ಎಚ್ಚರಿಕೆಯ ಗಂಟೆ: ಕಿವುಡನ ಮುಂದಣ ಕಿನ್ನರಿ!
ಲೋಕಾಯುಕ್ತರು ಝಾಡಿಸಿದ ಎಫ್‌ಐಆರ್ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಕಟ್ಟಾ ಅವರು ಮಾಡಿದ ಪದ’ತ್ಯಾಗ’ವನ್ನು ಡಿ. 4ರ ಸಂಯುಕ್ತ ಕರ್ನಾಟಕ ಸಂಪಾದಕೀಯ ಸ್ವಾಗತಿಸಿ “ಎಚ್ಚರಿಕೆಯ ಗಂಟೆ” ಬಣ್ಣಿಸಿದೆ. ಆದರೆ ಇದರಿಂದ ಯಾರಾದರೂ ನಿಜವಾಗಿ ಎಚ್ಚೆತ್ತುಕೊಂಡಾರೇ? ಅಂತಹ “ಮರ‍್ಯಾದೆ ಪ್ರಜ್ಞೆ”ಯ ಆವಶ್ಯಕತೆಯಾದರೂ ನಮ್ಮ ಇಂದಿನ ರಾಜಕಾರಣಕ್ಕಿದೆಯೇ? ಇದು ನನ್ನಂಥಾ ಸಾಮಾನ್ಯ ಮತದಾರನೊಬ್ಬನ ಅಚ್ಚರಿ!
‘ನಮ್ಮ ರಾಜಕಾರಣಿಗಳಲ್ಲಿ ಆತ್ಮಸಾಕ್ಷಿ ಎನ್ನುವುದು ಸತ್ತುಹೋಗಿದೆ’ ಎಂದು ಅವರಿವರು ಹಲಬುವುದನ್ನು ಕೇಳುತ್ತೇವೆ. ಆದರೆ ಈ ಅಲಾಲಟೋಪಿಗಳನ್ನು ಸೊಪ್ಪು-ನೀರೂ ಹಾಕಿ ಬೆಳೆಸಿಟ್ಟಿರುವುದೂ ನಮ್ಮ “ವ್ಯವಸ್ಥೆ”ಯೇ ಅಲ್ಲವೇ?!
ಇಲ್ಲಿ ಠಕ್ಕರು, ಅಯೋಗ್ಯರು, ಮೌಲ್ಯಭಕ್ಷಕರೇ ರಾಜಕೀಯದ ನೇತಾರರಾಗಿ ಕಾಣಿಸಿಕೊಳ್ಳುವುದು; ಅವರಿಗೇ ಶಾಸಕರೆಂದೂ, ಸಂಸದರೆಂದೂ ಪ್ರಾತಿನಿಧ್ಯ ವಹಿಸಿಕೊಟ್ಟುಬಿಡುತ್ತೇವೆ. ಅವರೇ ಪ್ರಶಾಸಕರೂ ಆಗುತ್ತಾರೆ. ಅಂತಹ ಒಬ್ಬ ಮುಖ್ಯಮಂತ್ರಿ/ಪ್ರಧನಮಂತ್ರಿಯನ್ನು ನೆತ್ತಿಯಲ್ಲಿ ಹೊಂದಿ, ಮಂತ್ರಿಗಳ ದರ‍್ಪ-ನಿಯಂತ್ರಣದಲ್ಲಿ ಸಕಾರವೆಂಬ ಕಾರ‍್ಯಾಂಗ ಹುಟ್ಟಿಬರುತ್ತದೆ; ಅಧಿಕಾರವಿಲ್ಲದವರು ಅದರಮೇಲೆ ಸಲ್ಲುವ, ಸಲ್ಲದ ಆರೋಪಗಳನ್ನೆಲ್ಲಾ ಹೊರೆಸುತ್ತಾ ಕಾಲ ತಳ್ಳುತ್ತಾರೆ. ಅದು ಕೋರ್ಟುಗಳ, ಆಯೋಗಗಳ ಭಾರದ ಹೊರೆಯಾಗಿ ಬೆಳೆಯತ್ತಾ ಹೋಗುತ್ತವೆ! ಅದಕ್ಕೆ ಕಾರನವಾಗುವವರು, ವಿನಾಕಾರಣರಾಗುವವರು ಮಾತ್ರಾ, ಇಂದು ಇಲ್ಲಿದ್ದರೂ, ನಾಳೆ ಅಲ್ಲಿದ್ದರೂ ಒಂದೇ “ಜಾತಿ”ಯವರು; ‘ಕ್ಷುದ್ರ ರಾಜಕಾರಣಿ’ ಎಂಬ ಜಾತಿಯವರು! ಅವರು ಬಲ್ಲ ಒಂದೇ ದೇಶಸೇವೆ, ಸಮಾಜಸೇವೆ ಎಂದರೆ, ದೇಶವನ್ನು/ರಾಜ್ಯವನ್ನು ಬಾಚಿ, ದೋಚಿ, ಗುಡಿಸಿ ಗುಂಡಾಂತರ ಮಾಡಿ ತಿನ್ನುವುದು, “ತಮ್ಮವರಿಗೆ” ತಿನ್ನಿಸುವುದು! ಇದು ನಾವು ಕಾಣುತ್ತಿರುವ ಸಾರ್ವತ್ರಿಕ “ಸಹಜ”. ಇಂಥಲ್ಲಿ ನ್ಯಾಯಾಂಗವಾಗಲೀ, ಲೋಕಾಯುಕ್ತವಾಗಲೀ, ಸಿಬಿಐ-ಸಿವಿಸಿಗಳು ಮಾತ್ರವೇ ಪವಿತ್ರವಾಗಿರಲೆಂದು ನಿರೀಕ್ಷಿಸುವುದೇ “ಕೃತಕ”ವಲ್ಲವೇ!