ಅಂತ್ಯವೆಂಬ ಆರಂಭ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦
ಅಂತ್ಯವೆಂಬ ಆರಂಭ
ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦
(೧೨೧)
"ಅದೇ ಹಾಡು ಕನಸಿನಲ್ಲಿ ಮತ್ತು ನನಸಿನಲ್ಲಿ. ಆದರೆ ಒಂದು ನಿಜದ ವ್ಯತ್ಯಾಸವಾಗದ ಕಾಲದಲ್ಲಿ. ಮತ್ತೊಂದು ಹೇಗೆ ಬೇಕಾದರೂ ಮಾರ್ಪಾಡುಗೊಳ್ಳುವ ಕನಸಿನಲ್ಲಿ. ಹೇಗೆ ಸಾಧ್ಯವಿದು?"
ಶೌಮಿಕನೊಂದಿಗೆ ಮಾತಿಗಿಳಿಯುವದು ಕನ್ನಡ ಸೀರಿಯಲ್ಲನ್ನು ದೂರದರ್ಶನದಲ್ಲಿ ಆನ್ ಮಾಡಿ ರಿಮೋಟ್ ಕಳೆದುಹಾಕಿದಂತೆ. "ವಾದ ಮಾಡಿದರೆ ನನ್ನಾಣೆ" ಎನ್ನುವ ಆದೇಶವಿರುತ್ತದೆ ಆತ ಮಾತನಾಡುವ ಪ್ರತಿ ವಿಷಯ ಮತ್ತು ಭಾವದಲ್ಲಿ. ಆತ ಮತ್ತು ನಾನು ಒಂದೇ ಬ್ಯಾಚಿನವರು. ನಾನು ಬೆಂಗಳೂರಿನಿಂದ ಶಾಂತಿನಿಕೇತನಕ್ಕೆ ಹೋದಾಗ ಆತ ಅಲ್ಲಿಂದ ಬರೋಡಕ್ಕೆ ಹೋಗಿದ್ದ ಸ್ನಾತಕೋತ್ತರ ಪದವಿಯ ಅಧ್ಯಯನಕ್ಕೆ. "ಅಂದರೆ ನಾವಿಬ್ಬರೂ ಕಾಲ, ಸ್ಥಳ, ಮಾತೃಭಾಷೆ ಮತ್ತು ಇನ್ನೆಲ್ಲ ವಿಷಯಗಳಿಂದಷ್ಟೇ ವ್ಯತ್ಯಾಸವಿದ್ದ ಅವಳಿ-ಜವಳಿಗಳು ನಾವು" ಎಂಬುದು ನಮ್ಮಿಬ್ಬರ ಬಗ್ಗೆ ಆತನೋಬ್ಬನಿಗೇ ಇದ್ದ ಅಭಿಪ್ರಾಯ.
"ಈ ಎಲ್ಲ ಆಗುಹೋಗುಗಳು ಈಗ ನಿನ್ನ ಅನುಭವಕ್ಕೆ ಈಗಲೇ ಬರಬೇಕಿತ್ತು. ಒಂದು ವಿಷಯ ತಿಳಿದುಕೋ: ನಾವು ಬಯಸಿದ್ದು ಮಾತ್ರ ನಡೆಯುತ್ತದೆ," ಎಂದು ಮತ್ತೇನನ್ನೂ ಮಾತನಾಡುವ ಮುನ್ನವೇ ನಾನು ಮಾತನಾಡತೊಡಗಿದೆ, "ಈ ಕೂಡಲೇ ನಮ್ಮಿಬ್ಬರ ಮಾತು ಬಂದ್ ಆಗಿಬಿಟ್ಟರೆ ಅದೆಷ್ಟು ಚಂದ. ಇಬ್ಬರಾದರೂ ಕಲಾ ಇತಿಹಾಸದ ಪ್ರಾಧ್ಯಾಪಕರ ಕಾಟದಿಂದ ಒಂದು ಹದಿನೈದು ಬ್ಯಾಚ್ ಕಲಾವಿದರು ಬಚಾವಾಗುತ್ತಾರೆ," ಎಂದೆ.
