ಭ್ರಮಾತ್ಮಕ ಸಂದರ್ಶನ - ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೭
ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೭
(೧೧೨)
"ಬೇಸಿಗೆಯಲ್ಲವೆ ಈಗ. ಇನ್ನೊಂದು ಗಂಟೆಗೆ ಬೆಳಕು ಹರಡತೊಡಗುತ್ತದೆ" ಎಂದ ಪ್ರಕ್ಷು, ಏನನ್ನೂ ಉದ್ದೇಶಿಸದವನಂತೆ.
"ಮಾತು ಮುಗಿಸಲು ಇದು ಪೀಠಿಕೆಯೆ?" ಎಂದು ಕೇಳಬೇಕೆಂದುಕೊಳ್ಳುವಷ್ಟರಲ್ಲಿ, ಆತನಿಗೆ ಅದು ತಿಳಿದಂತೆ ಹಸನ್ಮುಖಿಯಾದ.
"ಎಲ್ಲದಕ್ಕೂ ಒಂದು ಕೊನೆ ಇರುತ್ತದೆ ಅನ್ನುವುದು ನಮ್ಮ ನಂಬಿಕೆ. ಸುಸ್ತಿನಿಂದಾಗುವ ತೀರ್ಮಾನವಿದು. ಅಥವ ಎಲ್ಲ ತೀರ್ಮಾನಗಳೂ ಸಹ ಸುಸ್ತಾದುದರ ಪರಿಣಾಮವೇ, ಗೊತ್ತೆ? ಒಲಂಪಿಕ್ಸ್ ಗೆಲುವಿನ ಗಡಿ ತಲುಪಿದಾಗ ಗೆದ್ದೆನೆಂಬ ಖುಷಿ ತಾತ್ಕಾಲಿಕವಾದರೆ ಸುಸ್ತು ನಿರಂತರ. ನೀನು ಏನನ್ನೂ ಕೇಳುವ ಸಾಧ್ಯತೆ ಕಾಣುತ್ತಿಲ್ಲ. ಇನ್ನೊಬ್ಬರಿಗೆ ನಿನ್ನ ಬಗ್ಗೆ ಎಲ್ಲವೂ ತಿಳಿದಿದೆ ಎಂದುಕೊಳ್ಳಬೇಡ. ನೀನು ಅನುಮತಿ ನೀಡಿದಷ್ಟೇ ಇತರರು ನಿನ್ನ ಬಗ್ಗೆ ತಿಳಿದುಕೊಳ್ಳುವುದು. ಬರೆಯುವುದು, ಕಲೆಯನ್ನು ಸೃಷ್ಟಿಸುವುದು--ಇವೆಲ್ಲವೂ ಇನ್ನೊಬ್ಬರಿಗೆ ನಿನ್ನ ಬಗ್ಗೆಯೇ ತಿಳುವಳಿಕೆ ನೀಡುವ ಕ್ರಿಯೆ. ಆಶ್ಚರ್ಯವೆಂದರೆ ಬಹುಪಾಲು ಕಲಾವಿದರು ಇನ್ನೊಬ್ಬರಿಂದ ಏನನ್ನೋ ಮುಚ್ಚಿಡುವ ಸಲುವಾಗಿ ಮತ್ತೇನನ್ನೋ ಸೃಷ್ಟಿಸಿ ವೀಕ್ಷಕರನ್ನು ದಾರಿತಪ್ಪಿಸುತ್ತಾರೆ" ಎಂದು ಆತ ಮಾತನಾಡಿದಷ್ಟೂ ನಿಗೂಢವಾಗತೊಡಗಿದ.
ಪ್ರಕ್ಷು ಮಾತನಾಡುವಾಗ ಮೌನವೇ ಆತನ ಮಾತಿಗೆ ಅತ್ಯುತ್ತಮ ಪ್ರತಿಕ್ರಿಯೆ ಎಂದು ಸುಮ್ಮನಿದ್ದೆ. ಕತ್ತಲು ಮಾಯವಾಗುವ ಮೊದಲ ಸೂಚನೆ ಇನ್ನೂ ದೂರವಿತ್ತು.
