ಯದಾ ಯದಾಹಿ ಧರ್ಮಸ್ಯ... : ಕಲಿಕಾ ಪ್ರಕ್ರಿಯೆಯ ಅವನತಿ ಮತ್ತು ಪುನರುಜ್ಜಿವನ.
ಪ್ರೊ. ಬಾಲಗಂಗಾಧರ
Degeneration of a Learning Process and its Rejuvenation
Prof. Balagangadhar
ಯದಾ ಯದಾಹಿ ಧರ್ಮಸ್ಯ ... ಸಂಭವಾಮಿ ಯುಗೇಯುಗೇ : ಭಗವದ್ ಗೀತೆಯ ಈ ಶ್ಲೋಕ ಬಹಳಷ್ಟು ಜನರಿಗೆ ಚಿರಪರಿಚಿತ. ಈ ಮಂದಿನ ಚರ್ಚೆಯ ಸಲುವಾಗಿ ಈ ಶ್ಲೋಕದ ಒಂದು ಕರಡು ಭಾಷಾಂತರವನ್ನು ಮಾಡಲು ನನಗೆ ಅನುಮತಿ ನೀಡಿ.
“ಯಾವಾಗ ಮತ್ತು ಎಲ್ಲೆಲ್ಲಿ ಧರ್ಮದಲ್ಲಿ ಏರುಪೇರುಗಳು ವ್ಯಕ್ತಗೊಂಡು, ಅಧರ್ಮವು ಮೆರೆಯತೊಡಗುತ್ತದೆಯೋ (ಪ್ರತಿ ಯುಗದಲ್ಲೂ ಪುನಾರಾವರ್ತಿತವಾಗುವ ವಿದ್ಯಮಾನವಿದು), ಆಗ ಶಿಷ್ಟ ರಕ್ಷಣೆ ಮತ್ತು ದುಷ್ಟರ ನಿಗ್ರಹಕ್ಕಾಗಿ, ಹಾಗೂ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಸ್ವಯಂ ವ್ಯಕ್ತವಾಗುತ್ತೇನೆ.”
ಪ್ರತಿ ಯುಗದಲ್ಲಿಯೂ ಕೂಡ ಕೃಷ್ಣನ ಅವತಾರ ಸಂಭವಿಸುತ್ತದೆ, ಅದು ನಮ್ಮ ಯುಗದಲ್ಲಿಯೂ ಆಗಿರಬಹುದು, ಅಥವಾ ಮುಂದಿನ ದಿನಗಳಲ್ಲಿ ಘಟಿಸಬಹುದು ಇತ್ಯಾದಿ, ಇದು ನಮಗೆಲ್ಲಾ ಕಲಿಸುತ್ತಾ ಬಂದಿರುವ ಹಾಗೂ ಈ ಶ್ಲೋಕವನ್ನು ವ್ಯಾಖ್ಯಾನಿಸುವ ಒಂದು ಪ್ರಸಿದ್ಧ ಮತ್ತು ಪ್ರಮುಖ ರೀತಿ.
