ಕಿಚ್ಚು :: ಭಾಗ -೬

ಕಿಚ್ಚು :: ಭಾಗ -೬

ಕಿಚ್ಚು :: ಭಾಗ -೬

 

ಹಿಂದಿನ ಕಂತು : http://sampada.net/blog/kamathkumble/07/12/2010/29393

 

 

೧೨


ಹದಿಹರೆಯದ ಪ್ರೇಮ ಎಂದೂ ಸುಂದರ, ನಾವಿಬ್ಬರು ಆ ರಸಗಳಿಗೆಯ ಒಂದೊಂದು ಹನಿಯನ್ನು ಅನುಭವಿಸುತಿದ್ದೆವು, ಕೈಯಲ್ಲಿ ಹಣವಿಲ್ಲ, ಆದರು ನಾಳಿನ ಚಿಂತೆ ನಮ್ಮಲ್ಲಿರಲಿಲ್ಲ, ಇಬ್ಬರು ಮನೆ ಬಿಟ್ಟಿರುವುದರಿಂದ ಹಿರಿಯರ ಸರಿ-ತಪ್ಪು ಆದೇಶವು ನಮ್ಮ ಸುಳಿಯುತಿರಲಿಲ್ಲ. ಪ್ರೇಮ ಮನಸನ್ನು ತುಂಬುತಿತ್ತೆ  ವಿನಃ ನಮ್ಮ ಹಸಿದ ಹೊಟ್ಟೆ ತುಂಬುತಿರಲಿಲ್ಲ, ಅಣ್ಣ ಗಣೇಶ್ ನಮ್ಮನ್ನು ಏನು ಕಮ್ಮಿ ಆಗದಂತೆ ನೋಡಿಕೊಳ್ಳುತಿದ್ದ, ತನಗೆಲ್ಲೋ ದೊಡ್ಡ ಕಂಪೆನಿ ಯಲ್ಲಿ ಸೆಕ್ಯುರಿಟಿ ಕೆಲಸ ಎಂದು ಹೇಳುತಿದ್ದ, ಕೈ ತುಂಬಾ ಸಂಬಳ ಇದೆ, ನೀನೇನು ಯೋಚಿಸಬೇಡ ನಿನಗೂ ಕೆಲಸ ಕೊಡಿಸುತ್ತೇನೆ, ಅಂದಿದ್ದ. ರಾತ್ರಿಯ ಫಾಳಿ ಇದೆ ಎಂದು ಮನೆಗೆ ಬರುವುದನ್ನು ನಿಲ್ಲಿಸಿದ. ಒಂಟಿ ಮನೆಯಲ್ಲಿ ನಮ್ಮ ನರ್ತನವು ದಿನ ಕಳೆದಂತೆ ಹೆಚ್ಚಾಗುತ್ತಾ ಹೋಯಿತು.

ಯಾವಾಗಿನಂತೆ ನಿಶ್ಚಿಂತೆಯಾಗಿ ಬೆಳಗ್ಗೆ ಎದ್ದು ವಸುಂದರಳನ್ನು ಎಬ್ಬಿಸಿದೆ, ನಾಲ್ಕರವರೆಗಿನ ತನ್ನ ಡ್ಯುಟಿ ಮುಗಿಸಿ ಗಣೇಶಣ್ಣ ಮನೆ ತಲುಪಿ ಬೆಳಗಿನ ಡ್ಯುಟಿಗೆ ಹೋಗಲು ಅಣಿಯಾಗುತಿದ್ದ, ಅಡುಗೆಮನೆಯಲ್ಲಿ ಅಣ್ಣನ ತಿಂಡಿ ತಯಾರಿ ಮುಗಿದಿದೆಯೇ ಎಂದು ನೋಡಲು ಒಳ ಹೊಕ್ಕೆ, ಅಣ್ಣ ಒಂದು ಸಣ್ಣ ತೋಪಿನಲ್ಲಿ ಹಾಲನ್ನು ಬಿಸಿ ಮಾಡಲಿಟ್ಟು ಸ್ನಾನಗೃಹ  ಪ್ರವಶಿಸಿದ್ದ, ಒಲೆಯಲ್ಲಿನ ಹಾಲು ಆಗಲೇ ಉಕ್ಕಿ ಓಲೆ ಮೇಲೆ ಬಿದ್ದಾಗಿತ್ತು,ನಾನು ಓಲೆ ಆರಿಸಿ ಅಲ್ಲೇ ಹತ್ತಿರ ಬಿದ್ದಿದ್ದ ತುಂಡು ಬಟ್ಟೆಯಿಂದ ಬಿದ್ದ ಹಾಲನ್ನು ಒರಸುತ್ತಿದ್ದೆ,

