'ರಾಜೀವ ದೀಕ್ಷಿತ'ರು ಎಂಬ ತತ್ವದೊಂದಿಗೆ...

'ರಾಜೀವ ದೀಕ್ಷಿತ'ರು ಎಂಬ ತತ್ವದೊಂದಿಗೆ...


ಚಿತ್ರ:Biography of Rajiv Dixit

ನವೆಂಬರ್ ೩೦ ಬೆಳಗ್ಗೆ ಸ್ವದೇಶಿ ಚಳುವಳಿಯ ರಾಜೀವ ದೀಕ್ಷಿತರು ತೀರಿಕೊಂಡರು ಎಂಬ ಸಂದೇಶ ತಲುಪಿದಾಗ ಅವಾಕ್ಕಾದೆ, ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸಿದೆ. ಆದರೆ ಕೊನೆಗೆ ಅದು ಖಚಿತವಾದಾಗ ಆವರಿಸಿದ್ದು ಒಂದು ನಿಸ್ಸಹಾಯಕ ಭಾವ

  ’ಆಜಾದೀ  ಬಚಾವೋ’ ಎಂಬ ಆಂದೋಲನ ಜೋರಾಗಿ ನೆಡೆಯುತ್ತಿದ್ದ ಕಾಲದಲ್ಲಿ ನನಗೆ ಇದರ ವಿಚಾರಗಳನ್ನು ಮೊದಲು ಪರಿಚಯಿಸಿದ್ದುಹಾಯ್ ಬೆಂಗಳೂರು ಪತ್ರಿಕೆ. ಅದರಲ್ಲಿ ಈ ಬಗ್ಗೆ ಒಂದು ಅಂಕಣ ಬರುತ್ತಿತ್ತು. ರಾಜೀವ ದೀಕ್ಷಿತರು ದೇಶದೆಲ್ಲೆಡೆ ತಿರುಗುತ್ತಿದ್ದರು. ಕರ್ನಾಟಕದ ಹಲವು ಊರುಗಳಿಗೂ ಬಂದರು. ಅವರು ಹೋದಲ್ಲೆಲ್ಲಾ ದೇಶಪ್ರೇಮದ ಸಂಚಲನ ಮೂಡಿಸುತ್ತಿದ್ದರು. ಉದಾರೀಕರಣದ ವಿಷಯವಾಗಿ ಸರ್ಕಾರವನ್ನು ಟೀಕಿಸುತ್ತಿದ್ದರು. ಭಾರತವೆಂಬ ದೇಶಕ್ಕೆ ಸ್ವಾಂತಂತ್ರ್ಯ ಎಂಬುದು ಬಂದು ಅರ್ಧ ಶತಮಾನವಾಗಿ ಈಗ ಮತ್ತೆ ವಿದೇಶಿ ವ್ಯಾಪಾರಿ ಕಂಪನಿಗಳಿಂದ ಹೇಗೆ ಬೇರೆ ದೇಶಗಳ ಹಿಡಿತದಲ್ಲೇ ಇದ್ದೇವೆ ಎಂಬುದನ್ನು ನಿರೂಪಿಸುತ್ತಿದ್ದರು. ಭಾರತದ ವಿಜ್ಞಾನಿಗಳು, ಸಂಶೋಧನೆಗಳು, ಪ್ರತಿಭೆಗಳು ಎಲ್ಲವೂ ನೇರವಾಗಿ ಅಥವಾ ಪರೋಕ್ಷವಾಗಿ ಬೇರೆ ದೇಶಗಳಿಗೆ ದುಡಿಯುವಂತಾಗಿರುವುದರ ಬಗ್ಗೆ ಎಚ್ಚರಿಸುತ್ತಿದ್ದರು. ಅವರು ಭಾರತದ ಇತಿಹಾಸದ ಸತ್ಯಾಸತ್ಯತೆಗಳನ್ನು ವಿವರಿಸುತ್ತಿದ್ದರೆ ರಕ್ತ ಬಿಸಿಯಾಗುತ್ತಿತ್ತು

