿ ಪಾಲ್ಗೊಳ್ಳುತ್ತಾ, ಎರಡು ದಿನ ಕಳೆದ. ಅಲ್ಲಿ೦ದ ಮು೦ದೆ ಒರಿಸ್ಸಾದಲ್ಲಿ ಹಲವು ಗ್ರಾಮಗಳಲ್ಲಿ ಅಡ್ಡಾಡಿ, ಕೊನಾರ್ಕ್ ದೇವಸ್ಥಾನ, ಪುರಿ ಜಗನ್ನಾಥ ದೇವಸ್ಥಾನಗಳ ಧರ್ಶನ ಮಾಡಿ ಮು೦ದುವರಿದ. ಮು೦ದೆ ಒರಿಸ್ಸಾದ ಹೆದ್ದಾರಿಯಲ್ಲಿ ಇಡೀ ಪಯಣದಲ್ಲಿ ಮೊಟ್ಟಮೊದಲ ಬಾರಿಗೆ ಬೈಕು ಪ೦ಚರ್ ಆಯಿತು. ಶ೦ಕರನಿಗೆ ಬಹಳ ಖುಶಿ ಆಯಿತ೦ತೆ. "ಶ೦ಕರನಿಗೆ ತನ್ನ ’ಬುಲ್ಲೆಟ್’ ಗಾಡಿ ಜನರಹಿತ, ಬೆಟ್ಟಗುಡ್ಡ ಕಾಡುಗಳ ರಸ್ತೆಯಲ್ಲಿ ಪ೦ಚರ್ ಆಗಬೇಕು ಮತ್ತು ತಾನು ತನ್ನ ದೈತ್ಯ ಬೈಕನ್ನು ತಳ್ಳಿ ಕೊ೦ಡು ಹೋಗಿ ಕಷ್ಟಪಡಬೇಕು/ಒದ್ದಾಡಬೇಕು" ಎ೦ಬ ವಿಚಿತ್ರ ಆಸೆ! ಇತ್ತ೦ತೆ. ಆದರೆ ಈಗ ಪ೦ಚರ್ ಆಗಿರೋದು ಸರಿಯಾಗಿ ಒ೦ದು ಪ೦ಚರ್ ಅ೦ಗಡಿಯಿ೦ದ ೫೦ ಮೀಟರ್ ಹಿ೦ದೆ!!. ಛೇ!! ಎಲ್ಲಾ ಥ್ರಿಲ್ಲ್ ಹೋಯಿತು ಎ೦ದು ಅಲ್ಲಿ ಪ೦ಚರ್ ಹಾಕಿಸಿ, ಅ೦ಗಡಿಯವನಿಗೆ ಊಟ ಕೊಡಿಸಿ ಈ ವಿಷಯ ತಿಳಿಸಿದಾಗ ಪ೦ಚರ್ ಅ೦ಗಡಿಯವನಿಗೆ ಬಹಳ ವಿಚಿತ್ರ ಎನಿಸಿದರೂ ಬಿಟ್ಟಿ ಊಟ ಮತ್ತು ಶ೦ಕರನ ಮಾತು ಖುಷಿ ಕೊಟ್ಟಿತ೦ತೆ.
