ಪ್ರೇತ ನಂಬದಿದ್ದರೆ..-ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೮

ಪ್ರೇತ ನಂಬದಿದ್ದರೆ..-ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೮

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೮

(೧೧೫)

     ಅನುಶ್ರೀಯನ್ನೇ ದಿಟ್ಟಿಸಿ ನೋಡತೊಡಗಿದೆ. ರಾತ್ರಿಯೆಲ್ಲ ನಿದ್ರೆ ಇಲ್ಲದುದರಿಂದ, ಈಗ ಬೆಳಗಿನ ಜಾವ ನಾಲ್ಕೂವರೆಗೆ ಕಣ್ಣೆಳೆಯತೊಡಗಿದಂತಾಯಿತು. ಆಕೆಯ ದೇಹದ ಮೇಲಿನರ್ಧ ಭಾಗವು ಕಪ್ಪು ಶಾಲಿನಲ್ಲಿ ಪೂರ್ಣವಾಗಿ ಆವೃತ್ತವಾಗಿತ್ತು. ಇದು ಶಾಂತಿನಿಕೇತನದ ಹುಡುಗಿಯರ ಶೈಲಿ. ಆಕೆ ಕನ್ನಡಕದ ಒಳಗಿನ ದೊಡ್ಡ ಕಣ್ಣುಗಳಿಂದ ನನ್ನ ಮೂಲಕ ನನ್ನ ಹಿಂದಿರುವುದನ್ನು ನೋಡುತ್ತಿರುವಂತೆ ಭಾಸವಾಯಿತು. ಆಕೆ ಹೇಳಿದ್ದನ್ನು--ಪ್ರಕ್ಷು ಸತ್ತು ಹತ್ತುವರ್ಷವಾಯಿತು ಎಂಬ ವಿಷಯ--ಎಷ್ಟೇ ನಂಬಿಬಿಡಬೇಕೆಂದು ಅಂದುಕೊಂಡರೂ, ನನಗೆ ನಗುವಷ್ಟೇ ಬರತೊಡಗಿತು.

 

"ನೀನು ದೆವ್ವಗಳನ್ನು ನಂಬುತ್ತೀಯ ಅನುಶ್ರೀ?" ಎಂದೆ. ಆಗ ಯಾವ ಧ್ವನಿಯಲ್ಲಿ ಹಾಗೆ ಕೇಳಿದೆನೋ ಈಗ ನೆನಪಿಲ್ಲ.

"ಏನು ನಿನ್ನ ಮಾತಿನರ್ಥ. ನಾನೇ ಕಣ್ಣಾರೆ ಹತ್ತುವರ್ಷದಿಂದಲೂ, ಇಂತಹ ಪ್ರಸಂಗಗಳಲ್ಲಿ ಪ್ರಕ್ಷುವನ್ನು, ಆತ ಸತ್ತ ಮೇಲೆ ನೋಡುತ್ತಲೇ ಬಂದಿದ್ದೇನೆ. ಈಗಲೂ ದೆವ್ವವೆಂಬುದನ್ನು ನಂಬದಿದ್ದರೆ ಅಭಾಸ, ಅಬ್ಸರ್ಡ್ ಅನ್ನಿಸುವುದಿಲ್ಲವೆ", ಎಂದು ಹರಿತವಾಗಿ ಪ್ರತಿಕ್ರಿಯಿಸಿದಳು.

"ಓಕೆ. ಪ್ರಕ್ಷು ಸತ್ತಿದ್ದಾನೆ ಎಂಬುದು ನಿಜ ಅಂದುಕೊಳ್ಳೋಣ. ಆತ ಸತ್ತ ಮೇಲೆ ನೀನು ಆತನನ್ನು ಎಂದಾದರೂ ಮಾತನಾಡಿಸಿದ್ದೀಯ?"

"ಇಲ್ಲ"ವೆಂಬಂತೆ ತಲೆಯಾಡಿಸಿದಳು.

