ಕಥೆ
ಸಂಜೆಯ ಮುಳುಗು ಸೂರ್ಯನನ್ನೇ ದಿಟ್ಟಿಸುತ್ತ ಕುಳಿತಿದ್ದ ನೀರಜ್ ನ ಮುಖದಲ್ಲಿ ಎಂಥದೋ ಪ್ರಶಾಂತತೆ ಕಾಣುತಿತ್ತು. ನೀರಜ್ ಎಲ್ಲ ಹುಡುಗರಂತಲ್ಲ, ತನ್ನ ಪಾಡಿಗೆ ತಾನು ಓದಿನಲ್ಲಿ ಮುಳುಗಿರುತ್ತಿದ್ದ, ಇದುವರೆವಿಗೂ ಸ್ನಾತಕೋತ್ತರ ಪದವಿಯಲ್ಲಿ ಎಂದಿಗೂ ನಪಾಸು ಆದವನಲ್ಲ. ಇದೇ ನೀರಜ್ ಪದವಿ ಪರೀಕ್ಷೆಯ ಹೊತ್ತಿಗೆ ಹೀಗಿರಲಿಲ್ಲ, ತನ್ನ ಕಾಲೇಜಿನ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವನ ಪಾಲ್ಗೊಳ್ಳುವಿಕೆಯಿರುತ್ತಿತ್ತು. ಕಾಲೇಜಿನ, ನಾಟಕ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ವಿಮರ್ಶಾ ಸ್ಪರ್ಧೆ, ಭಾವಗೀತೆಯ ಸ್ಪರ್ಧೆಗಳಲ್ಲಿ ಇವನು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ. ಇವನಷ್ಟೇ ಕಾಲೇಜಿನಲ್ಲಿ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದವನು ಇವನ ಸ್ನೇಹಿತ ಅನಿರುದ್ಧ. ಈ ಎಲ್ಲ ಕಾರಣಗಳಿಂದ ಓದಿನಲ್ಲಿ ಅಷ್ಟೊಂದು ಆಸಕ್ತಿ ಇವನಲ್ಲಿ ಇರಲಿಲ್ಲ. ಜೀವನದ ಬಗೆಗೂ ಅಷ್ಟಾಗಿ ತಿಳುವಳಿಕೆಯಿರಲಿಲ್ಲವೆಂದೇ ಹೇಳಬೇಕು.
ಈಗ ಸ್ನಾತಕೋತ್ತರ ಪದವಿ ಮುಗಿಯುತ್ತ ಬಂದಿತ್ತು. ಅಲ್ಲದೇ, ಒಂದು ಒಳ್ಳೆಯ ಖಾಸಗಿ ಕಂಪನಿಯಲ್ಲಿ ಅವನಿಗೆ ನೌಕರಿಯೂ ದೊರೆತಿತ್ತು. ಇದರಿಂದ ನೀರಜ್ ನ ತಂದೆ ತಾಯಿಗಳಿಗೆ ಆದ ಆನಂದ ಅಷ್ಟಿಷ್ಟಲ್ಲ. ಅವರು ಸಹಜವಾಗಿಯೇ ಬಹಳ ಉತ್ಸುಕರಾಗಿದ್ದರು. ನೀರಜ್ ನ ತಂದೆ ಸರ್ಕಾರೀ ಕಚೇರಿಯಲ್ಲಿ ಮೊದಲ ದರ್ಜೆಯ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ ತಮ್ಮ ಮಗನ ಬಗೆಗೆ ಯಾರಾದರೂ ಕೇಳಿಯಾರು ಎಂದು ಕಾಯುತ್ತಿರುತ್ತಿದ್ದರು. ಅಂತೆಯೇ ತಾಯಿಯೂ ಮಗನ ಈ ಸಾಧನೆಯ ಬಗೆಗೆ ಬಹಳ ಆನಂದಿತರಾಗಿದ್ದರು. ಈ ನಡುವೆ ತನ್ನ ಕೊನೆಯ ಪರೀಕ್ಷೆ ಮುಗಿಯುವ ಕಾಲಕ್ಕೂ ಮತ್ತು ಕಂಪನಿ ಸೇರುವ ಕಾಲಕ್ಕೂ ಒಂದು ವಾರದ ಬಿಡುವಿದ್ದಿತು. ಈ ಬಿಡುವಿನಲ್ಲಿ ನೀರಜ್ ಊರಿಗೆ ಹೋಗಿ ಅಪ್ಪ ಅಮ್ಮರ ಆಶೀರ್ವಾದ ಪಡೆದು, ಗೆಳೆಯರಿಗೆಲ್ಲ ತಿಳಿಸುವ ಉತ್ಸಾಹದಲ್ಲಿದ್ದ. ಅಂತೆಯೇ ತನ್ನ ಪರೀಕ್ಷೆಯನ್ನು ಮುಗಿಸಿ, ಊರು ಸೇರಿದ. ತಂದೆ ತಾಯಿಗೆ ತಮ್ಮ ಮಗನನ್ನು ಕಂಡು, ಸಂತೋಷಕ್ಕೆ ಪಾರವೇ ಇರಲಿಲ್ಲ.
