ನೆನಪುಗಳೇ ಹೀಗೆ

ನೆನಪುಗಳೇ ಹೀಗೆ

ಬರಹ

ನೆನಪುಗಳೇ ಹೀಗೆ
ಹುಣಸೆ ಚಿಗುರಿನ ಹಾಗೆ
ಹುಳಿಯಾದರೂ ರುಚಿ
ಬಿಡಲಾದೀತೆ ಅಭಿರುಚಿ
ಎಳೆಯ ದಿನಗಳು
ಮಳೆಯ ಹನಿಗಳು
ಮಣ್ಣ ವಾಸನೆ
ಮರಳಿನರಮನೆ
ನೆನಪಾಯಿತೇ ಗೆಳತಿ

ನೆನಪುಗಳೇ ಹೀಗೆ
ಹುಣಸೆ ಹೂವಿನ ಹಾಗೆ
ಚಿಕ್ಕದಾದರೂ , ಚೆಂದ
ಮರೆಯಾದೀತೇ ಕಣ್ಣಿಂದ
ಸೋಲು ಗೆಲುವುಗಳು
ನೋವು ನಲಿವುಗಳು
ಬಣ್ಣ ಭಾವನೆ
ಕಣ್ಣ ಸೂಚನೆ
ನೆನಪಾಯಿತೇ ಗೆಳತಿ

ನೆನಪುಗಳೇ ಹೀಗೆ
ಹುಣಸೆ ಕಾಯಿಯ ಹಾಗೆ
ಹೆಚ್ಚು ಹುಳಿಯಾದರೂ ಕಾಯಿ
ಬೇಡವೆನ್ನುವುದೇ ಬಾಯಿ
ಬೆಳೆದ ಜೀವಗಳು
ಮಿಡಿವ ಮನಸುಗಳು
ಸಣ್ಣ ತೋರಣ
ಹಣ್ಣ ಹೂರಣ
ನೆನಪಾಯಿತೇ ಗೆಳತಿ

ನೆನಪುಗಳೇ ಹೀಗೆ
ಹುಣಸೆ ಹಣ್ಣಿನ ಹಾಗೆ
ಹಳತಾದರೂ ಬೇಕೆ ಬೇಕು
ಹೇಳಲಾದೀತೇ 'ಇನ್ನು ಸಾಕು'
ಅನುಭವಗಳು
ಅನುಭಾವಗಳು
ದಾರಿದೀಪ
ಪ್ರೆಮರೂಪ.
ನೆನಪಾಯಿತೇ ಗೆಳತಿ

ನೆನಪುಗಳೇ ಹೀಗೆ
ಹುಣಸೆ ಮರದ ಹಾಗೆ
ಇದ್ದಷ್ಟು ವರ್ಷವೂ ರುಚಿ
ಸತ್ತ ಮೇಲೂ ರುಚಿ
ಹಸಿರ ಬದುಕಾಟ
ಉಸಿರ ಹುಡುಕಾಟ
ನೆನಪಿದೆಯೇ ಗೆಳತಿ