ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೧
ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೧
(೧೨೫)
ಶೌಮಿಕ್ ಕೇಳಿದ್ದ ಮೊದಲ ಪ್ರಶ್ನೆ, "ನಿಜ ಹೇಳು ಅನಿಲ್. ನಾವು ಎಚ್ಚರದ ಮಧ್ಯೆ ನಿದ್ರಿಸುತ್ತೀವ ಅಥವಾ ಸುದೀರ್ಘ ನಿದ್ರೆಯ ಮಧ್ಯೆ ಆಗಾಗ ಎಚ್ಚರಗೊಳ್ಳುತ್ತೇವ? ನಿದ್ರೆಯನ್ನು ಫ್ರಾಯ್ಡ್ ಮತ್ತು ಯುಂಗ್ ಅವರುಗಳ ಸ್ವತ್ತು ಮಾತ್ರವಲ್ಲ. ಒಂದು ಗಂಟೆಯ ನಿದ್ರೆಯಲ್ಲಿ ನೂರಾರು ಗಂಟೆಯ ಘಟನೆಗಳು ನಡೆದುಬಿಟ್ಟಿರುತ್ತವೆ. ಇನ್ನೂ ವಿಚಿತ್ರವೆಂದರೆ ಅಲ್ಲಿನ ಎಲ್ಲ ಘಟನೆಗಳೂ ನಿಜ ಜೀವನದಂತೆ ಒಂದೇ ಸಮಪ್ರಮಾಣದ ಕಾಲವನ್ನು ಅನುಸರಿಸಲು ನಿರಾಕರಿಸುತ್ತವೆ. ಅಂದರೆ ಕನಸಿನಲ್ಲಿ ಮಹಡಿಯಿಂದ ನೀನು ಬಿದ್ದೆ ಅಂದುಕೋ. ಸ್ಲೋ ಮೋಷನ್ನಿನಲ್ಲಿ ನೀನು ನೆಲ ತಲುಪುತ್ತೀಯ. ತಲುಪಿದಾಗ ಗಾಯಗೋಳ್ಳುವದಿಲ್ಲ. ಕಾಲನ ಕೃಪೆಯದು. ಏಕೆಂದರೆ ಕಾಲನು ನಿಜ ಜೀವನದಲ್ಲಿ ನಡೆವಂತೆ ಕನಸಿನಲ್ಲೂ ನಡೆದುಬಿಟ್ಟರೆ, ನಿದ್ರೆಯಿಂದ ಎದ್ದಾಗ ಕಾಲುಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಒಪ್ಪಿಗೆ ಇಲ್ಲದೆ ಕಾಲ ಹಾಗೆ ಮಾಡಲಾರ ಕನಸಿನಲ್ಲಿ. ಎಚ್ಚರವಿರುವಾಗ ಇದು ತದ್ವಿರುದ್ದ. ಕಾಲನ ಒಪ್ಪಿಗೆ ಇಲ್ಲದೆ ನಾವೆನನ್ನೂ ಮಾಡಲಾರೆವು! ಅದೇ ಕನಸಿನಲ್ಲಿ, ನೆಲಕ್ಕೆ ಸ್ಲೋ ಮೋಷನ್ನಿನಲ್ಲಿ ತಲುಪಿದಾಗ, ಎಷ್ಟೋ ವರ್ಷಗಳ ಹಿಂದೆ ಸತ್ತ ನಿನ್ನ ಗೆಳೆಯ ನಿನ್ನನ್ನು ಭೇಟಿ ಮಾಡಬಹುದು. ಅಂದರೆ ಕಾಲನು ನಿನ್ನ ಆಣತಿಯಂತೆ ಮತ್ತೆ ಹಿಮ್ಮುಖವಾಗಿ ಚಲಿಸುತ್ತಾನೆ. ಮತ್ತು ನಿಜ ಜೀವನವನ್ನೇ ಸತ್ಯವೆಂದು ನಂಬಿರುವ ಮಾನವರಿಗೆ ಕನಸಿನಲ್ಲಿ, ಅದೂ ತನ್ನದೇ ಆಣತಿಯಂತೆ ಕಾಲ ಹಿಮ್ಮುಖವಾದುದನ್ನು ಅದೇ ಮಾನವರು ಅರಗಿಸಿಕೊಳ್ಳಲಾರರು ಎಂಬ ಅರಿವು ಕಾಲನಿಗೆ ಚೆನ್ನಾಗಿ ಇರುತ್ತದೆ. ಆದ್ದರಿಂದ ಸತ್ತವರು ಕನಸಲ್ಲಿ ಎದುರಾದಾಗ, ಅವರು ಸತ್ತಿದ್ದಾರೆ ಎಂದು ಕನಸಲ್ಲೂ ನಮಗೆ ತಿಳಿದಾಗಲೂ ಸಹ ನಾವು ಅಲ್ಲಿ 'ಸತ್ತಿದ್ದಾರೆ' ಎಂಬುದನ್ನು 'ಎಲ್ಲೋ ಕೆಲವೇ ದಿನಗಳ ಹಿಂದೆ ಹೋಗಿ ಈಗ ಬಂದಿದ್ದಾರೆ' ಅಂದುಕೊಳ್ಳುವಂತೆ ಮಾಡಿಬಿಡುತ್ತಾನೆ ಕಾಲ!! ಕನಸು ಮತ್ತು ನಿಜಗಳ ನಡುವಿನ ಕಾಲನ ಚಲನೆ ಬಹಳ ಏಕಾಗ್ರವಾದುದು. ಅವನಿಗೆ ನಿರ್ದಿಷ್ಠವಾದುದು.
