ಚೀಟಿ ಮಹಾತ್ಮೆ..

ಚೀಟಿ ಮಹಾತ್ಮೆ..

ಪರೀಕ್ಷಾ ಕೊಠಡಿ. ಸೈನ್ಸ್ ಪರೀಕ್ಷೆ ದಿನ. ಮೇಲ್ವಿಚಾರಕರು ಪ್ರಶ್ನೆಪತ್ರಿಕೆಗಳನ್ನು ಕೊಡುತ್ತಾ ಬಂದರು. ಜೀರೋದಿಂದ ನೂರು ಕಿ.ಮೀ.-ಐದೇ ಸೆಕೆಂಡುಗಳಲ್ಲಿ ಎಂದು ಬೈಕುಗಳಿಗೆ ಪ್ರಚಾರ ಮಾಡುತ್ತಾರಲ್ಲ, ಹಾಗೇ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮಕ್ಕಳ ಮುಖ ಐದೇ ಸೆಕೆಂಡುಗಳಲ್ಲಿ ಜೀರೋಗೆ ಇಳಿದಿರುತ್ತಿತ್ತು. ಬಹಳ ಟಫ್ ಇರಬೇಕು.


ಮೇಲ್ವಿಚಾರಕರು ನನ್ನ ಬಳಿ ಬಂದಾಗ ನಗುತ್ತಾ ಪ್ರಶ್ನೆಪತ್ರಿಕೆ ತೆಗೆದುಕೊಂಡೆ. ಪೂರ್ತಿ ತಯಾರಾಗಿ ಬಂದವರಿಗೆ ಯಾವುದೇ ಭಯವಿರುವುದಿಲ್ಲ . ಪ್ರಶ್ನೆ ಪತ್ರಿಕೆ ಮೇಲೆ ಕಣ್ಣಾಡಿಸುವ ಮೊದಲು ಪ್ಯಾಂಟ್‌ನ ಎಡಕಿಸೆಗೆ ಕೈಹಾಕಿ ಚೀಟಿ ತೆಗೆದು ಪ್ರಶ್ನೆ ಪತ್ರಿಕೆಯ ಅಡಿಯಲ್ಲಿ ಇಟ್ಟು ನೋಡಿಕೊಂಡು ಬರೆಯಲು ಆರಂಭಿಸಿದೆ.


ಒಂದೆರಡು ಪ್ರಶ್ನೆಗೆ ಉತ್ತರಿಸಿದ ಮೇಲೆ ಡೌಟು ಬಂದು ನೋಡಿದಾಗ ಚೀಟಿ social ಪರೀಕ್ಷೆಗೆ ಬರಕೊಂಡು ಬಂದುದು! ಅವಸರದಲ್ಲಿ ಹಿಂದಿನ ದಿನದ ಪ್ಯಾಂಟೇ ಹಾಕಿಕೊಂಡು ಬಂದಿದ್ದೆ. ಇನ್ನೇನು ಮಾಡುವುದು? ಅದನ್ನೇ ಬರಕೊಂಡು ಹೋದೆ. ಫಲಿತಾಂಶ ಬಂದಾಗ socialಗಿಂತ ಸೈನ್ಸ್‌ನಲ್ಲೇ ಮಾರ್ಕ್ಸ್ ಜಾಸ್ತಿ ಸಿಕ್ಕಿತ್ತು! (ತೂಕದ ಲೆಕ್ಕದಲ್ಲಿ ಮಾರ್ಕ್ಸ್ ಕೊಡುವ ಅಧ್ಯಾಪಕರ ಕೈಗೆ ನನ್ನ ಉತ್ತರ ಪತ್ರಿಕೆ ಸಿಕ್ಕಿರಬೇಕು).


ಆಗಿನಿಂದ ನನಗೂ ಚೀಟಿಗೂ ಅಂಟಿದ ನಂಟು ಬಿಟ್ಟು ಹೋಗೇ ಇಲ್ಲ. ಯಾವುದೇ ಕೆಲಸವಿರಲಿ, ಎಲ್ಲಿಗಾದರೂ ಹೋಗುವುದೇ ಇರಲಿ, ಮೊದಲ ಕೆಲಸ ಆದಿನದ ಕೆಲಸ, ಪರ್ಚೇಸ್, ಇತ್ಯಾದಿ ಬಗ್ಗೆ ಚೀಟಿ ಬರೆದಿಡುವುದು. ಕಿಸೆಯಲ್ಲಿ ಕಾಸಿಲ್ಲದಿದ್ದರೂ ಪರವಾಗಿಲ್ಲ, ಚೀಟಿ ಇಲ್ಲದೇ ಎಲ್ಲೂ ಹೋಗುವುದಿಲ್ಲ.


ಪ್ಯಾಂಟ್‌ನ ಎಡಕಿಸೆಯಲ್ಲಿ ಮನೆಯಾಕೆ ತರಲು ಹೇಳಿದ ಐಟಮ್‌ಗಳ ಲಿಸ್ಟ್. ಬಲಕಿಸೆಯಲ್ಲಿ ನನಗೆ ಬೇಕಾದದ್ದು. ಶರ್ಟ್‌ ಕಿಸೆಯಲ್ಲಿ ಆಫೀಸ್‌ಗೆ ಸಂಬಂಧಿಸಿದ ಚೀಟಿ. ನನ್ನ ಬಲಕಿಸೆಯ ಚೀಟಿಯ ಖರ್ಚುಗಳೆಲ್ಲಾ ಆಫೀಸಿನ ಲೆಕ್ಕದಲ್ಲಿ ಹೋಗುತ್ತದೆ. ಕಾಫಿ, ಊಟ ಇತ್ಯಾದಿಗಳೆಲ್ಲಾ ಆಫೀಸ್ ಕಸ್ಟಮರ್‌ಗಳು ನೋಡಿಕೊಳ್ಳುವರು. ಸಹೋದ್ಯೋಗಿಗಳ ಬೈಕ್, ಕಾರುಗಳಿರುವುದೇ ನನಗಾಗಿ..


ಇನ್ನು ಎಡಕಿಸೆಯ ಚೀಟಿ ಶೆಟ್ಟರ ಅಂಗಡಿಗೆ ಕೊಟ್ಟರೆ ಆಯಿತು. ಪಾಪದ ಜನ. ರೆಗ್ಯುಲರ್ ಕಸ್ಟಮರ್ ಎಂದು ಹನ್ನೊಂದು ರೂಪಾಯಿಯ ತೆಂಗಿನಕಾಯಿ ನನಗೆ ಎಂಟು ರೂ.ನಂತೆ ಲೆಕ್ಕ ಬರೆಯುವರು. ಕೊನೆಗೆ ೫೨೫೦/೫೩೦೦ ರೂ. ಆದಾಗ ಲೆಕ್ಕ ಒಪ್ಪಿಸುವರು. ಪೈಸೆ-ಪೈಸೆ ಚಕ್ ಮಾಡಿ, ೫೦೦೦ ರೂ.ಗೆ ರೌಂಡ್ ಮಾಡಿ, ಪಕ್ಕದ ಎಟಿಎಮ್‌ನಿಂದ, ಜತೆಯಲ್ಲಿರುವಾತನ(ಆಫೀಸ್ ಕಸ್ಟಮರ್) ಕಾರ್ಡ್‌ನಿಂದ ತೆಗೆಸಿ ಕೊಡುವೆನು.


ಅಂದಹಾಗೆ ಇನ್ನೊಂದು ಚೀಟಿಯಿತ್ತು. ಸಂಪದ ಸಮ್ಮಿಲನಕ್ಕೆ ಬರಲು ತಯಾರಿ ಮಾಡಿದ್ದು. ಒಂದ್ನಿಮಿಷ...ಸಿಕ್ಕಿತು. ನೀವೆಲ್ಲಾ ನನ್ನ ಫ್ರೆಂಡ್ಸ್ ಅಲ್ವಾ.. ಹೇಳುತ್ತೇನೆ.ಅದರಲ್ಲಿ-


೧. ಮಂಜು (೧/೧೨), .


೨. ನಾವಡರು(೩/೧೨)


೩. ಸಿ.ಪಿ.ಯು., ಮಾನಿಟರ್, ಗೋಣಿಚೀಲ (೫/೧೨)


೪. ರೂಟ್ ಮ್ಯಾಪ್


೫. ಲಕ್ಷ್ಮಿಚೇ. ಮಂಗಳೀಬೇರು.(೪/೧೨)


೬. ಹಾಡಿನ ಸಿ.ಡಿ., ಮಾತ್ರೆಗಳು(೫/೧೨)


೭.


೮.


ಅರ್ಥವಾಗಿರಬಹುದು. ಇಲ್ಲದಿದ್ದರೆ ಮುಂದಿನ ಪ್ರತಿಕ್ರಿಯೆಯಲ್ಲಿ ವಿವರಿಸುವೆನು.


-ಗಣೇಶ.


 

Rating
No votes yet

Comments