"ಜಸ್ಟ್ ಫಾರ್ ಎ ಚೇಂಜ್. ಏನಾದರೂ ಸಹಜವಾದ ಪ್ರಶ್ನೆಯನ್ನಾದರೂ ಕೇಳು ಅನಿಲ್. ಎದುರಿಗಿರುವಾಗ ನಿನ್ನನ್ನು ಕೊನೆಯಬಾರಿಗೆ ಮಾತನಾಡಿಸುತ್ತಾನೆ, ಆತ ನಾಳೆ ಗಲ್ಲಿಗೇರಲಿದ್ದಾನೆ ಎಂದು ತಿಳಿದಾಗ ಬದುಕಿನ ಬಗ್ಗೆ ಅವನ ಅಭಿಪ್ರಾಯ ತಿಳಿದುಕೊಳ್ಳಬೇಕೆನಿಸುತ್ತದಲ್ಲ, ಅಂತಹ ಪ್ರಶ್ನೆ ಕೇಳು ಗೆಳೆಯ" ಎಂದನಾತ.
"ಅಂತಹವು ಸಾವಿರವಿದ್ದಾವೆ. ಕೆ.ಜಿ.ಸುಬ್ರಹ್ಮಣ್ಯನ್ ಅಲ್ಲಿ ಕಾಣುವ ಕಪ್ಪು-ಬಿಳುಪಿನ ಭಿತ್ತಿಚಿತ್ರವನ್ನು ಪುನರ್ ರಚನೆ ಮಾಡಿದ್ದು ಏಕಿರಬಹುದು ಹೇಳು ನೋಡುವ?" ಎಂದೆ. (೧೯೮೯ರ ಸುಮಾರಿಗೆ ಅದು ಡಿಸೈನ್ ಡಿಪಾರ್ಟ್-ಮೆಂಟಿನ ಮೇಲೆ ಸೃಷ್ಟಿಸಲಾಗಿತ್ತು. ಆಗ ಕೆ.ಜಿ.ಎಸ್ರಿಗೆ ಸುಮಾರು ೬೫ ವರ್ಷ. ಈಗ ಅದನ್ನು ಪುನರ್-ಚಿತ್ರಿಸುವಾಗ ಅವರಿಗೆ ೮೬. ಕಪ್ಪುಬಿಳುಪಿನಲ್ಲಿ ಚಿತ್ರಿಸುವವರು ಕಡಿಮೆ. ಪ್ಯಾಬ್ಲೋ ಪಿಕಾಸೋನ "ಗಾರ್ನಿಕ" ಅಂತಹದ್ದು. ತಾನು ಬಾಲ್ಯವನ್ನು ಕಳೆದ ಸ್ಪೇನಿನ ಅದೇ ಹೆಸರಿನ ಊರು ಬಾಂಬ್ ಸಿಡಿತದಿಂದ ನಾಶವಾದಾಗ, ಅದನ್ನು ಕೇಳಿ, ಫ್ರಾನ್ಸಿನಲ್ಲಿದ್ದ ಪಿಕಾಸೊ ಸೃಷ್ಟಿಸಿದ ಬೃಹತ್ ಕೃತಿ ’ಗಾರ್ನಿಕ’.)
"ಇಂಟರೆಸ್ಟಿಂಗ್. ಮೊದಲಿದ್ದ ವರ್ಣವಿನ್ಯಾಸವನ್ನೇ ಅನುಸರಿಸಿದರೂ ಈ ಭಿತ್ತಿಚಿತ್ರದಲ್ಲಿದ್ದ ದೃಶ್ಯಗಳೆಲ್ಲ ಬದಲಾಗಿವೆ. ವ್ಯಾತ್ಯಾಸವನ್ನೇನಾದರೂ ಗಮನಿಸಿದೆಯ?"
"ಹೌದು. ಕೆಲವು ಆಕಾರಗಳಿಗೆ ಹೆಚ್ಚಿನ ಜೋಡಿಕಣ್ಗಳಿವೆ. ಅಂದರೆ ಇಂದಿನ ಛಾಯಾಚಿತ್ರಣ, ಹೊಸಮಾಧ್ಯಮದ ಕಲೆಯ ಆಕ್ರಾಮಿಕ ಇರುವಿಕೆಯನ್ನು ಅಷ್ಟು ಸೂಕ್ಷ್ಮವಾಗಿ ನಿರುಕಿಸಿದವರಿಲ್ಲವೇನೋ--ಕೇವಲ ಒಂದು ಜೋಡಿಕಣ್ಗಳ ಅಳವಡಿಕೆಯಿಂದ. ಅದಕ್ಕೆ ಮತ್ತೊಂದು ಅರ್ಥವಿದೆ. ಇಪ್ಪತ್ತು ವರ್ಷದಲ್ಲಿ, ಅಥವ ಎರಡು ದಶಕದಲ್ಲಿ, ಅಥವ ಎರಡು ಶತಮಾನಗಳು ಭೇಟಿಮಾಡುವ ಹಂತದಲ್ಲಿ ಆಗಿರುವ ಬದಲಾವಣೆಯು ಒಂದು ಹೆಚ್ಚಿನ ಜೋಡ ಕಣ್ಗಳನ್ನು ಕೊಟ್ಟಂತೆ ಎಂದು ಭಾವಿಸಬಹುದು."
