ಕಲ್ಪನಾ ಯೋಗದ ನೈಜ ಶಕ್ತಿ-- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೯

ಕಲ್ಪನಾ ಯೋಗದ ನೈಜ ಶಕ್ತಿ-- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೯

 

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೯

(೧೧೭)

     ಶೌಮಿಕ್ ಮಾತ್ರ ಪಾರ್ಟಿಯಲ್ಲಿ ನನ್ನೊಂದಿಗೆ ಪ್ರಕ್ಷು ಮತ್ತು ಅನುಶ್ರಿಯರ ಬಗ್ಗೆ ಮಾತನಾಡುತ್ತಿದ್ದ. ಉಳಿದವರು ಪಾರ್ಟಿಯ, ಗುಂಡು ತುಂಡುಗಳ ಸವಿಯುವಲ್ಲಿ ಮಗ್ನರಾಗಿದ್ದರು. ಶೌಮಿಕ್ ನನ್ನನ್ನು ಒಂದು ಪಕ್ಕಕ್ಕೆ ಕರೆದೊಯ್ದ. ವಯಸ್ಸಾದ ವ್ಯಕ್ತಿಯೊಬ್ಬನನ್ನು ಪರಿಚಯಿಸಿದ.

"ಈತ ಅನುಶ್ರಿಯ ತಂದೆ. ಅರುಣ್ ಕುಮಾರ್ ಪಾಲ್ ಅಂತ", ಎಂದು ನನ್ನ ನೆನ್ನೆ ರಾತ್ರಿಯ ಪೂರ್ಣಪಾಠ ಒಪ್ಪಿಸುವಂತೆ ಹೇಳಿದ. ಪ್ರಕ್ಷು ಮತ್ತು ಅನುಶ್ರಿಯನ್ನು ಭೇಟಿಮಾಡಿದ ನಡುವಿನ ಎಲ್ಲ ಘಟನೆಗಳನ್ನೂ ಅರುಹಿದೆ. ಆತನಿಗೆ ಅದ್ಭುತವಾದ ಹಾಸ್ಯ ಪ್ರವೃತ್ತಿ ಇತ್ತು.

"ನವರಸಗಳ ನಂತರ ಬರುವುದೇ ಹಾಸ್ಯರಸ" ಎಂದನಾತ.

"ಹೇಳಿ ಅರುಣ್ ದ. ಈ ವಿಕ್ಷಿಪ್ತ ಘಟನೆಗಳ ಬಗ್ಗೆ ನಿಮ್ಮ ಹಾಸ್ಯರಸದಲ್ಲಿ ಏನಾದರೂ ವಿವರಣೆ ಇದೆಯೆ?" ಎಂದು ಕೇಳಿದೆ.

"ಅನುಶ್ರೀ ನನ್ನ ಮಗಳು ಎಂಬುದು ದಿಟ. ಆಕೆ ಆತ್ಮಹತ್ಯೆ ಮಾಡಿಕೊಂಡು ಹತ್ತು ವರ್ಷಗಳಾದದ್ದೂ ದಿಟ. ನನ್ನ ಮಗಳಾದ್ದರಿಂದ ಹಾಗೆ ಮಾಡಿಕೊಂಡಿದ್ದು ದಿಟವಲ್ಲ."

"ಸೀರಿಯಸ್ಸಾಗಿ ಹೇಳಿ. ನೆನ್ನೆ ರಾತ್ರಿಯ ಘಟನೆಗಳಿಗೆ ವಿವರ ಸಾಧ್ಯವೆ?"

"ಸಾಧ್ಯ. ತರ್ಕ, ವಿಜ್ಞಾನ ಮುಂತಾದುವುಗಳು ಎಲ್ಲದಕ್ಕೂ ತರ್ಕದ ವಿವರವನ್ನು ಬೇಡುತ್ತದೆ. ಆದರೆ ಎಲ್ಲದಕ್ಕೂ ಅದು ತಾರ್ಕಿಕ ಉತ್ತರ ನೀಡಲಾರದು. ಇದೇ ವಿಜ್ಞಾನದ ಆಷಾಡಭೂತಿತನ!"

"ಇನ್ನು ಮುಂದೆ ನೀವು ಮಾತನಾಡುತ್ತೀರ, ನಾನು ಕೇಳುತ್ತೇನೆ," ಎಂದು ಸುಮ್ಮನಾದೆ.

"ಒಂದು ಮಾತಂತೂ ನಿಜ. ಇವೆಲ್ಲ ನಡೆದುದರಿಂದ ನೀವು ನಿದ್ದೆಗೆಗೆಟ್ಟಿದ್ದೀರಿ. ಅಥವಾ ನಿದ್ದೆ ಇಲ್ಲದುದರಿಂದ ಇವೆಲ್ಲ ನಡೆದಿದೆ ಅಂತ ಹೇಳಿ ನಿಮ್ಮ ಮೂಡ್ ಕೆಡಿಸಲಾರೆ. ನೆನ್ನೆ ರಾತ್ರಿಯದ್ದು ನಿಜವ ಸುಳ್ಳಾ ಎಂಬುದು ತಪ್ಪು ಪ್ರಶ್ನೆ. ಇದರ ರಹಸ್ಯ ಮತ್ತೂ ಆಳವಾದದ್ದು. ಕೇಳು ಜನಮೇಜಯ, ಇದರ ವಿವರವ," ಎಂದು ಅರುಣ್ ದ ನಾಟಕೀಯವಾಗಿ ಕುಳಿತುಕೊಂಡರು ಕೈಯಲ್ಲಿ ಸ್ಮಿರ್ನೋಫ್ ವೋಡ್ಕಾ ಹಿಡಿದು. ಮತ್ತೂ ಮುಂದುವರೆಸಿದರು, "ನಾನು ನನ್ನ ಫೆವರಿಟ್ ವಿಸ್ಕಿ ಹಿಡಿಯದೆ ವೋಡ್ಕಾ ಹಿಡಿದು, ಕುಡಿಯುತ್ತಿರುವುದಕ್ಕೆ ಕಾರಣವೇನು ಅನಿಲ್?"

"ನಾನು ಅದನ್ನೇ ತೆಗೆದುಕೊಳ್ಳುವಂತೆ ನಿಮಗೆ ರೆಕಮೆಂಡ್ ಮಾಡಿದೆ, ಅದಕ್ಕೆ!"

"ಗುಡ್. ಇದರ ತಾತ್ವಿಕ ಅರ್ಥವೇನೆಂದರೆ ನೀನು ಏನನ್ನು ನೋಡಲು ಬಯಸುವೆಯೋ ಜಗತ್ತಿನಲ್ಲಿ ನಿನಗೆ ಅದೇ ಕಾಣುತ್ತದೆ. ಅಲ್ಲವೇ!"

