ಹೀಗೊಂದು ಬುಧವಾರ..
ಹೌದು ಈ ಬುಧವಾರ ರಾಷ್ಟ್ರರಾಜಕಾರಣದಲ್ಲಿ ಮಹತ್ವದ್ದು.ಇಲ್ಲಿ ಎರಡು ವ್ಯಕ್ತಿಗಳು ತಮ್ಮ ವಿಭಿನ್ನ
ಸಾಧನೆಯ ನೆಲೆಯಲ್ಲಿ ಬೆಳಕಿಗೆ ಬಂದಿದ್ದಾರೆ ಅಥವಾ ಮರುಜೀವ ಪಡೆದಿದ್ದಾರೆ.ಧನಾತ್ಮಕವಾಗಿ ನೋಡಿದರೆ
ನಿತೀಶ್ ಕುಮಾರ್ ಗೆ ಸಿಕ್ಕ ಬೆಂಬಲ ಬೆರಗುಗೊಳಿಸುವಂತುಹುದು.ಮೊದಲಬಾರಿ ಬಿಹಾರದಲ್ಲಿ ಜಾತೀಯ ಸಮೀಕರಣ
ಮೀರಿ ಅಭಿವೃದ್ಧಿಗೆ ಬೆಂಬಲ ಸೂಚಿಸಿದ್ದಾರೆ. ನಿಜ ಬಿಹಾರಿಗಳು ಪಟ್ಟ ಅಪಮಾನ. ನಿರಾಸೆ ನೋವು ಬಹುಷಃ ಬೇರೆ ಯಾವ ಪ್ರಜೆಯೂ ಪಟ್ಟಿರಲಾರ. ಬಿಹಾರದಲ್ಲಿ ಗಂಗೆ ಮಾತ್ರ ಚಲನಶೀಲಳು ಉಳಿದೆಲ್ಲ ನಿಂತ ಬಂಡೆ ಎಂಬ ಮಾತಿತ್ತು.
ಹೀಗಾಗಿ ಬಿಹಾರಿಗಳು ಮುಂಬಯಿ,ದೆಹಲಿ ಕಡೆ ರಿಕ್ಷಾ,ಟ್ಯಾಕ್ಸಿ ಇತ್ಯಾದಿ ಸಾಗಿಸುತ್ತ ಜೀವನ ನಿರ್ವಹಣೆ ಮಾಡುತ್ತಿದ್ದರು.
ದೇಶ ಕುಟುಂಬ ಭಾಷೆ ಹೀಗೆ ಎಲ್ಲದರಿಂದ ದೂರವಾಗಿ ಬದುಕುವ ಅನಿವಾರ್ಯತೆಯ ಉರುಳಿಗೆ ಅವರು ತಲೆಯೊಡ್ಡಿದ್ದರು. ಆಳಿದ ಪಕ್ಷ ಇವರ ನೋವಿಗೆ ಸ್ಪಂದಿಸಲೇ ಇಲ್ಲ.ಬದಲು ಜಾತಿ,ಮತ ಹೀಗೆ ಭಿನ್ನವಾಗಿಸಿ ತನ್ನ
ವೋಟುಬ್ಯಾಂಕು ಭದ್ರಪಡಿಸಿತು.ಸಿಕ್ಕ ಸಿಕ್ಕವರಿಗೆ ತನ್ನ ಆಧೀನದ ರೇಲ್ವೆಯಲ್ಲಿ ಕೆಲಸ,ಪಯಣಿಸುವ ರಹದಾರಿ ಕಲ್ಪಿಸಿ
ಲಾಲೂ ಅಂಥವರು ಬಿಹಾರ ಉದ್ಧಾರ ಮಾಡಿಯೇ ಬಿಟ್ಟೆವು ಎಂದು ಬೀಗಿದರು.ಆದರೆ ನಿತೀಶ್ ಬಿಹಾರಿಗಳಲ್ಲಿ ಸ್ವಾಭಿಮಾನ ಬಿತ್ತಿದ, ಸಹಕಾರ ಕೋರಿದ.ಜನ ಎರಡನೇ ಬಾರಿ ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ. ನಿತೀಶ್ ಒಪ್ಪಿಕೊಳ್ಳುವ ಹಾಗೆಅವನ ಬಳಿ ಮಂತ್ರದಂಡ ಇಲ್ಲ. ಒಟ್ಟಾಗಿ ಶ್ರಮಿಸಲು ಕರೆ ನೀಡಿದ್ದಾನೆ.ಅವನ ಹುಮ್ಮಸ್ಸು
ದೊರೆತಿರುವ ಬೆಂಬಲ ನೋಡಿದರೆ ಇದು ಅಸಾಧ್ಯವೇನಲ್ಲ. ನಿತೀಶ್ ಕುಮಾರ್ ಎಲ್ಲ ಹಾರೈಕೆಗಳಿಗೆ,ಅಭಿನಂದನೆಗಳಿಗೆ ಪಾತ್ರರು.
