ಸುಡುಗಾಡು

ಸುಡುಗಾಡು

ಅವತ್ತಿನ ದಿನ ಒಂದು ಹೆಣ ಸುಡುಗಾಡಿಗೆ ಬರುತ್ತಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಮಶಾನದ ಹೆಣಗಳೆಲ್ಲಾ ಕುತೂಹಲದಿಂದ ಕಾಯುತ್ತಿದ್ದವು. ಸಂಬಂಧಿಕರು, ಜನರ ನಡುವೆ ಬಂದ ಹೆಣವನ್ನು ಮಣ್ಣು ಮಾಡಿ ಹೋದರು. ಅದು ರಂಗಪ್ಪನ ಹೆಣ, ಬಡವರ, ರೈತರ ಪರವಾಗಿ ಹೋರಾಡಿದ ರಂಗಪ್ಪನನ್ನು ನಕ್ಸಲ್ ಎಂಬ ಪಟ್ಟ ಕಟ್ಟಿ, ಪೊಲೀಸರು ಎನ್ ಕೌಂಟರ್ ಮಾಡಿದ್ದರು.

ರಾತ್ರಿ 12ರ ಸಮಯ ನೂತನವಾಗಿ ಬಂದ ಹೆಣವನ್ನು ಇತರೆ ಹೆಣಗಳಿಗೆ ಮಾತನಾಡಿಸುವ ಕಾತುರ. ಎಲ್ಲರೂ ಒಗ್ಗಟ್ಟಾಗಿ ಹೋಗಿ ರಂಗಪ್ಪನ ಹೆಣ ಹೂತಿದ್ದ ಜಾಗಕ್ಕೆ ತೆರಳಿ, ಬಾಗಿಲು ಬಡಿದರು. ರಂಗಪ್ಪನಿಗೆ ಚಿರ ನಿದ್ರೆ. ಕನಸಿನಲ್ಲಿ ಯಾರೋ ಬಂದು ಮನೆಯ ಬಾಗಿಲು ಬಡಿದಂತೆ. ಮತ್ತೆ ಬಾಗಿಲು ಬಡೆಯುವ ಶಬ್ದ ಜೋರಾಯಿತು. ನೋಡಿದರೆ ಸತ್ತಿದ್ದೇನೆ ಎಂಬ ಅರಿವಾಯಿತು. ಛೆ, ಈ ಜನಕ್ಕೆ ಸರಿಯಾಗಿ ಮಣ್ಣು ಮಾಡುವುದಿಕ್ಕೂ ಬರುವುದಿಲ್ಲ ಎಂದು ರಂಗಪ್ಪನ ಹೆಣ ಹೊರ ಬಂತು. ಬಂದ ಹೊಸ ಅತಿಥಿಗೆ ಭವ್ಯ ಸ್ವಾಗತ. ಅಲ್ಲೇ ಇದ್ದ ಹಾರ, ತುರಾಯಿಗಳನ್ನು ರಂಗಪ್ಪನ ಹೆಣಕ್ಕೆ ಹಾಕಿ ಸ್ವಾಗತ ಕೋರಲಾಯಿತು. ಸರಿ ಎಲ್ಲರೂ ರೌಂಡ್ ಟೇಬಲ್ ಕಾನ್ಫರೆನ್ಸ್ ತರಾ ಸೇರಿದರು. ಎಲ್ಲಾ ಹೆಣಗಳು ತಮ್ಮ ಪರಿಚಯ ಮಾಡಿಕೊಂಡವು. ಆದರೆ ಅಲ್ಲೇ ಇದ್ದ ಹಿರಿಯ ಹೆಣ ಸುಮ್ಮನೆ ಕೂತಿತ್ತು. ಅದು ಕೃಷ್ಣಪ್ಪನ ಹೆಣ.

ರಂಗಪ್ಪನ ಹೆಣ ತನ್ನ ಮಾತು ಆರಂಭಿಸಿತು. ದೇಶ ಕಟ್ಟುವ ಕನಸು ಹೇಳಿತು, ನಾಡು ಉಳಿಸುವ ಬಗ್ಗೆ ಧೀರ್ಘ ಭಾಷಣ ಮಾಡಿತು.ಜಾತಿ, ಧರ್ಮದ ಬೇಧ ಇರಬಾರದು ಎಂದಿತು. ಇನ್ನು ಸಣ್ಣ ವಯಸ್ಸು ನೂರಾ ಎಂಟು ಕನಸುಗಳು, ಆದರೆ ರಾಜಕೀಯದ ವ್ಯಕ್ತಿಗಳಿಗೆ ಬಲಿಯಾಗಿ ಹೆಣವಾಗಿದ್ದು ಎಲ್ಲರಿಗೂ ಬೇಸರವಾಯಿತು.ಇದೀಗ ನೀನು ಸತ್ತಿದ್ದಿಯಾ.  ನಿನ್ನ ಕನಸುಗಳು ಹಾಗೇ ಮಣ್ಣಾಗಿದೆ. ಇನ್ನು ನೀನು ಏನು ಮಾಡಲು ಸಾಧ್ಯವಿಲ್ಲ ಎಂದು ಒಕ್ಕೊರಲಿನಿಂದ ಹೇಳಿದವು. ಕನಸುಗಳು ಎಂದಿಗೂ ಸಾಯುವುದಿಲ್ಲ. ನಿಮ್ಮಲ್ಲಿ ಯಾರಿಗೆ ಕನಸಿಲ್ಲ ಹೇಳಿ ಎಂದು ರಂಗಪ್ಪನ ಹೆಣ ಕೇಳಿದಾಗ, ಕೃಷ್ಣಪ್ಪನ ಹೆಣ ಬಿಟ್ಟು ಮಿಕ್ಕವರೆಲ್ಲರೂ ಅಳುವುದಿಕ್ಕೆ ಆರಂಭಿಸಿದರು. ನೂರಾರು ಕನಸುಗಳು ಸಾಕಾರವಾಗದೇ ಜೀವನದ ಅಂತಿಮ ಘಟ್ಟಕ್ಕೆ ತಲುಪಿದ್ದವು. ಕೆಲ ಕಾಲ ಸ್ಮಶಾನದಲ್ಲಿ ಸ್ಮಾಶಾನ ಮೌನ.