"ಅರ್ಥವಾಗಲಿಲ್ಲ"

"ಉಹೂಂ. ನೀನು ಅರ್ಥಮಾಡಿಕೊಳ್ಳಲು ತಯಾರಿಲ್ಲ ಅಂತ ಹೇಳು. ಮತ್ತೊಂದು ಪ್ರಶ್ನೆ ಕೇಳ್ತೇನೆ, ಉತ್ತರಿಸು"

"ಹೇಳಿ"

"ಜಗತ್ತಿನಲ್ಲಿ, ನಿನ್ನ ಸುತ್ತಮುತ್ತಲೂ ಕಂಡದ್ದಷ್ಟೇ ಅಸ್ತಿತ್ವದಲ್ಲಿರುವುದು ಎಂಬುದನ್ನು ನಂಬುವೆಯ?"

"ಇಲ್ಲ"

"ಸಾವು ಅಂತ್ಯ ಎಂದು ನಂಬುವೆಯ?"

"ಹೌದು ಮತ್ತು ಇಲ್ಲ"

"ಸ್ಮಾರ್ಟ್ ಉತ್ತರ. ಆದರೆ ಸರಿ ಉತ್ತರ. ನೇರ ಉತ್ತರವಿಲ್ಲದಿರುವುದೂ ಸಹ ಒಂದು ತೆರನಾದ ಉತ್ತರವೇ" ಎಂದು ಅರುಣ್ ದ ನಗತೊಡಗಿದರು. ನಗುವಿನ ಸದ್ದಿಗೆ ಶೌಮಿಕ್ ನಮ್ಮಿಬ್ಬರ ಹತ್ತಿರ ಬಂದ, ಏಕೆಂದರೆ ಅವರ ನಗು ಆ ಮಬ್ಬುಗತ್ತಲಿನಲ್ಲಿ 'ಕಾಣುತ್ತಿರಲಿಲ್ಲ'! ಇಡಿಯ ಸಂಭಾಷಣೆಯು ನಮ್ಮ ಮೂವರಲ್ಲೇ ನಡೆಯುತಿದ್ದು ಮತ್ಯಾರೂ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಇದು ನನಗೆ ಸ್ವಲ್ಪ ಆಶ್ಚರ್ಯವೆನಿಸಿತು.

"ಪ್ರಕ್ಷುಬ್ದ ಎಂಬ ವ್ಯಕ್ತಿಯೇ, ವಿದ್ಯಾರ್ಥಿಯೇ ಅಸ್ಥಿತ್ವದಲ್ಲಿ ಇರಲಿಲ್ಲ ಎಂದರೆ ನೀನು ನಂಬುವೆಯ?" ಎಂದು ಶೌಮಿಕ್ ಮತ್ತು ಅರುಣ್ ದ ಒಮ್ಮೆಲೇ, ಒಕ್ಕೊರಲಿನಿದ, ಶಾಂತಿನಿಕೇತನದ ರೋಬಿಂದರ್ ಸಂಗೀತ ಹಾಡುವಂತೆ ನುಡಿದರು.

"ಏಕ್ಸಪ್ಲೈನ್ ಪ್ಲೀಸ್"

"೧೯೯೦ ರಿಂದ ೨೯೯೨ರ ವರೆಗೂ ಇದ್ದ ಅಥವಾ ಆಗಿಹೋದ ವಿದ್ಯಾರ್ಥಿಗಳಿಗೆ ವಿಪರೀತ ಓದುವ ಹುಚ್ಚಿತ್ತು. ಅವರೆಲ್ಲರೂ ಒಂದೆ ಪಟ್ಯ ಓದುತ್ತಿದ್ದರು. ಜಾನ್ ಬರ್ಜರನ 'ವೇಸ್ ಆಫ್ ಸಿಯಿಂಗ್', ಲೆಯೋ ಸ್ಟೀನ್ಬರ್ಗನ 'ದ ಅಧರ್ ಕ್ರೈಟೀರಿಯ', ಸಾಮರ್ಸೆಟ್ ಮಾಮನ 'ರೆಜೆರ್ಸ್ ಎಜ್', ಗಾಮ್ಬರಿಚ್ನ 'ಮೆಡಿಟೆಟಿಂಗ್ ಆನ್ ಹಾಬಿ ಹಾರ್ಸಸ್', ಏನ್ರಾಂಡಳ 'ಫೌಂಟನ್ ಹೆಡ್', ಪಾರ್ಥ ಮಿತ್ತರನ 'ಮಚ್ ಮಲಿನ್ಗ್ದ್ ಮಾನ್ಸ್ತೋರ್' ಇತ್ಯಾದಿ. ಹೀಗೆ ಓದಿ ಓದಿ ನೀವೆಲ್ಲ ಒಂದು ತೆರನಾದ ಸಮೂಹ ಸನ್ನಿ ಅನ್ನಿಸುವಂತ ದೃಶ್ಯಭ್ರಮೆಗೆ ಒಳಗಾದಿರಿ. ನಿಮ್ಮೆಲ್ಲರ ಗೊಂದಲ, ಅಸೆ, ಆಕಾಂಕ್ಷೆಗಳಿಗೆ ಸೂಕ್ತವಾದ ಆದರ್ಶವನ್ನು ಹುಡುಕುತಿದ್ಧಿರಿ. ಎಡಪಂಥೀಯರಾಗುವದು, ಬಲಪಂಥವಾಗುವದು ಅಥವಾ ಇರುವ ಪಂಥಗಳಲ್ಲಿ ಸೇರಿಹೋಗುವದು ನಿಮಗೆಲ್ಲ ಕ್ಲೀಷೆಯಾಗಿ ಕಾಣುತ್ತಿತ್ತು. ಆಗ ನಿಮ್ಮಗಳ ಸಾಮೂಹಿಕ ಕಲ್ಪನೆಯ ಒತ್ತಾಯಕ್ಕೆ ಒದಗಿ ಬಂದದ್ದೆ ಪ್ರಕ್ಷುಬ್ದ ಎಂಬ ಮೂರ್ತರೂಪದ ಪರಿಕಲ್ಪನೆ. ಆತನನ್ನು ನೀವುಗಳೆಲ್ಲ ಒಬ್ಬ ವ್ಯಕ್ತಿಯಾಗಿ, ಸಹಪಾಟಿಯಾಗಿ ಒದಗಿಬಂದ. ಸಮೂಹಸನ್ನಿಯ ಪರಿಣಾಮವಿದು."

"ಅರುಣ್ ದ ಇದನ್ನು ನೀವೂ ನಂಬುತ್ತೀರಾ?"

