ಪೇಜಾವರರ ಪ್ರಾಮಾಣಿಕ ಮುಗ್ಧತೆ

ಪೇಜಾವರರ ಪ್ರಾಮಾಣಿಕ ಮುಗ್ಧತೆ

                ಬರುವ ಏಪ್ರಿಲ್ 27ಕ್ಕೆ ಅಕ್ಷರಶಃ 79 ‘ವಸಂತ’ಗಳನ್ನು ಮುಗಿಸಲಿರುವ ಸಾತ್ವಿಕ ಸುಜೀವಿ ಪೇಜಾವರ ಸ್ವಾಮಿಗಳು, ಇತರೆಲ್ಲಾ ನಾಡಾಡಿ ಸಂನ್ಯಾಸಿಯಂತಲ್ಲದೆ ವಿವಿಧ ಕಾರಣಗಳಿಗಾಗಿ ಜನಪ್ರಿಯರು; ಮನೆಮಾತಾಗಿರುವವರು. ಈ ಹಿರಿಜೀವಿಯಿಂದ ಇನ್ನೇನಲ್ಲದ್ದಿದ್ದರೂ ನಾವು ಧಾರಾಳವಾಗಿ ಪಡೆಯಬಹುದಾದ್ದು, ಪಡೆಯಲೇ ಬೇಕಾದ್ದು ಜೀವನದ ಪ್ರಾಮಾಣಿಕ ತುಂಬು ಉತ್ಸಾಹ ಮತ್ತು ಸಾತ್ವಿಕ ಸ್ಫೂರ್ತಿ. ‘ಅಸ್ಪೃಶ್ಯತೆ ಇಲ್ಲದ ಹಿಂದೂ ಸಮಾಜ’ದ ಸ್ವಾಮಿಗಳ ಪರಿಕಲ್ಪನೆಯಂತೂ ಸ್ವಾಗತಾರ್ಹ, ಸಾತ್ವಿಕ, ಸಾಮಾಜಿಕ ಉದ್ದೇಶ. ಈಗಂತೂ, ಸ್ವಾಮಿಗಳು, “ವೈಷ್ಣವ ದೀಕ್ಷೆ” ಎಂಬ ನುಡಿಗಟ್ಟನ್ನು, “ಭಕ್ತಿ ದೀಕ್ಷೆ” ಎಂದು ಬದಲಾಯಿಸಿದ್ದಾರೆ. ಇದು ವಿಶಾಲ ದೃಷ್ಟಿಯೇ ಹೌದು. ಆದರೂ ಇದರ ಅನುಷ್ಠಾನಕ್ಕೆ ಬೇಕಾದ ಪ್ರಮಾಣಪೂರ್ವಕ ಶ್ರದ್ಧೆ ಯಾವ ಸ್ತರದಲ್ಲೂ ಕಾಣಬರುತ್ತಿಲ್ಲವೇನೋ ಎನಿಸುತ್ತಿದೆ. ಅಥವಾ ಸ್ವಾಮಿಗಳ ಮಾತು, ಭಾವ, ಉದ್ದೇಶಗಳನ್ನು ನನ್ನಂಥ “ವೈಷ್ಣವರು” ಪೆದ್ದು-ಪೆದ್ದಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆಯೋ ಎಂದು ಗಾಬರಿಯೂ ಆಗುತ್ತಿದೆ!


ಭಾಗವತರ ಗುಣ-ಲಕ್ಷಣಗಳನ್ನು ತಿಳಿಸುವ, “ವ್ಯಾವಹಾರಿಕ ವೈಷ್ಣವ”ರ ‘ಸಂವಿಧಾನ’ವನ್ನು ಸಂತ ನರಸೀಮೆಹ್ತಾ ಈ ಹಿಂದೆಯೇ ಕೊಟ್ಟಿದ್ದಾರೆ; ಇದನ್ನು ಗಾಂಧೀಜಿ ಸಹ ಸತತ ಜಪಿಸುತ್ತಿದ್ದರಂತೆ. ಅಂದಮೇಲೆ “ವೈಷ್ಣವತೆ”, ನಾಮದ ಐಂಗಾರ‍್ಯರ, ಗೂಟನಾನಾಮದ ಆಚಾರ‍್ಯರ ಸ್ವತ್ತಲ್ಲ. ಹಾಗೇ ಇಡೀ ಸಮುದಾಯ ಸಮಾಜವನ್ನೇ ಶಿವಜಂಗಮವಾಗಿ, ಭಕ್ತನನ್ನು ಅದರ ಅವಿಭಿನ್ನ ಅಂಗವಾಗಿ ಕಾಣುವ ಪ್ರೌಢ, ವ್ಯಾವಹಾರಿಕ ಭಕ್ತಿಯೋಗವನ್ನು ಬಸವಾದಿ ಪ್ರಮಥರು ಸಮರ್ಥವಾಗಿ ಪ್ರಯೋಗಿಸಿಯೂ ತೋರಿಸಿದ್ದಾರೆ. ಅಂತಹ ಸರ್ವಸಮಾನ, ಅನುಕಂಪಪೂರಿತ ಮಾನವ ಸಮಾಜ ನಿರ್ಮಾಣಕ್ಕೆ ಸ್ವಾಮಿಗಳು “ದೀಕ್ಷೆ” ತೊಟ್ಟಿದ್ದರೆ ಸಂತೋಷ. ‘ಉಚ್ಚಕುಲ’ದ ಉನ್ಮತ್ತ ಯಜಮಾನರುಗಳೂ ಸ್ವಾಮಿಗಳ ಈ ಮೆಲ್ಪಙ್ತಿ ಅನುಸರಿಸುವುದಾದರೆ ಸಾಮಾಜಿಕ ಸ್ವಾಸ್ಥ್ಯ ಕೈಗೂಡಿದಂತೆಯೇ ಸರಿ. ಅಂಥ ಸ್ವಸ್ಥ ಸಮಾಜದಲ್ಲಿ ದೀನರು-ದಲಿತರು ‘ಸೇವಾಯೋಗ್ಯ ದೇವರು’ ಎಂಬ ಪ್ರಾಮಾಣಿಕ ಸದ್ಬುದ್ಧಿ ಸಹಜವಾಗಿಯೇ ಇರುತ್ತದೆ. ’ದೇವಸೇವಾ ದೀಕ್ಷೆ’ ಭಕ್ತರಿಗಲ್ಲದೆ ದೇವರಿಗೇ ಅಗತ್ಯವಾಗುವುದುಂಟೇ?!