ಹೀಗೆಯೇ ತನ್ನ ರಜೆಯ ದಿನಗಳನ್ನು ಕಳೆದು, ಕಂಪನಿ ಸೇರಿದ ನೀರಜ್ ಗೆ ಅಲ್ಲಿ ಅನೇಕ ಗೆಳೆಯರಾದರು. ಅವರಲ್ಲಿ ಮುಖ್ಯವಾದವರು, ಗಗನ್, ಮನೋಜ್, ಶ್ರೀನಿ, ವಿನಯ್. ಅವರಂತೆಯೇ ಇನ್ನಿತರ ಹುಡುಗಿಯರೂ ಅವನ ಜೊತೆ ತರಬೇತಿಯಲ್ಲಿದ್ದರು. ಅವರೆಲ್ಲರನ್ನೂ ನೀರಜ್ ಬಹಳ ವಿಶ್ವಾಸದಿಂದ ಕಾಣುತಿದ್ದ.
ಅವರೆಲ್ಲರಲ್ಲೂ ಅವನಿಗೆ ಬಹಳ ಹತ್ತಿರವಾಗಿದ್ದವರು ಶೈಲಾ ಎಂಬ ಹುಡುಗಿ. ನೀರಜ್ ಮೂಲತಃ ಒಬ್ಬ ಬ್ರಾಹ್ಮಣ ಹುಡುಗ, ಅವನಿಗೆ ಶೈಲಾ ಇಷ್ಟವಾಗಿದ್ದು ಒಬ್ಬ ಗೆಳತಿಯಾಗಿ ಮಾತ್ರ. ಆದರೆ ಅವಳ ಆ ನಗು, ನೇರ ಮಾತು, ಸತ್ಯಕ್ಕೆ ಹತ್ತಿರವಾದ ಯೋಚನೆ ಇವೆಲ್ಲವೂ ಅವನನ್ನು ಮತ್ತು ಶೈಲಾಳನ್ನು ಮತ್ತಷ್ಟು ಹತ್ತಿರವಾಗಿಸಿತು. ಒಟ್ಟಿನಲ್ಲಿ ಇಬ್ಬರೂ ಪ್ರೀತಿಯ ತೋರಣ ಕಟ್ಟಲು ಅನುವಾಗಿದ್ದರು. ಆದರೆ ಇವರಿಬ್ಬರ ಈ ಮಧುರ ಪ್ರೀತಿಗೆ ಮುಳುವಾಗಿದ್ದು ಶೈಲಾಳ ಜಾತಿ.
ಶೈಲಳು ಒಬ್ಬ ಕ್ರಿಶ್ಚಿಯನ್ ಹುಡುಗಿ. ಆದರೆ, ನಾಟಕ, ವಿಮರ್ಶೆ, ಪ್ರಬಂಧ ಎಂದು ವೈಚಾರಿಕ ಯೋಚನೆಗಳಲ್ಲಿ ಅನುವಾಗಿರುವ ನೀರಜ್ ನಿಗೆ ಇವೆಲ್ಲವೂ ಗೌಣವಾಗಿತ್ತು. ಕೇವಲ ಮನುಷ್ಯ ಸಂಬಂಧಗಳಲ್ಲಿ ಮಾತ್ರವೇ ಅವನ ಧೃಢ ನಂಬಿಕೆ. ಇಷ್ಟೆಲ್ಲಾ ವೈಚಾರಿಕವಾಗಿ ಯೋಚಿಸಿಯೂ ಅವನಿಗೆ ತನ್ನ ಮನೆಯ ಪರಿಸ್ಥಿತಿಯ ಬಗೆಗೆ ಚೆನ್ನಾಗಿ ತಿಳಿದಿತ್ತು. ತನ್ನ ತಂದೆ ತಾಯಿ ಎಷ್ಟೇ ವಿಶಾಲ ಹೃದಯದವರಾದರೂ, ಈ ಮದುವೆಗೆ ಅವರು ಒಪ್ಪುವರೆಂಬ ನಂಬಿಕೆ ಅವನಲ್ಲಿರಲಿಲ್ಲ. ಆದರೂ ಈ ಕುರಿತು ಒಮ್ಮೆ ಮಾತನಾಡೋಣವೆಂದು ನಿರ್ಧರಿಸಿ ಒಮ್ಮೆ ಕೆಲಸದಿಂದ ನಾಲ್ಕೈದು ದಿನಗಳ ರಜೆ ಪಡೆದು, ತನ್ನ ಊರಿಗೆ ಬಂದನು. ಅವನನ್ನು