"ಹೌದು. ಮತ್ತು ಇಲ್ಲ. ಇದು ನಿನ್ನ ಶೈಲಿಯ ಉತ್ತರ ಅಂದುಕೊಳ್ಳಬೇಡ. ನೀನು, ನಿನ್ನ ಗೆಳೆಯರು, ಬಂದುಬಳಗವು ಒಡನಾಡಿರುವ ವ್ಯಕ್ತಿಯೊಬ್ಬ ಈಗ ಸತ್ತಿದ್ದಾನೆ ಅಂದುಕೋ. ಈಗ ಆತನ ಮನೆಯವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ ಎಂದುಕೋ. ಆತ ಜೀವಿಸಿದ್ದ ಅಥವಾ ಅಂತಹ ವ್ಯಕ್ತಿಯೊಬ್ಬ ಅಸ್ತಿತ್ವದಲ್ಲಿದ್ದ ಎಂಬುದಕ್ಕೇ ಭೌತಿಕ ಆಧಾರ ಇರುವುದಿಲ್ಲ. ಅಲ್ಲವೇ?"

"ಅಂದರೆ ಅವರು ನಮ್ಮಿಂದ ಪರ್ಮನೆಂಟಾಗಿ ಮರೆಯಾದರು ಅಂತ ಅರ್ಥವೆ?"

"ಅಲ್ಲ. ಸರಿಯಾಗಿ ಅರ್ಥಮಾಡಿಕೊ. ನೀನು ಕಲಾವಿಮರ್ಶಕ, ಆದ್ದರಿಂದ 'ಮಾಯೆ'ಯ ಬಾಧೆಯಿಂದ ಆದಷ್ಟು ದೂರ ಇರಬೇಕು ಅಂತ ಪ್ರಜ್ಞಾಪೂರ್ವಕವಾಗಿ ನೀನು ಭಾವಿಸುವುದರಿಂದ ಹೀಗೆ ಭಾವಿಸುತ್ತಿದ್ದೀಯ. ನಮ್ಮ ನಡುವೆ ಆಗಿಹೋದ ಎಷ್ಟೋ ಮಂದಿ ಅಸಲಿಯಾಗಿ ಅಸ್ತಿತ್ವದಲ್ಲೇ ಇರಲಾರರು ಅಂದರೆ ನಂಬುವೆಯ?"

ಬೆಂಗಳೂರಿನ ರಸ್ತೆಗಳಲ್ಲಿ ಒಂದು ದಿನ ಕಂಡ ಮುಖಗಳು ಮತ್ತೊಂದು ದಿನ ಕಾಣದುದಕ್ಕೆ ಇಲ್ಲೊಂದು ವಿವರಣೆ ದೊರಕಿತು! "ಅಂದರೆ ಭೌತಿಕವಾಗಿ ಅಂತಹವರು ಯಾವತ್ತೂ ಇರಲೇ ಇಲ್ಲ ಅಂತಲೇ?"

"ಹೌದು" ಎಂದು ನಗತೊಡಗಿದರು ಅರುಣ್ ದ, "ಹೇಳು ಅನಿಲ್. ಎಷ್ಟು ಶೇಕಡ ಇದನ್ನು ಮನಸಾರೆ ನೀನು ನಂಬಬಲ್ಲೆ? ಯಾರ ಮೇಲೆ ಪ್ರಮಾಣ ಮಾಡಬಲ್ಲೆ?" ಕೇಳಿದರು ಅರುಣ್ ದ.

"ಒಂದು ತೊಡಕಿದೆ, ನಮ್ಮ ನಡುವೆ ಬಂದು ಹೋದ ಎಷ್ಟೋ ಮಂದಿ ನಿಜಕ್ಕೂ ಅಸ್ಥಿತ್ವದಲ್ಲಿ ಇರಲೇ ಇಲ್ಲ ಎಂದುಕೊಳ್ಳಲು. ನಿಜ ಯಾವುದು, ಸತ್ಯ ಯಾವುದು ಎಂಬುದೆಲ್ಲ ಸುಳ್ಳು ಅಸತ್ಯಗಳಾಗಿಬಿಡುತ್ತವೆ. ಬದುಕಲೊಂದು ಆಧಾರವೇ ಇರುವುದಿಲ್ಲ ಆಗ."

"ಆದರೆ ಅದನ್ನು ಪರಿಹರಿಸಿಕೊಂಡವರು ಬೇಕಾದಷ್ಟು ಮಂದಿ ಇದ್ದಾರೆ. ಬುದ್ದ, ಡೆರಿಡ ಇತ್ಯಾದಿ ವ್ಯಕ್ತಿಗಳ ಚಿಂತನೆಗಳು ಅಂತಹವು."

(೧೧೮)

ಶೌಮಿಕ್ ಕೌಂಟರಿನ ಸಮೀಪ ಹೋಗಿದ್ದ. ನಮ್ಮ ಸಂಭಾಷಣೆ ನಮ್ಮಿಬ್ಬರನ್ನು ಬಿಟ್ಟು ಮೂರನೆಯವರು ಕೆಲಿಸಿಕೊಂಡಿದ್ದರೆ ನಾವಿಬ್ಬರೂ ಕುಡಿದಿದ್ದೇವೆ ಅಂದುಕೊಂಡು ಸುಮ್ಮನಾಗುತ್ತಿದ್ದರು.

"ನಾವು ಕುಡಿದಿದ್ದೇವೆ ಅಂದುಕೊಳ್ಳುತ್ತಿರಲಿಲ್ಲ. 'ತುಂಬಾ' ಕುಡಿದು ಟೈಟ್ ಆಗಿದ್ದೇವೆ ಅಂದುಕೊಳ್ಳುತ್ತಿದ್ದರು. ಏಕೆಂದರೆ ಇಲ್ಲಿ ಇರುವ ಎಲ್ಲರೂ ಕುಡಿದಿದ್ದಾರೆ. ಹಾಗೆಯೇ ನಾನು ಹೇಳುತ್ತಿರುವ ವಿಷಯ. ಇಂದಿನವರೆಗೂ ನಾನು ನಿನ್ನ ಪಾಲಿಗೆ ಅಸ್ತಿತ್ವದಲ್ಲೇ ಇರಲಿಲ್ಲ, ಅಲ್ಲವೇ?"