"ಹ್ಞಾಂ, ನೀನು ವೃತ್ತಿಪರ ಕಲಾವಿಮರ್ಶಕ ಎಂಬ ನಿರೂಪಣೆಯಿದು," ಎಂದು ಪ್ರಕ್ಷು ನಗತೊಡಗಿದ. ಆದರೆ ಆತನ ಮಾತು-ನಗುವಿನಲ್ಲಿ ಒಂದು ತೀವ್ರತೆ, ಶೀಘ್ರತೆ ಬರತೊಡಗಿತು. ಏನನ್ನೋ ಹೇಳಬೇಕು, ಆದಷ್ಟೂ ಬೇಗ ಹೇಳಬೇಕು ಎನ್ನುವ ಮುಖಭಾವ ಮೊಡತೊಡಗಿತು.
(೧೧೩)
ಆತನೊಂದಿಗೆ ಮಾತನಾಡುತ್ತಿದ್ದಂತೆಯೇ ಒಂದು ವಿಚಿತ್ರ ನಡೆಯಿತು. ಶಿಲ್ಪವೊಂದನ್ನು ಕಂಪ್ಯೂಟರ್ ಸ್ಕ್ರೀನಿನ ಅಡೋಬ್ ಫೋಟೋಶಾಪಿನಲ್ಲಿರಿಸಿ, ಮೌಸಿನ ಪಾಯಿಂಟರಿನಿಂದ ಅದರ ಮೇಲೆಲ್ಲ ಚಲಿಸಿದಂತೆಲ್ಲ, ಬೃಹದಾಕಾರದ ಶಿಲ್ಪದ ಮೇಲು, ಕೆಳಗು, ಎಡ-ಬಲಗಳನ್ನೆಲ್ಲ ಕುಂತಲ್ಲೇ ತಿರುಗಿಸಿ ನೋಡಬಹುದಲ್ಲ ಹಾಗೆ ಕಾಣತೊಡಗಿದ ಪ್ರಕ್ಷುಬ್ಧ! ಪಕ್ಕಾ ಫಿಲ್ಮಿ
ಶೈಲಿಯಲ್ಲಿ, ಕ್ಯಾಮರ ಪ್ಯಾನ್ ಆದಂತೆ, ಕ್ಲೋಸಪ್ ಲಾಂಗ್-ಶಾಟ್ಗಳಲ್ಲಿ ಚಲಿಸಿದಾಗ ಎದುರಿನ ದೃಶ್ಯ ಪರಿವರ್ತನೆಗೊಳ್ಳುವಂತೆ, ಆತ ಕಾಣತೊಡಗಿದ.
"ಪ್ರಕ್ಷು. ಮತ್ತೆ ಶುರುವಾಯಿತಲ್ಲ ನಿನ್ನ ಮೆಸ್ಮರಿಸಂ," ಎಂದು ಪ್ರತಿಭಟಿಸಿದೆ.
ಆತ ನಗತೊಡಗಿದ, "ನಾನಲ್ಲ, ಇದನ್ನು ಹಿಡಿತದಲ್ಲಿರಿಸಿಕೊಂಡಿರುವುದು, ಮಾರ್ಪಾಡು ಮಾಡುತ್ತಿರುವುದು ನೀನೇ. ನಿನ್ನ ಇಚ್ಛೆಯಂತೆ ನಾನು ನಿನಗೆ ಗೋಚರಿಸುತ್ತಿದ್ದೇನೆ ಅಷ್ಟೇ. ಜೊತೆಗೆ ನಿನ್ನಯ ಊಟ, ನಿದ್ರೆಯಲ್ಲಿ ವ್ಯತ್ಯಯವಾಗಿರುವುದೂ ಇದಕ್ಕೆ ಕಾರಣ. ನಿನ್ನ ಹೊಟ್ಟೆ, ಕಣ್ಣು ಹಾಗೂ ಮಿದುಳು ನಿನ್ನ ಮೋಕ್ಷಕ್ಕೆ ದಾರಿ" ಎಂದ.
