ಜನ ಹಿತ ಪಕ್ಷ

ಜನ ಹಿತ ಪಕ್ಷ

ಇದೊಂದು ಕಾಲ್ಪನಿಕ ಕಥೆ. ಇದರಲ್ಲಿ ಬರುವ ಪಾತ್ರಗಳು ಹೆಸರುಗಳು ಯಾರಿಗೂ ಹೋಲಿಕೆ ಮಾಡಿ ಬರೆದದ್ದಲ್ಲ. ಅಕಸ್ಮಾತ್ ಹೋಲಿಕೆ ಆದಲ್ಲಿ ಅದಕ್ಕೆ ನೀವೇ ಜವಾಬ್ದಾರರು. ಇನ್ನಾದರೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ..

ಬಹಳ ದಿನಗಳ ನಂತರ ಟಿ.ವಿ.೯ ಹಾಕಿದಾಗ ಕೆಳಗೆ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ನೋಡಿ ಆಶ್ಚರ್ಯ, ಸಂತೋಷ, ಆನಂದ ಎಲ್ಲ ಒಟ್ಟಿಗೆ ಆಯಿತು. ಅಲ್ಲಿ ತೋರಿಸುತ್ತಿದ್ದ ಸುದ್ದಿ ಏನೆಂದರೆ ರಾಜ್ಯ ರಾಜಕೀಯದಲ್ಲಿ ಇನ್ನು ಮುಂದೆ ಒಂದೇ ಪಾರ್ಟಿ " ಜನ ಹಿತ ಪಕ್ಷ". ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರತ್ಯಕ್ಷ ಪ್ರಸಾರ ಎಂದು. ಕುತೂಹಲ ತಡೆಯಲಾಗದೆ ನೋಡುತ್ತಾ ಕುಳಿತೆ.
ಪ್ರತ್ಯಕ್ಷ ಪ್ರಸಾರ ಶುರುವಾಯಿತು. ಮೊದಲ ದೃಶ್ಯ ನೋಡಿದ ಕೂಡಲೇ ಕುರ್ಚಿಯಿಂದ ಚಂಗನೆ ಎಗರಿ ಹುರ್ರೇ ಎಂದು ಕೂಗಿದೆ. ಸನ್ಮಾನ್ಯ ಯಡ್ಡಿಯವರು, ಸಿದ್ದು ಅವರು, ಕುಮಾರ ಅವರು, ರೆಡ್ಡಿ ಬ್ರದರ್ಸ್, ದತ್ತ ಅವರು, ಪರಮೇಶ್ವರ್ ಅವರು, ಗೂಳಿ ಅವರು, ಎಲ್ಲರೂ ಒಟ್ಟಿಗೆ ವಿಧಾನ ಸೌಧದ ಮುಂದೆ ಒಬ್ಬರ ಕೈ ಒಬ್ಬರು ಮೇಲೆತ್ತಿ ಹಿಡಿದು ನಾವೆಲ್ಲರೂ ಒಂದೇ ಎಂದು ನಗುಮುಖದಿಂದ ನಲಿಯುತ್ತಿದ್ದರು. ನನಗೆ ಏನೊಂದು ಅರ್ಥವಾಗದೆ ನೋಡುತ್ತಿದ್ದಾಗ ನಮ್ಮ ಟಿವಿ ೯ ನಿರೂಪಕ ಇನ್ನು ಕೆಲವೇ ಕ್ಷಣಗಳಲ್ಲಿ ನಮ್ಮ ಪ್ರತಿನಿಧಿ ಅಲ್ಲಿರುವ ಪ್ರತಿಯೊಬ್ಬರಿಂದಲೂ ನೇರವಾಗಿ ಸಂಪರ್ಕದಲ್ಲಿರುತ್ತಾರೆ.