"ಹೌದು"

"ಹಾಗಿದ್ದರೆ ನಾನು ಅಚಾನಕ್ ಆಗಿ ಎಲ್ಲಿಂದ ಬಂದೆ? ಅಚಾನಕ್ ಆಗಿ ನಮ್ಮ ಪ್ರಜ್ಞೆಗೆ ಬರುವವರನ್ನು ಮಕ್ಕಳು ಎನ್ನುತ್ತೇವೆ. ಮಧ್ಯವಯಸ್ಕರು ಬಂದರೆ ಅವರ ಹಳೆಯ ಸಂಬಂಧಗಳನ್ನು ಹುಡುಕುತ್ತೇವೆ. ಅದರ ಮೂಲಕ ನಾವು ನಮ್ಮ ಬಾಲ್ಯಾವಸ್ತೆಯಿಂದ ಹೊಸದಾಗಿ ಪರಿಚಯವಾದವರನ್ನು ಮನುಷ್ಯರು ಎಂದು ನಂಬುತ್ತೇವೆ. ಈಗ ನನ್ನನ್ನೇ ತೆಗೆದುಕೋ. ನನಗೀಗ ಅರವತ್ತೈದು ವರ್ಷ. ಆದರೆ ನನ್ನ ಪರಿಚಯವಾದದ್ದು ನಿನಗೆ, ನಾನು ಅನುಶ್ರೀಯ ತಂದೆ ಎಂದು. ಇಲ್ಲದಿದ್ದರೆ ನನ್ನನ್ನು ನೀನು ಕ್ಯಾರೆ ತುಮ್ಹಾರೆ ಅನ್ನುತ್ತಿರಲಿಲ್ಲ. ಈಗ, ನಿನ್ನ ಜ್ಯೂನಿಯರಳ ತಂದೆಯಾಗಿದ್ದೇನೆ ಎಂಬ ಸಂಬಂಧ ಇಲ್ಲದಿದ್ದಲ್ಲಿ ನಾನು ನಿನಗೆ ನಿರಂತರವಾಗಿ ಅಪರಿಚಿತನಾಗಿಬಿಡುತ್ತಿದ್ದೆ. ಇದೆ ತರ್ಕದ ಆಧಾರದ ಮೇಲೆ, ಒಂದು ಸಮುದಾಯ ಏನನ್ನೋ ಕಲ್ಪಿಸಿಕೊಂಡರೆ ಅದು ನಿಜವಾಗಿಬಿಡುತ್ತದೆ. ಅಶ್ವಿನಿದೇವತೆಗಳು ಅಸ್ತು ಅಂದಹಾಗೆ ಇದು. ಎಲ್ಲರೂ ಭಯಪಡುವ ಊರಆಚೀನ ಮರದಲ್ಲಿ ಅವರೆಲ್ಲರ ಭಯವು ದೆವ್ವ-ಪ್ರೇತವಾಗಿ ನಿಜವಾಗಿಯೂ ಬಾಧಿಸುತ್ತದೆ. ವಿದ್ಯುತ್ ದೀಪಗಳು ಆ ಭಯದ ಕಲ್ಪನೆಯ ಸೊಬಗನ್ನು ನಾಶಮಾಡಿಬಿಡುತ್ತದೆ. ಎಲ್ಲರೂ ಭಕ್ತಿಭಾವದಿಂದ ಒಂದೆಡೆ ಪ್ರಾರ್ಥಿಸಿದಾಗ ಆ ಜಾಗಕ್ಕೊಂದು ಶಕ್ತಿ ಬಂದುಬಿಡುತ್ತದೆ. ಅದನ್ನೇ ಪೂಜಾಸ್ಥಳವೆನ್ನುತ್ತೇವೆ. ಇಲ್ಲಿಯವರೆಗೆ ನಾನು ಮಾತನಾಡುತ್ತಿರುವದು ಏನಾದರೂ ಅರ್ಥವಾಯಿತೆ?"

"ಅರ್ಥವಾಗಲಿಲ್ಲ. ಆದರೆ ಅದರ ತಿರುಳಿನ ಗ್ರಾಸವಾಗುತ್ತಿದೆ," ಎಂದು ಚಿಂತಿಸತೊಡಗಿದೆ.

"ಆಸ್ತಿಕರೂ ಅಲ್ಲದ ನಾಸ್ತಿಕರೂ ಅಲ್ಲದವರ ದೈವವೇ ಪ್ರಕ್ಷುಬ್ದ ಅಥವಾ 'ಪ್ರಕ್ಷುಬ್ಧತೆ'. ಅವರಿಗೆ ನಂಬಲೂ ಆಗದು. ನಂಬದಿರಲೂ ಆಗದು. ಯಾವಕಾಲಕ್ಕೆ ನಂಬಬೇಕು, ಯಾವಾಗ ನಂಬಬಾರದು ಎಂಬುದು ತಿಳಿಯದೆ 'ಪ್ರಕ್ಶುಭ್ದತೆ'ಯನ್ನು ಅನುಭವಿಸುತ್ತಾರೆ. ೧೯೯೦-೯೫ರ ತಲೆಮಾರಿನ ನೀವುಗಳು ಬಹಳ ಆಳವಾಗಿ ನಂಬಿಕೊಳ್ಳಲು ಒಂದು ಆಧಾರ ಹುಡುಕುತ್ತಿದ್ದಿರಿ. ಆಗ ನಿಮಗೆ ಒದಗಿ ಬಂದ ಹೊಳಹು 'ಪ್ರಕ್ಷುಬ್ದ' ಎಂಬ ವ್ಯಕ್ತಿಯಾಗಿ ಮೂಡಿಬಂದಿತು. ಬಹಳ ಮಂದಿ ಆಗ ಆತನನ್ನು ನಿಜವೆಂದು ಭಾವಿಸಿದರು. ಆತ ನಿಮ್ಮ ತರಗತಿಗಳಿಗೆ ಬಂದು ಕುಳಿತುಕೊಳ್ಳುತ್ತಿದ್ದ. ಆದರೆ ಆತ ನಿಮಗೆಲ್ಲ ಸೀನಿಯರ್ ಎಂದು ಹೇಳುವ ಮೂಲಕ ಆತನ ಮಾರ್ಕ್ಸ್ ಕಾರ್ಡ್ ಅಥವಾ ಸಬ್ಮಿಶನ್ಗಳನ್ನೂ ನೀವುಗಳು ಯಾರೂ ಪರಿಶೀಲಿಸುವ ಅವಕಾಶ ದೊರಕದಂತೆ ಮಾಡಿಬಿಟ್ಟ/ಟ್ಟಿತು. ಅದೊಂದು ಕಲ್ಪನೆಯಿಂದ ಮೂರ್ತಗೊಂಡ ವ್ಯಕ್ತಿತ್ವ. ಆದ್ದರಿಂದ ಅನಿಲ್, ನೆನ್ನೆಯ ಘಟನೆಗಳನ್ನು ಮತ್ತೊಮ್ಮೆ ಆಳವಾಗಿ ನಿರುಕಿಸು."

"ಹೇಗೆ?"