  ರಾಜೀವ ದೀಕ್ಷಿತರು ಅದ್ಭುತ ಮಾತುಗಾರರು. ಅವರು ಮಾತಾಡುತ್ತಿದ್ದರೆ ಅದನ್ನು ಕೇಳಿದ ಎಂತಹ ನರಸತ್ತವನಲ್ಲೂ ದೇಶಭಕ್ತಿ, ಪುಟಿಯುತ್ತಿತ್ತು. ಅವರ ಆಂದೋಲನದ ಬಹಳ ಸರಳವಾಗಿತ್ತು. ಯಾರನ್ನೂ ಹೊಡಿ ಬಡಿ ಅನ್ನುವುದಾಗಿರಲಿಲ್ಲ. ಉದಾರೀಕರಣ, ಜಾಗತೀಕರಣದ ಹೆಸರಿನಲ್ಲಿ ನಮ್ಮ ದೇಶಕ್ಕೆ ಬಂದ ಕಂಪನಿಗಳು ಲೂಟಿ ಮಾಡುತ್ತಿರುವ ಪರಿಯನ್ನು ವಿವರಿಸಿ ಅದಕ್ಕೆ ಕಡಿವಾಣ ಹಾಕುವಂತೆ ಪ್ರೇರೇಪಿಸುತ್ತಿದ್ದರು. ನಮ್ಮದೇ ಸಂಪನ್ಮೂಲ, ನಮ್ಮದೇ ಜನ, ನಮ್ಮದೇ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೊನೆಗೇ ನಮ್ಮಿಂದಲೇ ಲಾಭವನ್ನು ತೆಗೆದು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವ ಮೂಲಕ ದೇಶದ ಆರ್ಥಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಕಂಪನಿಗಳ ವಿರುದ್ಧ ಜನರನ್ನು ಸಂಘಟಿಸುತ್ತಿದ್ದರು. ನಮ್ಮದೇ ನೀರು ಹೀರಿ ಅದಕ್ಕೆ ಗ್ಯಾಸು, ಬಣ್ಣ, ಕೆಮಿಕಲ್ ಬೆರೆಸಿ ಮಾಡುವ ಕೆಟ್ಟ ಪೆಪ್ಸಿಯನ್ನು ಕುಡಿದು ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೇ ಲಾಭವೆಲ್ಲಾ ಅಮೆರಿಕಾಗೆ ಹೋಗುವಂತೆ ಯಾಕ್ರೀ ಮಾಡ್ತೀರಾ, ಕುಡಿಯುವುದಾದರೆ ಎಳ್ನೀರು ಕುಡಿಯಿರಿ, ಹಣ್ಣಿನ ರಸ, ಮಜ್ಜಿಗೆ, ಪಾನಕ ಕುಡಿಯಿರಿ, ಆರೋಗ್ಯಕ್ಕೂ ಒಳ್ಳೆಯದೂ, ನಮ್ಮ ರೈತನಿಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ಬಂಡವಾಳ ಬಿಚ್ಚಿಡುತ್ತಿದ್ದರು. ಹೈ ಟೆಕ್ನಾಲಜಿ ಹೆಸರಿನಲ್ಲಿ ಇಲ್ಲಿ ಬಂದು ಉಪ್ಪು, ಚಿಪ್ಸು, ಪೇಸ್ಟು, ಕ್ರೀಮು, ಸಾಫ್ಟ್ ಡ್ರಿಂಕ್ಸ್ ಮುಂತಾದ ಜೀರೋ ಟೆಕ್ನಾಲಜಿ ವಸ್ತುಗಳನ್ನು ದುಬಾರಿ ಬೆಲೆಯಲ್ಲಿ ನಮಗೇ ಮಾರಿ, ಲಾಭವನ್ನು ತಮ್ಮ ದೇಶಕ್ಕೆ ತಲುಪಿಸಿ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿವೆ ಕಂಪನಿಗಳು, ಆದ್ದರಿಂದ ನಮ್ಮ ಭಾರತೀಯ ಕಂಪನಿಗಳ, ಭಾರತೀಯ ಉತ್ಪನ್ನಗಳನ್ನೇ ಬಳಸಿ, ನಮ್ಮ ಸಂಪತ್ತು ನಮ್ಮಲ್ಲೇ ಉಳಿಯುವಂತೆ ಮಾಡಿ ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ದುಡ್ಡಿನ ಆರ್ಭಟಕ್ಕೆ, ಕುತಂತ್ರಗಳಿಗೆ ನಮ್ಮ ದೇಶದ ಕಂಪನಿಗಳು, ರೈತರು, ಸಂಸ್ಕೃತಿ ಮುಂತಾದವು ಸದ್ದಿಲ್ಲದೇ ಮುಗಿದುಹೋಗುತ್ತಿವೆ ಎನ್ನುತ್ತಾ ಭಾರತೀಯ ಕಂಪನಿಗಳ ಪಟ್ಟಿಯನ್ನು ಹಂಚುತ್ತಿದ್ದರು. ಕೇವಲ ಭಾವನಾತ್ಮಕವಾಗಿ ಮಾತನಾಡದೇ ಎಲ್ಲವನ್ನೂ ದಾಖಲೆಗಳ ಸಮೇತ ವಿವರಿಸುತ್ತಿದ್ದ ಆತನ ಮಾತಿನ ಮೋಡಿಗೆ ಒಳಗಾದ, ವಿಚಾರಗಳನ್ನು ಒಪ್ಪಿಕೊಂಡ ಲಕ್ಷಾಂತರ ಜನರಲ್ಲಿ ನಾನೂ ಒಬ್ಬನಾಗಿದ್ದೆ. ಸ್ವಯಂಪ್ರೇರಿತನಾಗಿ ಭಾಷಣದ ಪ್ರತಿಗಳನ್ನು, ಭಾರತೀಯ ಕಂಪನಿಗಳ, ಪ್ರಾಡಕ್ಟುಗಳ ಪಟ್ಟಿಯನ್ನು ಫೋಟೋಕಾಪಿ ಮಾಡಿಸಿ ಮನೆಗಳಿಗೆ, ಶಾಲೆಗಳಿಗೆ ಹಂಚಿದ್ದು ನೆನಪಾಗುತ್ತದೆ. 