ಸ್ನಾನ ಮುಗಿಸಿ ಒಳಗೆ ಬಂದ ಗಣೇಶಣ್ಣ ನನ್ನಲ್ಲಿ "ಎದ್ದಿಯೇನಪ್ಪಾ.. ರಾಜಕುಮಾರ... ಓಲೆ ಒರಸುವ ಕೆಲಸಕ್ಕೆ ಯಾಕೆ ಕೈ ಹಾಕಿದೆ ? ನಾನೇ ಒರಸುತಿದ್ದೆನಲ್ಲ, ಅಡುಗೆಮಾಡಿ ಕೈತುತ್ತು ಉಣಿಸುವವನಿಗೆ ಓಲೆ ಒರಸುವುದು ದೊಡ್ಡ ಕೆಲಸವಲ್ಲ, ಹೋಗಿ ಮಲಗಿಕೋ, ಪ್ರೇಮ ನಶೆ ಇನ್ನು ಇಳಿದಿಲ್ಲ, ಅನುಭವಿಸು ಆ ನಶೆ,,,"   ಅವನ ಮಾತಿನಲ್ಲಿ ಏನೋ ಕೊಂಕು ಅಡಗಿರುವುದನ್ನು ಅವನ ಮಾತಿನ ಧಾಟಿಯೇ ವಿವರಿಸುತಿತ್ತು, ಯಾರಾದರು ಎಷ್ಟು ದಿನ ನಮ್ಮ ಹೊಟ್ಟೆ ತುಂಬಿಸುವರು, ಇನ್ನು ನಾನೇ ನಮ್ಮಿಬ್ಬರ ಜವಾಬ್ಧಾರಿ ಹೊರಬೇಕು, ವಸುಂದರನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದೆಲ್ಲ ಕನಸು ಕಂಡಿದ್ದೆ ಆದರೆ ಈ ವರೆಗೆ ನಾನು ಇನ್ನು ಮುನ್ನುಡಿನೇ ಹಾಕಿರಲಿಲ್ಲ.

ವಸುಂದರ ನಿದ್ದೆ ಕಣ್ಣಿನಲ್ಲೇ ನನ್ನನರಸುತ್ತಾ ಬಂದಳು, ಗಣೇಶಣ್ಣ ಇರುವುದನ್ನು ಗಮನಿಸದೆ ನನಗೆ ಗಟ್ಟಿಯಾಗಿ ತಬ್ಬಿ ಮುತ್ತಿಟ್ಟಳು. ಅಲ್ಲೇ ಇದ್ದ ಗಣೇಶಣ್ಣನಿಗೆ ನಾಚಿಗೆ ಆಗಿ ಕೈಯಲ್ಲಿದ್ದ ಹಾಲಿನ ತೋಪನ್ನು ಕೆಳಗೆ ಹಾಕಿದ,ಎಲ್ಲ ಹಾಲು ನೆಲದ ಪಾಲಾಯಿತು, ಕೆಲಸಕ್ಕೂ ತಡವಾಗುತಿತ್ತು ಅವನಿಗೆ, ಯಾವುದೇ ಸಂದರ್ಭ ನಮಗೆ ಅಂದು ಪೂರಕವಾಗಿರಲಿಲ್ಲ, ಹಿಂದಿನದಿನದ ತನ್ನ ಮೇಲೆ ಮೇಲಿನ ಅಧಿಕಾರಿ ತೋರಿದ ಕೋಪ, ೨ ವಾರದಿಂದ ಬಾಡಿಗೆ ವಸೂಲಿಗೆ ಬರುತಿದ್ದ ಮನೆ ಒಡೆಯನ ಮೇಲಿನ ಕೋಪ, ಮನೆಯೊಳಗಿನ ಗೆಳೆಯರನ್ನು ಹೊರ ಹಾಕಿ ಅವರ ಕೈಯಿಂದ ಕೇಳಿದ ಮಾತುಗಳು, ಎಲ್ಲಾ ನೆನಪಿಸಿ ಕೊಂಡು ನಮ್ಮಿಬ್ಬರ ಮೇಲೆ ಒಂದೊಂದೆ  ಜ್ವಾಲಾಗ್ನಿ  ಬಿಡಲಾರಂಭಿಸಿದನು.

ನಾವು ಅವನಿಗೆ ಹೊರೆ ಆಗುತ್ತಿದ್ದೇವೆ ಎಂಬುದನ್ನು ಅವನ ಕೊಂಕು ಮಾತಿಂದಲೇ ತಿಳಿದು ಕೊಂಡೆವು.ಇನ್ನು ಕೂತು ಉಣ್ಣುವುದು ಸಮಂಜಸ ಅಲ್ಲ ಏನಾದರು ದುಡಿದು ತಿನ್ನಬೇಕು ಎಂಬ  ವಿಶಾಕ ಪಟ್ಟಣಕ್ಕೆ ಹೋಗುವಾಗಿನ ಕಿಚ್ಚು ಮತ್ತೆ ಜಾಗ್ರತವಾಯಿತು.ಮನೆಯಲ್ಲಿ ಅಂದು ತಿನ್ನಲು ಸ್ವಾಭಿಮಾನ ಅಡ್ಡ ಬಂತು, ಬೇಗನೆ ಬಟ್ಟೆ ತೂರಿಸಿಕೊಂಡು ಕೆಲಸ ಹುಡುಕಲು ಹೊರಟೆ.ಅಣ್ಣ ಕೆಲಸ ಕೊಡಿಸುತ್ತೇನೆ ಅಂದಿದ್ದೇನೋ ನಿಜ, ಆದರೆ ಅವನಿಂದ ಸಹಾಯ ಬೇಡಲು ಮನಸ್ಸು ಒಪ್ಪಲಿಲ್ಲ. ನಾನು ನನ್ನ ಪಾಡಿಗೆ ಮನೆಯ ಒಂದು ದಿಕ್ಕಿಗೆ ಮುಖ ಮಾಡಿದೆ, ಅವ ಇನ್ನೊಂದು ದಿಕ್ಕಿಗೆ.