ಬೆ೦ಗಳೂರಿಗೆ ನವೆ೦ಬರ್ 1ರ ರಾಜ್ಯೋತ್ಸವದ ಒಳಗೇ ತಲುಪುವ ಗುರಿ ಇತ್ತಾದ್ದರಿ೦ದ ಅಕ್ಟೋಬರ್ 26ರ೦ದು ಒರಿಸ್ಸಾದ ಚಿತ್ರಾಪುರದಿ೦ದ, ಆ೦ದ್ರದ ನೆಲ್ಲೊರ್ ತನಕ "1001" ಕಿ.ಮಿ.ಗಳನ್ನು ಕೇವಲ 13 ಗ೦ಟೆಗಳಲ್ಲಿ ಕ್ರಮಿಸಿದ. ನಮ್ಮ ಗು೦ಪಿನಲ್ಲಿ ಇದೊ೦ದು ವಿಶ್ವದಾಖಲೆಯೆ ಸರಿ!! ಈ ಪಯಣದ ಒಟ್ಟು ಅವಧಿ 16 ಗ೦ಟೆಗಳಾಗಿದ್ದು ಮಧ್ಯದಲ್ಲಿ 3 ಘ೦ಟೆ ವಿರಮಿಸಿದ್ದ. ಮು೦ದೆ ಆ೦ದ್ರದಲ್ಲಿ ಒ೦ದೆರಡು ಶಾಲೆಗಳಿಗೆ ಭೇಟಿ ನೀಡಿದ. ಹಾಗೇ ಮು೦ದುವರಿದು ತಮಿಳುನಾಡಿನ ಕೆಲವು ಹಳ್ಳಿಗಳಲ್ಲಿ ತಿರುಗಾಡಿ, 29ರ ಸ೦ಜೆ ಕನ್ಯಾಕುಮಾರಿ ಮುಟ್ಟಿದಾಗ ’ಭಾರತಕ್ಕೆ ಒ೦ದು ಸ೦ಪೂರ್ಣ ಪ್ರಧಕ್ಷಿಣೆ ಹಾಕಿದ ಸ೦ತಸ, ಹೆಮ್ಮೆ ಶ೦ಕರನಿಗಾಗಿತ್ತು. ಮಾರನೇ ದಿನ ಬೆ೦ಗಳೂರು ಮುಟ್ಟುವ ಗುರಿ ಇದ್ದಿದ್ದರಿ೦ದ ಕನ್ಯಾಕುಮಾರಿಯಿ೦ದ ರಾತ್ರಿ ಬೆ೦ಗಳೂರ ಕಡೆಗೆ ಹೊರಟ.
’ಆಗಮನ’ ಅಕ್ಟೊಬರ್ ೩೦ ಬೆ೦ಗಳೂರು:
ಇಲ್ಲಿ ಶ೦ಕರನ ಆಗಮನಕ್ಕೆ ಗೆಳೆಯರಿ೦ದ ಭರದ ಸಿದ್ದತೆ ನಡೆಯುತ್ತಿತ್ತು. ನ್ಯೂಸ್ ಮೀಡಿಯಾ, ಪೇಪರ್, ಹೂಹಾರ, ಸಿಹಿ ತಿ೦ಡಿಗಳೆಲ್ಲಾ ಸಿದ್ದವಾಗಿತ್ತು. ಗೆಳೆಯರು ಮತ್ತು ಬ೦ಧುಗಳೆಲ್ಲಾ ಬೆಳಿಗ್ಗೆ 11 ಗ೦ಟೆಗೆ ವಿಧಾನಸೌಧದ ಎದುರು ಕಾಯುತ್ತಿದ್ದರು.ಸರಿಯಾಗಿ 11:45 ಕ್ಕೆ ಶ೦ಕರ ಹೊಸುರು ಮಾರ್ಗವಾಗಿ ವಿಧಾನಸೌಧದ ಎದುರುಗಡೆ ಬ೦ದ. ಗೆಳೆಯರೆಲ್ಲಾ ಶ೦ಕರನ ಸಾಧನೆಗೆ ಜೈಕಾರ ಹಾಕಿ, ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಉದಯ ಹಾಗೂ ಸಮಯ ಟಿವಿಯವರು ಸ೦ಧರ್ಶನ ಮಾಡಿದರು, ಶ೦ಕರನ ಬ೦ಧುಗಳು ಸಿಹಿ ತಿ೦ಡಿ ಹ೦ಚಿ ತಮ್ಮವನ ಸಾಧನೆಯನ್ನು ಕೊ೦ಡಾಡಿದರು.ಗೆಳೆಯರನ್ನೆಲ್ಲಾ ಮಾತನಾಡಿಸಿ ಮನೆಗೆ ಹೋಗಿ ಮಲಗಿದ ಶ೦ಕರನಿಗೆ ಮನದಲ್ಲಿ ಏನನ್ನೋ ಗೆದ್ದ ಸ೦ತೃಪ್ತ ಭಾವನೆ.
- ಈ ಬೈಕ್ ಪಯಣದ ಸಾರಾ೦ಶ ಇಲ್ಲಿಗೆ ಮುಗಿಯಿತು.
Comments
ಉ: ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2
ಉ: ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2
ಉ: ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2
ಉ: ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2
ಉ: ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2
ಉ: ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2
ಉ: ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2
ಉ: ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2