ಫೇಸ್‌ಬುಕ್ ಸಂದೇಶ ಸೇವೆ

ಫೇಸ್‌ಬುಕ್ ಸಂದೇಶ ಸೇವೆ

ಫೇಸ್‌ಬುಕ್ ಸಂದೇಶ ಸೇವೆ

ಮಿಂಚಂಚೆಯ ಹೊಸ ಅವತಾರವೆಂದು ಬಣ್ಣಿಸಲಾಗುತ್ತಿರುವ ಸಂದೇಶ ಸೇವೆಯನ್ನು ಫೇಸ್‌ಬುಕ್ ಆರಂಭಿಸಿದೆ.ಇದರಲ್ಲಿ ದಿಡೀರ್ ಸಂದೇಶ ರವಾನೆಗೇ ಒತ್ತು ನೀಡಲಾಗಿದೆ.ಬಳಕೆದಾರ ಆನ್‌ಲೈನ್ ಇದ್ದಾಗ,ಆತನ ಜಾಲದಲ್ಲಿರುವವರು,ನೇರವಾಗಿ ಆತನಿಗೆ ಸಂದೇಶ ರವಾನಿಸಬಹುದು.ಆತನ ಮಿಂಚಂಚೆ ವಿಳಾಸ ಹುಡುಕಿ,ಸಂದೇಶ ರವಾನಿಸುವ ಅಗತ್ಯ ಇರದು.ಕಳುಹಿಸುವ ಪ್ರತಿ ತುಣುಕು ಸಂದೇಶವಾಗಲಿ,ಅದಕ್ಕೆ ಬರುವ ಉತ್ತರವಾಗಲಿ,ಬಳಕೆದಾರನ ಇನ್‌ಬಾಕ್ಸಿನಲ್ಲಿ ಉಳಿದು ಬಿಡುತ್ತದೆ.ಇನ್ನು ಕೆಲವು ವರ್ಷಗಳು ಕಳೆದಾಗ,ತಾನು ನಡೆಸಿದ ಪ್ರತಿ ತುಣುಕು ಪಟ್ಟಾಂಗದ ಸಂದೇಶವೂ ಆತನಿಗೆ ಲಭ್ಯವಾಗುವ ಸನ್ನಿವೇಶವನ್ನು ಊಹಿಸಿಕೊಳ್ಳಿ.ಫೇಸ್‌ಬುಕ್ ತಾಣದಲ್ಲಿರುವಾಗ,ನಮಗೆ ಇತರರಿಂದ ಬಂದ ಸಂದೇಶಗಳಿಗೆ ಪ್ರತ್ಯೇಕ ಪಾಪಪ್ ಕಿಟಕಿಗಳು ಆರಂಭವಾಗಿ,ಯಾರಿಂದ ಸಂದೇಶಗಳು ಬರುತ್ತಿವೆ ಎನ್ನುವುದನ್ನು ಅರಿಯುವುದನ್ನು ಕಠಿನವಾಗುತ್ತದೆ ಎನ್ನುವುದು,ಈ ತೆರನ ಸೇವೆಯಲ್ಲಿ ಸಮಸ್ಯೆ ಸೃಷ್ಟಿಸಬಲ್ಲುದು.ಆದರೆ,ದಿಡೀರ್ ಸೇವೆ ಗೂಗಲ್ ಮಿಂಚಂಚೆಗೆ ನಿಧಾನವಾಗಿ ಅಂತ್ಯ ಕಾಣಿಸುವುದು ಖಚಿತ ಎಂದು ಬಣ್ಣಿಸುವವರೂ ಇದ್ದಾರೆ.
