ನಾಗರಾಜನ ದ್ವೇಷ (ಕಥೆ)

ನಾಗರಾಜನ ದ್ವೇಷ (ಕಥೆ)

ನಾಗರಾಜನ ದ್ವೇಷ


ಒಂದು ಸಣ್ಣ ಕಾರಣ,ಅರ್ಥವಿಲ್ಲದ ದ್ವೇಷ ಒಂದು ಕೊಲೆಗೆ ಕಾರಣವಾಗಬಹುದೆ? ಮತ್ತು ಯಾರ ಕಣ್ಣಿಗೂ ಬೀಳದೆ ಹಾಗೆ ಮುಚ್ಚಿ ಹೋಗ ಬಲ್ಲದೆ?


1990ರ ನವಂಬರ್ ನ ಒಂದು ದಿನ...


 


ಅವನ ಹೆಸರು ನಾಗರಾಜ ಬೆಂಗಳೂರಿನ ಜಯನಗರದ ಎಂಟನೆ ಬ್ಲಾಕಿನಲ್ಲಿ ಪತ್ನಿಯೊಂದಿಗೆ ಒಂದು ಚಿಕ್ಕ ಮನೆಯಲ್ಲಿ ಈಚೆಗೆ ಬಂದು ನೆಲೆಸಿದ್ದ. ವಿಧಾನಸೌಧದ ಹತ್ತಿರದ ಬಹುಮಹಡಿ ಕಟ್ಟಡದಲ್ಲಿ ಸರ್ಕಾರಿ ಉದ್ಯೋಗ. ದಿನಾ ಬೆಳಗ್ಗೆ 9 ಗಂಟೆಗೆ ಹೊರಡುವ 12 ನೇ ನಂಬರಿನ ಬಸ್ಸಿನಲ್ಲಿ ಹೊರಟು ಸಂಜೆ ಹಿಂದಿರುಗುತ್ತಿದ್ದ. ಮನೆಯ ಹಿಂಭಾಗದಲ್ಲಿಯೆ ಬಸ್ಸು ನಿಲ್ಲುತ್ತಿದ್ದರು, ಸೀಟು ಸಿಗುತ್ತದೆ ಎಂಬ ಕಾರಣಕ್ಕೆ ಬನಶಂಕರಿಗೆ ಹೋಗಿ ಬಸ್ಸು ಹತ್ತುತ್ತಿದ್ದ. ಆ ದಿನ ಹಿಂದಿನ ಬಾಗಿಲಿನ ಹತ್ತಿರವೆ ಇರುವ ಸೀಟ್ ಸಿಕ್ಕಿತು. ಹೊರಡುವಾಗಲೆ ಬಸ್ಸಿನಲ್ಲಿ ಬಾಗಿಲ ಹತ್ತಿರ ನೇತಾಡುತ್ತಿರುವ ಜನ. ಮೊದಲ ಸ್ಟಾಪ್ ಅಂದರೆ ಅದೆ ತನ್ನ ಮನೆಯ ಹಿಂಬಾಗಕ್ಕೆ ಇರುವ ಸಂಗಮ್ ಸರ್ಕಲ್ ಸ್ಟಾಪ್. ಮತ್ತಷ್ಟು ಜನ ಒಳನುಗ್ಗಿದರು. ಬಾಗಿಲಲ್ಲಿ ಯಥಾಪ್ರಕಾರ ನೇತಾಡುತ್ತಿರುವ ಜನಕ್ಕೆ ಮತ್ತಷ್ಟು ಕೈಗಳು ಸೇರಿದವು. ಆಗ ಅವನು ಶಿವಶಂಕರನನ್ನು ಗಮನಿಸಿದ.