ಸ್ವತಹ ಪ್ರತಿಯೊಬ್ಬನ ಆಣತಿಯಂತೆ ಅವರವರ ಕನಸಲ್ಲಿ ವಿನಮ್ರನಾಗಿ ನಡೆವ ಕಾಲನು ಈ ಕನಸು ಮತ್ತು ನನಸುಗಳ ನಡುವಣ ಗೋಡೆಯ ತಂಟೆಗೆ ಬಂದರೆ ಮಾತ್ರ ಬಹಳ ಶಿಸ್ತಿನವನಾಗಿಬಿಡುತ್ತಾನೆ. ಸಾವಿಗೂ ಕನಸಿಗೂ ಇರುವ ನಂಟು ಇದು. ಪ್ರಕ್ಷುಬ್ದ, ಅನುಶ್ರೀ ಮತ್ತು ನಾನು ನಿನಗೆ ಪರಿಚಯಿಸಿದೆ ಅಂತ ನೀನು ತಿಳಿದುಕೊಂಡಿರುವ ಆಕೆಯ ತಂದೆ ಅರುಣ್ ಕುಮಾರ್ ಪಾಲ್--ಇವರೆಲ್ಲರೂ ನಿನಗೆ 'ನಿಜ' ವಾಗಿರಲಿಕ್ಕೆ ಕಾರಣ ನೀನು ಆ ಕನಸು-ನನಸು ಗೋಡೆಯನ್ನು ಬಿರುಕುಗೊಳಿಸಿರುವುದರಿಂದ ಉಂಟಾದುದು. ನೀನು ಇದರ ಪರಿಣಾಮಕ್ಕೆ ತಯಾರಾಗಿರಬೇಕು. ನಿನ್ನ ಎಚ್ಹರ ನಿನ್ನ ಪ್ರಜ್ಞೆಯ ಪರಿಧಿಯೋಳಗಿರಲಿ," ಎಂದು ಸುದೀರ್ಘ ಭಾಷಣ ಬಿಗಿದಿದ್ದ.
ನನಗೋ ರೈಲುಗಾಡಿ ತಪ್ಪೀತೆಂಬ ಭಯ. ಸಂಜೆ ಆರರ ಗಾಡಿ ತಪ್ಪಿದಲ್ಲಿ ಮದ್ಯರಾತ್ರಿಗೆ ಮುಂದಿನ ಗಾಡಿ ಇರುವುದು. ಆದರೆ ಈ ನನ್ನ ವ್ಯಕ್ತಿತ್ವದ ಯಾವುದೋ ಅವ್ಯಕ್ತ ಗೋಡೆ ದಾಟುವ ಅವಕಾಶವನ್ನು ಸುಲಭಕ್ಕೆ ಕಳೆದುಕೊಳ್ಳಲು ಸುತಾರಾಂ ತಯಾರಿರಲಿಲ್ಲ. ಯಾವುದಕ್ಕೂ ಇರಲಿ ಎಂದು ತಯಾರಾಗಿ ನಿಂತೆ.
(೧೨೬)
ಅಂದು ಅಲ್ಲಿಂದ ಆದುದೆಲ್ಲ ಎದೆ ಡವಡವಗುತ್ತಿಸುವ ವೇಗದಲ್ಲಿ ನಡೆಯಿತು ಅಂತಲೇ ಅನ್ನಿಸುತ್ತಿದೆ, ಈಗ. ಎರಡೂವರೆಯಾದರೂ ನಮ್ಮಗಳ ಬಿಲ್ ಪಾವತಿಯಾಗಲಿಲ್ಲ. ಒಮ್ಮೆ ಶಾಂತಿನಿಕೇತನದಿಂದ ಹೊರಟುಬಿಟ್ಟರೆ ಮತ್ತೆಂದೂ ಬಿಲ್ಲ ಬರುವ ಸಾಧ್ಯತೆ, ನಂಬಿಕೆ ಎರಡೂ ನಮಗಿರಲಿಲ್ಲ. ಏಕೆಂದರೆ ನಾನು ಅಲ್ಲಿಯೇ, ಅದೇ ಮಂದಿಯೊಂದಿಗೆ ಆಡಿ, ಗುದ್ದಾಡಿ ಬೆಳೆದವನು.
"ಇನ್ನೂ ಅರ್ಧಗಂಟೆಯಾಗುತ್ತದೆ" ಎಂದರು ಶೌಮಿಕ್ ಮತ್ತು ಪರ್ವೇಜ್. ಇವರಿಬ್ಬರೂ ಕಲಾ ಇತಿಹಾಸದ ಉಪಾಧ್ಯಾಯರು ಎಂದು ಮತ್ತೊಮ್ಮೆ ಹೇಳಬೇಕಿಲ್ಲವಷ್ಟೇ. ಹೆಚ್ಚೂಕಡಿಮೆ ನನ್ನ ವಾರಗೆಯವರೇ. ಪರ್ವೇಜ ಮಾತ್ರ ಮುಂದಿನ ತಲೆಮಾರಿಗೆ ಸೇರಿದಾಟ. ಇದೆ ವ್ಯಕ್ತಿಗೇ ಹಿಂದೊಮ್ಮೆ ಕಲಾಇತಿಹಾಸದ ವಿಭಾಗದಲ್ಲಿ ಮಧ್ಯರಾತ್ರಿಯಲ್ಲೊಮ್ಮೆ ಹಿರಿಯ ಕಲಾವಿದಗುರುಗಳ ಆತ್ಮವು ಮುಕ್ಕಾಲು ಗಂಟೆ ಕಾಲ ಆಟಕಾಯಿಸಿಕೊಂಡಿದ್ದದ್ದು. ಆದರೆ ಈಗ, ಈ ಎಲ್ಲ ಘಟನೆಗಳ ಸುತ್ತಲಿನ ಆಗುಹೋಗುಗಳಲ್ಲಿ ಆತ ಎದ್ದು ಕಾಣುವಷ್ಟು ಮೌನವಹಿಸಿದ್ದದ್ದು ನನಗೆ ಸ್ಪಷ್ಟವಾಯಿತು. ಆದರೆ ಅದರಲ್ಲಿ ನನಗೆ ವಿಶೇಷವೇನು ಕಾಣಲಿಲ್ಲ.