ಇನ್ನು ಇದೇ ಬುಧವಾರ ಯಡಿಯೂರಪ್ಪ ತಮ್ಮ ಕುರ್ಚಿ ಭದ್ರಪಡಿಸಿಕೊಂಡರು. ಮಠಾಧೀಶರ,ಬೆಂಬಲಿಗರ ಹಾಗೂ
ಪ್ರಮುಖ ವಿಪಕ್ಷ ಕಾಂಗ್ರೆಸ್ಸಿನ ನಿಷ್ಕ್ರಿಯತೆಯ ಲಾಭ ಅವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಕುಮಾರಸ್ವಾಮಿ
ಹಾರಾಟ ಮುಂದುವರೆಸಿದ್ದರೆ..ಒಂದೆಡೆ ಅವರಿಗೆ ಕಾಂಗ್ರೆಸಿನ ಬೆಂಬಲ ಇಲ್ಲ. ಹಾಗೇಯೇ ಎತ್ತಿರುವ ಪ್ರಶ್ನೆಗಳು,
ಹಗರಣಗಳು ತಮ್ಮತಲೆಗೆ ಎಲ್ಲಿ ಸುತ್ತಿಕೊಳ್ಳುವ ಭೀತಿ ಅವರಿಗೆ ಇಲ್ಲದೇ ಇಲ್ಲ. ಬೆಂಬಲ ಪಡಿಸಿದ ಮಠಾಧೀಶರು
ತಮ್ಮ ಜಾತಿಯ ಮುಖ್ಯಮಂತ್ರಿಯನ್ನು ಬೆಂಬಲಿಸಲು ಬಿರುಬಿಸಿಲಲ್ಲೂ ಬೀದಿಗೆ ಇಳಿದರು. ಧರ್ಮೊ ರಕ್ಷತಿ ರಕ್ಷಿತಃ
ಅನ್ನುವುದನ್ನು ತಿರುಚಿದರೆ ಮಠೋ ರಕ್ಷತಿ ರಕ್ಷಿತಃ ಅಂತ ಹೇಳಬಹುದೇನೋ. ಆಶ್ಚರ್ಯ ಅಂದರೆ ಪ್ರಗತಿಪರರು
ಅಂತ ಗುರುತಿಸಿಕೊಳ್ಳುವ ಪೇಜಾವರರು,ಚಿತ್ರದುರ್ಗದ ಮುರುಘುರಾಜೇಂದ್ರ ಮಠದವರೂ ಯಡ್ಯೂರಪ್ಪ ಬೆಂಬಲಿಗೆ
ನಿಂತಿದ್ದು. ಈ ಸ್ವಾಮಿಗಳ ಮಠಗಳ ಅಗತ್ಯ ನಿಜಕ್ಕೂ ಇದೆಯೇ ಇವರಂಥವರಿಂದ ಉಪದೇಶ ಬೋಧನೆ ಕೇಳಿಸಿಕೊಳ್ಳಬೇಕೆ ಇದು ಪ್ರಶ್ನೆ. ನೂರಿಲಿ ತಿಂದು ತೇಗಿದ ಬೆಕ್ಕು ಹಜ್ ಗೆ ಹೋದಂತೆ ಯಡ್ಯೂರಪ್ಪ ಇನ್ನು ಮುಂದೆ
ಶುಧ್ಧವಾಗಿರುವುದಾಗಿ ಹೇಳಿದ್ದಾರೆ. ಆದರೆ ಕೈ ಗಂಟಿದ ಕೊಳೆಯನ್ನು ಯಾವ ಸಾಬೂನು ಉಪಯೋಗಿಸಿ ತೊಳೆಯುತ್ತಾರೆ ಇದು ಮೂಲ ಪ್ರಶ್ನೆ.