ನೋಡುತ್ತಿದ್ದಂತೆ ಅಮ್ಮನಿಗೆ ಮಗನ ಹೃದಯದಲ್ಲಿ ಏನೋ ಕೊರೆಯುತ್ತಿದೆ ಎಂದು ಅರಿವಾಯಿತು. ನಂತರ ಊಟವೆಲ್ಲ ಆದ ಮೇಲೆ, ಮಗನನ್ನು ಎಂದಿನಂತೆಯೇ ಮಾತನಾಡಿಸಿ ಕೇಳಿದರು ಆಗ ನೀರಜ್ ನು ತನ್ನ ಮನದ ಮಾತುಗಳನ್ನು ತಾಯಿಯ ಮುಂದಿಟ್ಟನು. ತಾಯಿಗೆ ಈ ವಿಷಯ ಕೇಳಿ ಕೊಂಚ ಆಘಾತವಾದರೂ, ಮಗನನ್ನು ಸಮಾಧಾನಪಡಿಸಿ, ಬೇರೆ ಯಾರಾದರೂ ತಮ್ಮದೇ ಜಾತಿಯ ಹುಡುಗಿಯಾದರೂ ಪರವಾಗಿಲ್ಲವೆಂದು ಹೇಳಿದರು. ಕೊನೆಗೂ ತಾನು ನೆನೆಸಿದಂತೆಯೇ ನಡೆಯಿತೆಂದು ಮನದಲ್ಲೇ ನೀರಜ್ ಗೆ ಅನಿಸಿತು. ಈ ಪ್ರೀತಿಯನ್ನು ಇಲ್ಲಿಗೇ ಕೊನೆಗೊಳಿಸಿಬಿಡೋಣವೇ ಎಂದು ಅನಿಸಿತಾದರೂ, ಈ ಪರಿಶುದ್ಧ ಪ್ರೀತಿಗೆ ಮೋಸ ಮಾಡಬಾರದೆಂದು ತೀರ್ಮಾನಿಸಿ ಊರಿಗೆ ಮತ್ತೆ ಹೊರಡುವ ನಿರ್ಧಾರ ಮಾಡಿದನು. ತಾಯಿಯ ಮನದ ಅಳಲನ್ನು ಅರಿತು ಅವಳನ್ನು ಸಮಾಧಾನಪಡಿಸಿ ತಾನು ಯಾವುದೇ ಕೆಟ್ಟ ತೀರ್ಮಾನ ತೆಗೆದುಕೊಳ್ಳುವುದಿಲ್ಲವೆಂದು ತಿಳಿಸಿ ಊರಿಗೆ ವಾಪಾಸಾದನು.
ಇತ್ತ ಊರಿನಲ್ಲಿ ಅವನಿಗಾಗಿ ಕಾಯುತ್ತಿದ್ದ ಶೈಲಾ, ಒಂದು ಒಳ್ಳೆಯ ಸುದ್ದಿ ಹೇಳಲು ಕಾಯುತ್ತಿದ್ದಳು. ನೀರಜ್ನನ್ನು ಭೇಟಿಯಾಗಲು ತಿಳಿಸಿದಳು. ಇಬ್ಬರೂ ಭೇಟಿಯಾದಾಗ, ತನ್ನ ತಂದೆ ತಾಯಿಯರಿಬ್ಬರೂ ತಮ್ಮ ಮದುವೆಗೆ ಸಮ್ಮತಿಸಿರುವುದಾಗಿ ತಿಳಿಸಿದಳು. ಇದನ್ನು ಕೇಳಿ, ನೀರಜ್ ಗೆ ಎರಡು ಪ್ರತಿಕ್ರಿಯೆಗಳು ಒಮ್ಮೆಗೇ ಬಂದಂತಾಯಿತು. ಅವನಿಗೆ ಅಳು ಮತ್ತು ಸಂತೋಷ ಎರಡೂ ಒಮ್ಮೆಲೇ ಆದಂತಾಯಿತು. ಕೊನೆಗೆ ಅವಳೊಡನೆ ಈ ಬಗ್ಗೆ ಮತ್ತೊಮ್ಮೆ ಮಾತನಾಡುವುದಾಗಿ ತಿಳಿಸಿ, ತನ್ನ ರೂಮಿನಲ್ಲಿ ಕುಳಿತು ಯೋಚಿಸಿದನು, ತನ್ನ ತಂದೆ ತಾಯಿಯರ ಬಗೆಗೆ, ಅವರು