"ಆತನನ್ನು, ಅಥವ ಆತನ ಪ್ರೇತವನ್ನು ಕಂಡಾಗ ಆತನನ್ನು ಅಥವ ಆತನ ಪ್ರೇತವನ್ನು ಮುಟ್ಟಿದ್ದೀಯ?"

"ಪ್ರೇತ ಗಾಳಿಯಲ್ಲವೆ. ಅದನ್ನು ಭೌತಿಕವಾದ ವಸ್ತುವನ್ನು ಮುಟ್ಟುವಂತೆ ಮುಟ್ಟಲಾದೀತೆ ಈ ಮುಟ್ಟಾಳಿಗೆ?"

"ಹಾಗಿದ್ದರೆ ಪ್ರಕ್ಷು ಪ್ರೇತ ಎಂದು ಹೇಗೆ ಹೇಳುತ್ತೀಯ?"

"...

"ಆತ ಸತ್ತದ್ದು ಹೇಗೆ, ಸ್ವಲ್ಪ ವಿವರಿಸು? ನಿನ್ನನ್ನು ಹೊರತುಪಡಿಸಿ ಬೇರೆ ಯಾರಿಗೆ ಗೊತ್ತು ಆತನ ಸಾವಿನ ಬಗ್ಗೆ?"

 "ಆತನ ಶವವನ್ನು ನಾನು ನೋಡಲಿಲ್ಲ. ಆತ ಸತ್ತ ಸುದ್ಧಿ ಸಿಕ್ಕಿತು ಅಷ್ಟೇ. ನನಗೆ ಗೊತ್ತಿರುವಂತೆ ಆತ ಸತ್ತದ್ದನ್ನು ನೋಡಿದವರನ್ನು ಇಲ್ಲಿಯವರೆಗೂ ನಾನು ಭೇಟಿ ಮಾಡಿಲ್ಲ", ಎಂದಳಾಕೆ

"ಸ್ವಲ್ಪ ವಿವರವಾಗಿ ತಿಳಿಸು"

"ಆತ ಇಜಿಪ್ಟಿಗೆ ಹೋಗಿದ್ದಾಗ, ಪಿರಮಿಡ್ಡನ್ನು ನೋಡುತ್ತಿದ್ದಾಗ, ಅದರೆ ಒಂದು ಬಂಡೆ ಉರುಳಿ ಆತನ ಮೇಲೆ ಬಿದ್ದು ಆತ ಸತ್ತನೆಂದು ಸುದ್ಧಿ ಬಂದಿತ್ತು"

"ಆಮೇಲೆ?"

"ನೆನಪಾಗುತ್ತಿಲ್ಲ"

"ಈಗ ನೆನಪಾಗುತ್ತಿಲ್ಲವೋ, ಅಥವ ಆ ಸುದ್ಧಿಯನ್ನು ಅರಿತ ನಂತರ ’ಏನೂ ನಡೆಯಲಿಲ್ಲವೊ’?"

"ಏನು ನಿನ್ನ ಮಾತಿನ ಅರ್ಥ?" ಎಂದು ಗಂಭೀರಳಾದಳು.

"ಏನಿಲ್ಲ. ಆತ ನಿಜವಾಗಿಯೂ ಸತ್ತಿದ್ದಾನೋ ಅಥವ ಇಲ್ಲಿ  ಮಾತ್ರ ಇಲ್ಲವೊ?"

ಆಕೆ ಒಂದು ಕ್ಷಣ ಗಾಭರಿಗೊಂಡಳು.

"ಆತ ಸತ್ತಿರುವುದಕ್ಕೂ ಅಸ್ತಿತ್ವದಲ್ಲಿಲ್ಲದಿರುವುದಕ್ಕೂ ಏನಾದರೂ ವ್ಯತ್ಯಾಸವಿದೆಯ? ಆತನಿಲ್ಲದೆ ಎಂಥಾ ಹಿಂಸೆ ಅನುಭವಿಸಿದ್ದೀನಿ ಎಂಬುದು ನನಗಷ್ಟೇ ಗೊತ್ತು ಅನಿಲ್" ಎಂದಳು.