"ಮೊದಲಿಗೆ ಕ್ಯಾಂಟೀನಿನ ಹುಡುಗರನ್ನು ಕೇಳು. ಅವರು ನಿನ್ನನ್ನು ನೋಡಿದರೆ ಹೊರತು ಪ್ರಕ್ಶುವನ್ನಲ್ಲ. ನೀನೊಬ್ಬನೇ ಮದ್ಯರಾತ್ರಿಯಲ್ಲಿ ಅಲ್ಲಿ ಕುಳಿತದ್ದರಲ್ಲಿ ಅವರಿಗೆ ವಿಶೇಷವೇನು ಅನಿಸಿರಲಾರದು. ಆದರೆ ನೀನೊಬ್ಬನೇ ಮಾತನಾಡುವದನ್ನು ಕಂಡು ನೀನು ಸ್ವಲ್ಪ ಸ್ಕ್ರೂ ಲೂಸ್ ಆದವನಿರಬೇಕು ಅಥವಾ ಕಲಾಭಾವನದ ವಿದ್ಯಾರ್ಥಿ ಆಗಿರಬೇಕು ಅಂದುಕೊಂಡಿರುತ್ತಾರೆ, ಅಷ್ಟೇ. ಬ್ಲಾಕ್ ಹೌಸಿನ ಎರಡನೇ ಕೋಣೆಯ ವಿದ್ಯಾರ್ಥಿಯನ್ನು ಮಾತನಾಡಿಸು. ಆತ ಆಣೆಪ್ರಮಾಣ ಮಾಡಿ ನಿನ್ನನ್ನು ನೆನ್ನೆ ರಾತ್ರಿ ನೋಡಿಯೇ ಇಲ್ಲವೇನು ಹೇಳುತ್ತಾನೆ. ಆಗೇನು ಮಾಡುವೆ? ಪ್ರಕ್ಷುಬ್ದತೆ ಮೂರ್ತರೂಪ ಪಡೆದಾಗ ವಿಸ್ಮೃತಿ ಆವರಿಸುತ್ತದೆ ಅನ್ನುವುದು ಅದಕ್ಕೆ. ಬಾವಿಯ ಬಳಿ ನೀನು ಪ್ರಕ್ಷುನೊಂದಿಗೆ ಕುಳಿತದ್ದನ್ನು ಯಾರೂ ನೋಡಿರಲಾರರು. ನಿನ್ನ ಬಾಯಿಂದ ಕೇಳಿರಬೇಕು ಅಷ್ಟೇ. ಆದ್ದರಿಂದ ಪ್ರಕ್ಶುವಿನ ಬಗ್ಗೆ ಕೇಳಿಯಷ್ಟೇ ತಿಳಿದಿದ್ದ ವಿದ್ಯಾರ್ಥಿ ಮೂರ್ಚೆ ಬಿದ್ದ."

"ತೀರ ಅಸಹಜವಲ್ಲವೇ?" ಎಂದು ಕೇಳಿದೆ.

"ಹೌದು. ಮತ್ತು ಅಸಹಜತೆ ಇದೆ. ನಿನ್ನ ಪ್ರಕ್ಶುವಿನ ಎಲ್ಲ ನಡವಳಿಕೆಗಳನ್ನು ಕಂಟ್ರೋಲ್ ಮಾಡುತ್ತಿದದ್ದು ನಿನ್ನ ಅನುಭವ, ಓದು ಮತ್ತು ನಂಬಿಕೆ. ಆದರೆ ನಿನ್ನ ಆಲೋಚನೆಯನ್ನು ನಿಯಂತ್ರಿಸುತ್ತಿದ್ದದ್ದು ಅನುಶ್ರೀ ಎಂಬ ವ್ಯಕ್ತಿ."

"ನೀವು ಹೇಳುವುದನ್ನು ನಂಬುವುದು ಬಿಡುವದು ಈಗ ನನ್ನ ಆಯ್ಕೆ ಅಲ್ಲವೆ?"

"ಆಯ್ಕೆ ನಿನ್ನದು. ಸುರೇಶ ಸೋಮಪುರ ಎಂಬಾತ ಬರೆದ 'ನಾಲ್ಕನೆಯ ಆಯಾಮ'ವೆಂಬ ಕೃತಿಯ ಕನ್ನಡ ಭಾಷಾಂತರವು ಸುಧಾ ಪತ್ರಿಕೆಯಲ್ಲಿ ಎರಡು ದಶಕದ ಹಿಂದೆ ಪ್ರಕಟವಾಗಿದ್ದಾಗ ನೀನು ಅದರಿಂದ ಪ್ರಭಾವಿತ್ಹನಾದುದರ ಪರಿಣಾಮವಿದು. ನಮ್ಮ ಕಲ್ಪನೆ ಆಳವಾದಾಗ ಅದು ನಿಜವಾಗುತ್ತದೆ ಎಂಬ ತರ್ಕೊವ್ ಸ್ಕಿಯ 'ಸೊಲಾರಿಸ್' ಸಿನೆಮ ನಿನ್ನ ಈ ಕಲ್ಪನೆಯನ್ನು ಮತ್ತು ನಿಜವಾಗಿ ಧೃಡಪಡಿಸಿತು. ಇದೆಲ್ಲವನ್ನು ನಂಬುವದು ಬಿಡುವದು ನಿನಗೆ ಬಿಟ್ಟದ್ದು. ಒಂದು ಮಾತ್ರ ನಿಜ. ನಿನಗೆ ಗೊತ್ತಿಲ್ಲದಿದ್ದನ್ನು ಯಾವುದನ್ನು ಪ್ರಕ್ಷು ಮಾತನಾಡಲಿಲ್ಲ, "ಬ್ಯೂಟಿಫುಲ್ ಮೈಂಡ್" ಸಿನೆಮಾದ ನಾಯಕನ ಕಲ್ಪನೆಯ ವ್ಯಕ್ತಿಗಳು ಆತನಿಗೆ ಗೋಚರಿಸುವಂತೆ."

ನಾನು ಸುಮ್ಮನಾದೆ. ಒಳಗೊಂದು ಅಗಾಧವಾದ ತುಮುಲ. ಬಾವುಲ್ ಹಾಡುಗಾರರು ಶಾಂತಿನಿಕೇತನ ಮತ್ತು ಕೊಲ್ಕೊತ್ತದ ನಡುವಣ ರೈಲುಗಳಲ್ಲಿ ಹಾಡುವ ಸಾಲಿನ ಸಾರವೇ ಅದು. ನೀನು ನಂಬಿದಷ್ಟು ಮಾತ್ರ ನಿನ್ನ ಜಗತ್ತು. ಅದರಾಚೆಗಿನದೆನು ಇಲ್ಲ. ಅದರಾಚೆಗೆ ಏನೋ ಇದೆ ಎಂಬುದೂ ನಿನ್ನ ಕಲ್ಪನೆಯೇ--ಅಂದ ಮಾತುಗಳು ನನಗೆ ಪಳಕ್ಕನೆ ಹೊಸ ಬೆಳಗಿನಲ್ಲಿ ಹೊಳೆಯತೊಡಗಿತು.