ಹೇಳಿ ರಮೇಶ್ ಈಗ ಯಾರೊಂದಿಗೆ ಇದ್ದೀರಾ...ಹಲೋ ಹಲೋ..ಹಾ ನಾನೀಗ ಸನ್ಮಾನ್ಯ ಯಡ್ಡಿ ಅವರ ಜೊತೆ ಮಾತನಾಡುತ್ತಿದ್ದೇನೆ...ಹೇಳಿ ಸರ್ ಏನಿದು ಹೊಸ ಪಕ್ಷ...ನೋಡಿ ನಾನು ಅಧಿಕಾರಕ್ಕೆ ಬಂದು ಸುಮಾರು ಮೂರು ವರ್ಷ ಆಯಿತು....ಅಧಿಕಾರಕ್ಕೆ ಬಂದಾಗಲಿಂದ ಹೇಳ್ತಿದ್ದೆ ಪ್ರತಿಪಕ್ಷದವರು ಅರವತ್ತು ವರ್ಷದಲ್ಲಿ ಮಾಡಕ್ಕೆ ಅಗಿರದಷ್ಟು ನಾನು ನನ್ನ ಅಧಿಕಾರ ಅವಧಿಯಲ್ಲಿ ಮಾಡುತ್ತೇನೆ ಎಂದು...ಈಗ ಮೂರು ವರ್ಷದಲ್ಲೇ ಅದಕ್ಕಿಂತ ಹೆಚ್ಚು ಮಾಡಿಕೊಂಡಿದ್ದೇನೆ...ಅದಕ್ಕೆ ಈಗ ಸಾಕೆನಿಸಿ ಇನ್ನು ಮುಂದಾದರೂ ಜನಕ್ಕೆ ಸ್ವಲ್ಪವಾದರೂ ಕೆಲಸ ಮಾಡೋಣ ಅನಿಸಿ ಪ್ರತಿಪಕ್ಷದವರ ಜೊತೆ ಮಾತಾಡಿ ಇನ್ನು ಮುಂದೆ ರಾಜ್ಯದಲ್ಲಿ ಒಂದೇ ಪಕ್ಷವಿರಲಿ ಎಲ್ಲರೂ ಒಟ್ಟಿಗೆ ಸೇರಿ ಮಾಡಿಕೊಳ್ಳೋಣ ಎಂದು ಹೊಸ ಪಕ್ಷ ಮಾಡಿದ್ದೇವೆ " ಜನ ಹಿತ ಪಕ್ಷ" ಈಗ ಸಧ್ಯಕ್ಕೆ ದೇವಸ್ಥಾನಕ್ಕೆ ಪೂಜೆಗೆ ಕೊಟ್ಟಿದ್ದೇನೆ ಅಲ್ಲಿಗೆ ಹೋಗಿ ಬಂದು ಮಾತಾಡುತ್ತೇನೆ ಎಂದು ಹೊರಟರು...
ಈಗ ನಮ್ಮ ಸಿದ್ದು ಅವರು ಜೊತೆಯಲ್ಲಿದ್ದಾರೆ..ನೋಡ್ರಿ ನಾವು ಏನೇನೋ ಟ್ರೈ ಮಾಡಿದ್ವಿ ಆ ವಯ್ಯನ ಕೆಳಗೆ ಇಳಿಸಕ್ಕೆ ಆಗ್ಲಿಲ್ಲ. ಲಾಸ್ಟ್ ಟೈಮ್ ಆ ಪಾಟಿ ಗಲಾಟೆ ಮಾಡಿದ್ವಿ..ಪೋಲೀಸ್ ಮಾರ್ಷಲ್ ಯಾರನ್ನೂ ಲೆಕ್ಕ ಮಾಡದೆ ಹೊಡೆದಾಡಿದೆವು...ಆದರೆ ಆವಮ್ಮ ಅದೇ ಡೆಲ್ಲಿಯಮ್ಮ ಬೈದು ಸುಮ್ನೆ ಕೂರಿಸಿದ್ರು. ಅದಕ್ಕೆ ಈ ತಲೆನೋವೆ ಬೇಡ ಅಂತ ಸುಮ್ನೆ ಯಾರು ಏನು ಮಾಡ್ತಾರೆ ನೋಡ್ಕೊಂಡು ಇದ್ದೆ..