ರಂಗಪ್ಪನ ಹೆಣ, ಕೃಷ್ಣಪ್ಪನ ಹೆಣಕ್ಕೆ ನಿನ್ನದು ಅಂತ ಏನು ಆಸೆ ಇಲ್ಲವೇ? ಯಾಕೆ ಸುಮ್ಮನಿದ್ದೀಯಾ ಎಂದಾಗ, ಕೃಷ್ಣಪ್ಪನ ಹೆಣ ಇದ್ದಕ್ಕಿದ್ದಂತೆ ಕಂಬನಿ ಮಿಡಿಯಲು ಆರಂಭಿಸಿತು. ಎಲ್ಲರೂ ಕುತೂಹಲದಿಂದ ಗದ್ಗದಿತರಾದರು. ಕೃಷ್ಣಪ್ಪನ ಹೆಣ ತನ್ನ ಕಥೆ ಹೇಳಲು ಆರಂಭಿಸಿತು. ನಾನು ರೇಷ್ಮ ಎಂಬುವಳನ್ನು ಪ್ರೀತಿಸಿದ್ದೆ. ಮುಸಲ್ಮಾನರ ಹುಡುಗಿ. ಇರುವಾಗ ಜನ ಧರ್ಮದ ಹೆಸರಿನಲ್ಲಿ ನಮ್ಮನ್ನು ಬದುಕಲು ಬಿಡಲಿಲ್ಲ. ಹಾಗಾಗಿ ಪ್ರೀತಿ ಇದ್ದರೂ ದೂರ ದೂರ ಇದ್ದೇ ಬದುಕಿದೆವು. ಸತ್ತಾಗಲಾದರೂ ಒಂದು ಆಗುತ್ತೇವೆ ಎಂದು ಕೊಂಡಿದ್ದರೆ, ಸತ್ತ ನಂತರ ಧರ್ಮದ ಬಿಕ್ಕಟ್ಟು ಮತ್ತಷ್ಟು ಜಾಸ್ತಿಯಾಯಿತು. ಅವಳ ಹೆಣವನ್ನು ಅವರ ಸ್ಮಶಾನದಲ್ಲಿ, ನನ್ನನ್ನು ಇಲ್ಲಿ ತಂದು ಹೂಳಿದರು. ಬದುಕಿದ್ದಾಗ ಪ್ರೀತಿ ಮಾಡಿದರೂ ಒಂಟಿಯಾಗಿದ್ದೆ, ಸತ್ತ ನಂತರವೂ ಅವಳದೇ ನೆನಪಿನಲ್ಲಿ ಒಂಟಿಯಾಗಿ ಇಲ್ಲಿ ಇದ್ದೇನೆ ಎಂದು ಮರುಗಿತು. ಇದೇನಾ ನಮ್ಮ ಕಟ್ಟು ಪಾಡು, ಧರ್ಮ ಎಂದಿತು ಕೃಷ್ಣಪ್ಪನ ಹೆಣ.

ಇವರಿಗೋಸ್ಕರನಾ ನಾನು ಹೋರಾಡಿದ್ದು, ಜಾತಿ ಮತ ಧರ್ಮಗಳ ಅಂತರ ಬೇಡ ಎಂದು ಹೋರಾಡಿದ್ದಕ್ಕೆ ಜನರ ಪ್ರತಿಫಲ ಇದೇನಾ, ನಮ್ಮಂತವರ ಹೋರಾಟಕ್ಕೆ, ಮರಣಕ್ಕೆ ಬೆಲೆನೇ ಇಲ್ಲ. ಇವರನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ ರಂಗಪ್ಪನ ಹೆಣ ತನ್ನ ಗುಂಡಿಯಲ್ಲಿ ಮಲಗಿ ಮಣ್ಣು ಹಾಕಿಕೊಂಡಿತು. ಯಾರು ಎಷ್ಟೇ ಕೂಗಿದರೂ ರಂಗಪ್ಪನ ಹೆಣ ಮೇಲೆ ಬರಲೇ ಇಲ್ಲ. ಮತ್ತೆ ಎಂದಿನಂತೆ ಹೆಣಗಳು ನೂತನ ವ್ಯಕ್ತಿ ಯಾರಿರಬಹುದೆಂಬ ಊಹೆಯಲ್ಲಿ ತಮ್ಮ ಗುಂಡಿಗಳಲ್ಲಿ ಮಲಗಿದವು.

 

ಇತ್ತೀಚೆಗೆ ಶಿವಮೊಗ್ಗದ ದೈನಿಕ ಸೃಷ್ಟಿ ರಾಜ್ ಟೈಮ್ಸ್್ನಲ್ಲಿ ಸ್ನೇಹಿತ ಪಾಶ ಎಂಬುವರು ಬರೆದ ಲೇಖನ.

 

 

Comments