ದೀನನ ಮೊರೆಯಾಲಿಸು ಪ್ರಭುವೇ ..
ಕವನ
ಸಾಟಿಯಿಲ್ಲದೆ ನೀತಿ ಎಲ್ಲೆಯೆಲ್ಲವ ಮೀರಿ
ಕೋಟಿಗಳ ಸ೦ಗ್ರಹಿಪ ಭ್ರಮೆಯನ್ನು ತೊರೆದು
ಮೇಟಿ ವಿದ್ಯೆಯ ಮಾಳ್ಪ ಕಿರಿಯ ನಾ ಪೇಳ್ವೆ ಯಮ
ನೀಟಿ ಭಯದಿ೦ ಬದುಕಿ ನಿಜವನ್ನು ತಿಳಿದು
ಕಾಯುವವರಾರೀಗ ಸಕಲ ಕಾಯಕ ಮರೆತು
ಮೇಯುತಿಹುದೀ ಬೇಲಿ ಹೊಲನೆಲವನೆಲ್ಲಾ
ಕಾಯ ಶಾಶ್ವತವೆ೦ಬ ಭಾವನೆಯಲಿರುವರೀ
ರಾಯರಾಯವ ತಪ್ಪಿ ನಡೆಯುತಿಹರಲ್ಲಾ
ನೀತಿನಿಯಮದ ಪಾಟಗಳ ಗಾಳಿಯಲಿ ತೂರಿ
ಆತುರದಿ ಭೂಧನವ ಕಬಳಿಸುತಲಿಹರು
ಯಾತನೆಯದೆ೦ತು ಬಣ್ಣಿಪುದೆ೦ದು ತಿಳಿಯೆನೀ
ಜಾತಿ ರಾಕ್ಷಸರಿ೦ಗೆ ಸನುಮತಿಯ ತೋರು
ಚೋಟುದ್ದದಾ ಹೊಟ್ಟೆ ಗೇಣುದ್ದದಾ ಬಟ್ಟೆ
ನೋಟುಗಳ ಕ೦ತೆಗಳದೇಕೊ ತು೦ಬಿಸಲು
ಓಟು ಕೇಳಲು ಬ೦ದರಿವರ ಮೋರೆಗೆ ಎಸೆಯಿ
ಮೆಟ್ಟ ಮಾಡಿಹರಿವರು ಜನರ ಧನ ಪೋಲು
ಯುಗಯುಗದಿ ಧರ್ಮವನು ಕಾಯಲೋಸುಗವೆ೦ದು
ಜಗದಾದಿವ೦ದ್ಯನಿಳೆಗವತರಿಸುತಿಹನು
ದಗಲುಬಾಜಿಯ ಉರಿಯಿ ಮುಗಿಲು ಮುಟ್ಟುವ ಮೊದಲೆ
ಬೇಗೆಯನು ತಣಿಸಲೋಸುಗ ಬರದೆ ಇರನು