ಇನ್ನೂ ಅರ್ಧಗಂಟೆ ಇರುವುದರಿಂದ ವಿದ್ಯಾರ್ಥಿಯೊಬ್ಬನ ಸೈಕಲ್ ತೆಗೆದುಕೊಂಡು ಶ್ರಿನಿಕೇತನದ ಕಡೆಗೆ ಸವಾರಿ ಹೊರಟೆ. ಒಂದು ಅಂದಾಜಿನ ಮೇಲೆ ಎಲ್ಲರೂ ಕಾಲ್ಪನಿಕ ವ್ಯಕ್ತಿಯೆಂದು ಅನುಮಾನ ಪಟ್ಟ ಅರುಣ್ ದಾ ಹೇಳಿದ ವಿಳಾಸ ಹುಡುಕಿ ಹೊರಟೆ. ಅದು ಅರುಣ್ ದಾರ ಮನೆಯೇ. ಸುಮಾರು ನಾಲ್ಕು ಕಿಲೋಮೀಟರ್ ಹೋದಾಗ ಅವರು ಹೇಳಿದ್ದ ಬಾಡೂಟದ ಗುಡಿಸಲು ಕಾಣಿಸಿತು. ಅದರ ಹಿಂದೆಯೇ, ಗುಡಿಸಲ ಗೋಡೆಗೆ ಅಂಟಿ ಇದ್ದದ್ದೇ ಅವರ ಮನೆಯಂತೆ!
ಅಲ್ಲಿ ಯಾವುದೇ ಮನೆ ಇರಲಿಲ್ಲ. ಒಂದು ಅತಿ ಸಣ್ಣದಾದ ಗುಡಿಸಲಿತ್ತು. ಅಲ್ಲೇ ಅಡ್ಡದತೊಡಗಿದ್ದನ್ನು ನೋಡಿ ಬಾಡೂಟದ ಅಂಗಡಿಯ ಒಡೆಯ ಏನು ಎತ್ತ ಎಂದು ನನ್ನನ್ನು ವಿಚಾರಿಸಿದ. "ಅರುಣ್ ದಾ ರ ಬಾಡಿ (ಮನೆ) ಇದೇನಾ?" ಎಂದೇ.
ಆತನಿಗೆ ಆಶ್ಚರ್ಯ. "ಅರುಣ್ ದಾನ? ಯಾರು ಸೈಕಲ್ ರಿಕ್ಷಾ ತುಳಿಯುತ್ತಾರಲ್ಲ ಅವನ?" ಎಂದ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅಲ್ಲಿ ಅರುಣ್ ಎಂಬ ಮುದಿಯನಿದ್ದ. ಕಡುಬಡವನಾತ. ಅಂತಹವನನ್ನು ದಾದಾ ಎಂದು ಕರೆದದ್ದು ಆತನಿಗೆ ಸರಿಕಾಣಲಿಲ್ಲ. ಅಷ್ಟರಲ್ಲಿ ಅರುಣ್ ದಾ ಎಂಬಾತ ಅಲ್ಲಿಗೆ ಬಂದ. ಹಂಚಿಕಡ್ಡಿಯಂತಿದ್ದ ಈತ ನಾನು ಪಾರ್ಟಿಯಲ್ಲಿ, ಡೀರ್ ಪಾರ್ಕಿನಲ್ಲಿ ಭೇಟಿಮಾಡಿದ ಹೈಫೈ ವ್ಯಕ್ತಿ ಅಲ್ಲವೇ ಅಲ್ಲ ಎಂದು ಮೊದಲ ನೋಟಕ್ಕೆ ಅನ್ನಿಸಿಬಿಟ್ಟಿತು. ಕುರುಚಲು ಗಡ್ಡ, ಹರಿದ ಮಾಸಿದ ಅಂಗಿ. ಎಳೆದರೆ ಅಂಗಿಯೊಂದಿಗೆ ಅಂಗೈ ಕೂಡ ಕಿತ್ತುಬರುವಂತ ಪೀಚು ದೇಹ. "ಏನೋ ತಪ್ಪಾಗಿದೆ" ಎಂದು ಸೈಕಲ್ ತಿರುಗಿಸಿದೆ. ಮತ್ತೇನೋ ಅನುಮಾನ ಬಂದು ಅರುಣ್ ಎಂಬಾತನ ಬಳಿ ಹೋಗಿ ಆತನಿಗೆ ಬಾಡೂಟದ ಅಂಗಡಿಯಲ್ಲೇ ಚಹಾ ಕೊಡಿಸಿ ಮಾತನಾಡಿಸತೊಡಗಿದೆ.
"ಅರುಣ್ ದಾ. ನಿಮಗೆ ಅನುಶ್ರೀ ಎಂಬ ಮಗಳಿದ್ದಾಳೆಯೇ?" ಕೇಳಿದೆ.
"ಇದ್ದಾಳೆ ಅಲ್ಲ. ಇದ್ದಳು. ಈಗ್ಗೆ ಸತ್ತು ಹತ್ತು ವರ್ಷವಾಯಿತು" ಎಂದಾಗ ನಾನು ಶೌಮಿಕ್ ಹೇಳಿದ ಕನಸು-ನನಸಿನ ಗೋಡೆಯ ಮೇಲುಭಾಗದಲ್ಲಿ ಕುಳಿತಿದ್ದೆ!!
ಅನುಶ್ರೀ ಎಂಬ ಅರುಣ್ ದಾ ಎಂಬ ಸೈಕಲ್ ರಿಕ್ಷಾ ಸವಾರನ ಮಗಳು ಹತ್ತು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ. ಹತ್ತನೇ ತರಗತಿವರೆಗೆ ಮಾತ್ರ ಓದಿದ್ದಳಂತೆ. ಆಕೆಗೊಬ್ಬ ಗಂಡು ಗೊತ್ತಿದ್ದನಂತೆ. ಆತ ದುಬೈಗೆ ಕೆಲಸಕ್ಕೆ ಹೋದಾತ ಹಿಂದಿರುಗಿ ಬರಲೇ ಇಲ್ಲವಂತೆ. ಈಕೆ ಕಾದು ಕಾದು ಕೊನೆಗೊಮ್ಮೆ ಯಾರೋ ಕೊಟ್ಟ ಸುದ್ದಿ ನಂಬಿಬಿಟ್ಟಳಂತೆ. ಆತ ಡ್ರೈವರ್ ಮತ್ತು ಸಹಾಯಕನಾಗಿ ದುಬೈಗೆ ಹೋದಾತ ಹೃದಯಾಘಾತದಿಂದ ಸತ್ತನೆಂಬ ಸುದ್ದಿ ಬಂದಿತ್ತಂತೆ. ಎಲ್ಲವೂ ಅಂತೆಕಂತೆ. ಇಷ್ಟೆಲ್ಲಾ ಕಥೆ ಕೇಳುತ್ತ ಆತನ ಮುಖವನ್ನೇ ನೋಡ ನೋಡುತ್ತಾ ಒಂದು ಆಶ್ಚರ್ಯ ನಡೆಯಿತು. ಪಾರ್ಟಿಯಲ್ಲಿ ಸಿಕ್ಕ ಅರುಣ್ ದಾ ಮತ್ತು ಈ ರಿಕ್ಷವಾಲ ಅರುಣ್ ದಾರಿಗೆ ಒಂದು ಮುಖಚಹರೆಯ ಹೋಲಿಕೆ ಕಾಣತೊಡಗಿತ್ತು!!