ನನ್ನ ನಡೆ ನೋಡಿ ಅವ ನನ್ನನ್ನು ಕರೆದು "ಜನಾರ್ಧನ , ನನಗೆ ನಿನ್ನ ಮೇಲೆ ಕೋಪ ಇಲ್ಲ ಕಣೋ, ನಿನ್ನ ನಿರ್ಧಾರ ನಿನ್ನ ಬಾಳಿಗೆ ಕೆಡುವಾಗಬಾರದು ಎಂಬುದೇ ನನ್ನ ಆಸೆ, ಆದ ಕಾರಣ ನಾನು ನಿನ್ನ ಮೇಲೆ ರೆಗಿದ್ದು, ನನ್ನಲ್ಲಿನ ಅದೆಷ್ಟೋ ವಿಚಾರ ನಾನು ನಿನ್ನಲ್ಲಿ ಹೇಳಲಿಲ್ಲ, ನನಗೆ ಉತ್ತಮ ಕೆಲಸವೇನೋ ಇತ್ತು ಆಗ ನಾನು ನಿನಗೆ ಕೆಲಸ ಕೊಡುತ್ತೇನೆ ಅಂದಿದ್ದು ನಿಜ,ಆದರೆ ಒಂದು ವಾರದಿಂದ ನನಗೆ ಕೆಲಸವಿಲ್ಲ, ಮನೆಯಲ್ಲಿ ಕೂಡಿಟ್ಟ ಹಣವು ಮುಗಿಯುತ್ತ ಬಂತು, ಅದಕ್ಕಾಗಿಯೇ ರೆಗಿದ್ದು"

ಅವನ ಬಾಯಿಂದ ಈ ಮಾತು ಕೆಳುತಿದ್ದಂತೆ, ನಾನು "ಏನಾಯ್ತು ಗಣೇಶಣ್ಣ? ೧೨೦೦ ರುಪಾಯಿಯ ಒಳ್ಳೆ ಕೆಲಸ ಅನ್ನುತ್ತಿದ್ದಿಯಲ್ಲ? ಏನಾಯ್ತು?"

ಮನೆ ದಾಟಿ ಪಕ್ಕದ ರಸ್ತೆಯಲ್ಲಿ ನಾನು ಮತ್ತು ಅವ ನಡೆಯುತಿದ್ದೆವು,ಇವತ್ತು ಬರಬೇಕಾದರೆ ವಸುಂದರೆಯ ಮುಖ ನೋಡಿರಲಿಲ್ಲ, ಬಾಯ್  ಹೇಳಲಿಲ್ಲ ಎಂಬುದು ನೆನಪಿಗೆ ಬಂದು ನಾನು ಪುನಃ ಹಿಂತಿರುಗಿ ನೋಡಿದೆ.
ಅವಳು ನನ್ನ ನೋಟಕ್ಕಾಗಿ ಮನೆಯ ಪಕ್ಕದ ಓಣಿಗೆ ಬಂದು ನಮ್ಮಿಬರ ನಡೆಯನ್ನೇ ನೋಡುತಿದ್ದಳು, ನಾನು ತಿರುಗುತಿದ್ದಂತೆ, ಅವಳ ಮುಖ ಮುಗಿಲನ್ನು ಕಂಡ ನವಿಲಿನಂತೆ ನರ್ತಿಸಿತು, ಮನ ಅವಳನ್ನು ಹೋಗಿ ಮುದ್ದಿಸುವ, ಎನ್ನುತಿತ್ತು ಆದರೆ ವಾಸ್ತವ ನೆನಪಾಗಿ ಬಂದು ತುಟಿಯ ಅಂಚಿನಿಂದ ಗಾಳಿಯಲ್ಲೇ ನನ್ನ ನಲ್ಲೆಗೆ ಮುತ್ತಿಟ್ಟೆ, ಅವಳು ಗಾಳಿಯಲ್ಲಿ ತೇಲಿ ಬಂದ ಅನುರಾಗದ ಅಲೆಯಲ್ಲಿ ಕಳೆದು ಹೋದಳು. ನಾನು ಅಣ್ಣನನ್ನು ಹಿಂಬಾಲಿಸಿದೆ.