 ಈ ದೇಶದಲ್ಲಿ ಕ್ರಾಂತಿಯಾಗಲು ಸಾಧ್ಯವಿಲ್ಲ. ಅಂತೆಯೇ ರಾಜೀವ ದೀಕ್ಷಿತರ ಚಳುವಳಿಯು ಮುಂದುವರೆಯಲಿಲ್ಲ. ರಾಜೀವ ದೀಕ್ಷಿತರು ಪ್ರವಾಸಗಳನ್ನು, ಸಾರ್ವಜನಿಕ ಭಾಷಣಗಳನ್ನು ಕಡಿಮೆ ಮಾಡಿದರು. ಕಾರಣ ತಿಳಿಯಲಿಲ್ಲ. ಅವರು ಒಂದು ಹಂತದಲ್ಲಿ ಭ್ರಮನಿರಸನಗೊಂಡರು ಅಂತ ಕೆಲವರೆನ್ನುತ್ತಾರ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಜಾಗತೀಕರಣಕ್ಕೆ ನಾವೆಷ್ಟು ಸಿಲುಕಿಕೊಂಡಿದ್ದೇವೆಂದರೆ ಅದರ ವಿರುದ್ಧ ಮಾತನಾಡುವುದೇ ಹಾಸ್ಯಾಸ್ಪದವಾಗಿದೆ. ಇವತ್ತು ವಿದೇಶಿ ಕಂಪನಿಗಳು ನಮಗೆ ಉದ್ಯೋಗ ಕೊಟ್ಟು, ಸಂಬಳ ಕೊಟ್ಟು ಅದರ ಹತ್ತು ಪಟ್ಟು ಲಾಭ ತೆಗೆದುಕೊಂಡು ಹೋಗುತ್ತಿವೆ ಎಂದು ನಮಗೆ ಗೊತ್ತು. ಆದರೆ ನಾವು ಏನೂ ಮಾಡುವ ಸ್ಥಿತಿಯಲ್ಲಿಲ್ಲ. MNCಗಳನ್ನು ಓಡಿಸಿ ಎಂದರೆ ನಮ್ಮ ಅನ್ನಕ್ಕೇ ನಾವು ಕಲ್ಲು ಹಾಕಿಕೊಂಡಂತೆ. ಯಾವೆಲ್ಲ ದೇಶಿ, ಇನ್ನೆಷ್ಟು ವಿದೇಶಿ ಎಂದು ಈಗ ಪ್ರತ್ಯೇಕಿಸಲಾಗದಷ್ಟರ ಮಟ್ಟಿಗೆ ಪೈಪೋಟಿ ಇದೆ ಮಾರುಕಟ್ಟೆಯಲ್ಲಿಆದರೂ ಆಗಂತುಕನನ್ನು ಮನೆಯ  ಜಗುಲಿಯವರೆಗೆ ಬಿಟ್ಟುಕೊಳ್ಳುವುದಕ್ಕೂ, ಬೆಡ್ ರೂಮಿಗೆ ಕರೆದೊಯ್ಯುವುದಕ್ಕೂ ವ್ಯತ್ಯಾಸವನ್ನು ನಾವು ತಿಳಿದುಕೊಂಡರೆ ಸಾಕು, ಅಮೆರಿಕಾದಿಂದ ಕಂಪ್ಯೂಟರ್ ಸಾಫ್ಟ್ ವೇರ್ ಬಂದಿದೆ ಅಂತ ನಮ್ಮ ಅಡುಗೆ ಮನೆಯನ್ನೂ ಅಮೆರಿಕಾಗೆ ಕೊಡಬೇಕಾಗಿಲ್ಲ ಇವತ್ತಿನ ಕಾಲಕ್ಕೆ ರಾಜೀವ ದೀಕ್ಷಿತರ ವಿಚಾರ ಕೆಲವು ವಿಷಯಗಳಲ್ಲಿ ತಪ್ಪೆನಿಸಬಹುದು. ಆದರೆ ಅದರ ಹಿಂದಿನ ಅವರ ಕಳಕಳಿ, ಪ್ರಾಮಾಣಿಕತೆ, ಪರಿಶ್ರಮ, ಶ್ರದ್ಧೆ, ನಿಷ್ಠೆ, ಎಲ್ಲರೂ ಮೆಚ್ಚುವಂತಹುದು. ದೇಶ ಅಭಿವೃದ್ಧಿ ಹೊಂದಲು, ಸ್ವಾವಲಂಬನೆ ಕಾಯ್ದುಕೊಳ್ಳಲು ರಾಜೀವ ದೀಕ್ಷಿತರಂತಹ ಪ್ರಾಮಾಣಿಕ ಪ್ರಯತ್ನಗಳು ಅಗತ್ಯವಿದೆ.. ನಮ್ಮ ಪ್ರತಿಯೊಂದು ಯೋಚನೆ, ಕೆಲಸಗಳು ಭಾರತವನ್ನು, ಭಾರತೀಯತೆಯನ್ನು ಕೇಂದ್ರವಾಗಿರಿಸಿಕೊಂಡು ನಡೆಯಬೇಕಿದೆ.. ಸ್ವದೇಶಿ ಚಳುವಳಿ ಸಂಘಟನಾತ್ಮಕ ನೆಲೆಯಲ್ಲಿ ಸತ್ತಿರಬಹುದು, ಅದರ ರೂವಾರಿ ಈಗಿಲ್ಲದಿರಬಹುದು. ಆದರೆ ಲಕ್ಷಾಂತರ ಜನರಲ್ಲಿ ವೈಯಕ್ತಿಕ ನೆಲೆಯಲ್ಲಿ ಸ್ವದೇಶೀ ಚಳುವಳಿ ಇನ್ನೂ ಬದುಕಿದೆ. ಅದು ಹಾಗೇ ಇರಲಿ, ಮುಂದುವರೆಯಲಿ. ಹರಡಲಿ  

**************

ಸ್ವದೇಶಿ ಚಳುವಳಿಯ ಬಗ್ಗೆ, ವಿಚಾರಗಳ ಬಗ್ಗೆ ರವಿ ಬೆಳಗೆರೆಯವರು ಸಂಪಾದಿಸಿದ ಆಜಾದಿ ಎಂಬ ಪುಸ್ತಕವೊಂದು ಪ್ರಕಟಗೊಂಡಿದೆ. ಆಸಕ್ತರು ಓದಿ.   

 

Rating
No votes yet

Comments