(೧೧೯)

ಮರುದಿನ ನಾನು ನನ್ನ ಹಿಂದಿರುಗುವ ರೈಲು ಹಾಗು ವಿಮಾನ ಪ್ರಯಾಣವನ್ನು ಮಾರನೆ ದಿನಕ್ಕೆ ಮುಂದೂಡಿದೆ. ಅಂದರೆ ಅಂದು ಸಂಜೆಯೇ ಕೊಲ್ಕೊತ್ತಕ್ಕೆ ಹೋಗಬೇಕಿತ್ತು. ಒಂದು ದಿನ ಅಲ್ಲಿ ಉಳಿದುಕೊಂಡು ಮರು ದಿನ ಬೆಂಗಳೂರಿಗೆ ವಿಮಾನ ಹತ್ತಬೇಕಿತ್ತು. ಬೆಳಿಗ್ಗೆಯೇ ಕ್ಯಾಂಟೀನಿನ ಸಮೀಪ ಹೋಗಿ ಹುಡುಗರನ್ನು ವಿಚಾರಿಸಿದೆ.

"ಅಮಿ ಕಿಚು ಜಾನಿನ" (ನಮಗೇನು ಗೊತ್ತಿಲ್ಲ) ಎಂದುಬಿಟ್ಟರು. ಕ್ಯಾಂಟೀನ್ ಮಾಮನನ್ನು ವಿಚಾರಿಸಿದೆ.

"ಅವರುಗಳು ನಿನ್ನನ್ನು ಮೊನ್ನೆ ರಾತ್ರಿ ನೋಡಿದ್ದು ದಿಟ. ಜೊತೆಗೊಂದು ಆಕಾರವನ್ನೂ ನೋಡಿದರು. ಆದರೆ ಅವರುಗಳು ಹೆದರಿದ್ದಾರೆ. ಆಕಾರವನ್ನು ನೋಡಿದೆ ಎಂಬುದನ್ನು ಒಪ್ಪಿಕೊಂಡರೆ ಸಾಕು ಆಕಾರ ಅವರನ್ನು ಕಾಡಲು ಶುರು ಮಾಡುತ್ತದಂತೆ. ಅದಕ್ಕೆ ಅವರು ಏನನ್ನೂ ನೋಡಿಲ್ಲ ಅನ್ನುತ್ತಿರುವದು." ಎಂದುಬಿಟ್ಟರು ಮಾಮ.

"ಪ್ರಕ್ಷುಬ್ದ ಎಂಬ ವ್ಯಕ್ತಿ ಇಲ್ಲವೇ ಇಲ್ಲವೆನ್ನುತ್ತೀರ?"

ಮಾಮ ಟಿಪಿಕಲ್ ಮಾಮನ ಶೈಲಿಯಲ್ಲಿ ನಕ್ಕರು. "ಇಲ್ಲವೇ ಇಲ್ಲವೆಂದು ಹೇಳಲಾರೆ. ಒಮ್ಮೆ ೧೯೯೪ರ ಸುಮಾರಿಗೆ ನಾನೂ ಕಲೆಯ ಬಗ್ಗೆ ಆಸಕ್ತನಾಗಿ ನಿಮ್ಮ ಮಾತುಗಳನ್ನು ಕೇಳುತ್ತಿದ್ದೆ. ಸ್ವಲ್ಪ ಸಿತ್ರರಚನೆಯನ್ನೂ ಅಭ್ಯಸಿಸಿದೆ. ಆಗ ಆತ ನನಗೆ ಕಾಣಿಸಿಕೊಳ್ಳುತ್ತಿದ್ದ."

"ಆತನನ್ನು ಮಾತನಾದಿಸಿದ್ದೀರ?"

"ಇಲ್ಲವೆನ್ನಲಾರೆ. ಆದರೆ ಆಗಲೇ ನನಗೊಂದು ಅನುಮಾನವಿತ್ತು ಆತನ ಅಸ್ತಿತ್ವದ ಬಗ್ಗೆಯೇ. ಯಾರೊಂದಿಗೂ ಅದನ್ನು ಮಾತನಾಡುವ ಧೈರ್ಯ ಬರಲಿಲ್ಲ. ಆದರೆ ಆಗಿನಿಂದಲೂ ಹಲವಾರು ಬಾರು ಆತ ನನಗೆ ಕಾಣಿಸಿಕೊಂಡಿದ್ದಾನೆ. ಮಾತನಾಡಿಸುವ ಧೈರ್ಯ ಮಾಡಿಲ್ಲವಷ್ಟೇ ನಾನು. ಮೊದಲೆಲ್ಲ ಬೆಳಗಿನ ಹೊತ್ತೂ ಕಾಣುತ್ತಿದ್ದಾತ ಕ್ರಮೇಣ ರಾತ್ರಿಯ ಹೊತ್ತಿನಲ್ಲಿ ಮಾತ್ರ ಕಾಣುತ್ತಿದ್ದ."

"ಅದಕ್ಕೆ ಕಾರಣವೇನು"

