ಮದುವೆ ಮನೆಯಲ್ಲಿ ಕುಲದಲ್ಲಿ ಕೀಳ್ಯಾವುದೋ..

ಮದುವೆ ಮನೆಯಲ್ಲಿ ಕುಲದಲ್ಲಿ ಕೀಳ್ಯಾವುದೋ..

ಕಳೆದ ವಾರ ಗೆಳೆಯನೊಬ್ಬನ ಮದುವೆ ಆರತಕ್ಷತೆ ಸಮಾರಂಭಕ್ಕೆ ಹೋಗಿದ್ದೆ. ಮದುವೆ ಛತ್ರದ ಬಳಿ ಹೋಗುತ್ತಿದ್ದಂತೆ ಇನ್ನು ಕೆಲವು ಗೆಳೆಯರು ಸಿಕ್ಕಿದರು ಹಾಗೆ ಅದೂ ಇದೂ ಮಾತಾಡುತ್ತಿದ್ದಾಗ ಒಳಗಡೆಯಿಂದ ಕರ್ಕಶವಾದ ಆರ್ತನಾದ (ಸಂಗೀತ ಕಾರ್ಯಕ್ರಮ) ಕೇಳಿಸುತ್ತಿತ್ತು. ನನಗೆ ಹಾಡುಗಳೆಂದರೆ ಬಹಳ ಇಷ್ಟ, ಆದರೆ ಅದನ್ನು ಕೆಟ್ಟದಾಗಿ ಹಾಡಿದರೆ ಕೆಟ್ಟ ಕೋಪ ಬರುತ್ತದೆ. ಸರಿ ಸ್ವಲ್ಪ ಹೊತ್ತು ಮಾತಾಡಿ ಒಳಗಡೆ ಕಾಲಿಟ್ಟೆವು. ಒಳಗಡೆ ಕಾಲಿಟ್ಟ ತಕ್ಷಣ 'ಒಡಿ ಮಗ ಒಡಿ ಮಗ' ಎಂಬ ಹಾಡು ಹಾಡುತ್ತಿದ್ದ ಪುಣ್ಯಾತ್ಮ. ಆತ 'ಅ' ಗೆ 'ಹ' ಎಂದು 'ಶ' ಗೆ 'ಸ' ಎಂದು ಹಾಡುತ್ತಿದ್ದರೆ ಮೈ ಎಲ್ಲ ಉರಿಯುತ್ತಿತ್ತು. ಅದಿರಲಿ ಸ್ವಾಮಿ ಮದುವೆ ಮನೆಯಲ್ಲಿ ಆ ಹಾಡು ಬೇಕೇ?. ನಂತರ ಇನ್ನೊಂದೆರಡು ಹಾಡು ಹಾಡಿದ..ನಾವು ನಮ್ಮ ಪಾಡಿಗೆ ಮಾತಾಡುತ್ತಿದ್ದೆವು. ಇದ್ದಕ್ಕಿದ್ದಂತೆ 'ಯಾರಿಗೆ ಬೇಕು ಈ ಲೋಕ' ಎಂಬ ಸಿಪಾಯಿ ಚಿತ್ರದ ಹಾಡನ್ನು ಹಾಡಲು ಶುರು ಮಾಡಿದ. ನನಗೆ ಆಶ್ಚರ್ಯವಾಗುತ್ತಿತ್ತು ಆತ ಏನೆಂದು ಕೊಂಡಿದ್ದಾನೆ ಅಲ್ಲಿ ವೇದಿಕೆ ಮೇಲೆ ನವ ಜೋಡಿಗಳು ಹೊಸ ಜೀವನಕ್ಕೆ ಕಾಲಿಡುತಿದ್ದರೆ ಈತ ಯಾರಿಗೆ ಬೇಕು ಈ ಲೋಕ ಎಂದು ಹಾಡುತ್ತಿದ್ದಾನೆ ಎಂದು ಕೋಪ ಬಂದರೂ ಏನೂ ಮಾಡಲು ಸಾಧ್ಯವಾಗದೆ ಮತ್ತೆ ಆಚೆ ಬಂದು ಬಿಟ್ಟೆವು.

ಆತ ಹೀಗೆ ಸಂಬಂಧವಿಲ್ಲದೆ ಕೆಟ್ಟ ಕೆಟ್ಟದಾಗಿ ಕಿರುಚಾಡುತ್ತಲೇ ಇದ್ದ. ನಾವು ಊಟದ ಸಮಯಕ್ಕೆ ಮತ್ತೆ ಒಳಗೆ ಕಾಲಿಟ್ಟೆವು. ಸರಿ ನಾವೆಲ್ಲಾ ಕೆಳಗಡೆ ಹೋಗಿ ಮಾತಾಡುತ್ತ ಊಟ ಮುಗಿಸಿ ಮತ್ತೆ ಮೇಲೆ ಬಂದು ಇನ್ನೇನು ಹೊರಡೋಣ ಅನ್ನುವಾಗ ಶುರುವಾಯಿತು ನೋಡಿ. 'ಕುಲದಲ್ಲಿ ಕೀಳ್ಯಾವುದೋ ಉಚ್ಚಪ್ಪ ಮತದಲ್ಲಿ ಮೇಲ್ಯಾವುದೋ' ಎಂದು ಶುರುಮಾಡಿದ ಆತ ಆ ಹಾಡು ಶುರು ಮಾಡಿದ ತಕ್ಷಣ ಒಂದಷ್ಟು ಜನ ವೇದಿಕೆಯ ಮುಂದೆ ಬಂದು ಹುಚ್ಚು ಹುಚ್ಚಾಗಿ ಕುಣಿಯಲು ಶುರು ಮಾಡಿದರು. ನಮಗೆ ಒಂದೂ ಅರ್ಥವಾಗಲಿಲ್ಲ. ನಾವೇನು ಮದುವೆಗೆ ಬಂದಿದ್ದೇವ ಅಥವಾ ಯಾವುದಾದರೂ ಬೀದಿಯಲಿ ನಡೆಯುವ ಕಾರ್ಯಕ್ರಮಕ್ಕೆ ಬಂದಿದ್ದೇವ ಎಂದು.  ಒಂದು ಕ್ಷಣ ಅಲ್ಲಿ ನಿಲ್ಲಲು ಮನಸಾಗದೆ ಸೀದಾ ಎದ್ದು ಬಂದು ಬಿಟ್ಟೆವು.

ಇನ್ನೂ ನನ್ನ ಗೆಳೆಯ ಮದುವೆಯ ಸಂಭ್ರಮದಿಂದ ಆಚೆ ಬಂದಿಲ್ಲ. ಅಂದರೆ ಇನ್ನು ನಮಗೆ ಸಿಕ್ಕಿಲ್ಲ. ಸಿಕ್ಕಿದರೆ ಆತನನ್ನು ಮೊದಲು ಕೇಳುವ ಪ್ರಶ್ನೆ ಯಾವುದಪ್ಪ ಆ ಸಂಗೀತ ತಂಡ ಎಂದು?? ಹಾಗೆ ಅಲ್ಲಿ  ಕುಣಿದ ಪುಣ್ಯಾತ್ಮರು ಯಾರು ಎಂದು??

Comments