"ನೀನು ಮಾತನಾಡುವ ಶೈಲಿಯಿಂದಾಗಿ ನಿನ್ನನ್ನು ಪ್ರಕ್ಷುಬ್ದ ಎಂದು
ಕರೆವುದಕ್ಕಿಂತಲೂ ’ಮೋಕ್ಷದ’ ಎಂದ ಕರೆವುದು ಲೇಸು" ಎಂದೆ.
"ಆಗಲಿ ಬಿಡಪ್ಪ. ಒಂದು ನಿಜ ಅನಿಲ್. ಜನಕ್ಕೆ ಸಾಮನ್ಯ ಪ್ರಜ್ಞೆ ಎಂಬುದು ಅಪರೂಪವಾಗತೊಡಗಿದೆ, ಮಾನವ ಅಸ್ತಿತ್ವಕ್ಕೆ ಬಂದ ದಿನದಿಂದ ಅಥವ ಆತ ದೇವರೆಂಬ ಅದ್ಭುತ ಪರಿಕಲ್ಪನೆಯನ್ನು ಸೃಷ್ಟಿಸಿದ ದಿನದಿಂದ. ಮಾನವನ ಅತ್ಯುತ್ತಮ ಕಲಾಕೃತಿ ದೈವವೇ. ಸಾಮಾನ್ಯಪ್ರಜ್ಞೆ ಕೈಕೊಟ್ಟ ಎರಡನೇ ಪ್ರಸಂಗವೆಂದರೆ, ಕಲಾಸೃಷ್ಟಿಗೆ ತೊಡಗಿದ ದಿನ. ದೈವವನ್ನೇ ಸೃಷ್ಟಿಸಿದ ಮನಸ್ಸು ಹಾಗೂ ಕೈ, ದೆವ್ವವೆಂಬ ಅದರ ವಿಕೃತ ರೂಪವನ್ನೂ ಸೃಷ್ಟಿಸಿಬಿಟ್ಟಿತು. ತದನಂತರ ಆತ್ಯಂತಿಕವೆಂಬುದನ್ನು ಸೄಷ್ಟಿಸಲು ಕಲಾಕೃತಿ, ಗ್ಯಾಲರಿ, ಸಂಗ್ರಹಾಲಯ ಇತ್ಯಾದಿಯನ್ನು ರೂಪಿಸತೊಡಗಿದ. ಅಂದರೆ ಕಲಾಸೃಷ್ಟಿಗೆ ಸಾಕಷ್ಟು ಮುಗ್ಧತೆಯ ಅವಶ್ಯಕತೆಯಿದೆ. ಅಂತಿಮ ಉತ್ತರ ಇಲ್ಲವೆಂಬುದೇ ಉತ್ತರ ಎಂಬುದನ್ನು ಸ್ವೀಕರಿಸಲು ಶೇಖಡ ೯೯ಜನರಿಗೆ ಸಾಧ್ಯವಾಗದು. ಉತ್ತರವಿಲ್ಲವೆಂಬ ಅರಿವಿಂದ ಹೆಚ್ಚು ಸ್ವಾವಲಂಬಿಯಾಗುವ ವ್ಯಕ್ತಿಯ ನಡವಳಿಕೆ ಹೆಚ್ಚಿನ ತೂಕದ್ದಾಗಿರುತ್ತದೆ. ದೈವ ಮತ್ತು ನಾಸ್ತಿಕತೆಯ ನಡುವನ ಹಾದಿಯನ್ನು ಹಿಂದೆ-ಮುಂದಾಗಿ ಜನ ಜೀವನಪರ್ಯಂತ ಓಡಾಡುತ್ತಲೇ ಇರುತ್ತಾರೆ. ಆ ಹಾದಿಯಲ್ಲಿ ಹಿಮ್ಮುಖವಾಗಿಯೂ ನಡೆಯಲಿಚ್ಚಿಸುವವರನ್ನು ಆಸ್ತಿಕರೆನ್ನುತ್ತೇವೆ, ಕೇವಲ ಹಿಮ್ಮುಖವಾಗಿ ಹೋಗುವವರನ್ನು ನಾಸ್ತಿಕರೆನ್ನುತ್ತೇವೆ, ಎರಡೂ ದಿಕ್ಕಿನಲ್ಲಿ ಚಲಿಸುವವರನ್ನು ಅನಾಸ್ತಿಕರೆನ್ನುತ್ತೇವೆ," ಎಂದು ಮಾತು ಮುಂದುವರೆಸಿದ ಪ್ರಕ್ಷು. ಆತನ ಮಾತುಗಳು ಒಮ್ಮೆಲೆ ಸರಳವೂ ಸಂಕೀರ್ಣವೂ ಆಗಿ ತೋರಿತು. ಆದ್ದರಿಂದ ಎರಡೂ ದಿಕ್ಕಿನಲ್ಲಿ ಚಲಿಸುವ ಈತ ಅನಾಸ್ತಿಕನೇ (ಅಗ್ನೋಸ್ಟಿಕ್) ಇರಬೇಕು ಎಂದು ಮನಸ್ಸಿನಲ್ಲಿ ತುಂಟತನದ ಭಾವ ಉಕ್ಕಿತು.