ಆದರೆ, ನೀವು ಇಪ್ಪತ್ತೊಂದನೆಯ ಶತಮಾನದ ದೃಷ್ಟಿಕೋನದಿಂದ ಈ ಶ್ಲೋಕವನ್ನು ಮತ್ತೊಮ್ಮೆ ಓದಿದರೆ ಇಲ್ಲೊಂದು ಎದ್ದು ಕಾಣುವ ಹಾಗೂ ಬೆಕ್ಕಸ ಬೆರಗಾಗುವಂತೆ ಮಾಡುವ ವಿಚಾರವಿದೆ. ಈ ವಿಚಾರವನ್ನು ನಾನು ನನ್ನಪದಗಳಲ್ಲಿ ನಿರೂಪಿಸುವವನಿದ್ದೇನೆ; (ಇದು ಶ್ಲೋಕಗಳ ಕೇವಲ ಒಂದು ಹೊಸ ವ್ಯಾಖ್ಯಾನವಷ್ಟೆ ಅಲ್ಲ): ನೈತಿಕವಾಗಿರಲು *ಕಲಿಯುವ* ಒಂದು ಪ್ರಕ್ರಿಯೆ ಇದೆ, ಹಾಗೂ ಈ ಪ್ರಕ್ರಿಯೆಯು ಸಮಾಜದಲ್ಲಿರುವ ಕಲಿಕಾ ಪ್ರಕ್ರಿಯೆ ಎಂಬುದು ಒಂದು ಸಿದ್ಧಾಂತ. ಇಂತಹ ಒಂದು ಕಲಿಕಾ ಪ್ರಕ್ರಿಯೆಯು ಕ್ರಮೇಣ ಅವನತಿಯ ದಾರಿ ಹಿಡಿಯಬಹುದು ಅಥವಾ ಹಿಡಿಯುತ್ತದೆ, ಮತ್ತು ಇದೊಂದು ಅನಿವಾರ್ಯ ಸಂಗತಿ ಎಂಬುದು ಎರಡನೇಯ ಸಿದ್ಧಾಂತ. ತಾರ್ಕಿಕವಾಗಿ, ಈ ಎರಡು ಸಿದ್ದಾಂತಗಳಿಂದ ಹೊರಡುವ ವಿಚಾರವಿದು: ಯಾವಾಗೆಲ್ಲ ಸಾಮಾಜಿಕ ಕಲಿಕಾ ಪ್ರಕ್ರಿಯೆಯು ಅವನತಿ ಎಡೆಗೆ ಸಾಗುತ್ತದೆಯೋ, ಆಗ ಅವನತಿ ಒಂದು ಸಂದಿಗ್ಧ ಘಟ್ಟದಲ್ಲಿ, ಸಮಾಜದ ಮಟ್ಟದಲ್ಲಿ, ಕೆಲವು ಹೊಸ ಪ್ರಕ್ರಿಯೆಗಳು ಹುಟ್ಟಿಕೊಂಡು, ಈ ಕಲಿಕಾ ಪ್ರಕ್ರಿಯೆಯನ್ನು (ನೈತಿಕವಾಗಿರಲು, *ಕಲಿಯುವ* ಪ್ರಕ್ರಿಯೆ) ಪುನರುಜ್ಜೀವನಗೊಳಿಸುತ್ತವೆ.
ಭಾರತದಲ್ಲಿರುವ ನೈತಿಕ ಕಲಿಕೆಯ ಸ್ವರೂಪದ ಬಗ್ಗೆ ಇದೊಂದು ಅದ್ಭುತ ಹೇಳಿಕೆ (ಸದ್ಯಕ್ಕೆ ಇದರ ವ್ಯಾಪ್ತಿಯ ಮಿತಿಯನ್ನು ಭಾರತದ ಮಟ್ಟಿಗಷ್ಟೆ ಇಟ್ಟುಕೊಳ್ಳೋಣ). ಸಹಜವಾಗಿಯೆ ಅವರು (ಗೀತೆಯನ್ನು ಬರೆದ ಲೇಖಕನು/ಲೇಖಕರು) ತಮಗೆ ಪರಿಚಿತವಿದ್ದಂತಹ ಕೃಷ್ಣ ಮತ್ತು ಅವನ 'ಅವತಾರಗಳ' ಬಗೆಗಿನ ರೂಪಕಗಳನ್ನು ಬಳಸಿಕೊಂಡು ಈ ಮೇಲಿನ ಒಳನೋಟವನ್ನು ನಿರೂಪಿಸಿದ್ದಾರೆ. ಈ ರೂಪಕಗಳು ನಮ್ಮ ಕೈಕಟ್ಟಿ ಹಾಕಬೇಕಿಲ್ಲ. ಆದರೆ ಸಮಾಜದ ಸ್ವರೂಪದ ಬಗ್ಗೆ ಅವರು ನೀಡುವ ಈ ಒಳನೋಟಗಳು ಮಾತ್ರ ನಮ್ಮನ್ನು ಒಮ್ಮೆ ಅಲ್ಲಾಡಿಸಿ ಎಚ್ಚರಗೊಳಿಸಬೇಕು. ಅವರು ಹೇಗೆ ಮತ್ತು ಎಲ್ಲಿ ಈ ಒಳನೋಟಗಳನ್ನು ಕಂಡುಕೊಂಡರು? ಈ ವಿಚಾರಗಳನ್ನು ಚರ್ಚಿಸಿದ್ದಾದರೂ ಹೇಗೆ? ಯಾವ ರೀತಿಯ ಸಂಶೋಧನೆಯಿಂದ ಅವರು ಅದ್ಭುತವಾದ ಈ ಒಳನೋಟವನ್ನು ಪಡಕೊಂಡರು? ನಾವು ಹೆಸರಿಸಬಹುದಾದ (ನೈತಿಕ ಕಲಿಕೆಯ ಬಗೆಗಿರುವ ) ಮನಶ್ಯಾಸ್ತ್ರ ಅಥವಾ ಸಮಾಜಶಾಸ್ತ್ರದ ಯಾವ್ಯದೇ ಸಿದ್ದಾಂತಗಳಿಗಿಂತ ಈ ಒಳನೋಟವು, ಒಂದು ವೇಳೆ ಅದು ತಪ್ಪಾಗಿದ್ದರೂ ಸಹ, * ಹಲವು ಜ್ಯೋತಿರ್ವಷಗಳಷ್ಟು* ಮುಂದಿದೆ.
ಈ ಎಲ್ಲಾ ಕಾರಣಗಳಿಂದಾಗಿ, ಕೇವಲ ಈ ಎರಡು ಶ್ಲೋಕಗಳು ನೈತಿಕ ಕಲಿಕೆಯ ಸ್ವರೂಪದ ಕುರಿತು ಒಂದು ಉತ್ಕೃಷ್ಟ ವೈಜ್ಞಾನಿಕ ಉಹಾಸಿದ್ದಾಂತವನ್ನು (hypothesis) ನಿರೂಪಿಸುತ್ತವೆ. ಯಾವ ವಿಚಾರವನ್ನು (ಉದಾಹರಣೆಗೆ, ನಾನು ಮೇಲೆ ಗುರುತಿಸಿದ ಎರಡು ಸಿದ್ಧಾಂತಗಳು) ಈ ಶ್ಲೋಕಗಳು ಪ್ರಮಾಣಿತ ಸಿದ್ಧಾಂತವೆಂದು ಪರಿಗಣಿಸುತ್ತವೆಯೋ, ಆ ವಿಚಾರದ ಅಸ್ತಿತ್ವದ ಬಗ್ಗೆ ಪಾಶ್ಚಿಮಾತಯ ಸಂಸ್ಕೃತಿಗೆ ಸಣ್ಣ ಕಲ್ಪನೆ ಕೂಡಾ ಇಲ್ಲವಲ್ಲ. ಹೇಗೆ ಮತ್ತು ಏತಕ್ಕಾಗಿ ಅಷ್ಟೊಂದು ಸಾವಿರ ವರ್ಷಗಳ ಕೆಳಗೆ ಭಾರತೀಯರು ಈ ವಿಚಾರಗಳ ಬಗ್ಗೆ ಯೋಚಿಸಿದರು? ನಿಜವಾಗಿಯು ರುದ್ರಾ, ನಾನು ಮೂಕವಿಸ್ಮಿತನಾಗಿದ್ದೇನೆ
ಯದಾ ಯದಾಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಮ್ (ಭಗವದ್ಗೀತಾ 4: 7)
ಪರಿತ್ರಾಣಾಯ ಸಾಧೂನಾಂ
ವಿನಾಶಯ ಚ ದುಷ್ಕೃತಾಮ್
ಧರ್ಮಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ (ಭಗವದ್ಗೀತಾ 4: 8)