ತನ್ನನ್ನು ಬೆಳೆಸಲು ಪಟ್ಟ ಕಷ್ಟದ ಬಗೆಗೆ ನೆನೆದು ಅವನ ಕಣ್ಣಾಲಿ ತೇವವಾಯಿತು. ತಾನು ತನ್ನ ಪದವಿಯ ಓದಿಗಾಗಿ ಪಟ್ಟಣಕ್ಕೆ ಬರುವಾಗ, ಇದುವರೆವಿಗೂ ಯಾರ ಮುಂದೆಯೂ ಕೈಒಡ್ಡದ ತಂದೆ ತನಗಾಗಿ ತನ್ನ ಸ್ನೇಹಿತರ ಬಳಿ ಸಾಲ ಮಾಡಿ ತನಗಾಗಿ ಕೊಡಿಸಿದ ಹೊಸ ಬಟ್ಟೆ, ಒಂದು ಹೊಸ ಸೀರೆಯನ್ನೂ ಕೊಳ್ಳದೆ ತನಗಾಗಿಯೇ ದುಡ್ಡು ಹೊಂದಿಸುತ್ತಿದ್ದ ತಾಯಿ, ತಾನು ಊರಿಗೆ ಹೊರಡುವಾಗ, ಬಾಗಿಲಲ್ಲಿ ಕಂಡ ಅಮ್ಮನ ಅಳು ಮುಖ ಇವೆಲ್ಲ ನೆನಪಾಗಿ, ತಂದೆ ತಾಯಿಯರು ಹೇಳಿದಂತೆ ಕೇಳುವ ಎಂದು ನಿರ್ಧರಿಸಿದ.
ಶೈಲಳನ್ನು ಕರೆದು ಈ ವಿಷಯವನ್ನೆಲ್ಲ ಅವಳಲ್ಲಿ ಹೇಳಿದ, ಮೊದಲಿಗೆ, ನೀರಜ್ ತನ್ನ ಪ್ರೀತಿಗೆ ಮೋಸ ಮಾಡುತ್ತಿದ್ದಾನೆ ಎಂದು ಅನಿಸಿದರೂ, ಕ್ರಮೇಣ, ನೀರಜ್ ನ ವಿಷಯಗಳಲ್ಲೂ ಸತ್ಯದ ಅರಿವಾಯಿತು. ತನ್ನ ತಂದೆ ತಾಯಿಯರು ತನಗಾಗಿ ಪಟ್ಟ ಕಷ್ಟ ಅವಳ ಕಣ್ಣ ಮುಂದೆ ಸರಿದಂತಾಯಿತು.ಅವರಿಬ್ಬರ ಸ್ನೇಹ, ಪ್ರೀತಿ ಪರಿಶುದ್ಧವಾಗಿದ್ದರಿಂದ, ಎಲ್ಲ ದೈಹಿಕ, ಮಾನಸಿಕ ಸಂಬಂಧಗಳಿಗೂ ಮೀರಿ, ಮಾನವೀಯ ನೆಲೆಗಟ್ಟಿನಲ್ಲಿದ್ದರಿಂದ, ಶೈಲಳಿಗೂ ಈ ತನ್ನ ಪ್ರಾಣ ಸ್ನೇಹಿತ ನೀರಜ್ ನ ಯೋಚನೆ ಸರಿ ಎಂದು ಅನಿಸಿತು. ಮತ್ತು ತಾವಿಬ್ಬರೂ ಹೀಗೆಯೇ ಪ್ರಾಣ ಸ್ನೇಹಿತರಾಗಿಯೇ ಉಳಿಯುವುದೆಂದು ತೀರ್ಮಾನಿಸಿದರು.ನೀರಜ್ ಪಟ್ಟಣದ ಬಳಿ ಇರುವ, ಒಂದು ಪ್ರಶಾಂತವಾದ ಉದ್ಯಾನದಲ್ಲಿ ಕುಳಿತು ಇದನ್ನೆಲ್ಲಾ ಮೆಲುಕು ಹಾಕತೊಡಗಿದನು. ಮುಳುಗುವ ಸೂರ್ಯನಂತೆ ತನ್ನ ಪ್ರೀತಿ ಮುಳುಗಿಲ್ಲ, ಆಕಾಶದಂತೆ ಶಾಶ್ವತವಾದದ್ದು, ಶುಭ್ರವಾದದ್ದು ಎಂದು ನೆನೆದು ಮನಸಿನಲ್ಲಿ ಶಾಂತಿ ನೆಲೆಯಾಯಿತು.