ಸೂಪರ್.......ವಜ್ರವಲ್ಲಿ
ನಾನು ಸೂಪರ್...ಅಲ್ಲಾ...
ವಜ್ರವಲ್ಲಿ ಬಗ್ಗೆ ಹೇಳಲು ಹೊರಟಿದ್ದು. ಓದಿ..ಕೊನೆಯಲ್ಲಿ "ಸೂಪರ್ ವಜ್ರವಲ್ಲಿ" ಅನ್ನುವಿರಿ.
***********
ಬೆಳಗ್ಗೆ ನಾನು ಎಷ್ಟೇ ಬೇಗ ಏಳಲಿ, ಕೆಲಸಕ್ಕೆ ಹೊರಡುವಾಗ ಮಾತ್ರ ತಡವಾಗುವುದು. ಹೊರಟ ಮೇಲೆ, ಬೈಕ್ ಕವರ್ ತೆಗೆದು ಕಾರ್ನರ್ಗೆ ಎಸೆದು, ಬ್ಯಾಗ್ ಹೆಗಲಿಗೆ ಏರಿಸಿ, ಉಳಿದ ಬೈಕಿಗರೊಂದಿಗೆ ರೇಸ್ನಲ್ಲಿ ಭಾಗವಹಿಸುವುದು ದಿನ ನಿತ್ಯದ ರೂಢಿ.
ಸಂಜೆ ಮಾತ್ರ ರೇಸ್ ಇಲ್ಲ- ಯಾಕೆಂದರೆ ಟೈಮಿಗೆ ಮೊದಲೇ ಕೆಲಸ ಮುಗಿಸಿ ಹೊರಡುತ್ತೇನಲ್ಲಾ... ಮನೆಗೆ ಬಂದ ಮೇಲೆ, ಬೈಕ್ಗೆ ಕವರ್ ಹೊದಿಸಿ, ಬೆಚ್ಚಗೆ ಮಲಗಿಸಿಯೇ ಮನೆಯೊಳಗೆ ಹೋಗುವೆನು.
ಮೊನ್ನೆ ಸಂಜೆ ಬೈಕ್ ಕವರ್ ಹೊದಿಸಲು ಹೋದಾಗ, ಅದರೊಳಗಿಂದ "ಲಕ್ಷ್ಮೀ ಚೇಳು" ಕೆಳಗೆ ಬಿತ್ತು! ಬಿದ್ದದ್ದೇ ಎಕ್ಸ್ಪ್ರೆಸ್ ಟ್ರೈನ್ ತರಹ ಸೀದಾ ಹೋಗಿ ಹೂ ಕುಂಡಗಳ ಎಡೆಗೆ ಸೇರಿಕೊಂಡಿತು.
ನಾನು ಮತ್ತು ನನ್ನಾಕೆ(ಕೋಲಿನೊಂದಿಗೆ) ಹೂ ಕುಂಡಗಳನ್ನು ಸರಿಸಿ ಅದನ್ನು ಹುಡುಕಿದೆವು. ಅದು ಸಿಗಲಿಲ್ಲ. "ರೀ..ನಿಮ್ಮ ಮಂಗಳೀ ಬೇರು ಗಿಡದಲ್ಲಿ ಹೂವಾಗಿದೆ" ಎಂದಾಗ, ಲಕ್ಷ್ಮೀಚೇಳು ಮರೆತು ಹೋಗಿ ಗಮನವೆಲ್ಲಾ ಹೂವಿನ ಕಡೆಗಾಯಿತು. ಕೆಲವೇ ತಿಂಗಳ ಹಿಂದೆ ಒಂದು ತುಂಡು ಮಂಗಳೀ ಬೇರು ತಂದು ನೆಟ್ಟಿದ್ದೆ!
ಅದಕ್ಕೂ ಮೊದಲು ಒಂದು ವಿಷಯ ನಿಮಗೆ ಹೇಳಬೇಕು- ನಮ್ಮ ಹೂಕುಂಡ ಎಂದರೆ ಒಂದು ತರಹ ಸಮ್ಮಿಶ್ರ ಸರಕಾರ ಇದ್ದಂತೆ! ಒಂದೇ ಕುಂಡದಲ್ಲಿ ಸದಾಪುಷ್ಪ, ದೊಡ್ಡಪತ್ರೆ, ಸೇವಿನ ಗಿಡ .. ಹೀಗೆ ೫-೬ ಗಿಡಗಳು ಆಡಳಿತ ನಡೆಸುತ್ತವೆ!
ಈ ಮಂಗಳೀ ಬೇರಿನ (ಮಂಗರೋಲಿ, ಮಂಗರಬಳ್ಳಿ, ಮಂಗಲೀ ಬೇರು, ಸಂದುಬಳ್ಳಿಯೆಂದು ಸಹ ಕನ್ನಡದಲ್ಲಿ ಕರೆಯುತ್ತಾರೆ) ಬೆಳವಣಿಗೆ ನೋಡಿ- ಪಕ್ಕದ ಕುಂಡದಲ್ಲಿನ ಮಂಗಳೂರು ಮಲ್ಲಿಗೆ ಎತ್ತರೆತ್ತರಕ್ಕೆ ಹಬ್ಬಲಿ ಎಂದು ಬಾವಿಹಗ್ಗ ಎಲ್ಲಾ ಕಟ್ಟಿ ಇಟ್ಟಿದ್ದೆ. ಅದನ್ನೂ ವಶಪಡಿಸಿಕೊಂಡಿತು. (ಪಾಪದ ಮಲ್ಲಿಗೆ.. ಹೊರಟಿದೆ ಗೋಡೆ ಕಡೆಗೆ.. ) ಇತ್ಲಾಗೆ ಬಸಳೆಗೆಂದು ಕಟ್ಟಿದ ಚಪ್ಪರದ ಮೇಲೂ ಮಂಗರೋಲಿ.(ಥೇಟ್ ಮಂಗನಂತೆ ಅಲ್ಲಿ ಇಲ್ಲಿ ಎಲ್ಲಾ ಕಡೇ ಹಾರಾಡುವುದಕ್ಕೆ ಇದಕ್ಕೆ ಮಂಗ+ರೋಲಿ, ಮಂಗ+ರಬಳ್ಳಿ..ಇತ್ಯಾದಿ ಹೆಸರಿಟ್ಟಿರಬಹುದೇ?)
ಆದರೆ ಸಂಸ್ಕೃತದಲ್ಲಿ ಇದರ ಆಕಾರಕ್ಕೆ ತಕ್ಕ ಹೆಸರಿದೆ- ಹಸುರು ಬಣ್ಣದ ಮೂಳೆಗಳನ್ನು ಒಂದಕ್ಕೊಂದು ಜೋಡಿಸಿದಂತೆ ಕಾಣುವುದರಿಂದ, ಇದಕ್ಕೆ "ಅಸ್ಥಿಶೃಂಖಲಾ" ಎಂದಿದ್ದಾರೆ. ಹಿಂದಿಯಲ್ಲೂ ಹಡ್ಜೋಡ್ ಅನ್ನುವರು.
ಮೂಳೆಯ ಆಕಾರ ಮಾತ್ರವಲ್ಲಾ..ಮೂಳೆಗಳಿಗೆ ಇದು ಒಳ್ಳೆಯ ಔಷಧೀ ಸಹ! ಇದರ ಬೆಳವಣಿಗೆಯ ವೇಗ ಮೊದಲೇ ಹೇಳಿದ್ದೇನಲ್ಲಾ. ಅದೇ ವೇಗದಲ್ಲಿ ಮುರಿದ ಮೂಳೆಗಳನ್ನೂ ಬೇಗನೆ ಸೇರಿಸುವಲ್ಲಿ ಸಹಾಯ ಮಾಡುವುದು. ಬಾಡಿ ಬಿಲ್ಡರ್ಗಳಿಗೆ ಇದು ಬಹಳ ಉಪಯುಕ್ತ. Cissus quadrangularis (ಬಾಟನಿಕಲ್ ಹೆಸರು) in body building ಎಂದು ಗೂಗ್ಲ್ ಸರ್ಚ್ ಕೊಟ್ಟು ನೋಡಿ.
ಬರೀ ಮೂಳೆಗೆ ಮಾತ್ರವಲ್ಲಾ-
-ಮೂಗಿನಿಂದ ರಕ್ತ ಸುರಿಯುವುದು, ಕಿವಿ ಸೋರುವುದು, ಮುಟ್ಟಿನ ತೊಂದರೆ, ಮೂಲವ್ಯಾಧಿ, ಅಸ್ತಮಾ, ಹೃದಯ ಸಂಬಂಧೀ ತೊಂದರೆಗಳು, ಹುಳುಬಾಧೆ, ನೋವು, ಹೊಟ್ಟೆನೋವು, ಲೆಪ್ರಸಿ, ಅಲ್ಸರ್, ಚರ್ಮದ ರೋಗಗಳು ಇತ್ಯಾದಿಗಳಲ್ಲಿ ಉಪಯುಕ್ತ. ವಜ್ರದಂತಿ ಇದೆಯಲ್ಲಾ - ಹಲ್ಲನ್ನು ವಜ್ರದಂತೆ ಮಾಡುವ ಗೋರಂಟೆ ಗಿಡವದು. ಈ ಬಳ್ಳಿ "ವಜ್ರವಲ್ಲಿ"- ದೇಹವನ್ನೇ ವಜ್ರದಂತೆ ಗಟ್ಟಿ ಮಾಡುವ ಬಳ್ಳಿ.
ಇಷ್ಟು ಮಾತ್ರವಲ್ಲಾ-
ಇದರಿಂದ ಫಸ್ಟ್ಕ್ಲಾಸ್ ಸಾರು, ಚಟ್ನಿ ಸಹ ಮಾಡಬಹುದು.
ಮನೆಯೆದುರಿಗಿರುವ ಕ್ರೋಟನ್, ಮನಿಪ್ಲಾಂಟ್ ಗಿಡಗಳನ್ನು ಎಸೆದು, ಅಲ್ಲಿ ಈ ಸುಂದರ ವಜ್ರವಲ್ಲಿ ಗಿಡವನ್ನು ತಂದು ನೆಡಬೇಕೆಂದಿದ್ದೀರಾ? ಛೇ. ಬೇಡ, ಬೇರೆ ಗಿಡಗಳನ್ನು ಕೀಳಬೇಡಿ. ಪಕ್ಕದಲ್ಲಿ ವಜ್ರವಲ್ಲಿಯ ಒಂದು ತುಂಡು ನೆಡಿ. ಸಾಕು..
ವಿಷಯ ಸಂಗ್ರಹ-ವಿವಿಧ ಮೂಲಗಳಿಂದ
-ಗಣೇಶ.
ಈ ದಿನ ನಡೆಯುವ ಸಂಪದ ಸಮ್ಮಿಲನ ಯಶಸ್ವಿಯಾಗಲಿ ಎಂದು ಹಾರೈಸುವ,
-ಗಣೇಶ.
Comments
ಉ: ಸೂಪರ್.......ವಜ್ರವಲ್ಲಿ