ಅಷ್ಟರಲ್ಲಿ ಈ ಯಪ್ಪ ಬಂದು ನೋಡಪ್ಪ ಒಂದೇ ಪಕ್ಷ ಮಾಡ್ಕೊಂಡು ಒಟ್ಟಿಗೆ ಮಾಡ್ಕೊಳೋಣ ಅಂತ ಹೇಳಿದ್ದಾರೆ...ಪಾಪ ಜನಾನು ಎಷ್ಟು ದಿನ ಅಂತ ತಡ್ಕೊಂಡಿರ್ತಾರೆ..ಅವ್ರು ರೊಚ್ಚಿಗೇಳೋ ಮುಂಚೆ ನಾವೇ ಎಚ್ಚೆತ್ತುಕೊಳ್ಳೋದು ಒಳ್ಳೇದು ಅಂತ ಈ ಪಕ್ಷ ಮಾಡಿದ್ದೀವಿ.
ಈಗ ನಮ್ಮ ಕುಮಾರ ಅವ್ರು ಇದಾರೆ..ಇಲ್ನೋಡ್ರಿ ನಾವು ಅವರ ಭೂಮಿ ಕಬಳಿಕೆ ಬಗ್ಗೆ ಬೊಬ್ಬೆ ಹೊಡೆದುಕೊಳ್ಳೋದು ಅವರು ನಮ್ಮ ಬಗ್ಗೆ ಹೊಡೆದುಕೊಳ್ಳೋದು ಸಾಕು ಸಾಕಾಗಿದೆ...ನಾನು ಮಾಡಿಕೊಂಡಿರೋದು ನಿಜ..ಅವ್ರು ಮಾಡಿಕೊಂಡಿರೋದು ನಿಜ ಏನೋ ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಂಡಿರಬಹುದು..ಅದಕ್ಕೆ ಇನ್ಮೇಲೆ ಸುಮ್ನೆ ಒಬ್ಬರ ಮೇಲೆ ಒಬ್ಬರು ಯಾಕೆ ಆರೋಪ ಮಾಡಿಕೊಳ್ಳೋದು..ಒಟ್ಟಿಗೆ ಮಾಡಿದ್ರೆ ಯಾವ ತಲೆನೋವು ಇರಲ್ಲ ಅಂತ ನನಗೂ ಸರಿ ಅನಿಸಿತು. ಅದಕ್ಕೆ ಈ ಪಕ್ಷ ಸ್ಥಾಪನೆ ಆಗುತ್ತಿದೆ.
ಈಗ ನಮ್ಮ ಗೂಳಿ ಅವರು ಇದ್ದಾರೆ ನಮ್ಮ ಜೊತೆ....ಅಲ್ಲಾರಿ ಅವತ್ತು ಅಸೆಂಬ್ಲಿಲಿ ಸಿಕ್ಕಾಪಟ್ಟೆ ಸೆಖೆ ಇತ್ತು ಅಂತ ಶರ್ಟ್ ತೆಗೆದಿದ್ದೆ. ಅಷ್ಟಕ್ಕೆ ನೀವು ಮಾಧ್ಯಮದವರು ಏನೇನೋ ಕಲ್ಪನೆ ಮಾಡಿ ತೋರಿಸಿದ್ರಿ...ನಾವೆಲ್ಲ ಯಾವತ್ತಿದ್ದರೂ ಒಂದೇ..

 


ವಾಸ್ತವ..
ನಿಜವಾಗಿಯೂ ಇವರಿಗೆ ಜನರ ಬಗ್ಗೆ ಕಾಳಜಿ ಮೂಡಿ ಎಲ್ಲ ಪಕ್ಷದವರು ಒಂದಾಗಿ ಜನಕ್ಕೋಸ್ಕರ ಕೆಲಸ ಮಾಡಿದರೆ ರಾಮರಾಜ್ಯವಾಗುವುದರಲ್ಲಿ ಆಶ್ಚರ್ಯವಿಲ್ಲ..

Comments