   ಮೂರು ದಿನದಿಂದ ಇದೆ ಬಸ್ಸು ಹತ್ತುತ್ತಿದ್ದಾನೆ ಅಂದರೆ ಅವನು ಇಲ್ಲಿಯೆ ಹತ್ತಿರದಲ್ಲಿ ಎಲ್ಲಿಯೊ ನೆಲೆಸಿದ್ದಾನೆ. ಶಿವಶಂಕರ ಹಾಗು ನಾಗರಾಜ ಒಂದೆ ಊರಿನವರು ಬಾಲ್ಯ ಗೆಳೆಯರು ಮತ್ತು ಕಾಲೇಜಿನಲ್ಲಿ ಓದುವಾಗ ಒಂದೇ ರೂಮಿನಲ್ಲಿ ವಾಸವಾಗಿದ್ದವರು. ಆದರೆ ನಡೆದ ಒಂದು ಚಿಕ್ಕ ಘಟನೆಯಿಂದ ಇಬ್ಬರು ಬಾಲ್ಯ ಸ್ನೇಹಿತರು ಶತ್ರುಗಳಾದರು. ನಾಗರಾಜನ ಆಣ್ಣ ನಾಗೇಂದ್ರನು ಶಿವಶಂಕರನ ಅಣ್ಣ ಗಿರೀಶನ ಬಳಿ ಏತಕ್ಕೋ ಸಾಲ ಪಡೆದ, ಹಾಗು ಅದನ್ನು ಹಿಂದಿರುಗಿಸುವಾಗ ಅರ್ದ ಮಾತ್ರ ನೀಡಿ ಉಳಿದುದ್ದನ್ನು ಯಾವುದೋ ಲೆಕ್ಕ ತೋರಿಸಿ ಅದಕ್ಕೆ ಸರಿಯಾಯಿತು ಎನಿಸಿಬಿಟ್ಟ. ತನಗೆ ಇನ್ನು ಐವತ್ತು ಸಾವಿರ ಬರಬೇಕೆಂದು ಗಿರೀಶನ ವಾದ, ಅದು ಅವರಿಬ್ಬರ ದ್ವೇಷಕ್ಕೆ ಕಾರಣವಾಯಿತು. ಅವರಿಬ್ಬರ ನಡುವಿನ ಮಾತುಗಳು ನಿಂತು ಹೋದವು. ಆದರೆ ಆ ದ್ವೇಷ ನಾಗರಾಜ ಹಾಗು ಶಿವಶಂಕರರ ಸ್ನೇಹಕ್ಕೆ ಯಾವ ಅಡಚಣೆಯು ಆಗಲಿಲ್ಲ ಹಾಗೆ ಮುಂದುವರೆದಿತ್ತು.