"ಇಷ್ಟೆಲ್ಲ ಓದಿಯೂ, ನೀನೂ ದೆವ್ವಪ್ರೇತಗಳನ್ನು ನಂಬುತ್ತೀಯ? ಒಬ್ಬರು ಇಲ್ಲದಿರುವುದಕ್ಕೂ, ಇಲ್ಲವಾಗುವುದಕ್ಕೂ ವ್ಯತ್ಯಾಸವಿರುವುದಿಲ್ಲವೆ? ಇದ್ದೂ ಇಲ್ಲದಿರುವುದು, ಇಲ್ಲವಾದಾಗಲೂ ನಮ್ಮಲ್ಲೇ ಉಳಿದುಕೊಳ್ಳುವುದಕ್ಕೂ ತದ್ವಿರುದ್ಧವಾದುದಲ್ಲವೆ?" ಎಂದು ಆ ಕ್ಷಣ ನನಗನ್ನಿಸಿದ್ದು, ಮುಂದೆ ಸುಮಾರು ತಿರುವುಗಳನ್ನು ಪಡೆದುಕೊಂಡ ವಾಕ್ಯಗಳನ್ನು ನುಡಿದುಬಿಟ್ಟೆ!

(೧೧೬)

ಅನುಶ್ರೀ ಸ್ಥಿರವಾಗಿ ನಿಂತಿದ್ದಳು. ಎಷ್ಟು ಸ್ಥಿರವೆ೦ದರೆ ಪಕ್ಕದಲ್ಲಿದ್ದ ಗಾಂಧಿ ಶಿಲ್ಪಕ್ಕು ಆಕೆಗೂ ವ್ಯತ್ಯಾಸವೇ ಇಲ್ಲವೇನೋ ಎಂಬಷ್ಟು. ಬೆಳಕು ಕ್ರಮೇಣ ಹೆಚ್ಚುತ್ತಿತ್ತು.

"ಏನನ್ನೋ ಮಾತನಾಡಬೇಡ ಅನಿಲ್. ಎಲ್ಲವು ಗೊಂದಲಮಯವೆನಿಸುತ್ತಿದೆ. ನೀನು ಹೇಳಿದ್ದನ್ನು ಆಳವಾಗಿ ಯೋಚಿಸಬೇಕಿದೆ. ಅಂದಹಾಗೆ ನನ್ನ ನೋಡಿದರೆ ನಿನಗೆನೆನ್ನಿಸುತ್ತಿದೆ? ಈಗ ಎಲ್ಲವೂ ಅರ್ಥವಾಗುತ್ತಿದೆ. "ಆರನೇ ಇಂದ್ರಿಯ" ಆಂಗ್ಲ ಸಿನೆಮ ನೋಡಿದ್ದಿಯ? ಹಾಗಾಯಿತು ನನ್ನ ಪರಿಸ್ಥಿತಿ" ಎಂದು, ಏನು ಮಾತನಾಡಿದಳು ಎಂಬುದು ತಿಳಿವ ಮುನ್ನವೇ ಸೈಕಲ್ ಹತ್ತಿಕೊಂಡು, ತುಳಿಯುತ್ತಾ, ಮೂರು ಆಯಾಮದ ಆಕಾರದಿಂದ ಎರಡು ಆಯಾಮದ ಆಕಾರವಾದಂತಾಗಿ, ಆಕೆಯ ದೇಹ ಮತ್ತು ಸೈಕಲ್ಲು ಎರಡರ ನಡುವೆ ಯಾವುದೇ ತೆರನಾದ ವ್ಯತ್ಯಾಸವೂ ಮಾಯವಾದಂತಾಗಿ, ಕ್ರಮೇಣ ಆಕೆ, ಸೈಕಲ್ಲು, ನೆಲ, ಪಕ್ಕದ ಕಟ್ಟಡ, ಮರಗಿಡಗಳಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲದಂತಾಗಿಬಿಟ್ಟಿತು.  
ಏನೋ ಹೊಳೆದಂತಾಗಿ ಆಗಷ್ಟೇ ಮುಗಿದ ರಾತ್ರಿಯ ಘಟನೆಗಳನ್ನು ಈಗಷ್ಟೇ ಅನುಸರಿಸಿದ ಬೆಳಗಿನಲ್ಲಿ ಮೆಲುಕು ಹಾಕತೊಡಗಿದೆ. ಮೊದಲ ವಿಚಿತ್ರವೆಂದರೆ ನನಗೆ ತಿಳಿಯದೆ ಹೋದದ್ದು ಯಾವುದನ್ನು ಪ್ರಕ್ಷು ಅಥವ ಅನುಶ್ರಿ ಮಾತನಾಡಿರಲಿಲ್ಲ. ಅವರುಗಳು ಕೊಟ್ಟ ಸಿನೆಮಾಗಳ, ಕಲಾಕೃತಿಗಳ, ಕಲಾ ವಿಶ್ಲೇಷಣೆಗಳ ಉದಾಹರಣೆಗಳೆಲ್ಲ ನನಗೆ ತಿಳಿದದ್ದೇ ಆಗಿದ್ದವು! ಮತ್ತು ಈ ಅರಿವಿನಲ್ಲೇ ಈ ಎಲ್ಲ ನಿಗೂಡಗಳ ಪರಿಹಾರ ಅಡಗಿರುವಂತೆ ಕಂಡಿತು.

  ಏನಾದರಾಗಲಿ ಎಂದು ನಿದ್ರೆಯಿಂದ ಎದ್ದುಬಿಡೋಣ ಅನ್ನಿಸಿತು. ಇಂತಹ ಎಷ್ಟು ಗಟನೆಗಳನ್ನು ಸಿನೆಮ, ಕಥೆಗಳಲ್ಲಿ ಓದಿಲ್ಲ ಎಂಬ ಅನ್ನಿಸಿಕೆಯು ಸಹ ಕ್ಲಿಷೆಯೇ ಅನ್ನಿಸತೊಡಗಿ, ಕ್ರಮೇಣ ಹಾಸ್ಟೆಲ್ಲಿಗೆ ಹೋಗುವ ದಾರಿಯಲ್ಲಿ ಚಹಾ ಸೇವಿಸಿದೆ--ಅದರ ರುಚಿಯಿಂದಾದರು ಆ ರಾತ್ರಿ ನಿಜವಾದಿತೆ ಎಂಬ ಆಸೆಯಿಂದ.

ಬೆಳಿಗ್ಗೆ ಹತ್ತರವರೆಗೆ ನಿದ್ರೆ ಮಾಡಿದೆ, ಹನ್ನೊಂದರ ಸಮಯಕ್ಕೆ ಎಂ.ಎ. ವಿದ್ಯಾರ್ಥಿಗಳ ಕೃತಿಗಳನ್ನು ಮೌಲ್ಯಮಾಪನ ಮಾಡಲು ಬಂದೆ, ಮದ್ಯಾನ ಊಟದ ಸಮಯದವರೆಗೆ ಬ್ಯುಸಿಯಾಗಿದ್ದೆ. ಆಮೇಲೆ ತುಂಬಾ ಬಿಸಿಯಾಗಿಹೊದೆ. ಸಂಜೆಗೆ ಡೀರ್ ಪಾರ್ಕ್ ರೆಸಾರ್ಟಿಗೆ ಪಾರ್ಟಿಗೆ ಹೋದೆ ಸಹವರ್ತಿಗಳು ಹಾಗು ಸಹ ಉಪಾದ್ಯಾಯರುಗಳೊಂದಿಗೆ. ಕಿರಿಕ್ ಮಾಡುವ ಗುರುಗಳನ್ನೆಲ್ಲ ದೂರ ಇರಿಸಿಬಿಟ್ಟಿದ್ದೆವು ಪಾರ್ಟಿಯಿಂದ. ಹೆಚ್ಚೂಕಡಿಮೆ ಒಂದೆ ವಯಸ್ಸಿನ ಉಪಾದ್ಯಾಯರುಗಳು ಅಲ್ಲಿ ಸೇರಿದ್ದವು.
"ನಿನ್ನೆ ರಾತ್ರಿ ಪ್ರಕ್ಷು ಆನಂತರ ಅನುಶ್ರಿ ಸಿಕ್ಕಿದ್ದರು" ಎಂದೆ ಪ್ರಾಸಂಗಿಕವಾಗಿ.
ಎಲ್ಲ ಸದ್ದು ನಿಂತಂತಾಯಿತು.
"ಎಲ್ಲಿ? ಕಲಾಭವನದಲ್ಲಿ ತಾನೇ?" ಎಂದ ಶೌಮಿಕ್ ಚಟ್ಟೋಪಾಧ್ಯಾಯ.
"ಹೌದು" ಎಂದೆ.
