ಬೆರಗು

ಬೆರಗು

ಕವನ

ಆಸ್ಫೋಟದಿಂದ ಚೆಲ್ಲಾಪಿಲ್ಲಿ

ರಟ್ಟಿದ ಒಂದು ತುಣುಕಲ್ಲಿ

ಕುದಿದು ತಣಿದ  ದ್ರವ -ಜಲದಾವಿರ್ಭಾವ

ಒಂದೊಂದೇ  ಕಣದ ಘರ್ಷಣೆ   ಜೀವದ ತುಡಿತ 

ಎಂದೋ ಮೂಡಿತು ನಿತ್ಯ ಭ್ರಮಣದವಧಿಯಲ್ಲಿ

ನೆಲಕೆ ಹಳದಿ ಹಸುರಿನ ಹರಹು

ಜಲಚರದ ಹೊರಳಿಕೆಯ ಹೊಳಹು

ತೋಳ ಚಾಚಿತು ಇಲ್ಲಿ -

ಪ್ರಾಣಿಗೆ ಪ್ರಾಣಿ ,ತ್ರಾಣವಿದ್ದವ ಬದುಕಿ

ಸೇರಿತೊಂದೊಂದೇ ಗೊಣಸು

ಸಂಕಲೆಯ ಬಳ್ಳಿಯ ಬೆಳೆಸು

ಹತ್ತಿರದ ಬಂದಿಗಳು-ಬಂಧುಗಳು

ಉಭಯ ಕುಶಲೋಪರಿ

ಕಣ್ಣಾಲಿ ತುಂಬಿಹುದೇ ಸೌಹಾರ್ದ ಭಾವ?

ತೋರಬೇಕೆಂದೇ ತೋರುವ ಪ್ರೀತಿ?

ಪರಸ್ಪರ ಈರ್ಷ್ಯೆಯೋ ಅರಿವಿನ

ಅಭಾವವೋ

ಈ ಬಿಟ್ಟ ಬಾಯಿಯ ಬೆರಗು ?

ಇರುವುದೇ ಅನ್ಯೋನ್ಯ ತಿಳಿಯಲಿಕೆ

ಹವಣಿಸುವ ತವಕ?