ಭಂಡರೋ, ಷಂಡರೋ, ಫಂಡ್‌ ಲೂಟಿಕೋರರೋ? ಯಾರು ಹಿತವರು ನಿನಗೆ ಈ ಮೂವರೊಳಗೆ?!

ಭಂಡರೋ, ಷಂಡರೋ, ಫಂಡ್‌ ಲೂಟಿಕೋರರೋ? ಯಾರು ಹಿತವರು ನಿನಗೆ ಈ ಮೂವರೊಳಗೆ?!

ಸಂಸತ್ತಿನ ಇಡೀ ಚಳಿಗಾಲದ ಅದವೇಶನವೇ ಹಗರಣಕ್ಕೆ ಬಲಿಯಾಗುತ್ತಿದೆ. ನಾವೇ ಆರಿಸಿ ಕಳಿಸಿದ ಹೀರೊಗಳ ಧೈರ‍್ಯ-ಸಾಹಸವಿದೆಂದು ಕಾಲರ್ ಮೇಲೆತ್ತಿಕೊಂಡು ಹೆಮ್ಮೆಪಡಬೇಕಷ್ಟೇ!


ಹಗರಣಗಳನ್ನು ಹುಟ್ಟಿಸುವಲ್ಲಿ, ಅದನ್ನು ನಿಭಾಯಿಸುವಲ್ಲಿ ಬಲಪಂಥದ ಭಾಜಪವೂ ಅಷ್ಟೆ, ಎಡಪಂಥದ ಕಮ್ಯುನಿಸ್ಟೂ ಅಷ್ಟೆ, ಅಂತರಾಳದ ಕಾಂಗೆಸ್ಸೂ ಅಷ್ಟೆ - ಎಲ್ಲರ ಮನೆಯ ದೋಸೆಯೂ ತೂತೇ! ಈ ಯಾರ ಮನೆಯ ದೋಸೆಯ ಹಂಗೂ ಬೇಡ; ಬಿಟ್ಟುಬಿಡಿ. ನಮ್ಮದೇ ದೋಸೆ ಹೊಯ್ದುಕೊಳ್ಳೋಣವೆಂದರೂ ದೇಶದ ಮನೆಯ ಕಾವಲಿಯನ್ನೇ ತತಾತೂತು ಮಾಡಿಟ್ಟಿದ್ದಾರಲ್ಲಾ, ಇದಕ್ಕೇನನ್ನೋಣ?!


                ಒಂದೂ ಮುಕ್ಕಾಲು ಲಕ್ಷ ಕೋಟಿ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಯಾರ‍್ಯಾರು ಎಷ್ಟು ತಿಂದರು ಎಂದು ಬಿಚ್ಚಿ ನೋಡಿ ನಾಲಗೆ ಚಪ್ಪರಿಸುವ ಚಪಲ, ಬಿಜೆಪಿಗೆ; ಜಂಟೀ ಪಾರ‍್ಲಿಮೆಂಟರಿ ಸಮಿತಿ ತನಿಖೆಗಾಗಿ ಕೇಳುತ್ತಿದೆ. ಸರಕಾರ ಇದಕ್ಕೆ ಹೂಂ ಎನ್ನಲಾರದಾಗಿದೆ. ಇಷ್ಟರಿಂದಲೇ ಗೊತ್ತಾಗುವುದಿಲ್ಲವೇ, ಅದಕ್ಕೆ ಆ ತಾಖತ್ ಇಲ್ಲವೆಂದು. ಆದರೂ ಜಗ್ಗಿಸಿ-ಜಗ್ಗಿಸಿ ಕೇಳುವುದರಿಂದೇನು ಪ್ರಯೋಜನ? ತಿಂದವರ‍್ಯಾರೂ ಕಕ್ಕುವುದಿಲ್ಲ; ಕೇವಲ ಕಾಲಹರಣ; ದಕ್ಕಿಸಿ ಜೀರ್ಣಿಸಿಕೊಳ್ಳುವುದಕ್ಕೆ ತಿಂದವರಿಗೇ ಮತ್ತೂ ಕಾಲಾವಕಾಶ! ಇದು ಕಸುವಿಲ್ಲದ ಹಠ. ಇದರಿಂದ ಆಳುವವರು ನೈತಿಕವಾಗಿ ಭಂಡರಾಗುತ್ತಿದ್ದಾರೆ; ಅರೋಪಿಸುವ ಅವರು ಷಂಡರೆನಿಸಿಕೊಳ್ಳುತ್ತಿದ್ದಾರೆ! ಭತ್ತೆ ಸಂಬಳಗಳಿಗಂತೂ ಯಾರಿಗೂ ಮೊಸವಿಲ್ಲ!


                ಮೋಸವಾಗುತ್ತಿರುವುದು ನಮಗೆ, ಈ ತುದಿಯ ನಾಡಾಡಿ ಜನತಾ ಮತದಾರರಿಗೆ. ನಾಳೆ ನಾವು ಯಾರಿಗೆ ವೋಟು ಹಾಕೋಣ? ಭಂಡರಿಗೊ, ಷಂಡರಿಗೋ, ಫಂಡ್ ಲೂಟಿಕೋರರಿಗೋ? ಇದು ನಮ್ಮದಷ್ಟೇ ಅಲ್ಲವೇ ಸಮಸ್ಯೆ?