ಆಕೆಯ ಫೋಟೋ ಏನಾದರೂ ಇದೆಯೇ ಎಂದು ವಿಚಾರಿಸಿದೆ. ಆತ ಏನು ಎತ್ತ ಎಂದು ವಿಚಾರಿಸದೆ ತನ್ನ ಗುಡಿಸಲಿನ ಬಟ್ಟೆಗಂಟಿನಿಂದ (ಎಲ್ಲ ಹಳೆಯ ಸಿನೆಮಾಗಳಲ್ಲಿ ಆಗುವಂತೆ) ಒಂದು ಫೋಟೋ ತೋರಿಸಿದ. ಬಣ್ಣದ ಚಿತ್ರವನ್ನು ನೀರಲ್ಲಿ ನಾಲ್ಕುದಿನ ನೆನೆಹಾಕಿದಂತಿತ್ತು ಆ ಚಿತ್ರ. ಅಲ್ಲಿದ್ದಳು ಅನುಶ್ರಿ! ಆಶ್ಚರ್ಯವೆಂದರೆ ಬೆಳಿಗ್ಗೆ ನಂದಲಾಲ ಬೋಸರ ಗಾಂಧೀ ಭಿತ್ತಿಚಿತ್ರದಾ ಬಗ್ಗೆ ಶೌಮಿಕನ ಬಳಿ ವಾದ ಮಾಡಿದ್ದ, "ನಂಬಿದ್ದೆಲ್ಲ ನಿಜವಾಗುವದಾದರೆ ಕಲಾಭಾವನಕ್ಕೆ ಸೇರಬೇಕು ಎಂದುಕೊಂಡು ಬರುವವರಿಗೆಲ್ಲ ಯಾಕೆ ಸೀಟು ಸಿಗುವದಿಲ್ಲ?" ಅದೇ ಹುಡುಗಿಯನ್ನು ಹೋಲುತಿತ್ತು ಆ ಮುಖ! ಏನೋ ಅನುಮಾನ ಬಂದು "ಆಕೆಗೆ ಗೊತ್ತು ಮಾಡಿದ್ದ ಆ ಹುಡುಗನ ಹೆಸರೇನು?" ಎಂದು ಕೇಳಿದೆ.
ಆತ ತಲೆ ಕೆರೆದುಕೊಂಡ. ನೆನಪಾಗಲಿಲ್ಲವೋ ಅಥವಾ ನಾನು ಕೇಳಿದ್ದು ಅರ್ಥವಾಗಲಿಲ್ಲವೋ ಎಂಬುದು ನನಗೆ ಅರ್ಥವಾಗಲಿಲ್ಲ. ಬಾಡೂಟದ ಒಡೆಯನು ಬೆಂಗಾಲಿಯಲ್ಲಿ ಆತನನ್ನು ಕೇಳಿದ. ಆತ ಸುಮ್ಮನೆ ತಲೆ ಅಲ್ಲಾಡಿಸಿದ. ನಾನು ನಿರಾಶನಾಗಿ ಅಲ್ಲಿಂದ ಹೊರಟೆ. ಅಂಗಡಿಯ ಒಡೆಯ ನನಗೆ ಹೇಳಿದ, "ಏನೂ ಚಿಂತೆ ಮಾಡಬೇಡಿ. ನೀವು ಗೆಸ್ಟ್ ಹೌಸಿನಲ್ಲಿ ಇರುತ್ತೀರಲ್ಲವ. ಆತನಿಗೆ ಆ ಹುಡುಗನ ಹೆಸರು ನೆನಪಾದರೆ ನಾನೇ ಚೀಟಿಯಲ್ಲಿ ಬರೆದು ನಿಮಗೆ ಕಳಿಸಿಕೊಡುವೆ, ಆತನ ಮಗನ ಕೈಯಲ್ಲಿ" ಎಂದು ಅರುಣ್ ದಾನಿಗಿಂತಲೋ ಪೀಚಾಗಿದ್ದ ಚಿಲ್ಟು ಒಬ್ಬನನ್ನು ತೋರಿಸಿದ. ಆತನ ಗುರುತು ನನಗೆ ಮೊದಲೇ ಇದ್ದಿತು. ಆತನ ಸೈಕಲ್ ರಿಕ್ಷಾದಲ್ಲಿ ನಾನು ಒಂದೆರೆಡು ಬಾರಿ ಓಡಾಡಿದ್ದೆ. ಕಲಾಭಾವನದ ಸಮೀಪವೇ ಆತ ಯಾವಾಗಲೂ ಇರುತ್ತಿದ್ದುದೆ ಅದಕ್ಕೆ ಕಾರಣ. ಅದು ಅಸಾಧ್ಯವೆಂದು ಕಾಣಿಸಿದ್ದರಿಂದ ಅರುಣ್ ದಾ ಎಂಬಾತನಿಗೆ ಊಟಕ್ಕೆ ಎಂದು ಒಂದಷ್ಟು ಕಾಸು ನೀಡಿ ಸೈಕಲ್ ತುಳಿಯುತ್ತ ಕಲಾಭಾವನಕ್ಕೆ ಹಿಂದಿರುಗಿದೆ. ಆದರೂ ಇರಲಿ ಎಂದು "ಐದು ಗಂಟೆಗೆ ನನ್ನ ಟ್ರೇನು ಇರುವುದು. ನಾಲ್ಕೂವರೆ ಒಳಗಾಗಿ ಆ ಹುಡುಗನ ಹೆಸರು ನೆನಪಾದರೆ ದಯವಿಟ್ಟು ಗೆಸ್ಟ್ ಹೌಸಿಗೆ ಬಂದು ನನಗೆ ತಿಳಿಸು" ಎಂದು ಚಿಲ್ಟು ಹುಡುಗನಿಗೆ ಹೇಳಿದ್ದೆ. ಮುಂಚೆಯೆಲ್ಲ ಸಾಕಷ್ಟು ಬಕ್ಷೀಸು ಆತನಿಗೆ ಕೊಟ್ಟಿದ್ದರಿಂದ ಆತ ಜೋರಾಗಿ ತಲೆಯಾಡಿಸಿದ. ಅನುಶ್ರೀಯ ವರಿಸಬೇಕಿದ್ದ ಹುಡುಗನ ಹೆಸರು ನೆನಪಾಗದಿದ್ದರೂ ಯಾವೊದೋ ಒಂದು ಹೆಸರನ್ನಂತೂ ಹೇಳಿಬಿಡಬೇಕು ಅನ್ನುವಷ್ಟು ಆತನಲ್ಲಿ ಉಮೇದು ಬಂದಂತಿತ್ತು.