ಶೌಮಿಕ್ ಹಸನ್ಮು ಖಿಯಾದ, "ನೀನು ವಾಪಸ್ ಶಾಂತಿನಿಕೇತನಕ್ಕೆ ಬರದಿದ್ದಲ್ಲಿ ಅಂದಿನ ಕಲಾಭಾವನವೇ ನಿನ್ನ ತಲೆಯಲ್ಲಿ ಇರುತ್ತಿತ್ತೆ ಹೊರತು ಇಂದಿನದಲ್ಲ, ಅಲ್ಲವೆ?"
"ಹೌದು"
"ನೀನು ಶಾಂತಿನಿಕೇತನದಲ್ಲಿ ಎಂದೂ ಓದದೆಯೇ ಇದ್ದಿದ್ದರೆ ಎಚ್.ಎಸ್.ರಾಘವೇಂದ್ರರಾವ್ ಅವರ 'ಜನ ಗಣ ಮನ' ಪುಸ್ತಕವೇ ನಿನ್ನ ಕಲ್ಪನೆಯ ಶಾಂತಿನಿಕೇತನ ಆಗಿರುತ್ತಿತ್ತು. ಅಲ್ಲವೆ?"
"ಹೌದು"
"ಇದನ್ನು ತಿರುವು ಮರುವು ಮಾಡಿ ಹೇಳು ನೋಡುವ" ಎಂದ.
"ಅದೇ, ಇಷ್ಟಪಟ್ಟು 'ಜನ ಗಣ ಮನ'ವನ್ನು ಹುಡುಕಿ ಓದಿದ್ದರಿಂದ, ಮೊದಲೇ ಇದ್ದ ಕಲಾಭಾವನದ ಆಕರ್ಷಣೆ ಉದ್ದೀಪಿತವಾಯ್ತು. ಆದ್ದರಿಂದ ಇಲ್ಲಿ ಓದಲು ಬಂದೆ. ಬಂದದ್ದರಿಂದಲೇ ಇಲ್ಲಿ ಸೀಟು ಸಿಕ್ಕಿತು."
"ಸರಿಯಾಗಿದೆ ವಿಶ್ಲೇಷಣೆ. ಭೇಷ್. ನೀನು ಕಲಾಭಾವನದ ಮಾನವನ್ನು ಇನ್ನೂ ಕೆಳಕ್ಕೆ ಹೋಗುವದನ್ನು ತಡೆಹಿಡಿದಿದ್ದಿಯ. ಏಕೆಂದರೆ ಇನ್ನೂ ಕೆಳಗೆ ಹೋಗಲು ಅವಕಾಶವೇ ಇಲ್ಲ ಅದಕ್ಕೆ", ಎಂದು ನಗತೊಡಗಿದ ಶೌಮಿಕ. ಸುತ್ತಲಿದ್ದವರೆಲ್ಲ ನಮ್ಮನ್ನೇ ನೋಡತೊಡಗಿದರು. ಕಲಾ ಇತಿಹಾಸದ ವಿದ್ಯಾರ್ಥಿನಿಯೊಬ್ಬಳು ಬೆಂಗಾಲಿಗಳು ಮಾತ್ರ ಮಾಡಬಲ್ಲ ವಯ್ಯಾರ ಮಾಡುತ್ತಾ, "ಏನಾಯ್ತು ಶೌಮಿಕ್ ದಾ, ಯಾಕೆ ನಗ್ತಾ ಇದ್ದೀರಾ?" ಎಂದು ದೀರ್ಘವಾಗಿ ಸುದೀರ್ಘ ರಾಗ ತೆಗೆಯುತ್ತ ಹತ್ತಿರ ಬಂದಳು. ಆತನಿಗೆ ಇರಿಸು ಮುರಿಸು ಆಗತೊಡಗಿತು.
