ಇಂಡೋನೇಶ್ಯಾ ಮತ್ತು ಅಂತರ್ಜಾಲ
ಇಂಡೋನೇಶ್ಯಾವು ಅಂತಜಾಲ ಬಳಕೆಯಲ್ಲಿ ಮುಂದಿರುವ ದೇಶವಾಗುತ್ತಿದೆ.ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಇಲ್ಲಿನ ಜನರಷ್ಟು ಮೆಚ್ಚುವವರು ಬೇರೆಲ್ಲೂ ಇದ್ದಹಾಗಿಲ್ಲ.ಫೇಸ್‌ಬುಕ್ ಮತ್ತು ಟ್ವಿಟರ್ ಬಳಕೆಯಲ್ಲಿ ಇಂಡೋನೇಶ್ಯಾದವರದ್ದು,ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಮೇಲುಗೈಯಾಗಿದೆ.ಜಗತ್ತಿನಲ್ಲೇ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಇಂಡೋನೇಶ್ಯಾ ನಾಲ್ಕನೇ ಸ್ಥಾನದಲ್ಲಿದೆ.ಹೆಚ್ಚಿನವರು ಮೊಬೈಲ್ ಸಾಧನಗಳ ಮೂಲಕವೆ ಅಂತರ್ಜಾಲ,ಅದರಲ್ಲೂ ಈ ತಾಣಗಳ ಬಳಕೆ ಮಾಡುತ್ತಿದ್ದಾರೆ.ಭಾರತದ ಭೇಟಿಯ ನಂತರ ಒಬಾಮಾ ದಂಪತಿಗಳು ಇಂಡೋನೇಶ್ಯಾ ಪ್ರವಾಸಕ್ಕೆ ಹೋದದ್ದು ನೆನಪಿದೆಯೇ?ಒಬಾಮ ಪತ್ನಿಯ ಕೈಕುಲುಕಿ ಸ್ವಾಗತಿಸಿದ ಇಲ್ಲಿನ ಸಚಿವರೋರ್ವರ ಕ್ರಮವು,ಸಂಪ್ರದಾಯಕ್ಕೆ ವಿರುದ್ಧವಾಗಿತ್ತು,ಜನರು ಅದರ ಬಗ್ಗೆ ಟ್ವಿಟರಿನಲ್ಲಿ ಚರ್ಚಿಸಿದ ಪರಿ ಹೇಗಿತ್ತೆಂದರೆ,ಅದು ಅಂದಿನ ಬಿಸಿ-ಬಿಸಿ ಸುದ್ದಿಯಾಯಿತು.ಇದರಲ್ಲಿ ತಂತ್ರಜ್ಞಾನ ವಿಷಯಗಳ ಚರ್ಚೆಯೂ ಗರಿಗೆದರುವುದು ವಿಶೇಷ.ಬರೇ ಒಣಚರ್ಚೆಗಲ್ಲದೆ,ಅಭಿವೃದ್ಧಿಗೂ ಈ ತಾಣಗಳ ಬಳಕೆಯಾಗುತ್ತಿವೆ.ರಾಜಧಾನಿ ಜಕಾರ್ತಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲೂ ಸಾಮಾಜಿಕ ಜಾಲತಾಣಗಳ ಬಳಕೆ ನಡೆದಿವೆ.
---------------------------------
ಇದೀಗ ಏಸರ್ ಟ್ಯಾಬ್ಲೆಟ್ ಸರದಿ
ಏಸರ್ ಕಂಪೆನಿಯೂ ಟ್ಯಾಬ್ಲೆಟ್ ಸಾಧನಗಳನ್ನು ಮಾರುಕಟ್ಟೆಗೆ ಬಿಡುವುದರಲ್ಲಿದೆ.ಏಪಲ್ ಕಂಪೆನಿಯ ಐಪ್ಯಾಡ್,ಸ್ಯಾಮ್ಸಂಗ್‌ನ ಗ್ಯಾಲಕ್ಸಿ ನಂತರ ಇದೀಗ ಏಸರ್ ಪ್ಯಾಡ್‌ಗಳ ಸರದಿ.ಹತ್ತು ಮತ್ತು ಏಳು ಇಂಚು,ಹೀಗೆ ಎರಡು ರೀತಿಯ ಸಾಧನಗಳನ್ನು ಏಸರ್ ಪರಿಚಯಿಸಿದೆ.ಸ್ಪರ್ಶ ಸಂವೇದಿ ತೆರೆ ಈ ಸಾಧನಗಳ ಹೈಲೈಟ್.ಎರಡು ಕ್ಯಾಮರ,ವೈಫೈ ಮತ್ತು ತ್ರೀಜಿ ಸಂಪರ್ಕ ಇದೆ.ವಿಂಡೋಸ್,ಆಂಡ್ರಾಯಿಡ್-ಹೀಗೆ ಎರಡು ರೀತಿಯ ಸಾಧನಗಳ ಜತೆ ಏಸರ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ.ಏಸರ್ ನೆಟ್‌ಬುಕ್‌ಗಳ ಮಾರಾಟದಲ್ಲಿ ಉತ್ತಮ ಸಾಧನೆ ಮಾಡಿದ ಬಳಿಕ,ಈ ಮಾರುಕಟ್ಟೆ ಪ್ರವೇಶಿಸಲಿದೆ.ಮುಂದಿನ ವರ್ಷದ ಮೊದಲಾರ್ಧದಲ್ಲಿ ಏಸರ್ ಟ್ಯಾಬ್ಲೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.ಬೆಲೆಯ ವಿಷಯದಲ್ಲಿ ಕಂಪೆನಿಯು ಬಾಯಿಬಿಟ್ಟಿಲ್ಲ.ಎಚ್ ಪಿ,ಬ್ಲ್ಯಾಕ್‌ಬೆರಿ ಮುಂತಾದ ಕಂಪೆನಿಗಳೂ ಪ್ಯಾಡ್ ತಯಾರಿಸುವ ಯೋಚನೆಯಲ್ಲಿವೆ.ಏಪಲ್ ಕಂಪೆನಿಯು ಎಂಭತ್ತೇ ದಿನಗಳಲ್ಲಿ ಎರಡು ದಶಲಕ್ಷ ಐಪ್ಯಾಡ್‌ಗಳನ್ನು ಮಾರಿ,ಇತರ ಕಂಪೆನಿಗಳ ಚಿತ್ತವನ್ನು ಪ್ಯಾಡುಗಳತ್ತ ಹೋಗುವಂತೆ ಮಾಡಿದೆ.ಇದರ ಜತೆಯಲ್ಲಿಯೇ ಎರಡು ತೆರೆಗಳ ಲ್ಯಾಪ್‌ಟಾಪ್ ಐಕಾನಿಕಾವನ್ನೂ ಏಸರ್ ಮಾರುಕಟ್ಟೆಗೆ ಪರಿಚಯಿಸಿದೆ.
-------------------------------
ಉದಯವಾಣಿ ಡೈರಿ ಬಹುಮಾನ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ಉದಯವಾಣಿ ಡೈರಿ ಬಹುಮಾನ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಶ್ರುತಿಗ್ರಾಫಿಕ್ಸ್,ಉಡುಪಿ.
*ರೂಬಿ ಆನ್ ರೈಲ್ ಅಂದರೇನು?
*ಎಕ್ಸ್ಟ್ರೀಮ್ ಪ್ರೊಗ್ರಾಮಿಂಗ್ ಪದವನ್ನು ಕನ್ನಡಕ್ಕಿಳಿಸಿ.
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಶ್ರುತಿಗ್ರಾಫಿಕ್ಸ್‌ಗೆ ಮಿಂಚಂಚೆ ಮಾಡಿ,ವಿಷಯ:NS7 ನಮೂದಿಸಿ adooranilk@gmail.com).
(
ಕಳೆದ ವಾರದ ಸರಿಯುತ್ತರಗಳು:
*ಅಂತರ್ಜಾಲದ ಮೂಲಕ ಬಳಕೆದಾರನಿಗೆ ಅಗತ್ಯವಾದ ಯಂತ್ರಾಂಶ,ತಂತ್ರಾಂಶ ಮತ್ತು ಸೌಕರ್ಯಗಳನ್ನು ಒದಗಿಸುವ ವಿಧಾನವೇ ಕ್ಲೌಡ್ ಕಂಪ್ಯೂಟಿಂಗ್.
*ಸ್ಮರಣ ಸಾಮರ್ಥ್ಯವನ್ನು,ತಂತ್ರಾಂಶಗಳನ್ನು ಮತ್ತು ಯಂತ್ರಾಂಶಗಳನ್ನು ಇದರ ಮೂಲಕ ನೀಡಬಹುದು.ಗೂಗಲ್,ಅಮೇಜಾನ್,ಸೇಲ್ಸ್‌ಪೋರ್ಸ್ ಮುಂತಾದ ಕಂಪೆನಿಗಳು ಕ್ಲೌಡ್‌ಕಂಪ್ಯೂಟಿಂಗನ್ನು ಬಳಸುತ್ತಿವೆ.ಬಹುಮಾನ ಗೆದ್ದ ಶಿವಾನಂದ ಪೈ,ಎಂ ಐ ಟಿ,ಮಣಿಪಾಲ ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಲಾ ಮತ್ತು ಆರ್ಡರ್ ಎನ್ನುವುದು ಇನ್-ಲಾ ಮತ್ತು ಫಾಡರ್(ಮೇವು)ಗಳಿಗಿಂತ ಹೆಚ್ಚು ಮುಖ್ಯವೆಂದು ಬಿಹಾರದ ಚುನಾವಣಾ ಫಲಿತಾಂಶ ರುಜುವಾತು ಪಡಿಸಿದೆ.
*ಪೋನ್ ಬನೆಗಾ ಕರೋಡ್‌ಪತಿ!
*ಬಿಹಾರದಲ್ಲಿ ಬರೇ 4ಸ್ಥಾನ ಗಳಿಸಿರುವ ರಾಷ್ಟೀಯ ಪಕ್ಷ,ಅಂತಿಮ ಯಾತ್ರೆಗೂ ನಾಲ್ಕು ಜನ ಬೇಕು ಎನ್ನುವುದನ್ನು ನೆನಪಿಡಬೇಕು.
*ಕಾಂಗ್ರೆಸ್ಸಿಗರು ಟ್ವಿಟರಿನಲ್ಲಿದ್ದರೆ ಸಂದೇಶ ಬರೆಯರು,ಸೋನಿಯಾ-ರಾಹುಲ್ ಬರೆದದ್ದನ್ನು ಮತ್ತೆ ಕಳುಹಿಸಿಯಾರಷ್ಟೇ..
*ಯೆಡಿಯೂರಪ್ಪನವರಿಗೆ "ಬಹುಮಠ"ವಿದೆ...
-------------------------------------------------
ಹಳೆಯ ಕಂಪ್ಯೂಟರಿಗೆ ಎರಡುಲಕ್ಷ ಡಾಲರು
ಏಪಲ್-1 ಎನ್ನುವ 1976ರ ಮಾದರಿ,ಕಂಪ್ಯೂಟರ್ ಲಂಡನ್‌ನ ಹರಾಜು ಮಾರುಕಟ್ಟೆಯಲ್ಲಿ ಎರಡು ಲಕ್ಷ ಡಾಲರುಗಳಿಗು ಹೆಚ್ಚು ಬೆಲೆಯಲ್ಲಿ ಮಾರಾಟವಾಗಿದೆ.ಬರೇ ಇನ್ನೂರು ಕಂಪ್ಯೂಟರುಗಳನ್ನು ತಯಾರಿಸಲಾಗಿತ್ತು.ಇದರಲ್ಲಿ ಕಂಪೆನಿಯ ಹಳೆಯ ಲೋಗೋ ಆದ ನ್ಯೂಟನ್ ತಲೆಗೆ ಏಪಲ್ ಬೀಳುವ ಲೋಗೋ ಲಗತ್ತಿಸಲಾಗಿದೆ.ಆಗಿನ ಮಾರಾಟ ಬೆಲೆ ಆರುನೂರು ಡಾಲರುಗಳಾಗಿತ್ತು.
------------------------------------------------------
ಕಾಪಿರೈಟ್ ಉಲ್ಲಂಘನೆ ಬಗ್ಗೆ ಕ್ರಮ
ಹಕ್ಕುಸ್ವಾಮ್ಯಕ್ಕೆ ಕ್ಯಾರೇ ಅನ್ನದೆ,ಕಡತಗಳನ್ನು ಅದರಲ್ಲೂ ಸಂಗೀತ ಮತ್ತು ವಿಡಿಯೋ ಕಡತಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವ ಅಂತರ್ಜಾಲ ತಾಣಗಳಿವೆ.ಟೊರೆಂಟ್ ಸೇವೆ ಎನ್ನುವ ಸೇವೆಯ ಮುಖಾಂತರವೂ ಇಂತಹ ವಿನಿಮಯ ನಡೆಯುವುದಿದೆ.ಇಂತಹ ನೂರಾರು ತಾಣಗಳನ್ನು ವಶಪಡಿಸಿಕೊಂಡು,ಅವುಗಳಲ್ಲಿ ಹಕ್ಕುಸ್ವಾಮ್ಯದ ಉಲ್ಲಂಘನೆಗಿರುವ ದಂಡದ ಬಗ್ಗೆ ನೋಟಿಸು ಪ್ರಕಟಿಸುವ ಕ್ರಮವನ್ನೀಗ ಅಮೆರಿಕಾದ ಸರಕಾರ ಕೈಗೊಂಡಿದೆ.ಈ ತಾಣಗಳ ಸೇವೆಯೀಗ ಸ್ಥಗಿತಗೊಂಡಿವೆಯಲ್ಲದೆ,ಎಚ್ಚರಿಕೆಯ ನೋಟೀಸು ತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ.