"೧೯೯೫ರ ಸುಮಾರಿಗೆ ಒಂದು ಬೌಧಿಕ ಗದ್ದಲವೆದ್ದಿತು ಕಲಾಭವನದಲ್ಲಿ. ಯುರೋಪು ಅಮೇರಿಕಗಳಲ್ಲಿ ಗೀಚಿದ್ದೆಲ್ಲ ಕಲೆ ಎಂಬಂತೆ ಇಲ್ಲಿಯೂ ಸ್ವೀಕಾರವಾಗುತ್ತಿರುವಾಗ ವಸಾಹುತೋತ್ತರ ಅಥವಾ ಏಷ್ಯದಂತಹ ಕಲೆಗೆ ಯಾವ ಮಾನ್ಯತೆಯೂ ಇಲ್ಲದಂತಾಗಿದೆ ಎಂಬ ಕೊರಗು ನಿಮ್ಮಗಳಲ್ಲಿ ಇದ್ದಿತು. ಅದರಿಂದಾಗಿ ಹುಟ್ಟಿಕೊಂಡದ್ದು 'ಎಲ್ಲವನ್ನೂ ಬಲ್ಲೆನೆಂಬ' ಪ್ರಕ್ಶುಬ್ದನೆಂಬ ವ್ಯಕ್ತಿ(ತ್ವ). ಆತ ಮೋಕ್ಷ ಪಡೆದಿದ್ದೇನೆ ಎಂದು ಹೇಳುತ್ತಿದ್ದದ್ದೂ ಅದೇ ಕಾರಣಕ್ಕೆ. ಸಾಧನೆಯ ಫಲಕ್ಕೆ ಮಾಪನವುಂಟೆ ಹೊರತು ಸಾಧನೆ ಎಂಬುದಕ್ಕೇ ಹೊರಗಿನ ಮಾಪನವಿರಲಾರದು. ನೀವೆಲ್ಲ ನಿಮ್ಮಗಳ ಕಲಾ-ತೊಡಗಿಸಿಕೊಳ್ಳುವಿಕೆಗೆ ಒಂದು ಮಾಪನ ಬಯಸಿದ್ದರ ಫಲ ಪ್ರಕ್ಷು. ನಿಮ್ಮಲ್ಲಿ ಹುಡುಗರು ಆತನಂತಾಗಳು ಬಯಸುತಿದ್ದಿರಿ ಹುಡುಗಿಯರು ಆತನ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರು. ಆದರೂ ಆತ ಅಸ್ತಿತ್ವದಲ್ಲೇ ಇರಲಿಲ್ಲ ಎಂಬುದನ್ನು ಒಬ್ಬ ಚುರುಕು ಉಪಾಧ್ಯಾಯರು ಗ್ರಹಿಸಿ, ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಆದರೆ ಅಷ್ಟರಲ್ಲಿ ಹೊರ ಊರಿನಿಂದ ಬಂದಿದ್ದ ನಿನ್ನಂಥವರು ಊರು ಬಿಟ್ಟಿದ್ದಿರಿ. ಪ್ರಕ್ಷುವನ್ನು ಅಥವಾ ಆತನ ಪರಿಕಲ್ಪನೆಯನ್ನು ತಲೆಯಲ್ಲಿ, ಹೃದಯದಲ್ಲಿ, ಮನಸಾರೆ ಹೊತ್ತೊಯ್ದಿದ್ದಿರಿ. ಇಲ್ಲಿದ್ದವರು ಆ ಭ್ರಮೆಯಿಂದ ಕ್ರಮೇಣ ಹೊರಬಂದರು. ನೀವುಗಳು ಮಾತ್ರ ಆತ ನಿಜಕ್ಕೂ ವ್ಯಕ್ತಿಯೇ ಎಂದು ಇನ್ನೂ ನಂಬಿದ್ದೀರ. ಭ್ರಮೆಕಳಚಿಕೊಂಡವರು ಮತ್ತೆ ಪ್ರಕ್ಷುವನ್ನು ಎಂದೂ ಭೇಟಿಮಾಡಲಿಲ್ಲ. ಅಂತಹವರಲ್ಲಿ ಕೆಲವರು ಯಾಕಾದರೂ ಭ್ರಮೆ ಕಳಚಿತೋ ಎಂದು ಮರುಗಿದ್ದೂ ಇದೆ. ಅರ್ಥಪೂರ್ಣವಾಗಿ ಜೀವಿಸಲು ಆಧಾರಗಳು, ಭ್ರಮಾತ್ಮಕ ಆಧಾರಗಳಾದರೂ ಎಷ್ಟು ಮುಖ್ಯ ನೋಡು" ಎಂದು ಮಾತು ಮುಗಿದಾಗ, ಕೇವಲ ಕ್ಯಾಂಟೀನು ಮಾಮ ಹೀಗೆಲ್ಲ ಪ್ರೌಡವಾಗಿ ಮಾತನಾಡಿದ್ದು, ಪ್ರಕ್ಷುಬ್ದತೆ ನನ್ನಿಂದ ಮಾಯವಾದುದರ ಪರಿಣಾಮವಿರಬೇಕು ಎಂದುಕೊಂಡೆ.

"ಅಂದರೆ ಇನ್ನು ನಾನು ಎಂದಿಗೂ ಪ್ರಕ್ಷುಬ್ದನನ್ನು ಭೇಟಿ ಮಾಡಲಾರೆ ಎಂದರ್ಥವೆ?" ಎಂದು ಕೇಳಿದೆ.

"ಹಾಗೇನಿಲ್ಲ. ನೀನು ಭ್ರಮೆಯನ್ನು ಕಳಚಿಕೊಳ್ಳುವ ಅರ್ಥಹೀನತೆಯನ್ನು ನಂಬಿದರೆ ಪ್ರಕ್ಷು ಈಗಲೂ ನಿನ್ನ ಭೇಟಿಗೆ ಸಿದ್ದ. ಅದು ನಿನಗೆ ಬಿಟ್ಟದ್ದು, " ಎಂದರು ಮಾಮ.

"ಅಂದ ಹಾಗೆ ಅನುಶ್ರಿಯ ಕಥೆಯೇನು?" ಎಂದು ಕೇಳಿದೆ.

"ಅದೊಂದು ಮಾತ್ರ ನನ್ನ ಕೇಳಬೇಡ", ಎಂದ ಮಾಮ ದುಗುಡಗೊಂಡರು.

"ಅನುಶ್ರೀಯೂ ಒಂದು ಕಲ್ಪನೆ ಅಂತಾದರೆ ಏನು ಮಜಾ ಇರುತ್ತದೆ ಅಲ್ಲವೆ?" ಎಂದು ಮಾಮನ ಕಾಲು ಎಳೆಯತೊಡಗಿದೆ.

"ವಿಷಯ ಏನಪ್ಪಾ ಅಂದ್ರೆ ಅನುಶ್ರೀ ಎಂಬ ವಿದ್ಯಾರ್ಥಿನಿಯೂ ಅಸ್ಥಿತ್ವದಲ್ಲಿ ಇರಲಿಲ್ಲ. ಇಲ್ಲದ ನಿನ್ನ ಜೂನಿಯರ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡು ಹತ್ತುವರ್ಷವಾಯಿತು ಎಂಬ ಸುದ್ದಿಯೂ ಕಾಲ್ಪನಿಕವೇ!!" ಎಂದ ಮಾಮ ಮಾರುಕಟ್ಟೆಗೆ ಹೋಗಬೇಕು ಎಂದು ಹೊರಟುಬಿಟ್ಟರು!!!

ಡಿಪಾರ್ಟ್ಮೆಂಟಿನಲ್ಲಿ ಇದ್ದ ಶೌಮಿಕನನ್ನು ಚಹಾ ಕುಡಿವ ಎಂದು ಹೊರದಬ್ಬಿಕೊಂಡು ಬಂದೆ. ಆತ ರಾತ್ರಿಯ ಪಾರ್ಟಿಯನ್ನು ಹೊರತುಪಡಿಸಿ ಎಲ್ಲವನ್ನೂ ನಿರಾಕರಿಸಿದ. ಅರುಣ್ ಕುಮಾರ್ ಪಾಲ್ ಎಂಬ ಅನುಶ್ರೀ ಎಂಬ ನನ್ನ ಜುನಿಯರ್ ವಿದ್ಯಾರ್ಥಿನಿಯೆಂಬ ಎರಡೂ ಪರಿಕಲ್ಪನೆಗಳನ್ನೂ ನಿರಾಕರಿಸಿದ.