(೧೨೭)
ಗಡಿಬಿಡಿಯಲ್ಲಿ ಮಾರ್ಕ್ಸ್ ಮುಂತಾದ ವಿವರಗಳನ್ನು ಪೂರೈಸಿ, ಲೆಕ್ಕ ಚುಕ್ತಿ ಮಾಡಿ ಸೈಕಲ್ ರಿಕ್ಷಾವೊಂದರಲ್ಲಿ ರೂಮಿಗೆ ಓಡುತ್ತಾ, ಹಾದಿ ಮದ್ಯದಲ್ಲಿ, ಹಾದಿಬದಿಯಲ್ಲಿ ಒಂದಷ್ಟು ಹಣ್ಣು, ಮೊಸರು ಖರೀದಿಸಿ ಗೆಸ್ಟ್ ಹೌಸ್ ತಲುಪಿದೆ. ಐದು ಘಂಟೆಗಾದರೂ, ಒಂದು ಘಂಟೆ ಮುಂಚೆ ಸ್ಟೇಷನ್ ತಲುಪುವುದು ನನ್ನ ಗುರಿಯಾಗಿತ್ತು. ನಾಲ್ಕೂವರೆಗೆ ಯಾವುದೋ ಒಂದು ರಿಕ್ಷಾ ಹತ್ತಿದೆ. ಕಾದದ್ದಕ್ಕೆ ಪ್ರಯೋಜನವೂ ಇರಲಿಲ್ಲ. ಚಿಲ್ಟುವೂ ಇಲ್ಲ ಪಲ್ಟುವೂ ಇಲ್ಲ ಎಂಬಂತಾಯ್ತು. ಇಪ್ಪತ್ತು ನಿಮಿಷದಲ್ಲಿ ಸ್ಟೇಷನ್ ತಲುಪುತ್ತೇನೆ, ಎಷ್ಟೇ ತಡವಾದರೂ ಎಂದುಕೊಂಡು ನಿರಾಳವಾಗಿ ರಿಕ್ಷಾದಲ್ಲಿ ಓದುತ್ತಿದ್ದೆ. ಯಾವುದೋ ಗಮನದಲ್ಲಿ, ಫೋಟೋ ತೆಗೆವ ಆಸಕ್ತಿಯಲ್ಲಿ ರಸ್ತೆಯ ಕಡೆ ನನ್ನ ಗಮನ ಅಷ್ಟಾಗಿ ಇರಲಿಲ್ಲ. ನಮ್ಮ ರಿಕ್ಷಾಗೆ ತಲುಪುವಷ್ಟು ಸಮೀಪವಾಗಿ ಗಾಳಿಯ ವೇಗದಲ್ಲಿ ಓದಿದ ಖಾಲಿ ರಿಕ್ಷಾವನ್ನು ನಾನಂತೂ ಗಮನಿಸಲಿಲ್ಲ. ಭೋಲ್ಪುರದವರು ಯಾರೂ ಖಾಲಿ ರಿಕ್ಷಾ ಅಷ್ಟು ವೇಗವಾಗಿ ಹೋಗುವದನ್ನೂ ನೋಡಿರಲಿಕ್ಕಿಲ್ಲ. ಆಮೇಲೆ ನಮ್ಮ ರಿಕ್ಷಾದವನು ಆ ರಿಕ್ಷಾದ ಸವಾರನನ್ನು ತರಾಟೆಗೆ ತೆಗೆದುಕೊಂಡಾಗಲಷ್ಟೇ ಇವೆಲ್ಲ ನನಗೆ ತಿಳಿದದ್ದು. ಆ ಸವಾರನೆ ಚಿಲ್ಟುವಾಗಿದ್ದ!!