   ಇವರಿಬ್ಬರ ಓದು ಮುಗಿದು ಕೆಲಸಕ್ಕೂ ಸೇರಿದರು, ಒಂದು ಸಂದರ್ಪದಲ್ಲಿ ಶಿವಶಂಕರನು ನಾಗರಾಜನ ಹತ್ತಿರ ಒಂದು ಲಕ್ಷದಷ್ಟು ಸಾಲ ಪಡೆದ. ಗೆಳೆಯನಿಗೆ ಇಲ್ಲ ಎಂದು ಹೇಗೆ ಹೇಳುವುದು? ಹೇಗೊ ಹೊಂದಿಸಿಕೊಟ್ಟ ನಾಗರಾಜ. ಆದರೆ ಮೋಸವಾಗಿತ್ತು, ಹಿಂದಿರುಗಿ ಕೊಡುವಾಗ ಶಿವಶಂಕರನು ಅರ್ದಮಾತ್ರ ಕೊಟ್ಟು ಉಳಿದುದ್ದಕ್ಕೆ ತಾರಮಯ್ಯ ಆಡಿಸಿಬಿಟ್ಟ. ನಾಗರಾಜನು ಇದೆಂತಹ ಲೆಕ್ಕ ಅಂತ ಕೇಳಿದರೆ ಅವನು ನಿಮ್ಮ ಅಣ್ಣನು ಮಾಡಿದ ತರವೆ ಲೆಕ್ಕ ಅಂತ ಕೊಂಕು ನಗೆ ನಕ್ಕ. ಇವನೆಷ್ಟೊ ವಾದಿಸಿದ ನಮ್ಮ ಅಣ್ಣಂದಿರ ವ್ಯವಹಾರವನ್ನು ನಮ್ಮ ನಡುವಿನ ಸ್ನೇಹಕ್ಕೆ ಮದ್ಯ ತರಬೇಡವೆಂದು. ಆದರೆ ಅದು ಮೊದಲೆ ನಿರ್ದರಿಸಿ ಮಾಡಿದ ಮೋಸವಾಗಿತ್ತು. ಪ್ರಾಣ ಸ್ನೇಹಿತನ ಈ ಮೋಸ ನಾಗರಾಜನನ್ನು ಕೆರಳಿಸಿತ್ತು. ಅವನು ಎಚ್ಚರಿಸಿದ ಇಷ್ಟು ಸುಲುಬವಲ್ಲ ನನ್ನನ್ನು ಮೋಸ ಮಾಡಿ ಉಳಿಯೋದು ನೀನು ನನ್ನ ಸ್ವಾಬಿಮಾನಕ್ಕೆ ಬರೆ ಹಾಕಿದ್ದೀಯ ಇದರ ಪರಿಣಾಮ ಎದುರಿಸೋದು ನಿನಗೆ ಕಷ್ಟ ಅಂತ. ಅಲಕ್ಷ್ಯದ ನಗೆ ನಕ್ಕ ಶಿವಶಂಕರ ನಂತರ ಅವರಿಬ್ಬರ ನಡುವಿನ ಎಲ್ಲ ವ್ಯವಹಾರ ಮಾತುಕತೆಗಳು ನಿಂತು ಹೋದವು. ನಾಗರಾಜನಿಗೆ ಬೆಂಗಳೂರಿಗೆ ವರ್ಗವಾಯಿತು. ಮದುವೆಯಾಯಿತು. ಇಷ್ಟು ವರ್ಷಗಳ ನಂತರ ಹೀಗೆ ಕಾಣಿಸುತ್ತಿದ್ದಾನೆ ತನ್ನ ಶತ್ರು ಅಂದುಕೊಂಡ ನಾಗರಾಜ.


   ಬಸ್ಸು ಆಗಲೆ ಲಾಲ್ ಬಾಗಿನ ಗೇಟನ್ನು ದಾಟಿ ಜೆ.ಸಿ. ರಸ್ತೆಗೆ ತಲುಪಿ ಮುಂದುವರೆದಿತ್ತು. ಶಿವಶಂಕರನತ್ತ ನೋಡಿದ ನಾಗರಾಜ , ಕಿಟಕಿಯಿಂದ ತನ್ನನ್ನೆ ನೋಡುತ್ತಿದ್ದ ಅವನು ಕಣ್ಣು ತಪ್ಪಿಸಿ ಬೇರೆ ಕಡೆ ದೃಷ್ಟಿ ಹಾಯಿಸಿದ. ಅಲ್ಲಿಗೆ ಅವನು ತನ್ನನ್ನು ಗಮನಿಸಿದ್ದಾನೆ ಅಂದುಕೊಂಡ. ಸೂಕ್ಷ್ಮವಾಗಿ ಗಮನಿಸಿದ ನಾಗರಾಜ, ಶಿವಶಂಕರನು ತನ್ನ ಎಡಕೈಯಿಂದ ಬಾಗಿಲಿನ ಹತ್ತಿರ ಬರುವ ಒಳಗಿನ ಕಂಬಿಯನ್ನು ಹಿಡಿದು, ಒಂದು ಕಾಲನ್ನು ಮಾತ್ರ ಫುಟ್ ಬೋರ್ಡ್ ಮೇಲಿಟ್ಟು ದೇಹವೆಲ್ಲ ಬಸ್ಸಿನಿಂದ ಹೊರಗೆ ಇರುವಂತೆ ನೇತಾಡುತ್ತಿದ್ದಾನೆ. ಬೆಳಗಿನ ಹುಚ್ಚು ಟ್ರಾಫಿಕ್ ,ಎಲ್ಲ ಡ್ರೈವರ್ ಗಳಿಗು ಬಸ್ಸನ್ನು ಬೇಗ ಕೊಂಡೊಯ್ಯುವ ಧಾವಂತ. ತನ್ನ ಬಸ್ಸು ಮುಂದೆ ಹೋಗುತ್ತಿರುವ ಬಸ್ಸನ್ನು ಒವರ್ ಟೇಕ್ ಮಾಡಲು ಪ್ರಯತ್ನ ಪಡುತ್ತಿದೆ. ಬುದ್ದಿವಂತನಾದ ನಾಗರಾಜ ತಕ್ಷಣ ಸಿದ್ದನಾಗಿ ಬಿಟ್ಟ. ತನ್ನ ತೊಡೆಯಮೇಲಿದ್ದ ಲೆದರ್ ಬ್ಯಾಗಿನಲ್ಲಿ ಕೈಆಡಿಸಿ ಸಣ್ಣ ಗುಂಡುಪಿನ್ನನ್ನು ಅರಿಸಿ ಕೈಯಲ್ಲಿ ಹಿಡಿದ. ಶಿವಶಂಕರನ ಕಂಬಿಹಿಡಿದಿರುವ ಕೈಸರಿಯಾಗಿ ತನ್ನ ತೊಡೆಯಮೇಲಿರುವ ಬ್ಯಾಗಿನ ಮೇಲೆ ಇದೆ.