ಎಲ್ಲರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಶೌಮಿಕ್ ಮುಂದುವರೆಸಿದ.
"ಪ್ರಕ್ಷುವನ್ನು ನೀನು ಭೇಟಿ ಮಾಡಿದ್ದರಲ್ಲಿ ಆಶ್ಚರ್ಯವಿಲ್ಲ. ನಾವೆಲ್ಲರೂ ಒಂದಲ್ಲ ಒಂದು ಸಲ ಭೇಟಿ ಮಾಡಿದ್ದೇವೆ. ಆದರೆ ಪ್ರಕ್ಷುಬ್ ದನ ಬಗೆಗಿನ ಸಂಗತಿಯೊಂದನ್ನು ನಂಬಲು ನಿನಗೆ ಕಾಲಾವಕಾಶ ಬೇಕಾಗುತ್ತದೆ. ೧೯೭೦ರ ದಶಕದಲ್ಲಿ ನಾವುಗಳಿನ್ನೂ ಶಾಲಾ ಮಕ್ಕಳಾಗಿದ್ದಾಗ, ಹಿಪ್ಪಿಗಳು ಜಗತ್ತಿನ ಬಗ್ಗೆ ನಮ್ಬಿದ್ದೇನು ಗೊತ್ತೇ? ೧೫೦೦ ಕ್ರಿಸ್ಥಶಕದಲ್ಲಿ, ೨೦೦೦ ಕ್ರಿ.ಶ. ದಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಕೆಲವರು ನಂಬಿ ತಮ್ಮ ಮನೆ ಮಟಗಳನ್ನು ಗುಡಿ ಗೋಪುರಗಳಿಗೆ ದಾನಮಾಡಿ ಅನ್ಯಗ್ರಹ ಜೀವಿಗಳು ತಮ್ಮನ್ನು ಕರೆದೊಯುತ್ತಾರೆ ಅಂತ ಕಾದುಕುಳಿತಿರಲಿಲ್ಲವೇ ಹಾಗಾಯಿತಿದು."
"ಏನು ನೀನು ಹೇಳುತ್ತಿರುವುದು?"
"ಪ್ರಕ್ಷುಬ್ ದಾ ಎಂಬ ವ್ಯಕ್ತಿ, ನಾವು ನಿನೆಲ್ಲ ೧೯೯೨ರವರೆಗೆ ಮಾತನಾಡಿಸಿ ಒಡನಾಡಿದ ವ್ಯಕ್ತಿ ಎಂದೊ ಆಸ್ತಿತ್ವದಲ್ಲೇ ಇರಲಿಲ್ಲ."
"ಮತ್ತೆ ಅನುಶ್ರೀ ಹೇಳಿದಳು ಆತ ಸತ್ತು ಹತ್ತು ವರ್ಷವಾಯಿತು ಎಂದು!"
"ಆತನಲ್ಲ ಆಕೆ. ಆಕೆ ಆತ್ಮಹತ್ಯೆ ಮಾಡಿಕೊಂಡು ಕಾಕತಾಳಿಯವೋ ಎಂಬಂತೆ ನೆನ್ನೆಗೆ ಹತ್ತು ವರ್ಷಗಳಾಯಿತು!!"\\\