ಆತ ನನ್ನ ಕೈಗೊಂಡು ಚೀಟಿ ಕೊಟ್ಟ. "ಬಾಡೂಟದಂಗಡಿಯಾತ ಕೊಟ್ಟ" ಎಂದಷ್ಟೇ ಹೇಳಿ ಬಂದಷ್ಟೇ ವೇಗವಾಗಿ ಹೊರಟುಬಿಟ್ಟ, "ಫಾರಿನ್ ಸವಾರಿ ಕಾದಿದೆ, ಹೆಚ್ಚು ಹಣ" ಎನ್ನುತ್ತ. ಇನ್ನೂ ಒಂದು ಗಂಟೆ ಕಾಲವಿದ್ದಾಗ್ಯೂ, ನನ್ನ ಲಗೇಜನ್ನು ಜೋಪಾನ ಮಾಡುವಲ್ಲಿ, ಚಾಯಿ ಕುಡಿಯುವಲ್ಲಿ, ಜೊತೆಗಿದ್ದ ಕೊಲ್ಕೊತ್ತದ ಸೆರಾಮಿಕ್ ವಿಭಾಗದ ಮಿಕವೊಂದರೊಂದಿಗೆ ಮಾತನಾಡುವಷ್ಟರಲ್ಲಿ ರೈಲುಗಾಡಿ ಬಂದಿತ್ತು, ಶರ್ಟಿನ ಎಡಭಾಗದ ಜೇಬಿನಲ್ಲಿದ್ದ ಚೀಟಿ ಮರೆತಿತ್ತು. ಹವಾನಿಯಂತ್ರಿತ ಬೋಗಿಯಲ್ಲಿ ಕುಳಿತು ಸೆಟ್ಲ್ ಆದಾಗಲೇ ಚೀಟಿ ನೆನಪಾದುದು. ಅದನ್ನು ತೆಗೆದು ನೋಡಿದೆ. ಅದರಲ್ಲಿನ ಬೆಂಗಾಲಿ ಬರಹ ಹೀಗಿತ್ತು, "ಅನುಶ್ರೀಯನ್ನು ಮದುವೆಯಾಗಬೇಕಿದ್ದು, ದುಬೈಯಲ್ಲಿ ಸತ್ತನೆಂದು ಹೇಳಲಾದ ಹುಡುಗನ ಹೆಸರು 'ಪ್ರಕ್ಷುಬ್ದ' ಎಂದು!".
(೧೨೮)
ಶಾಂತಿನಿಕೇತನದ ಭೋಲ್ಪುರ ಸ್ಟೇಷನ್ ದಾಟಿ ಎರಡು ಗಂಟೆಕಾಲದ ನಂತರ ಬರ್ದಮಾನ್ ಸ್ಟೇಷನ್ ತಲುಪಿದಾಗ ಸಮಯ ಸಂಜೆ ಎಂಟು ಗಂಟೆ. ಬೇಸಿಗೆಯಾದ್ದರಿಂದ ಆಗಷ್ಟೇ ಕತ್ತಲಾಗುತ್ತಿತ್ತು. ಅಷ್ಟರಲ್ಲಿ ಎಲ್ಲ ಕಥೆಗಳಲ್ಲಿ ಆಗುವಂತೆ ಒಂದು ಸಣ್ಣ ನಿದ್ರೆ ಮಾಡಿ ಎದ್ದಿದ್ದೆ. ಎಸಿ ಕೋಚ್ ಆದ್ದರಿಂದ ಕಿಟಕಿಗಾಜುಗಳು ಸೀಲ್ ಆಗಿದ್ದವು. ದೀರ್ಘ ಸ್ಟಾಪ್ ಅದು. ಹೊರಗೆ ವಿಪರೀತ ಜನಸಂದಣಿ. ಬರ್ದಮಾನ್ ಒಂದು ಮುಖ್ಯ ಜಂಕ್ಷನ್. ಸ್ಟೇಷನ್ನಲ್ಲಿ ಆಗಷ್ಟೇ ಹಚ್ಚುತ್ತಿದ್ದ ವಿದ್ಯುತ್ ದೀಪಗಳಿಗೆ ಟ್ರೈನಿನ ಒಳಗಿಂದಲೇ ಕಣಗಳನ್ನು ಹೊಂದಿಸಿಕೊಳ್ಳುತ್ತಿದ್ದೆ. ಏನೋ ಗಮನ ಸೆಳೆದಂತೆ ಆಯಿತು. ಅದೇ ಶೆಗುವಾರನ ಮುಖದ ನೂರಾರು ಆಕಾರಗಳು ಬೆಳ್ಳನೆ ಕಪ್ಪು ಬಣ್ಣದ ಚೂಡಿದಾರಿನ ಎದ್ದು ಕಾಣುತ್ತಿತ್ತು. ಕಲಾಭವನವರಲ್ಲದೆ ಮತ್ಯಾವ ಹುಡುಗಿಯೂ ಇಂತಹ ಬಟ್ಟೆಯನ್ನು ಹೊಲಿಸಿಕೊಳ್ಳುವ, ತೊಟ್ಟುಕೊಳ್ಳುವ ಧೈರ್ಯಮಾಡಲಾರಳು ಅಂದುಕೊಂಡೆ. ಅರೆ! ಇದೇ ಆಲೋಚನೆಯ ಇದೇ ವಾಕ್ಯ ಇಂದು ಬೆಳಿಗ್ಗೆಯಷ್ಟೇ ಕಲಾಭವನದಲ್ಲಿರುವಾಗ ನನ್ನಲ್ಲಿ ಏಕೆ ಉದ್ಭವವಾಗಿತ್ತು ಎಂದುಕೊಂಡೆ. ಹ್ಜ್ಞಾ, ನಂದಲಾಲ ಬೋಸರ ಗಾಂಧೀ ಭಿತ್ತಿಚಿತ್ರ ಹುಡುಕಿ ಸೋತು ಶೌಮಿಕನ ಮುಂದೆ ಮಾತುಕತೆಯಾಡಿದ್ದ ಆ ಹುಡುಗಿ ಇಂತಹದ್ದೇ ನೂರಾರು ಶೇಗುವಾರನಿದ್ದ ಚೂಡಿದಾರ್ ತೊಟ್ಟಿದ್ದಳು. ಈಗ ಮತ್ತೊಬ್ಬ ಕಲಾಭಾವನದವಳೋ ಅಥವಾ ಮತ್ಯಾವ ಬರ್ದಮಾನಿನ ಕಲಾಶಾಲೆಯಾ ವಿದ್ಯಾರ್ಥಿನಿಯೋ ತೊಟ್ಟಿದ್ದಾಳೆ ಎಂದುಕೊಂಡೆ. ಭೇಲ್ಪುರಿ ತಿನ್ನುತ್ತಿದ್ದ ಆ ಹುಡುಗಿ ಒಮ್ಮೆ ಪಕ್ಕಕ್ಕೆ, ಕ್ರಮೇಣ ಹಿಂದಕ್ಕೆ ತಿರುಗಿ ನೋಡಿದಳು. ಒಹ್! ಅದೇ ಹುಡುಗಿ, ಶೌಮಿಕನ ಕಲಾಇತಿಹಾಸದ ವಿದ್ಯಾರ್ಥಿನಿ. ಬಹುಶ ಬರ್ದಮಾನದವಳಿರಬೇಕು ಅಂದುಕೊಂಡೆ. ಆಕೆ ನನ್ನನ್ನೇ ನೋಡುತ್ತಿರುವಂತೆ ಅನ್ನಿಸಿತು. ಆದರೆ ನಮ್ಮದು ಒನ್ವೇ ಕಿಟಕಿ ಗಾಜಲ್ಲವೇ? ಆಕೆ ನನ್ನನ್ನು ನೋಡಿರಲು ಸಾಧ್ಯವೇ ಇಲ್ಲ ಅಂದುಕೊಂಡೆ. ಟ್ರೈನ್ ಹೊರಡುವ ಸೂಚನೆ ಹೊರಗಿನ ಜನರ ಅವಸರದಿಂದ ಗೊತ್ತಾಗುತ್ತಿತ್ತು. ನಾನು ಸ್ವಲ್ಪ ಬೋಗಿಯ ಒಳಗಿನವರನ್ನೊಮ್ಮೆ ನೋಡಿ, ನನ್ನ ಬ್ಯಾಗ್ ಸುರಕ್ಷಿತ್ಹವೇ ಎಂದು ತಲೆಯೆತ್ತಿ ನೋಡಿ, ಮತ್ತೆ ಆ ಹುಡುಗಿಯನ್ನು ನೋಡಿದೆ. ಆ ಹುಡುಗಿ ಈಗಲೂ ನನ್ನನ್ನಲ್ಲದಿದ್ದರೂ ನನ್ನ ಕಡೆಗೆ ನೋಡುತ್ತಿರುವಂತೆ ಭಾಸವಾಯಿತು. ಟ್ರೈನ್ ಚಲಿಸುವ ಗುಟುರು ಹಾಕಿತು. ಅತ್ಯಂತ ಸೂಕ್ಷ್ಮವಾಗಿ ಚಲಿಸುವಂತೆ ಅನ್ನಿಸಿತು. ಹೋಗುತ್ತಿದೆ ಎಂದರೆ ಹೌದು ಇಲ್ಲ ಎಂದರೆ ಇಲ್ಲ ಎಂಬಂತೆ.
ಆಗ ನೋಡಿದೆ ಆತನನ್ನು. ಆತ ಆ ಹುಡುಗಿಯ ಹೆಗಲ ಮೇಲೆ ಒಂದು ರಕ್ಷಣಾತ್ಮಕವಾದ ಹಸ್ಥವನಿರಿಸಿದ್ದ. ಮತ್ತೊಂದು ಕೈಯಲ್ಲಿ ಬಗಲ ಚೀಲವನ್ನು ಸರಿಮಾಡಿಕೊಂಡ. ಆಕೆಗಿಂತ ಎತ್ತರವಾಗಿದ್ದರಿಂದ ಬಾಗಿ ಆಕೆಗೇನೋ ಹೇಳಿದವ ತಲೆಯೆತ್ತಿ ನನ್ನನ್ನು ನೋಡಿದ. ನಾನೂ ಆತನನ್ನು ನೋಡಿದೆ. ಹದಿನೆಂಟು ವರ್ಷದ ಹಿಂದೆ ಹೇಗಿದ್ದನೋ ಈಗಲೂ ಹಾಗೆಯೇ ಕಾಣುತ್ತಿದ್ದ. ಪಕ್ಕದ ಹುಡುಗಿಗಿಂತಲೂ ಒಂದೈದಾರು ವರ್ಷ ಮಾತ್ರ ದೊಡ್ಡವನಂತೆ ಇದ್ದ. ಇದನ್ನು ಹೇಗೆ ಗ್ರಹಿಸುವದೋ ತಿಳಿಯಲಿಲ್ಲ.
ಆತ ಚಲಿಸುತ್ತಿದ್ದ ಗಾಡಿಯ ಹತ್ತಿರ, ನನ್ನ ಕಿಟಕಿಯ ಸಮೀಪವೇ ನಡೆಯುತ್ತಾ ಹತ್ತು ಹೆಜ್ಜೆ ಬಂದ. ನಾನು ಇದ್ದು ಹೊರಹೋಗಿ ಬಾಗಿಲು ತೆರೆಯುವಷ್ಟರಲ್ಲಿ ಗಾಡಿ ಪೂರ್ಣಪ್ರಮಾಣದ ವೇಗ ಪಡೆಯದಿದ್ದಲ್ಲಿ ಅದನ್ನು ಫಾಸ್ಟ್ ಎಕ್ಸ್-ಪ್ರೆಸ್ ಎಂದು ಕರೆದು, ಹೆಚ್ಚು ಹಣ ಕೊಡುವದಾದರೂ ಏಕೆ? ಅಲ್ಲಿಯೇ ಕುಳಿತೆ. ಒಳಗಿನಿಂದಲೇ ಕಿಟಕಿಯ ಮೇಲೆ ಕೈ ಇರಿಸಿದೆ. ಆತನೂ ಆ ಕಡೆಯಿಂದ ನನ್ನ ಕೈಯ ಆಕಾರವನ್ನು ಅನುಕರಿಸುವಂತೆ ತನ್ನ ಕೈ ಇರಿಸಿದ. ಕ್ರಮೇಣ ದೂರ ಸರಿಯುತ್ತ ನಡೆಯುತ್ತಾ ಬರುತ್ತಲೇ ಇದ್ದ. ಕೊನೆಗೊಮ್ಮೆ ತನ್ನ ಶರ್ಟಿನ ಎಡಜೇಬಿನ ಕಡೆಗೆ ತನ್ನ ಕೈ ಇರಿಸಿ ನನ್ನನ್ನೂ ಹಾಗೆ ಮಾಡುಂತೆ ಸೂಚಿಸಿದ. ಕ್ರಮೇಣ ಮರೆಯಾದ ಆತ. "ಮತ್ತೆ ನನ್ನ ನಿನ್ನ ಭೇಟಿ ಅಸಾಧ್ಯ ಅಂದಿದ್ದ ಆತ ನನ್ನ ತೊಳಲಾಟ ನೋಡಲಾಗದೆ ಮತ್ತೊಮ್ಮೆ, ಈ ಸಲ ನಿಜಕ್ಕೂ ಕೊನೆಯ ಬಾರಿಗೆ ಎಂಬಂತೆ ಭೇಟಿ ಮಾಡಿದ್ದ.
