ಅದೊಂದು ಸಂಜೆ ನಾನು ಕಚೇರಿಯ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದೆ. ನನ್ನ ಮನಸ್ಸು ಕೆಲವು ಕಠಿಣ ಭಾವನೆಗಳ ಜಾಲದಲ್ಲಿ ಸಿಲುಕಿ ತೊಳಲಾಡುತ್ತಿತ್ತು. ಬದುಕಿನ ಕಷ್ಟಗಳನ್ನು ಎದುರಿಸುತ್ತ ಸೋತೆನೆಂಬ ಭಯದ ಭಂಗಿಯಲ್ಲಿ ಶುನ್ಯವನ್ನೇ ದಿಟ್ಟಿಸುತ್ತ ನಿಂತೆ. ಈ ಬದುಕೇ ಸಾಕು, ಇನ್ನು ಜೀವನ ಬೇಡವೆಂಬ ಬೇಸರದಿಂದ ಬೆಂದು ಬಳಲುತ್ತಿದ್ದೆ !!
ಆಗ ನನ್ನ ಅಂತರಂಗದಲ್ಲಿ ಒಂದು ಸಣ್ಣ ಧ್ವನಿಯೊಂದು ಕೇಳಿಸತೊಡಗಿತು. ಹಾಗೆಯೇ ಮನ ಕೊಟ್ಟು ಆಲಿಸಿದೆ. ಆ ಧ್ವನಿ ಹೀಗಿತ್ತು:
"ಅಳಬೇಡ ಮಗು!! ನಾನು ಯಾವಾಗಲೂ ನಿನ್ನ ಜೊತೆಯಲ್ಲಿ ಇದ್ದೆ, ಇರುತ್ತೇನೆ. ಧೈರ್ಯದಿಂದ ಮುನ್ನುಗು, ಹೆದರಬೇಡ! ನಾನು ಇದ್ದೇನೆ. ನಿನ್ನ ಎಲ್ಲ ಮಾತಿನಲ್ಲಿ, ಕೃತಿಯಲ್ಲಿ, ನಡೆ ನುಡಿಗಳಲ್ಲಿ ನಾನು ಶಾಶ್ವತವಾಗಿ ನೆಲೆಸಿದ್ದೇನೆ. ಈ ಪ್ರಪಂಚದಲ್ಲಿ ಕಷ್ಟ, ನೋವು, ನಲಿವು ಎಲ್ಲ ನನ್ನ ಮಾಯೆ ಮತ್ತು ತಾತ್ಕಾಲಿಕ ಮಾತ್ರ. ನಿನ್ನ ಕರ್ಮವನ್ನು ಮಾಡುತ್ತ ಹೋಗು, ಬೇರೆ ಎಲ್ಲ ಚಿಂತೆಗಳನ್ನು ನನಗೆ ಬಿಟ್ಟು ಬಿಡು ಮಗು!" ಎಂಬ ದಿವ್ಯ ವಾಣಿಯು ನನ್ನನ್ನು ಆವರಿಸಿತು. ಆನಂತರ ನನ್ನ ಮನಸ್ಸು ಹೃದಯಗಳು ದಿವ್ಯವಾದ ಶಾಂತಿಯಲ್ಲಿ ನಲಿಯುವಂತೆ ತೋರಿತು. ನನ್ನ ಎಲ್ಲ ಕಷ್ಟಗಳು ಮುಗಿದು ಏನು ಇಲ್ಲವಂತೆ ಭಾವಿಸಿತು !!
ಮನಸ್ಸಿಗೆ ಇಂಪಾದ, ಹೃದಯಕ್ಕೆ ತಂಪಾದ ಈ ಮಧುರ ವಾಣಿ 'ಆ ಪರಮಾತ್ಮ, ಭಗವಂತ, ಸರ್ವಶಕ್ತನಾಗಿರುವ "ದೇವರು" ಎಂದು ನಾವು ಕರೆಯುವ ವಿಶ್ವ ಶಕ್ತಿಯೇ' ! ಎಂದು ನನ್ನ ಬುದ್ಧಿ-ಭಾವನೆಗಳಿಗೆ ಅರಿವಾಯಿತು. ಈ ಮಧುರ ಕ್ಷಣದ ಸವಿಯನ್ನು ತೋರಿಸಿ, ನನ್ನ ಜೀವನವನ್ನು ವಿಕಾಸಗೊಳಿಸಿದ ಆ ಪರಮಾತ್ಮನಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು !!!
|| ಹರಿ: ಓಂ ||