ಬಿಜೆಪಿ ಇಮೇಜ್

ಬಿಜೆಪಿ ಇಮೇಜ್

ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಉಳಿಸಿ ಕಳಿಸಿಕೊಟ್ಟಿದ್ದು, ಕರ್ನಾಟಕದ ಮಹಾಜನತೆ ಪಾಲಿಗೆ, ಬಿಜೆಪಿ ತೋರಿದ ಔದಾರ‍್ಯವೇ? ಅಥವಾ ಇದು, ಶತಕೊಟಿಗಟ್ಟಲೆಯ ಆಕಾಶ ತರಂಗಾಂತರ ಭಕ್ಷಣೆಯೆದುರು, ಹೆಕ್ಟೇರುಗಟ್ಟಲೆ ಭೂಮಿ ಗುಳುಕಾವಣೆ ಜುಜುಬಿ ಎಂಬ ವಿಶ್ವವಿಶಾಲ ದೃಷ್ಟಿಕೋನವೇ? ರಾಜ್ಯಮಟ್ಟದ, ಮುಖ್ಯಮಂತ್ರಿಮಟ್ಟದ ಪಾಪವನ್ನು ಅವರೇ ಪರಿಹರಿಸಿಕೊಳ್ಳಲಿ ಎಂಬ ಸ್ವಾತಂತ್ರ್ಯ ಕೊಟ್ಟು ಬಿಟ್ಟುಕಳಿಸಿದ್ದರೆ ಅದನ್ನು ದೊಡ್ಡತನವೆಂದೇ ಪರಿಭಾವಿಸಬಹುದು. ಆದರೆ ರಾಷ್ಟ್ರಮಟ್ಟದ ಹಗರಣದ ವಿಚಾರದಲ್ಲಿ, ಭಯೋತ್ಪಾದಕರು ವಿಮಾನವನ್ನೋ, ಧೂತಾವಾಸದ ರಾಜತಾಂತ್ರಿಕರನ್ನೋ ಒತ್ತೆ ಹಿಡಿಯುವಂತೆ, ಪ್ರಜಾಸತ್ತೆಯ ಸರ‍್ವೋನ್ನತ ಸಂಸ್ಥೆಯಾದ ಪಾರ‍್ಲಿಮೆಂಟಿನ ಕಾರ‍್ಯಕಲಾಪವನ್ನೇ ಅದು ಒತ್ತೆ ಹಿಡಿದು ಬ್ಲಾಕ್‌ಮೇಲ್ ಮಾಡುವುದು ಸಮರ್ಥನೀಯವೇ?


ರಾಜ್ಯಮಟ್ಟದ ಅದರ ಔದಾರ‍್ಯ ತಾನೇ ಹೇಗೆ ಕೆಲಸ ಮಾಡಿದೆ? ಹರಿದ ರೆಕ್ಕೆಗೆ, ಅತ್ತೂ-ಕರೆದೂ ಹೈಕಮಾಂಡಿನಿಂದ ಹೊಲಿಗೆ ಹಾಕಿಸಿಕೊಂಡುಬಂದ ಮುಖ್ಯಮಂತ್ರಿಗಳಾದರೋ, ಆದ ತಪ್ಪನ್ನೊಪ್ಪಿಕೊಂಡು ಪ್ರಾಮಣಿಕವಾದ ಪ್ರಾಯಶ್ಚಿತ್ತ ಕ್ರಮವನ್ನೇನೂ ಕೈಗೊಳ್ಳುತ್ತಿಲ್ಲ; ಮತ್ತೂ ಸಿಟ್ಟು, ಸೆಡವು, ಸೇಡಿನಿಂದ ಹುರುಡುಗಟ್ಟಿಕೊಂಡು ಎದುರಾಳಿಯ ಪಾಪದ ಅಗಾಧತೆಯನ್ನು ಬಿಚ್ಚಿಡುವ ಹುಮ್ಮಸ್ಸು ತೊರಿಸುತ್ತಿದ್ದಾರೆ! ‘ಅದರ ಮುಂದೆ ತಮ್ಮದು ಏನೇನೂ ಅಲ್ಲ, ಬಾಚಬೇಕಾದ್ದು ಇನ್ನೂ ಬೇಕಾದಷ್ಟಿದೆ’ ಎಂಬ ಧಾರ್ಷ್ಯವೇ ಇದಾಗದೇ?!


ಕಾಂಗ್ರಸ್‌ನವರಾಗಲೀ, ಜೆಡಿಎಸ್‌ನವರಾಗಲೀ ಸರಿಯಾದ ಮಾನದಂಡದಿಂದ ನಿಜವಾದ ಅಕ್ಕರೆಯ ಪ್ರಜಾಪಾಲಕರು ಎಂದೇನೂ ಅನ್ನಿಸದಿರಬಹುದು. ಆದರೆ ಸಾಪೆಕ್ಷವಾಗಿ ಹೋಲಿಸಿ ನೋಡಿದಾಗ....?