ಸಾವರಿಸಿಕೊಂಡು ಕುಳಿತುಕೊಂಡೆ. ಹೊರಗೆ ನೋಡುತ್ತಲೇ ಇದ್ದೆ, ಹತ್ತು ನಿಮಿಷ. ಮತ್ತೊಂದು ಮಗದೊಂದು ಮಿರಾಕಲ್ ಆಗಬಹುದೇನೋ ಅಂತ. ಕೊನೆಗೊಮ್ಮೆ ಜೇಬಿಗೆ ಕೈ ಹಾಕಿ ಚಿಲ್ಟು ಕೊಟ್ಟಿದ್ದ ಚೀಟಿಯನ್ನು ಮತ್ತೊಮ್ಮೆ ತೆಗೆದೆ. ಪ್ರಕ್ಷುಬ್ದ ಅದನ್ನು ನೋಡು ಅನ್ನುವಂತೆಯೇ ಟ್ರೈನಿನ ಹೊರಗಿಂದ ಆಗಷ್ಟೇ ಸೂಚಿಸಿದ್ದುದು!!
ಚೀಟಿಯನ್ನು ಮೂರ್ನಾಲ್ಕು ಬಾರಿ ಹಿಂದೆಮುಂದೆ ತಿರುಗಿಸಿ ನೋಡಿದೆ. ಅದೇ ಚಿಲ್ಟು ಕೊಟ್ಟದ್ದು, ಬಾಡಂಗಡಿಯಾತ ತನ್ನ ಪುಟ್ಟ ಡೈರಿಯಿಂದ ಹರಿದು, ಬರೆದು ಕೊಟ್ಟಿದ್ದ ಪತ್ರ ಅದೇ ಹೌದು, ಅನುಮಾನವೇ ಇಲ್ಲ. "ಅನುಶ್ರೀಯನ್ನು ಮದುವೆಯಾಗಬೇಕಿದ್ದು, ದುಬೈಯಲ್ಲಿ ಸತ್ತನೆಂದು ಹೇಳಲಾದ ಹುಡುಗನ ಹೆಸರು 'ಪ್ರಕ್ಷುಬ್ದ' ಎಂದು!" ಎಂದು ಮೊದಲೇ ಓದಿಕೊಂಡಿದ್ದ ವಾಕ್ಯ ಅದಾಗಲೇ ನನಗೆ ಬಾಯಿಪಾಠವಾಗಿತ್ತು.
ಆದರೆ ಟ್ರೈನಿನಲ್ಲಿ ಕುಳಿತು ಎಡ, ಬಲ, ಕೆಳಗೆ, ಮೇಲೆ ಹೇಗೆ ತಿರುಗಿಸಿದರೂ ಆ ಹಾಳೆ ಎರಡೂ ಬದಿಯಲ್ಲಿ ಪೂರ್ತಿ ಬಿಳಿಯಾಗಿತ್ತು--ಈಗಷ್ಟೆ ಕಾಗದದ ಕಾರ್ಖಾನೆಯಿಂದ ತಯಾರಾಗಿ ಬಂದಿದೆ ಎಂಬಂತೆ!!
ಕೂಡಲೇ ಶೌಮಿಕನಿಗೆ ಮೊಬೈಲಿನಲ್ಲಿ ಒಂದು ಕರೆ ಹಾಕಿದೆ. "ಏನ್ ಗುರುವೇ, ವಾಪಸ್ ಶಾಂತಿನಿಕೇತನದಲ್ಲೇ ಸೆಟ್ಲ್ ಆಗುವ ಯೋಚನೆ ಏನಾದರೂ?" ಎಂದ.
"ಒಂದು ಸಣ್ಣ ಪ್ರಶ್ನೆ!' ಎಂದೆ.
"ಹೇಳು ಮಾರಾಯ"
"ಇಂದು ಬೆಳಿಗ್ಗೆ ಸಿಕ್ಕಿದ್ದಳಲ್ಲ ಆ ಕಲಾ ಇತಿಹಾಸದ ಹುಡುಗಿಯ ಹೆಸರೇನು?"
"ಅದೇ ನಂದಲಾಲ್ ಬೋಸ್..."
"ಹೌದೌದು"
"ಅದೇ ಶೇಗುವಾರನ ಚಿತ್ರವಿದ್ದ ಚೂಡಿದಾರ?"
"ಹೌದೌದು"
"ತಾಳು ಒಂದು ಎಸ್.ಎಂ.ಎಸ್ ಕಳಿಸುತ್ತೇನೆ, ಕಾಂಟಾಕ್ ಇರಲಿ ಗುರುವೇ ಮಾಯವಾಗಿಬಿಡಬೇಡ" ಎಂದು ಫೋನ್ ಇಟ್ಟುಬಿಟ್ಟ.
ಮರುನಿಮಿಷದಲ್ಲಿ ಎಸ್.ಎಂ.ಎಸ್. ಬಂದಿತು.
"ಆ ವಿದ್ಯಾರ್ಥಿನಿಯ ಹೆಸರು ಅನುಶ್ರೀ ಕುಮಾರಿ ಸಾಹು" ಎಂದು!!
(ಮುಗಿಯಿತು)
(ಇಂದು, ಡಿಸೆಂಬರ್ ೩ನೆ ತಾರೀಕು, ಶಾಂತಿನಿಕೇತನದ ಖ್ಯಾತ ಕಲಾವಿದ ನಂದಲಾಲ್ ಬೋಸರ ಜನ್ಮದಿನ)
Comments
ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ...
In reply to ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ... by kavinagaraj
ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ...
ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ...
In reply to ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ... by santhosh_87
ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ...
ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ...
In reply to ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ... by raghusp
ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ...
ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ...
In reply to ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ... by partha1059
ಉ: ಪರಿಸಮಾಪ್ತಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ...