-ಜೀವ ನದಿ -
ರಭಸದಿಂ ಧುಮಿಕ್ಕಿ
ಹರಿಯುತಿರುವ ನೀರೆ ನೀ ಯಾರು?
ಸೌಮ್ಯವನೆ ಕಳಚಿಕೊಂಡು
ಕ್ರೋಧವನೆ ಮೈತಳೆದು
ಭೋರ್ಗರೆಯುವ ನೀರೆ ನೀ ಯಾರು?\\
ಎಲ್ಲಿ ನಿನ್ನ ಹುಟ್ಟು?
ಎತ್ತ ನಿನ್ನ ಪಯಣ?
ಎಲ್ಲರ ಕೊಳೆ ತೊಳೆದು
ಮಲಿನತೆಯ ಅರಿವೇ ತೊಟ್ಟು
ಎತ್ತ ಹೊರೆಟಿರುವೆ ನೀರೆ ನೀನು?\\
ಗಿರಿ-ಕಂದರಗಳಲ್ಲಿ ಹರಿಯುವುದಿಲ್ಲ
ಸಸ್ಯ ಶಾಮಲೆಯ ಸೊಂಕಿಲ್ಲ ನಿನಗೆ
ಸುವಾಸನೆಯ ಬೀರುವುದಿಲ್ಲ
ಪೂಜನೀಯ ಗೌರವವಿಲ್ಲ ನಿನಗೆ\\
ಪಾವನೆ ಗಂಗೆ ಸೇರುವ ತವಕ
ಅದಕ್ಕೆ ಮರು ಮಾತಿಲ್ಲದ ಪಯಣ
ನಿನ್ನ ಕಣ್ಣೀರು ಒರೆಸುವವರಿಲ್ಲ
ಕಸ ಕಡ್ಡಿ ದುರ್ಗಂಧ ಹೋಗುತಿದೆ ಪ್ರಾಣ\\
ನಿನ್ನಲ್ಲಿಯು ತುಂಬಿಹುದು ಶಕ್ತಿ
ಅರಿಯಲು ಬೇಕಾಗಿದೆ ಯುಕ್ತಿ\
ಸುಮ್ಮನೆ ಹೊರಟಿರುವೆ ಬರಿಗೈಲಿ
ಕಣ್ಣಿದ್ದೂ ಕುರುಡರಾಗಿರುವವರು ಬಹಳ ಇಲ್ಲಿ\\
ನಿನ್ನ ಈ ಸ್ಥಿತಿಗೆ ಕಾರಣರು ನಾವೇ
ಸುಮ್ಮನೆ ಕುಳಿತಿರುವೆವು ಕೈಕಟ್ಟಿ\
ಧೋಷಪೂರಿತಳೆಂದು ನಿನ್ನ ಮರೆತಿರುವೆವು ನಾವು
ಕೈಲಾಗದವರೆಂದು ಕಟ್ಟಿಕೊಂಡಿಹೆವು ಹಣೆಪಟ್ಟಿ\\
ಮಾತಿಲ್ಲ ಕತೆಯಿಲ್ಲ ಕಣ್ಣೀರನು ಸುರಿಸಿ
ಸುಮ್ಮನೆ ಹರಿಯುತಿರುವೆ ನೀನಿಲ್ಲಿ\
ಏನು ಮಾಡಲಾಗದ ಸ್ಥಿತಿಯಿಲ್ಲಿ ಅಸಹ್ಯವೆಂದು
ಸುಮ್ಮನೇ ಕುಳಿತಿರುವೆವು ನಾವಿಲ್ಲಿ\\
ನಿನ್ನ ಗುರಿಯನು ನೀ ಮುಟ್ಟುವೆ
ನಾವಿಲ್ಲಿ ಸೊರಗಿರುವೆವು ನೀನಿಲ್ಲದೆ\
ಮತ್ತೆ ಅದೇ ಚಿಂತೆ ಸಮ್ಮನೆ ನೀ ಹರಿಯುತಿರುವೆ
ಮಾಲಿನ್ಯದ ವಿಷವ ತುಂಬಿರುವೆವು ಚಿಂತೆಯಿಲ್ಲದೆ\
ಈ ಕವಿತೆಗೆ ಸ್ಪೂರ್ತಿ ಬೆಂಗಳೂರಿನ ದೊಡ್ಡ ದೊಡ್ಡ ಚರಂಡಿಗಳಲ್ಲಿ ಹರಿವ ಮಲಿನವಾದ ನೀರು. ನಮ್ಮ ಜೀವ ನದಿಗಳು ( ಕಾವೇರಿ,ಕೃಷ್ಣೆ,ತುಂಗಭದ್ರೆ......) ವರ್ಷ ಪೂರ್ತಿಹರಿಯುತ್ತವೋ ಇಲ್ಲವೋ! ಆದರೆ ಬೆಂಗಳೂರಿನ ಜೀವನದಿಗಳು ಎಡೆಬಿಡದೆ ಹರಿಯುತ್ತಲೇ ಇರುತ್ತದೆ ಅಲ್ಲವೇ!. ಅವುಗಳಲ್ಲಿಯೊ ಚೈತನ್ಯವಿದೆ, ಆದರೆ ಅವು ಮಲಿನವಾಗಿದೆ ಅವುಗಳ ಜೀವಂತಿಕೆಯನ್ನು ನಮ್ಮ ಉಪಯೋಗಕ್ಕೆ ಹೇಗೆ ಬಳಸಬಹುದು ಎಂದು ನಾನು ಬಹಳ ಯೋಚಿಸಿದ್ದೇನೆ. ಅವುಗಳಿಂದ ವಿಧ್ಯುಚ್ಛಕ್ತಿಯನ್ನು ತಯಾರಿಸಬಹುದು. ಅವುಗಳನ್ನು ಸ್ವಚ್ಚಗೊಳಿಸುವ ಕಾರ್ಯ ತ್ವರಿತವಾಗಿ ಆಗಬೇಕಾದಂತಹ ವಿಷಯ. ನಮ್ಮ ಜನನಾಯಕರು, ಸರ್ಕಾರಿ ಅಧಿಕಾರಿಗಳಿಗೆ ದೂರಾಲೋಚನೆ ಇಲ್ಲವೆಂದೇ ಹೇಳಬೇಕು. ಬೆಂಗಳೂರಿನ ಜೀವಂತ ಚರಂಡಿಗಳಲ್ಲಿ ಹರಿಯುವ ನೀರಿನ ವ್ಯಥೆಯನ್ನು ನನ್ನ ಕವಿತೆಯಲ್ಲಿ ವಿವರಿಸಿದ್ದೇನೆ.