ಅವನು ಮುಂದುವರಿಸಿದ "ಕಳೆದ ವಾರ ನೀವು ಇಲ್ಲಿ ಬಂದಿರುವ ಹೊಸದರಲ್ಲಿ ನಾನು ನಿಮ್ಮ ಆರೈಕೆ ಮಾಡುತ್ತಾ ಮಾಡುತ್ತಾ ನನ್ನ ಕಛೇರಿ ತಡವಾಗಿ ತಲುಪಿದೆ, ನನ್ನ ಮೊದಲಿನ ಫಾಳಿಯವನು ಆ ದಿನ ರಜೆಯಲ್ಲಿ ಇದ್ದ ಎಂಬುದನ್ನು ಮರೆತಿದ್ದೆ, ೨ ಫಾಳಿಯ ಕೆಲಸ ಮಾಡಲು ನನ್ನ ಅಧಿಕಾರಿ ಹೇಳಿದ್ದರು, ನಾನು ಕಂಪೆನಿ ತಲುಪುವಾಗ ಅಲ್ಲಿ ಯಾರಿರದ್ದು ನೋಡಿದ ಬಳಿಕವೇ ನನಗೆ ಹಿಂದಿನ ದಿನದ ಮಾತು ನೆನಪಿಗೆ ಬಂದದ್ದು, ಅದೇ ಗೋಡೆ ಬದಿಯ ನನಗಾಗಿ ಇಟ್ಟಿದ್ದ ಬೆಂಚ್ ಮೇಲೆ ಕೂತು ಆ ರಾತ್ರಿ ಕಳೆದೆ, ಬೆಳಗ್ಗೆ ಮನೆಗೆ ಬಂದು ಪುನಃ ನಿಮ್ಮ ಚಾಕರಿಯಲ್ಲಿ ಕಳೆದೆ. ನಿಮ್ಮನ್ನು ಬೆಂಗಳೂರು ನಗರ ಸುತ್ತಿಸಲು ಕರಕೊಂಡು ಹೋದೆ. ಸಿನೆಮಾ,ಪಾರ್ಕ್ ಸುತ್ತಿಸಿ ನಿಮ್ಮನ್ನು  ಮನೆಗೆ ಬಿಟ್ಟು,ನಾನು ಅಂದಿನ ದ್ಯುಟಿಗೆ ಆ ಕಛೇರಿ ತಲುಪಿದಾಗ ನನಗೆ ನನ್ನ ತಪ್ಪಿನ ಅರಿವಾದದ್ದು..."

"ಯಾವ ತಪ್ಪು, ಏನಾಯ್ತು ...? "
"ಹಿಂದಿನದಿನ ಯಾರೂ ಕಾರ್ಯದಲ್ಲಿರದನ್ನು  ನೋಡಿ ಯಾರೋ ಆ ಕಛೇರಿಗೆ ಕನ್ನ ಹೊಡೆದಿದ್ದರು.ಅಚ್ಚುಕಟ್ಟಾಗಿ ತಮ್ಮ ಕೆಲಸ ಮುಗಿಸಿ ನಾನು ದ್ಯುಟಿಗೆ ತಲುಪುವಾಗ ಜಾಗ ಖಾಲಿ ಮಾಡಿದ್ದರು, ಯಾವುದರ ಪರಿವಿಲ್ಲದೆ ನಾನು ನನ್ನದೇ ಲೋಕದಲ್ಲಿ ನಿಮ್ಮೊಂದಿಗೆ ಮಾರನೆ ದಿನ ಕಳೆದೆ, ನನ್ನ ಹುಡುಕಿ ಪೋಲಿಸ್ ನಮ್ಮ ರೂಂ ಕಡೆಗೂ ಬಂದಿದ್ದರು, ಆದರೆ ನಾವು ಇರದ ಕಾರಣ ನನ್ನ ಮೇಲೆ ಸಂಶಯ ಇನ್ನು ಹೆಚ್ಚುತ್ತಾ ಹೋಯಿತು, ಸಂಜೆ ಪುನಃ ಕಛೇರಿ ತಲುಪಿದಾಗ ನನ್ನನ್ನು ಬಂಧಿಸಿ ಪಕ್ಕದ ಪೋಲಿಸ್ ಸ್ಟೇಶನ್ ಕರಕ್ಕೊಂಡು ಹೋಗಿ ಬಂಧನದಲ್ಲಿರಿಸಿದರು, ಬೇಡವಾದ ಹಿಂಸೆಗೆ ತುತ್ತಾಗ ಬೇಕಾಗಿ ಬಂತು. ಎರಡು ದಿನದ ಬಳಿಕ ಬೇರೆಲ್ಲೋ ಆ ಕಳ್ಳರು ಸಿಕ್ಕ ನಂತರ ನನ್ನನ್ನು ಸ್ಟೇಶನ್ ನಿಂದ ಬಿಟ್ಟರು, ಆದರೆ ನಾನು ನನ್ನ ಡ್ಯುಟಿ ಮರೆತು ನನ್ನ ಕೆಲಸದಲ್ಲಿ ಬ್ಯುಸಿ ಆಗಿದ್ದ ತಪ್ಪಿಗೆ ನನ್ನ ಕೆಲಸ ನನ್ನಿಂದ ಕಸಿದು ಕೊಳ್ಳಲಾಗಿತ್ತು, ನನ್ನ ಬೆಂಚ್ ಮೇಲೆ ಆಗಲೇ ಡ್ಯುಟಿಗೆ ಬಂದ ಸೆಕ್ಯುರಿಟಿಯವನಿಂದ ನಾನು ಸೆಲ್ಯೂಟ್ ಪಡೆದು ಆ ಜಾಗ ಅವನಿಗೆ ಬಿಟ್ಟು ಕೊಟ್ಟೆ. ಅಲ್ಲಿಂದ ಇಲ್ಲಿ ವರೆಗೆ ಕೆಲಸ ಹುಡುಕುತಿದ್ದೇನೆ, ನನ್ನ ಮೇಲಿರುವ ಆಪಾದನೆಯಿಂದಾಗಿ ಕೆಲಸ ಇಲ್ಲಿವರೆಗೆ ಸಿಗಲಿಲ್ಲ."

ನಾನು "ಇಂತಹ ವಿಚಾರ ನಮ್ಮಿಂದ ಯೆತಕ್ಕಾದರು ಅಡಗಿಸಿದಿರಿ? " ಅಂದೆ.
ಅವನು ಮುಂದುವರಿಸಿದ "ಆಗ ತಾನೇ ನಿಮ್ಮ ಬಾಲ ಪಯಣಕ್ಕೆ ಕಾಲಿಟ್ಟ ನಿಮಗೆ ನಾನೆಯಾಕೆ ಈ ವಿಚಾರ ಹೇಳಲಿ, ಒಂದು ವೇಳೆ ಹೇಳಿದರೆ, ವಸುಂದರನಿಗೆ ತನ್ನ ಕಾಲ್ಗುಣದಿಂದಲೇ ನನ್ನ ಕೆಲಸ ಹೋಯಿತು ಅಂದು ಕೊಂಡಿಯಾಳು, ಇಲ್ಲ ನಿನ್ನಲ್ಲಿ ಇಂಥ ಭಾವನೆ ಮೂಡಿ ನೀನು ಅವಳನ್ನು ದೂರ ಮಾಡುವಿಯಾ ಅಂದು ಕೊಂಡೆ, ನೀವು ಎಲ್ಲರನ್ನು ಎದುರು ಹಾಕಿ ಮದುವೆ ಆಗಿದ್ದಿರಾ, ನಿಮ್ಮ ಈ ಪ್ರೇಮ ಕಥೆಗೆ ನಾನು ಇತರರಂತೆ ಮುಳ್ಳಾಗುವುದು ಬೇಡ ಎಂದು ಹೇಳಲಿಲ್ಲ, ಅದೇ ಕಾರಣಕ್ಕಾಗಿಯೇ ನಾನು ರಾತ್ರಿ ಫಾಳಿಯ ನೆವ ಒಡ್ಡಿ ಮನೆಗೆ ಬರುತಿರಲಿಲ್ಲ, ಅಸಲಿಗೆ ನಾನು ಮನೆಯ ಪಕ್ಕದ ಬಸ್ ಸ್ಟಾಪ್ ನಲ್ಲಿ ರಾತ್ರಿ ಕಳೆಯುತಿದ್ದೆ."

ಗಣೇಶಣ್ಣನ ಮಾತು ಕೇಳಿದ ಮೇಲೆ ಅವನಲ್ಲಿ ಇನ್ನು ಸಂಭಂದ ಗಾಡವಾಯಿತು, ನೊಂದ  ಹೃದಯಕ್ಕೆ ಆಸರೆ ನೀಡಿ ಮೊದಲಿಗೆ ಅವ ಹತ್ತಿರವಾಗಿದ್ದ, ಈಗ ಅವನು ಕಣ್ಣಮುಂದೆ ನಲಿದಾಡುವ ದೇವರೇ ಆಗಿ ಹೋದ.
ನಾನು ಅವನಲ್ಲಿ "ಅಣ್ಣಾ, ನಾವಿಬ್ಬರು ಕೆಲಸ ಹುಡುಕುವ  ಸಿಕ್ಕೆ ಸಿಕ್ಕುತ್ತದೆ, ಸುಖ ಜೀವನ ನಮ್ಮದಾಗುತ್ತದೆ, ದೇವರಿದ್ದಾನೆ ನಮ್ಮೊಂದಿಗೆ, ಹಿಂದೆ ಅದದನ್ನೆಲ್ಲ ಮರಿ, ನಾವಿಬ್ಬರು ಹೊಸ ವ್ಯಕ್ತಿ ಗಳಾಗಿ ಈ ದೊಡ್ಡ ಊರಲ್ಲಿ ಕೆಲಸ ಹುಡುಕುವ,ನಡಿ." ಅಂದೆ.

ನಮ್ಮಿಬ್ಬರಲ್ಲಿ ಯಾವ ಕೆಲಸ ಸಿಕ್ಕರೂ ಮಾಡುವ ಛಲವಿತ್ತು, ಅವತ್ತಿಗೆ ನಮ್ಮ ಅದೃಷ್ಟವು ನಮ್ಮೊಂದಿಗಿತ್ತು, ೩- ೪ ಸಣ್ಣ ಸಣ್ಣ ಕೆಲಸ ಹುಡುಕಿದ ನಮಗೆ ಹತ್ತಿರ ಹಾಕಿದ್ದ ಹೊಸ ಹೋಟೆಲ್ ಕುರಿತಾದ ಬ್ಯಾನರ್ ಇನ್ನೊಂದು ಆಶಾಕಿರಣ ಮೂಡಿಸಿತು, ನಾವಿಬ್ಬರು ಅಲ್ಲಿ ಹೋದೆವು, ಅವರಿಗೂ ನಮ್ಮ ಅಗತ್ಯವಿತ್ತು, ಗಣೇಶಣ್ಣನ ವಯಸ್ಸು, ಅನುಭವ ಮತ್ತು ದೇಹ ಸ್ಥಿತಿ ನೋಡಿ ೧೦೦೦ ರುಪಾಯಿಯ ಸೆಕ್ಯುರಿಟಿಯ ಕೆಲಸ, ನನಗೆ ೭೦೦ ರುಪಾಯಿಯ ಸುಪ್ಪ್ಲೇಯರ್ ನ ಕೆಲಸ ಸಿಕ್ಕಿತು, ಹೋಟೆಲ್ ಆದ ಕಾರಣ ೩ ಹೊತ್ತಿನ ಊಟ-ತಿಂಡಿ ಯಾ ಚಿತೆ ಇರಲಿಲ್ಲ, ಹೇಳಿದ ಸಂಬಳ ನಮ್ಮಿಬ್ಬರಿಗೂ ಹಿಡಿಸಿತು.ಆ ಹೋಟೆಲ್ ನ  ನನಗೆ ೫೦ ರುಪಾಯಿ ಅಡ್ವಾನ್ಸ್,ಅವನಿಗೆ ೧೦೦ ರುಪಾಯಿ ಅಡ್ವಾನ್ಸ್ ಕೊಟ್ಟರು, ಜೊತೆಗೆ ಉದ್ಗಾಟನೆ ದಿನದ ಸಿಹಿ ತಿಂಡಿಯ ಪಟ್ಟಣವನ್ನು  ಕೊಟ್ಟು ಮಾರನೆ ದಿನದಿಂದ ಕೆಲಸಕ್ಕೆ ಬರುವಂತೆ ಹೇಳಿದರು.

ಅದೇ ಖುಷಿಯಲ್ಲಿ ನಾನು, ಅಣ್ಣನು ಮನೆ ತಲುಪಿದೆವು.

 

 

 


೧೩

 


ಮನೆಯ ಬಾಗಿಲು ತೆರೆದು ಒಳ ಪ್ರವೇಶಿಸಿದೆ, ವಸುಂದರೆ ಒಂದು ಮೂಲೆಯಲ್ಲಿ ತಲೆ ಕೂದಲೆಲ್ಲ ಕೆದರಿಕ್ಕೊಂಡು ಮುಂಗಾಲಿಗೆ ಹಣೆ ಇಟ್ಟು ಕೂಗುತ್ತಾ ಕುಳಿತಿದ್ದಳು, ನಾನು ಇವಳು ಬೆಳಗ್ಗಿನ ಮಾತಿಂದ ಇನ್ನು ಹೊರ ಬಂದಿಲ್ಲ, ಅದನ್ನೇ ನೆನಪಿಸಿ ಕೂಗುತಿದ್ದಾಳೆ ಅಂದು ಕೊಂಡೆ, ನಾನು ಅವಳ ಬಿಚ್ಚಿದ್ದ ತಲೆಕೂದಲನ್ನು ಮೆಲ್ಲನೆ ಒರಸಿ"ವಸುಂದರ , ಇನ್ನು ನಾವಿಬ್ಬರು ಸುಖವಾಗಿರಬಹುದು ನನಗಾಗಿ ನನ್ನ ಅಣ್ಣಾ ಹೊಸ ಕೆಲಸ ಹುಡುಕಿ ಕೊಟ್ಟಿದ್ದಾನೆ, ಹೋಟೆಲ್ ನಲ್ಲಿ ೭೦೦ ರುಪಾಯೀ ತಿಂಗಳಿಗೆ, ಇನ್ನು ಕಣ್ಣಿರು ಹಾಕುವ ಅವಶ್ಯಕತೆ ಇಲ್ಲ, ನಿನಗಾಗಿ ಸಿಹಿ ತಿಂಡಿ ತಂದಿರುವೆ,ಸ್ವೀಕರಿಸು. ಮತ್ತೊಮ್ಮೆ ನಿನ್ನ ಮೊಗದರುಶನ ನೀಡು.. "ಅಂದೆ,