"ನಂದಲಾಲ್ ಬೋಸರು ರಚಿಸಿದ ಸಿಮೆಂಟು ಗಾಂಧೀ ಚಿತ್ರ ಹುಡುಕಿ ತೆಗೆಯಿರಿ ಅಂತ ಹೇಳಿದೆ. ಪತ್ತೆಹಚ್ಚಿದರ?" ಎಂದು ಸಿಟ್ಟು ನಟಿಸಿದ. ಆತ ಸಿಟ್ಟು ನಟಿಸುತ್ತಿರುವದು ಆಕೆಗೆ ಗೊತ್ತಾದಂತಿತ್ತು. ಆದರೂ ಆಕೆ ಆತ ಸಿಟ್ಟುಗೊಂದಿದ್ದಾನೆ ಎಂಬಂತೆ ನಟಿಸುತ್ತ, ಆ ಸಿಟ್ಟಿನಿಂದಾಗಿ ತನಗೆ ಭಯವಾಗಿದೆ ಎಂದೂ ನಟಿಸುತ್ತ, ಧ್ವನಿಯನ್ನು ತೀರ ಆಳಕ್ಕಿಳಿಸಿ, "ಇಲ್ಲ ಶೌಮಿಕ್ ದಾ, ಒಂದು ತಿಂಗಳಿಂದ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ಅದು ಎಲ್ಲಿದೆ ಅಂತ ಗೊತ್ತಿದ್ಧರೆ ಒಂದೇ ದಿನದಲ್ಲಿ ಹುಡುಕಿಬಿಡುತ್ತಿದ್ದೆ", ಎಂದಳು.
ಮತ್ತೆ ನಾನು ಶೌಮಿಕ್ ನಗತೊಡಗಿದೆವು. ಆಕೆ ಮತ್ತೂ ಗಾಭರಿಯಾದಳು. "ಎರಡನೇ ಸಲವೂ ನಗಬೇಡಿ. ನಿಮ್ಮಗಳ ಮೊದಲ ನಗುವಿಗೇ ಕಾರಣವಿನ್ನೂ ತಿಳಿದಿಲ್ಲ. ಎರಡನೆಯದನ್ನು ಶುರು ಮಾಡಿಕೊಂಡಿದೀರ. ಏತೊವ್ ಹಮಾಕೆ ಬಾಳು ಲಗ್ಚೆ ನಾ" ಎಂದು ಹುಸಿಮುನಿಸು ತೋರಿದಳು.
(೧೨೨)
"ಅದೆಲ್ಲ ಬಿಡಿ. ಕನಸು ಕಂಡರೆ, ಏನಾದರೂ ಬೇಕೇ ಬೇಕೆಂದು ಆಸೆಪಟ್ಟರೆ ಅದು ಸಿಕ್ಕೆಸಿಗುತ್ತದೆ ಅನ್ನುವುದು ಪ್ರಕ್ಶುಬ್ದನ ವಾದ. ನಿನ್ನ ಅಭಿಪ್ರಾಯ ಹೇಳು ಭವಿಷ್ಯದ ಕಲಾ ಇತಿಹಾಸಕಾರ್ಥಿಯೇ" ಎಂದು ನಾತಕೀಯವಾಗು ಶೌಮಿಕ್ ಆ ಹುಡುಗಿಯನ್ನು ಸತಾಯಿಸತೊಡಗಿದ.
"ಪ್ರಕ್ಷುಬ್ದ ಅಂದರೆ ಏನು ಶೌಮಿಕ್ ದಾ?" ಎಂದು ಮರುಪ್ರಶ್ನೆ ಕೇಳಿದಳು ಆಕೆ.
"ಆಹಾ, ಮಿಲಿಯನ್ ಡಾಲರ್ ಪ್ರಶ್ನೆ ಇದು. ಇದನ್ನು ಕೇಳಲು ಅನಿಲ್ ಸುಮಾರು ಇಪ್ಪತ್ತು ವರ್ಷ ವ್ಯಯ ಮಾಡಿದರೆ ನೀನು ಕಲಾಭವನ ಸೇರಿದ ಆರೇ ತಿಂಗಳಲ್ಲಿ ಪ್ರಕ್ಷುಬ್ದ ಅಂದರೇನು ಎಂದು ಕೇಳಿಬಿಟ್ಟೆಯಲ್ಲ.
ಶಹಬ್ಬಾಸ್."
"ಹಾಗಾದರೆ ನಾನು ನಂದಲಾಲ್ ಬೋಸರ ಗಾಂಧೀ ಭಿತ್ತಿಚಿತ್ರ ಹುಡುಕುವ ಅಸಿನ್ಮೆಂಟ್ ರದ್ದಾಯಿತೆ ಶೌಮಿಕ್ ದಾ!" ಎಂದು ಉತ್ಸಾಹದಿಂದ ಕೇಳಿದಳು.
ನಾನು ಶೌಮಿ ಮುಖ ಮುಖ ನೋಡಿಕೊಂಡೆವು. ಹಾಗೂ ಹೀಗೂ ಈ ಹುಡುಗಿಯನ್ನು ಸಾಗುಹಾಕಬೇಕು ಎಂದು ಕಣ್ಣಲ್ಲೇ ಮಾತನಾಡಿಕೊಂಡೆವು.
"ಹೋಗಮ್ಮ. ಗಾಂಧಿಯ ಬಿತ್ತಿಚಿತ್ರ ಹುಡುಕು. ಪ್ರಕ್ಷುಬ್ದತೆ ಎಂಬುದು ತಾನೇತಾನಾಗಿ ಬರುತ್ತದೆ," ಎಂದ, ಆಕೆಗೆ ಏನೂ ಅರ್ಥವಾಗಲಿಲ್ಲ ಮತ್ತು ಮುಂದು ಅರ್ಥವಾಗುವುದೂ ಇಲ್ಲ ಎಂಬ ಭಾವದಲ್ಲಿ. ಆಕೆ ತಿರುಗಿಬಿದ್ದಂತೆ, ಹಠ ಹಿಡಿದಂತೆ ಮಾತನಾಡತೊಡಗಿದಳು, "ಪ್ರಕ್ಷುಬ್ದ ಒಬ್ಬ ಕ್ರಾಕ್ ಇರಬೇಕು ಶೌಮಿಕ್ ದಾ" ಎಂದುಬಿಟ್ಟಳು. ನಾವಿಬ್ಬರೂ ಕುತೂಹಲಗೊಂಡೆವು. ಇದೊಂದು ಮತ್ತೊಂದು ಹೊಸ ತಿರುವು ಅಂದುಕೊಂಡೆವು.
"ನೀನಿನ್ನೂ ನೋಡಿರದ ಪ್ರಕ್ಶುಬ್ದನ ವಾದವನ್ನು ತೆಗೆದು ಹಾಕುವುದಿರಲಿ, ಆತನನ್ನು ಕ್ರಾಕ್-ಪಾಟ್ ಅಂತ ಹೇಗೆ ನಿರ್ಧಾರ ಮಾಡಿಬಿಟ್ಟೆ?" ಎಂದು ಕೇಳಿದೆ.
"ತುಂಬಾ ಸರಳ. ನಾವು ಬಯಸಿದ್ದೆಲ್ಲ ಆಕಾರ ಪಡೆದುಕೊಂಡುಬಿಡುವಂತಿದ್ದರೆ, ಕಲಾಭವನದಲ್ಲಿ ಓದಬೇಕು ಎಂದು 'ಬಯಸಿ' ಬರುವವರಿಗೆಲ್ಲ ಏಕೆ ಸೀಟು ಸಿಗುವುದಿಲ್ಲ?! ಇದ್ಯಾವದೋ ತಿಕ್ಕಲು ಪ್ರಕ್ಶುಭ್ದ-ವಾದವೇ ಇರಬೇಕು" ಎಂದುಬಿಟ್ಟಳು.
(೧೨೩)