"ನಿನ್ನೆ ರಾತ್ರಿ ಅರುಣ್ ದಾ ರನ್ನು ನೀನು ನನಗೆ ಪರಿಚಯಿಸಿದ್ದು, ಅವರು ನನ್ನೊಡನೆ ಸುದೀರ್ಘವಾಗಿ ಪ್ರಕ್ಷುಬ್ದ ಎಂಬ ಕಲ್ಪನೆಯನ್ನು ಒಡೆದು ಹಾಕಿದ್ದು ಇವೆಲ್ಲ ನಿಜವಲ್ಲವೆ?"

"ಇಲ್ಲ. ಪ್ರಕ್ಷು ಎಂಬ ಕಲ್ಪನೆಯ ಬಗ್ಗೆ ಮಾಮ ಹೇಳಿದ್ದು ನಿಜ. ಅನುಶ್ರೀ ಎಂಬ ಹುಡುಗಿ, ಆತನ ತಂದೆ ಎಂಬ ಅರುಣ್ ದಾ ಎಂಬುದು ಪೂರಾ ನಿನ್ನ ಕಲ್ಪನೆ ಅಷ್ಟೇ. ಪ್ರಕ್ಷು ಎಂಬ ಪರಿಕಲ್ಪನೆಗೆ ೧೮ ವರ್ಷವಾಗಿದ್ದರೆ ಅನುಶ್ರೀ ಎಂಬ ಪರಿಕಲ್ಪನೆಯ ಜನನವಾಗಿ ಕೇವಲ ೩೬ ಘಂಟೆಗಳ ಕಾಲವಾಗಿದೆ ಅಷ್ಟೇ."

"ಯು ಮೀನ್, ಅನುಶ್ರೀ ನೆನಪೇ ಇಲ್ಲವೇ ನಿನಗೆ?" ಎಂದು ಕೇಳಿದೆ.

"ಫ್ರಾಯ್ಡ್ ಹಾಗೂ ಯುಂಗ್ ರು ನಿನ್ನನ್ನು ತುಂಬಾ ಕಾಡಿಸಿರುವಂತೆ ಕಾಣುತ್ತದೆ. ಕನಸುಗಳ ಬಗ್ಗೆ ನನ್ನದೊಂದು ಥಿಯರಿ ಇದೆ. ಕೇಳು. ಅನುಶ್ರಿ ಎಂಬ ನಿಗೂಡವನ್ನು ಅದು ಪರಿಹರಿಸಬಹುದು" ಎಂದು ವಿವರಿಸತೊಡಗಿದ.

(೧೨೦)

ಎಲ್ಲರೂ ಪಾಠ ಹೇಳುವವರೇ ಆಗಿಹೋಗಿದ್ದರು. ಕಾಲ್ಪನಿಕ ಪ್ರಕ್ಷುಬ್ದ, ಕಾಲ್ಪನಿಕ ಅರುಣ್ ದಾ, ಮುಗ್ದ ಎಂದು ನಾನು ಭಾವಿಸಿದ್ದ ಕ್ಯಾಂಟೀನ್ ಮಾಮ, ನಿಜದ ಅಸ್ತಿತ್ವವಿದ್ದ ಶೌಮಿಕ್ ಎಲ್ಲರೂ ಬ್ಲೇಡ್ ಹಾಕುವವರೇ ಆಗಿಹೋಗಿದ್ದರು. ಇವರೆಲ್ಲ ಸೇರಿ ಏನಾದರೂ ಜೀವಂತ ಪರ್ಪಾರ್ಮೆನ್ಸ್ ಮಾಡುತ್ತಿದ್ದಾರೂ ಹೇಗೆ ಎಂಬ ಅನುಮಾನವೂ ಹುಟ್ಟದಿರಲಿಲ್ಲ. ಆದರೆ ಈ ನಾಟಕದ ಸಾರ, ತಿರುಳು ಮಾತ್ರ ಒಬ್ಬ ಮೇಧಾವಿ ಸ್ಕ್ರಿಪ್ಟ್ ಬರಹಗಾರ ಮಾಡುವಂತಿತ್ತು. ಆದ್ದರಿಂದ ಕವಚ ಭ್ರಮೆಯದಾದರೂ ತಿರುಳು ಮಾತ್ರ ಅಪ್ಪಟ ಬಂಗಾರದಂತೆ ತೋರುತ್ತಿತ್ತು.

"ನೀನು ಕನಸಿಸುವಾಗ..." ಎಂದು ಶುರು ಮಾಡಿದ ಶೌಮಿಕ್.

"ಹುಷಾರ್. ಹೊಸ ಕನ್ನಡ ಪದ ಇದು 'ಕನಸಿಸುವಾಗ' ಅಂತ ಸಂಪದಿಗರು ಕಾಲೆಳೆದುಬಿಡುತ್ತಾರೆ" ಎಂದು ಇಡಿಯ ಮೂಡನ್ನು ತೆಳು ಮಾಡಲು ಪ್ರಯತ್ನಿಸಿದೆ.

"ಯಾವುದೇ ಪದ ಉಚ್ಚರಿಸಿದರೂ ಆದಿಮಾನವನನ್ನು ಅಪಮಾನ ಮಾಡಿದಂತೆ ಅಲ್ಲವೆ?" ಎಂದ ಶೌಮಿಕ್ ಮುಂದುವರೆಸಿದ, "ಒಂದು ಘಂಟೆಕಾಲ ಕನಸು ಉಂಡರೆ, ಕೇವಲ ಎರಡು ನಿಮಿಷ ನಿಜದಲ್ಲಿ ನಿದ್ರಿಸಿರುತ್ತೀಯ. ಒಪ್ಪುತ್ತಿಯ?"

"ಹೌದು, ಸಾಧ್ಯ"

"ಕನಸಿನಲ್ಲಿ ಬರುತ್ತಿರುವ ಹಾಡು ಕೇಳುವಾಗ ಆಕಸ್ಮಿಕವಾಗಿ ಎಚ್ಚರವಾಗಿ ನಿಜದಲ್ಲಿ ಅದೇ ಹಾಡು ಮುಂದುವರೆಯುವುದನ್ನು ಅನುಭವಿಸಿದ್ದೀಯ?"

"ಹೌದು"

"ಅದೇ ಹಾಡು ಕನಸಿನಲ್ಲಿ ಮತ್ತು ನನಸಿನಲ್ಲಿ. ಆದರೆ ಒಂದು ನಿಜದ ವ್ಯತ್ಯಾಸವಾಗದ ಕಾಲದಲ್ಲಿ. ಮತ್ತೊಂದು ಹೇಗೆ ಬೇಕಾದರೂ ಮಾರ್ಪಾಡುಗೊಳ್ಳುವ ಕನಸಿನಲ್ಲಿ. ಹೇಗೆ ಸಾಧ್ಯವಿದು?"///

Comments