   ಈಗ ಪೂರ್ಣವೇಗ ಪಡೆದ ಬಸ್ಸು ಮುಂದಿನ ಬಸ್ಸನ್ನು ಹಿಂದೆ ಹಾಕುತ್ತಿದೆ. ಎರಡು ಬಸ್ಸುಗಳು ಸಮಾನಂತರವಾಗಿ ಚಲಿಸುತ್ತಿವೆ , ದ್ವೇಷವೆಂಬ ಅಗ್ನಿ ಮನಸ್ಸನ್ನು ತೀವ್ರವಾಗಿ ಆವರಿಸಿತು.ನಾಗರಾಜ ವೇಗವಾಗಿ ಯೋಚಿಸಿ ನಿರ್ದರಿಸಿದ. ಹೊರಗೆ ನೇತಾಡುತಿದ್ದ ಶಿವಶಂಕರ ನಾಗರಾಜನನ್ನು ದಿಟ್ಟಿಸಿದ. ನಾಗರಾಜನ ತುಟಿಯಲ್ಲಿ ವ್ಯಂಗ್ಯದ ನಗುವೊಂದು ಹಾದುಹೋಯಿತು. ಇವನ ಕಣ್ಣುಗಳನ್ನು ದಿಟ್ಟಿಸಿದ ಶಿವಶಂಕರ ಗಾಭರಿಯಾದ, ಏನೋ ನಡೆಯುತ್ತಿದೆ ಆದರೆ ಏನೆಂದು ಅವನ ತಲೆಗೆ ಬರಲಿಲ್ಲ. ಶಿವಶಂಕರನ ಕಣ್ಣಿನಲ್ಲಿಯ ಭಯ ನಾಗರಾಜನಿಗೆ ಸ್ವಷ್ಟವಾಗಿ ಗೋಚರಿಸಿತು. ಶಿವಶಂಕರನಿಗೆ ಹೊರಗಿನಿಂದ ನಾಗರಾಜನ ಮುಖ ಕಾಣಿಸುತ್ತಿದೆಯೆ ಹೊರತು ಕೈಗಳು ಕಾಣಿಸುತ್ತಿಲ್ಲ. ಬಸ್ಸಿನಲ್ಲಿಯು ನಾಗರಾಜನನ್ನು ಯಾರು ಗಮನಿಸುತ್ತಿಲ್ಲ. ಎರಡು ಬಸ್ಸುಗಳು ಕೇವಲ ನಾಲ್ಕು ಅಡಿ ಅಂತರದಲ್ಲಿ ಚಲಿಸುತ್ತಿವೆ ತನ್ನ ಬಸ್ಸು ಪಕ್ಕದ ಬಸ್ಸನ್ನು ಹಿಂದೆ ಹಾಕುತ್ತಿರುವಂತೆಯೆ ನಾಗರಾಜ ತನ್ನ ಬಲವನ್ನೆಲ್ಲ ಉಪಯೋಗಿಸಿ ಶಿವಶಂಕರನ ಕೈಬೆರಳ ಉಗುರಿನ ಮೇಲೆ ಗುಂಡುಪಿನ್ನಿನಿಂದ ಚುಚ್ಚಿದ. ನೋವಿನಿಂದ ತಕ್ಷಣ ಕೈಯಿತ್ತಿದ ಶಿವಶಂಕರ ಏನಾಯಿತೆಂದು ಅರ್ಥಮಾಡಿಕೊಂಡು ಬಲಕೈಯಿಂದ ಕಿಟಕಿಹಿಡಿಯುವ ಮುನ್ನವೆ ಆಸರೆ ತಪ್ಪಿ ಕಿರುಚಿಕೊಳ್ಳುತ್ತ ರಸ್ತೆಗೆ ಬಿದ್ದ. ಹಿಂದಿನಿಂದ ಬರುತ್ತಿದ ಬಸ್ಸಿನ ಡ್ರೈವರ್ ಗಮನಿಸುವ ಮುಂಚೆಯೆ ಆ ಬಸ್ಸಿನ ಮುಂದಿನ ಚಕ್ರವು ನೆಲಕ್ಕೆ ಬಿದ್ದ ಇವನ ಎದೆಯ ಮೇಲೆ ಹರಿದಿತ್ತು. ಡ್ರೈವರ್ ಆತುರದಲ್ಲಿ ಬ್ರೇಕ ಅದುಮಿದ ಅಷ್ಟರಲ್ಲಿ ಹಿಂದಿನ ಚಕ್ರವು ಹರಿದುಬಂದು ನಿದಾನವಾಗಿ ಅವನ ಮೇಲೆ ಹತ್ತಿ ನಿಂತಿತ್ತು. ಸ್ಥಳದಲ್ಲೆ ಅವನ ಪ್ರಾಣಹೊರಟು ಹೋಗಿತ್ತು. ಕಿಟಕಿಯಿಂದಲೆ ನಾಗರಾಜ ಇದನ್ನು ಗಮನಿಸಿದ.