------------------------------------
ಸ್ಥಿರ ಮೊಬೈಲ್ ಸಂಖ್ಯೆ:ಜನವರಿಯಿಂದ ಎಲ್ಲೆಡೆ ಲಭ್ಯ
ಸದ್ಯ ಹರ್ಯಾಣಾದಲ್ಲಿ ಸ್ಥಿರ ಮೊಬೈಲ್ ಸಂಖ್ಯೆ ಸಾಧ್ಯವಾಗಿದೆ.ಸದ್ಯ ಇರುವ ಮೊಬೈಲ್ ಸಂಖ್ಯೆಯನ್ನೇ ಹೊಸ ಸೆಲ್ ಆಪರೇಟರ್ ಸೇವೆಗೂ ಉಳಿಸಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ.ಆದರೆ ಭಾರತದಾದ್ಯಂತ ಈ ಸವಲತ್ತು ಜನವರಿ ಅಂತ್ಯಕ್ಕೆ ಸಿಗಲಿದೆ ಎಂದು ಈಗಿನ ಅಂದಾಜು.ಮೊಬೈಲ್ ಸೇವೆಗಳ ನಡುವೆ ಪೈಪೋಟಿ ಹೆಚ್ಚಲು ಈ ಸೇವೆ ಕಾರಣವಾಗಬಹುದು. ಆದರೂ ಕಾಲು ಭಾಗದಷ್ಟು ಬಳಕೆದಾರರು ತಮ್ಮ ಸೇವೆಯನ್ನು ಬದಲಿಸಿಕೊಳ್ಳುವ ಆಲೋಚನೆಯಲ್ಲೇ ಇಲ್ಲ ಎನ್ನುವಷ್ಟು ಮಟ್ಟಿಗೆ,ಸದ್ಯದ ಸೇವೆಯಿಂದ ತೃಪ್ತರು.
-------------------------------------
ವೊಟ್ರಾಶಿ ಇಮೇಜಿಂಗ್
ಫೇಸ್‌ಬುಕ್‌ನಲ್ಲಿ http://www.facebook.com/votrasi ಕೊಂಡಿಯಲ್ಲಿ ಮಂಗಳೂರಿನಲ್ಲಿ ಡಿಸೆಂಬರ್ ಹನ್ನೆರಡರಂದು ನಡೆಯಲಿರುವ ಫೊಟೋಗ್ರಫಿ ಪ್ರದರ್ಶನದ ಬಗ್ಗೆ ಮಾಹಿತಿಯಿದೆ,ಈ ಪ್ರದರ್ಶನದಲ್ಲಿ ಆಯ್ಕೆಯಾದ ಛಾಯಚಿತ್ರಗಳ ಪ್ರದರ್ಶನ ಜರಗಲಿದೆ.ಆಸಕ್ತರು votrasi@gmail.com ಸಂಪರ್ಕಿಸಿ.
---------------------------------------
ಚುಕ್ಕಿಗೊಂದು ಎಲ್ಲೆ ಎಲ್ಲಿದೆ?
ವಿಜಯಶ್ರೀಯವರ ಬರಹ,ಚಿತ್ರ ಮತ್ತಿತರ ರಚನೆಗಳನ್ನು ಕಾಣಬಹುದಾದ ಬ್ಲಾಗ್ http://chukkichittaara.blogspot.com.ಪ್ರತಿ ಬರಹಕ್ಕೂ ಉತ್ತಮ ಪ್ರತಿಕ್ರಿಯೆಯಿರುವುದು,ಈ ಬ್ಲಾಗಿನ ವಿಶೇಷ.ಕೆಲವು ಪೆನ್ಸಿಲ್ ರಚನೆಗಳೂ ಇಲ್ಲಿವೆ.ಅವರ ಕ್ಯಾಮರಾದ ಕಣ್ಣಿಗೆ ಬಿದ್ದ ದೃಶ್ಯಗಳನ್ನೂ ಓದುಗರ ಜತೆ ಹಂಚಿಕೊಳ್ಳಲು ಚುಕ್ಕಿಚಿತ್ತಾರ ವೇದಿಕೆಯಾಗಿದೆ.