------------------
ಗೂಗಲ್‌ನ ಫ್ಯಾಶನ್ ತಾಣ
ಗೂಗಲ್ ಬೋಟಿಕ್.ಕಾಮ್ ಎನ್ನುವ ಅಂತರ್ಜಾಲ ಫ್ಯಾಶನ್ ತಾಣವನ್ನು ಆರಂಭಿಸಿದೆ.ಜನರು ಕೊಳ್ಳುವ ಉಡುಪುಗಳನ್ನು ಅರಿತುಕೊಂಡು,ಮುಂದೆ ಅವರ ಖರೀದಿಗೆ ಸಲಹೆ ನೀಡುವ ಸೇವೆಯನ್ನು ಗೂಗಲ್ ನೀಡುವ ಯೋಚನೆಯಲ್ಲಿ,ಬಾಟಿಕ್ ತಾಣ ಆರ್ಂಭವಾಗಿದೆ.ಮಹಿಳಾ ಉಡುಪುಗಳಿಗೆ ಸದ್ಯ ಬಾಟಿಕ್ ತಾಣವು ಸೀಮಿತವಾಗಿದೆ.ತಾಣದಲ್ಲಿ ಫ್ಯಾಶನ್‌ಗೆ ಸಂಬಂಧಿಸಿದ ಮಾಹಿತಿಗಳಿವೆ.ಜನಪ್ರಿಯ ತಾರೆಯರಿಗೆ ಸಂಬಂಧಿಸಿದ ಮಾಹಿತಿಗಳಿವೆ.ತಾರೆಯರು ಶಿಫಾರಸು ಮಾಡುವ ಉಡುಪುಗಳನ್ನು ಒಂದರ ನಂತರ ನೋಡುತ್ತಾ,ಅದು ನಿಮಗೆ ಇಷ್ಟವಾಯಿತೇ ಎಂದು ಗುರುತು ಮಾಡುವ ಸವಲತ್ತು ಅಂತರ್ಜಾಲ ತಾಣದಲ್ಲಿದೆ.ಇದನ್ನಾಧರಿಸಿ,ಮುಂದಿನ ಸಲ ನೀವು ಉಡುಪು ಖರೀದಿಸುವಾಗ,ಗೂಗಲ್ ತನ್ನ ಕ್ರಮವಿಧಿಯ ಮೂಲಕ,ನಿಮಗಿಷ್ಟವಾಗ ಬಹುದಾದ ಫ್ಯಾಶನ್ ಉಡುಪನ್ನು ಶಿಫಾರಸ್ಸು ಮಾಡುತ್ತದೆ,ಉಡುಪುಗಳ ಬಣ್ಣ,ಅವುಗಳಲ್ಲಿನ ವಿನ್ಯಾಸದತ್ತಲೂ ಕ್ರಮವಿಧಿ ಗಮನವೀಯುವ ಸಾಮರ್ಥ್ಯ ಹೊಂದಿದೆ.ಹೀಗಾಗಿ,ಯಾವ ವಿನ್ಯಾಸ,ಯಾವ ಬಣ್ಣದೊಂದಿಗೆ ಹೆಚ್ಚು ಹೊಂದುತ್ತದೆ ಎಂದು ವಿಶ್ಲೇಷಿಸಿ,ಅದರಂತೆ ಶಿಫಾರಸು ಮಾಡುವ "ಕಂಪ್ಯೂಟರ್ ದೃಷ್ಟಿ" ಅದಕ್ಕೆ ಸಿದ್ಧಿಸಿದೆ.
------------------------------
ಸೂಪರ್ ಪವರ್ ಜತೆ ಸೂಪರ್ ಕಂಪ್ಯೂಟರ್
ಜಗತ್ತಿನ ಶಕ್ತಿಮಾನ್ ರಾಷ್ಟ್ರವಾಗಲು ಮುನ್ನುಗುತ್ತಿರುವ ಚೀನಾ,ಸೂಪರ್ ಪವರ್ ಎಂದು ಕರೆಸಿಕೊಳ್ಳುವಷ್ಟರಲ್ಲಿ ತೃಪ್ತವಾಗಿಲ್ಲ.ಬದಲಾಗಿ,ಅದು ಸೂಪರ್ ಕಂಪ್ಯೂಟರನ್ನೂ ಅಭಿವೃದ್ಧಿ ಪಡಿಸಿದೆ.ಟಿಯಾನೆ-1ಎ ಎನ್ನುವ ಸೂಪರ್ ಕಂಪ್ಯೂಟರ್,ಈಗ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್.ಜತೆಗೆ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿರುವ ಸೂಪರ್ ಕಂಪ್ಯೂಟರ್ ಕೂಡಾ ಚೀನಾದ ಬಳಿಯಿದೆ.ಇಂತಹ ಕಂಪ್ಯೂಟರುಗಳು ದೇಶದ ಸಾರಿಗೆ ವ್ಯವಸ್ಥೆ ಮೇಲೆ ಗಮನವೀಯಲು,ಜನರ ಅಂತರ್ಜಾಲ ಬಳಕೆ ಬಗ್ಗೆ ಗಮನವೀಯಲು,ಹವಾಮಾನ ಮುನ್ನೋಟ ನೀಡಲು ಹೀಗೆ ಅತಿವೇಗದ ಮತ್ತು ಅತ್ಯಂತ ಹೆಚ್ಚು ಮಾಹಿತಿಯನ್ನು ವಿಶ್ಲೇಷಿಸುವಲ್ಲಿ ಬೇಕಾಗುತ್ತದೆ.ಸದ್ಯ ಚೀನಾದ ಬಳಿ ನಲ್ವತ್ತಕ್ಕೂ ಹೆಚ್ಚು ಸೂಪರ್ ಕಂಪ್ಯೂಟರುಗಳಿವೆ.ಚೀನಾವು ಅಭಿವೃದ್ಧಿ ಪಡಿಸಿರುವ ಸೂಪರ್ ಕಂಪ್ಯೂಟರುಗಳು ಅಮೆರಿಕಾದ ಕಂಪೆನಿಗಳಾದ ಇಂಟೆಲ್.ಎನ್ವಿಡಿಯಾ ಮುಂತಾದ ಕಂಪೆನಿಗಳ ಚಿಪ್‌ಗಳನ್ನು ಬಳಸಿವೆ.ಅಮೆರಿಕಾದ ವಿಶ್ವವಿದ್ಯಾಲಯಗಳೀಗ ತಮ್ಮ ಅಗತ್ಯಗಳಿಗೆ ಸೂಪರ್ ಕಂಪ್ಯೂಟರುಗಳನ್ನೂ ಬಾಡಿಗೆಗೆ ಪಡೆದು,ಅಂತರ್ಜಾಲದ ಮೂಲಕವೇ ಸಂಪರ್ಕಿಸುವ ಕ್ಲೌಡ್ ಕಂಪ್ಯೂಂಟಿಂಗ್ ತಂತ್ರ ಬಳಸಲಾರಂಭಿಸಿವೆ.ಜಪಾನ್ ಕೂಡಾ ಸೂಪರ್ ಕಂಪ್ಯೂಟರುಗಳ ಬಗ್ಗೆ ಉತ್ಸಾಹ ಹೊಂದಿರುವ ರಾಷ್ಟ್ರವಾಗಿದೆ.
---------------------------------
ಉದಯವಾಣಿ ಡೈರಿ ಬಹುಮಾನ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ಉದಯವಾಣಿ ಡೈರಿ ಬಹುಮಾನ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಶ್ರುತಿಗ್ರಾಫಿಕ್ಸ್,ಉಡುಪಿ.
*ಕ್ಲೌಡ್ ಕಂಪ್ಯೂಟಿಂಗ್ ಅಂದರೇನು?
*ಈ ತೆರನ ಸೇವೆಯಲ್ಲಿ ಲಭ್ಯವಿರುವ ವಿವಿಧ ತೆರನ ಸೇವೆಗಳ್ಯಾವುವು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಶ್ರುತಿಗ್ರಾಫಿಕ್ಸ್‌ಗೆ ಮಿಂಚಂಚೆ ಮಾಡಿ,ವಿಷಯ:NS6 ನಮೂದಿಸಿ adooranilk@gmail.com).
(
ಕಳೆದ ವಾರದ ಸರಿಯುತ್ತರಗಳು:
*ಲೀನಸ್ ತೋರ್ವಾಲ್ಡ್
*ನೆಟ್‌ಬುಕ್ ಅಂತರ್ಜಾಲಕ್ಕೆ ಸಂಪರ್ಕಿಸಲು ಉದ್ದೇಶದಿಂದ ತಯಾರಿಸಿದ ಸಾಧನವಾದರೆ,ಲ್ಯಾಪ್‌ಟಾಪ್ ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟರ್ ಸಾಧನವಾಗಿದೆ.
ಬಹುಮಾನ ಗೆದ್ದ ಜೈದೀಪ್ ರಾವ್,ಉಡುಪಿ ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಹಿಂದೆಲ್ಲಾ ಹುಡುಗಿಯರು ತಮ್ಮ ತಾಯಂದಿರಂತೆ ಅಡುಗೆ ಮಾಡುತ್ತಿದ್ದರೆ,ಈಗಿನ ಹುಡುಗಿಯರಲ್ಲಿ ತಮ್ಮ ತಂದೆಯಂತೆ ಕುಡಿಯುವವರೂ ಇದ್ದಾರೆ...
*ಹಗರಣಗಳು ಇಷ್ಟು ಮಟ್ಟಿಗೆ ಸುದ್ದಿ ಮಾಡಿದ ನಂತರ ಭಾರತವು ಜಿ-೨೦ಗುಂಪಿನಿಂದ ಜಿ-೪೨೦ ಗುಂಪಿಗೆ ಜಾರಬಹುದು.
*ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು...
*ಕರ್ನಾಟಕದ ಮಟ್ಟಿಗೆ ಜಾಗತೀಕರಣ ಅಂದರೆ ಜಾಗ ಅತಿಕ್ರಮಣ ಅನಿಸ್ತಿದೆ...
-------------------------------------------------
ಚಿಲಿಪಿಲಿಗುಟ್ಟಿದವರಿಗೆ ಸ್ಕಾಲರ್‌‍ಶಿಪ್
ಟ್ವಿಟರಿನಲ್ಲಿ ಕಿರು ಸಂದೇಶ ಬರೆದು ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶವನ್ನು ಹೋಟೆಲ್ ಸರಪಣಿ ಉದ್ಯಮದಲ್ಲಿರುವ ಕೆ ಎಫ್ ಸಿ ವಿದ್ಯಾರ್ಥಿಗಳಿಗೆ ನೀಡಿದೆ.ತಮಗೇತಕ್ಕೆ ವಿದ್ಯಾರ್ಥಿ ವೇತನ ನೀಡಬೇಕು ಎಂದು ಈ ಸಂದೇಶ ಸುಂದರವಾಗಿ ಹೇಳಬೇಕಾಗುತ್ತದೆ.ಗೆದ್ದವರಿಗೆ ವರ್ಷಕ್ಕೆ ಐದುಸಾವಿರದಂತೆ ನಾಲ್ಕು ವರ್ಷ ವಿದ್ಯಾರ್ಥಿವೇತನ ದೊರಕುತ್ತದೆ.ಸದ್ಯ ಇದು ಯುಎಸ್ ವಿದ್ಯಾರ್ಥಿಗಳಿಗೆ ತೆರೆದಿದೆ.ಸಂದೇಶಗಳಲ್ಲಿ #KFCScholar ಎಂದು ನಮೂದಿಸುವ ಮೂಲಕ ಈ ಸಂದೇಶಗಳನ್ನು ಗುರುತಿಸಲು ಬರುತ್ತದೆ.
---------------------------------------------
ಎಕ್ಸೆಂ ಎನ್ನುವ ಹೊಸ ಅಸ್ತ್ರ
ವಿರೋಧಿ ಸೈನಿಕರು ಗೋಡೆ ಅಥವಾ ಇನ್ಯಾವುದೇ ತಡೆಯ ಹಿಂದೆ ಅಡಗಿದ್ದು,ಅವರ ಮೇಲೆ ನಿಖರವಾಗಿ ಅಕ್ರಮಣ ಮಾಡಬೇಕಿದೆಯೇ?ಅಂತಹ ಅಸ್ತ್ರವೆ ಎಕ್ಸೆಂ-25. ಅದನ್ನು ಎತ್ತ ಮತ್ತು ಎಷ್ಟು ದೂರ ಸಾಗಿ ಸಿಡಿಯಬೇಕು ಎಂದು ಪ್ರೊಗ್ರಾಂ ಮಾಡಲು ಬರುತ್ತದೆ.ಇದಕ್ಕೆ ಹೆಚ್ಚು ಸಮಯವೂ ಬೇಕಾಗದು-ಐದು ಸೆಕೆಂಡು ಸಾಕು.ಸಾಗಿ ಗುರಿಯನ್ನು ಬೇಧಿಸಲು ಇನ್ನೆರಡು ಸೆಕೆಂಡು ಬೇಕಾಗಬಹುದು.ಆದರೆ,ಸ್ಫೋಟಿಸಿದರೆ ವಿರೋಧಿಗಳ ನಾಶ ಖಚಿತ.ಇಂತಹ ಎಕ್ಸೆಂ ಅನ್ನು ಅಮೆರಿಕಾ ಅಪ್ಘಾನ್‌ನಲ್ಲಿ ಬಳಸಲಾರಂಭಿಸಿದೆ.ಸಾಮಾನ್ಯವಾಗಿ ಇಂತಹ ಕೆಲಸಕ್ಕೆ ಬಹುಶಕ್ತಿಶಾಲಿ ಸ್ಫೋಟಕಗಳನ್ನು ಬಳಸಬೇಕಾಗುತ್ತದೆ.ಆದರಿಲ್ಲಿ,ಕ್ಷಿಪಣಿಯಂತಹ ತಂತ್ರಜ್ಞಾನ ಬಳಸುವುದರಿಂದ ಹೆಚ್ಚಿನ ನಿಖರತೆ,ಗುರಿಯತ್ತ ಆಕ್ರಮಣ ಸಾಧ್ಯವಾಗುತ್ತದೆ.
 

Udayavani Unicode
Udayavani
*ಅಶೋಕ್‌ಕುಮಾರ್ ಎ