ನನ್ನ ಮಾತು ಅವಳ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣಲಿಲ್ಲ,ಅವಳು ಇನ್ನೂ ಅಳುತ್ತಾ ಕುಳಿತಿದ್ದಳು,ಅಣ್ಣನ ತ್ಯಾಗ ಹೇಳುವ ಅಂದುಕೊಂಡಿದ್ದೆ ಆದರೆ ಈ ವಿಚಾರದಿಂದ ಬೇಸರ ಉಂಟಾಗಬಹುದು ಎಂದು ಸುಮ್ಮನಾದೆ. ಕ್ಷಣ ಕಾಲ ಮೌನವಿತ್ತು. ಬಿಕ್ಕಳಿಸುತ್ತ ಅವಳು ನನ್ನನ್ನು ಅಪ್ಪಿ"ನಾನು ನಿನ್ನ ಪಾಲಿಗೆ ದುರಾದೃಷ್ಟವಂತೆ ... ನನ್ನ ಕೈ ಹಿಡಿದ ಮೇಲೆ ನಿನಗೆ ಏನೆಲ್ಲಾ ಕಷ್ಟ ಅನುಭವಿಸಬೇಕಾಗಿ ಬಂತು ನೋಡು ..."ಅಂದಳು.
ಅವಳ ಈ ರೀತಿಯ ಒಗಟು ಮಾತು ನನಗೆ ಅರ್ಥವಾಗಲಿಲ್ಲ, ನಾನು "ಏನು ಹೇಳುತ್ತಾ ಇದ್ದೀಯ ಸರಿಯಾಗಿ ನನಗೆ ಅರ್ಥ ವಾಗುವಂತೆ ಹೇಳು .."ಅಂದೆ.
ಅವಳು "ನಾನು ದುರಾದೃಷ್ಟವಂತೆ, ನಾನು ನಿಮ್ಮ ಕೈ ಹಿಡಿಯುತಿದ್ದಂತೆ ನಿಮ್ಮ ತಂದೆಯವರನ್ನು ಬಲಿ ತೆಗೆದು ಕೊಂಡೆ,.... "
ಅವಳ ಈ ಮಾತು ಇನ್ನೂ ಒಗಟು ಒಗಟಾಗಿತ್ತು "ಸರಿಯಾಗಿ ಹೇಳು, ಅರ್ಥವಾಗಲಿಲ್ಲ... " ಅಂದೆ.
ಅವಳು "ಇವತ್ತು ನಾನೊಬ್ಬಳೆ ಮನೆಯಲ್ಲಿದ್ದೆ, ಅವಾಗ ಪೋಸ್ಟ್ಮನ್ ಬಂದಿದ್ದ ಅವ ಒಂದು ಕಾಗದ ತಂದಿದ್ದ ನನಗೆ ಮುಂಚಿಂದ ಓದುವ ಚಟ, ಅಣ್ಣನಿಗೆ ಬಂದ ಕಾಗದ ಅದೂ ಮನೆಯವರಿಂದ ಬಂದ ಕಾಗದ, ಒಬ್ಬಳಿಗೆ ಬೇಜಾರಾಗುತಿದ್ದುದರಿಂದ ಆ ಕಾಗದ ತೆರೆದು ಓದಿದೆ,,," ಅನ್ನುತ್ತಾ ಕೈಯಲ್ಲಿ ತನ್ನ ಕಣ್ಣೀರಿಂದ ಒದ್ದೆಯಾಗಿದ್ದ ಇನ್ ಲ್ಯಾಂಡ್ ಲೆಟರ್ ನನ್ನ ಕೈಯಲ್ಲಿ ಇಟ್ಟಳು.

"
ಪ್ರೀತಿಯ ಗಣೇಶಣ್ಣನಲ್ಲಿ ನಿನ್ನ ತಂಗಿ, ಸಾವಿತ್ರಿ ಬೇಡುವ ಆಶಿರ್ವಾದಗಳು,

ನೀನು ಕಳುಹಿಸಿದ ನನ್ನ ಶಾಲಾ ಫೀಸ್ ತಲುಪಿತು, ನಾನು ನಿಮ್ಮ ಮಾತಿನಂತೆ ಚೆನ್ನಾಗಿ ಓದುತ್ತಿದ್ದೇನೆ, ನಿಮ್ಮೆಲ್ಲರ ಆಸೆಯಂತೆ ನಾನು ದೊಡ್ಡ ಸಂಬಳದ ಎಂಜಿನೆಯರ್ ಆಗುತ್ತೇನೆಂಬ ವಿಶ್ವಾಸ ನನ್ನಲ್ಲಿದೆ.

ನಾನು ಈ ಪತ್ರದ ಕಾರಣ ಹೇಳಿ ಬಿಡುತ್ತೇನೆ, ಕಳೆದ ೮ ದಿನದಿಂದ ಇಲ್ಲಿ  ಯಾರೂ ನೆಮ್ಮದಿಯಂದಿಲ್ಲ , ಜನಾರ್ಧನ್ ಅಣ್ಣಾ ಒಂದು ಹುಡುಗಿಯನ್ನು ಕದ್ದು ಮದುವೆ ಆಗಿ ಮನೆ ಬಿಟ್ಟು ಓಡಿಹೋಗಿ ಇವತ್ತಿಗೆ ೮ ದಿನವಾಯಿತು, ಚಿಕ್ಕಮ್ಮ ಅವನ ಮೇಲೆ ತುಂಬಾನೆ ನಂಬಿಕೆ ಇಟ್ಟಿದ್ದರು, ತನ್ನ ಕುಡುಕ ಗಂಡನಿಂದ ಅವರು ಮೊದಲೇ ತುಂಬಾ ಬೆಂಡಾಗಿದ್ದರು, ಮಗ ಓದಿ ತನ್ನ ಉಳಿದ ೮ ಮಕ್ಕಳ ಜವಾಬ್ಧಾರಿ ತೆಗೆದುಕೊಳ್ಳುತ್ತಾನೆ ಅಂದು ಕೊಂಡಿದ್ದರು, ಆದರೆ ಅವನು ಇದು ಯಾವುದನ್ನು ತಲೆಗೆ ತೆಗೆದು ಕೊಳ್ಳದೆ, ಶ್ರೀಮಂತರ ಮಗಳೊಂದಿಗೆ ಓಡಿ ಹೋಗಿದ್ದಾನೆ,ತನ್ನ ಮಕ್ಕಳ ಭವಿಷ್ಯದ ಬಗ್ಗೆ ಅವರು ಚಿಂತಿಸುತಿದ್ದರೆ, ಗಂಡನಾದವ ಬಾರ್ ನಲ್ಲಿ ಮಜಾ ಮಾಡುತ್ತಿದ್ದ.