(೧೧೪)
ಪ್ರಕ್ಷು ಮಾತನಾಡುತ್ತಲೇ ಹೋದ. ಆತನ ಮಾತುಗಳನ್ನು ಪೂರ್ಣವಾಗಿ ನೆನಪಿಟ್ಟುಕೊಳ್ಳುವುದೇ ಕಷ್ಟವಾಗತೊಡಗಿತು. ಏನೋ ಸೂಚನೆ ಸಿಕ್ಕಂತೆ ಪ್ರಕ್ಷು ಸ್ವಲ್ಪ ಪ್ರಕ್ಷುಬ್ಧನಾದಂತೆ ಕಂಡ. ಮೇಲೆದ್ದು ಧೂಳುಕೊಡವಿಕೊಂಡು ಕ್ಯಾಂಟೀನಿನ ಹಿಂದಕ್ಕೆ ಹೋದ. ಬಗಲಿಗೆ ಶಾಂತಿನಿಕೇತನದ್ದೇ ಆದ ಚೀಲವಿತ್ತು. ಅರ್ಧದಾರಿಯಲ್ಲಿ ಏನೋ ನೆನಪಾದವನಂತೆ ನನ್ನೆಡೆ ನೋಡಿದ, ದೂರದಿಂದಲೇ ಮಾತನಾಡತೊಡಗಿದ. ಆತನ ಧ್ವನಿ ಗಾಢವಾಗಿತ್ತು, "ಪ್ರಾಯಶಃ ಇದೇ ನನ್ನ ನಿನ್ನಯ ಕೊನೆಯ ಭೇಟಿ ಅನಿಲ್. ಏಕೆ ಏನು ಎಂಬುದು ನಿನಗೆ ಅರ್ಥವಾದೀತು. ತೀರ ಸುಲಭದಲ್ಲೇ ಹತ್ತಿರದಲ್ಲೇ ಅರ್ಥವಾಗಬಹುದು. ನಿನಗೆ ಶುಭವಾಗಲಿ. ಶಾದು", ಎಂದು ಬಿರಬಿರನೆ ನಡೆದು, ಕಲಾಇತಿಹಾಸದ ಎರಡನೇ ಮಹಡಿ ಹತ್ತಿ, ಬಾಗಿಲು ತೆರೆದು ಒಳಹೊಕ್ಕ.