ಕಾಂಗ್ರೆಸ ಪಕ್ಷ ತೀರ್ವ ನಿಗಾಘಟಕದಲ್ಲಿದೆ.ಉಸಿರಾಡಲು ಹೊಸಗಾಳಿಯ ಹುಡುಕಾಟದಲ್ಲಿದೆ. ಭಾವಿ ಪ್ರಧಾನಿ ಅಂತ
ಬಿಂಬಿತ ವಾಗಿರುವ ರಾಹುಲ್ ನ ಚಮತ್ಕಾರ ಬಿಹಾರದಲ್ಲಿ ಆ ಪಕ್ಷ ಮಣ್ಣುತಿನ್ನೋ ಮೂಲಕ ಧೂಳುತಿಂದಿದೆ.
ಆಂಧ್ರದಲ್ಲಿ ಅನಾರೋಗ್ಯದ ನೆವ ಒಡ್ಡಿ ರೋಶಯ್ಯ ಹಿಂದೆ ಸರಿದರು. ಒಂದೇ ದಿನ ಹೀಗೆ ಎರಡು ಅಲಗಿನ ಕತ್ತಿಯ
ಇರಿತ ಆ ಪಕ್ಷವನ್ನು ಘಾಸಿಗೊಳಿಸಿದೆ.ನಾಯಕತ್ವ ಅಥವಾ ಅದರ ಕೊರತೆಯೇ ಆ ಪಕ್ಷಕ್ಕೀಗ ಎದುರಿರೋ ದೊಡ್ಡ
ಸವಾಲು. ಮನಮೋಹನ್ ಬಲಿ ಪೀಠ ಏರುವ ತಯಾರಿಯಲ್ಲಿದ್ದಾರೆ. ಸೋನಿಯ ರಾಹುಲ್ ಮಂಕಾಗಿದ್ದಾರೆ..
ಆ ಪಕ್ಷದಲ್ಲಿರುವ ಹಿರಿಯರು ಕೈಕಟ್ಟಿಕೊಂಡು,ಬಾಯಿಮುಚ್ಚಿಕೊಂಡು ಇನ್ನು ಎಷ್ಟು ದಿನ ಹೀಗೆಯೇ ಇರುತ್ತಾರೆ ಇದು
ಕಾಡುವ ಪ್ರಶ್ನೆ. ಪರ್ಯಾಯ ನಾಯಕತ್ವ ಈ ಪದವೇ ಕಾಂಗ್ರೆಸ್ಸಿನ ನಿಘಂಟಿನಲ್ಲಿ ಇಲ್ಲ. ಇದೊಂದು ಸ್ವಯಂಕೃತ
ಅಪರಾಧ.
ಒಟ್ಟಿನಲ್ಲಿ ಈ ಬುಧವಾರ ದೇಶದ ರಾಜಕಾರಣದಲ್ಲಿ ಅನೇಕ ತಲ್ಲಣಗಳ,ಸವಾಲುಗಳ ,ಪ್ರಶ್ನೆಗಳ ಗೂಡಾಗಿದೆ.
Comments
ಉ: ಹೀಗೊಂದು ಬುಧವಾರ..