ಜನರ ಗಲಾಟೆ ಕೇಳಿ ಡ್ರೈವರ್ ಬಸ್ಸು ನಿಲ್ಲಿಸುವ ಹೊತ್ತಿಗಾಗಲೆ ನಾಗರಾಜನಿರುವ ಬಸ್ಸು ಮುವತ್ತು ನಲವತ್ತು ಅಡಿಯಷ್ಟು ಮುಂದೆ ಬಂದಾಗಿತ್ತು. ಎಲ್ಲರು ಇಳಿದು ಹಿಂದಕ್ಕೆ ಓಡಿದರು. ಕಂಡೆಕ್ಟರ ಡ್ರೈವರ್ ಸಹ ಹಿಂದೆ ಓಡಿದರು. ನಾಗರಾಜ ಯಾವ ಅತಂಕವು ಇಲ್ಲದೆ ನಿದಾನವಾಗಿ ಕೆಳಗೆ ಇಳಿದ. ಹಿಂದೆ ಒಮ್ಮೆ ತಿರುಗಿನೋಡಿ ಮುಂದೆ ನಡೆಯಲು ಪ್ರಾರಂಬಿಸಿದ. ಕೈಯಲ್ಲಿದ್ದ ಗುಂಡುಪಿನ್ನನ್ನ ಪಕ್ಕಕ್ಕೆ ಎಸೆದ. ಜೋಭಿನಲ್ಲಿ ಕೈಆಡಿಸಿ ಬಸ್ಸಿನ ಟಿಕೇಟ್ ತೆಗೆದು ಅದನ್ನು ಒಮ್ಮೆ ದೃಷ್ಟಿಸಿ ಎಡಕೈಯಿಂದ ಅದನ್ನು ಮುದುರಿ ಪಕ್ಕಕ್ಕೆ ಎಸೆದ. ನಿದಾನವಾಗಿ ಟೌನ್ ಹಾಲಿನತ್ತ ನಡೆದು ಹೊರಟ, ಇನ್ನೊಂದು ಬಸ್ಸನು ಹಿಡಿದು ಆಫೀಸನ್ನು ತಲುಪಲು.

Comments