ಏನಾಗುತ್ತಿದೆ ಎಂಬುದನ್ನರಿವ ಮುನ್ನವೇ ದೂರದಿಂದ ಮರಳಿನ ಮೇಲೆ ಸೈಕಲ್ಲೊಂದು ಬರುತ್ತಿರುವ ಸದ್ದಾಯಿತು. ಹತ್ತಿರ ಬಂದಾಗ ಅದು ಒಬ್ಬ ಹೆಣ್ಣು ಎಂದು ಸ್ಪಷ್ಟವಾಯಿತು. "ಯಾರು?" ಎಂದೆ. "ಅನಿಲ್ ಅಲ್ಲವೆ?" ಎಂದಿತು ಹೆಣ್ಣು ಧ್ವನಿ, "ನಾನು ಅನುಶ್ರೀ ಕುಮಾರಿ ಸಾಹು. ನಿನಗೆ ಎರಡು ವರ್ಷ ಜ್ಯೂನಿಯರ್ ಆಗಿದ್ದೆ ೧೯೯೨ರಲ್ಲಿ, ನೆನಪಿದೆಯೆ? ಪ್ರಕ್ಷುವಿನ ಸಹವರ್ತಿ ಮತ್ತು ಸಹಧರ್ಮಿಣಿ" ಎಂದು ನಾಟಕೀಯವಾಗಿ ಮಾತನಾಡಿದಳು. ನಾನು ಆಕೆಯನ್ನು ಗುರ್ತಿಸಿದೆ. ಆಕೆ ಮಾತಿನಮಲ್ಲಿ. ಈಗಲು ಹಾಗೆಯೇ ಮುಂದುವರೆದಳು, "ನಿನ್ನೊಡನೆ ಪ್ರಕ್ಷು ಮಾತನಾಡುತ್ತಿದ್ದ ಅಲ್ಲವೆ? ಆತ ಎರಡನೇ ಮಹಡಿ ಹತ್ತಿ ಹೊದದ್ದು ನನ್ನಿಂದ ತಪ್ಪಿಸಿಕೊಳ್ಳಲು. ನೀನು ನಂಬುವೆಯೇ ಇಲ್ಲವೋ ನಮ್ಮಿಬ್ಬರ ನಡುವೆ ಮಾತು ನಿಂತು ಹತ್ತುವರ್ಷವಾಯಿತು. ಹಳೆಯ ಗೆಳೆಯರು, ಆತ್ಮೀಯರು ಬಂದರೆ, ಅದೂ ರಾತ್ರಿಯ ಹೊತ್ತಿನಲ್ಲಿ ಕಲಾಭವನದಲ್ಲಿ ಸಿಕ್ಕರೆ ಮಾತ್ರ ಪ್ರಕ್ಷು ಮಾತಿಗೆ ಸಿಕ್ಕುವುದು. ನಿಜ ಹೇಳು. ಆತ ಪ್ರಕ್ಷುವಲ್ಲವೆ, ಮೆಟ್ಟಿಲು ಹತ್ತಿಹೋದದ್ದು?"
"ಹೌದು" ಎಂದು.
"ನಾವಿಬ್ಬರೂ ಮದುವೆಯಾಗಿದ್ದೆವು. ಪ್ರಕ್ಷು ಸತ್ತು ಹತ್ತುವರ್ಷಗಳಾಯಿತು" ಎಂದು ಗಂಭೀರಳಾದಳು.
"ಇದೂ ಜೋಕೆ? ತದ್ವಿರುದ್ಧವಾಗಿ ನೀನು ಸತ್ತು ಹತ್ತು ವರ್ಷವಾಯಿತು ಎಂಬ ಸುದ್ದಿ ಮಾತ್ರ ನನಗೆ ತಿಳಿದಿತ್ತು. ಶಾಂತಿನಿಕೇತನದಲ್ಲಿ ಸತ್ತರು ಎಂದುಕೊಂಡಿದ್ದ ನಾಲ್ಕಾರು ಮಂದಿಯಲ್ಲಿ ಮೂವರನ್ನಾದರೂ ಜೀವಂತವಾಗಿ ಭೇಟಿಮಾಡಿದ್ದೇನೆ" ಎಂದೆ ನಗುತ್ತ.
"ನನ್ನ ನಂಬು. ಆತ ಕೆಡುಕನಲ್ಲ. ಆದರೆ ಪ್ರಕ್ಷು ೨೧ನೇ ಶತಮಾನವನ್ನು ನೋಡಲೇ ಇಲ್ಲ. ಇಷ್ಟೊತ್ತು ಆತನೊಂದಿಗೆ ಮಾತನಾಡಿದ್ದು ಮಾತ್ರ ಆತನ ಪ್ರೇತದ ಪ್ರೇರಣೆಯೇ ಇರಬೇಕು", ಎಂದಳು.
ನಾವಿಬ್ಬರೂ ಸುಮ್ಮನೆ ಕುಳಿತೆವು. ಬೆಳಗು ಹರಿಯತೊಡಗಿತು, ಕ್ರಮೇಣ///