೨ ದಿನದ ಹಿಂದೆ ಮನೆಗೆ ಬಂದು ಚಿಕ್ಕಮ್ಮನೊಂದಿಗೆ ನಿನಗೆ ಮಕ್ಕಳನ್ನು ಹೇಗೆ ಸಾಕಬೇಕು ಎಂದು ಗೊತ್ತಿಲ್ಲ, ಆದ ಕಾರಣ ಮಗ ಓಡಿ ಹೋದದ್ದು ಎಂದು ಜಗಳಕ್ಕೆ ಇಳಿದಿದ್ದರು, ಹೀಗೆ ಮಾತಿಗೆ ಮಾತು ಬೆಳೆಯಿತು, ಮೊದಲೇ ಕಂಠ ಪೂರ್ತಿ ಕುಡಿದು ಬಂದಿದ್ದ ಚಿಕ್ಕಪ್ಪ, ಚಿಕ್ಕಮ್ಮನ ಮೇಲೆ ಕೈಗೆ ಸಿಕ್ಕ ಕತ್ತಿಯಿಂದ ಹಲ್ಲೆ ಮಾಡಲು ಮುಂದಾದರು, ಚಿಕ್ಕಮ್ಮ ಆ ಕತ್ತಿಯ ಹೊಡೆತದಿಂದ ತಪ್ಪಿಸಲು ಮಾಡಿದ ಪ್ರಯತ್ನ ದಿಂದ ಕತ್ತಿ ಚಿಕ್ಕಪ್ಪನ ಕುತ್ತಿಗೆಯನ್ನೇ ಕತ್ತರಿಸಿತು.

ಕುಡುಕನಾಗಿದ್ದ ಬೇಜವಬ್ದಾರಿ ತಂದೆ ಹೆಣವಾಗಿ ಬಿದಿದ್ದ, ಪೋಲಿಸ್ ನವರು ಬಂದು ಚಿಕ್ಕಮ್ಮನನ್ನು ಏಳಕ್ಕೊಂಡು ಹೋದರು, ಈಗ ಆ ಎಂಟು ಮಂದಿ ಮಕ್ಕಳು ಅನಾಥರಾಗಿದ್ದಾರೆ, ಯಾವುದೇ ಪರಿವಿರದ ಜವಾಬ್ದಾರಿ ಹೊರ ಬೇಕಿದ್ದ ಜನಾರ್ಧನ ಅಣ್ಣಾ ಅವಳೊಂದಿಗೆ ಯಾರಿಗೂ ಕಾಣದಂತೆ ದೂರವಾಗಿದ್ದನೆ, ಇದೇ ೧೨ ನೆ ತಾರೀಕಿನಂದು ಚಿಕ್ಕಪ್ಪನ ೧೨ ನೇ ದಿನದ ಕಾರ್ಯಕ್ಕೆ  ನೀನೆ ಮಗನ ಸ್ಥಾನದಲ್ಲಿ ನಿಂತು ನಡೆಸಿ ಕೊಡಬೇಕು ಎಂದು ಚಿಕ್ಕಮ್ಮ ಜೈಲಿಂದ ಹೇಳಿ ಕಳುಹಿಸಿದ್ದಾಳೆ. ಆದ ಕಾರಣ ಪತ್ರ ತಲುಪಿದಂತೆ ಊರಿಗೆ ಬಾ ..

ನಿನ್ನ ದಾರಿ ಕಾಯುತ್ತಿರುವ
ಸಾವಿತ್ರಿ
"  

ಪತ್ರ ಓದುತಿದ್ದಂತೆ ನಾನು ನಮ್ಮ ಮನೆಯವರಿಗೆ ಹೇಗೆ ಶತ್ರು ಆದೆ, ನನ್ನ ಮನದ ಚಪಲಕ್ಕಾಗಿ ನನ್ನ ಮನೆಯವರ ಮನವನ್ನು ನೋಯಿಸಿದೆ ಎಂದೆನಿಸಿತು, ನನ್ನ ಸಣ್ಣ ತಪ್ಪಿನಿಂದ ನನ್ನ ತಂದೆಯವರ ಸಾವಿಗೂ ಕಾರಣನಾದೆ, ಜವಾಬ್ದಾರಿ ಹೊತ್ತ ಅಮ್ಮನನ್ನು ಜೈಲು ಸೇರಿಸಿದೆ ಎಂದೆಲ್ಲಾ ಪಾಪ ಪ್ರಜ್ಞೆ ಕಾಡಲಾರಂಬಿಸಿತು.

ಗಣೇಶಣ್ಣ ನನ್ನಲ್ಲಿ"ಜನಾರ್ಧನ ಮನೆಗೆ ಹೋಗಪ್ಪಾ.. ನಿನ್ನ ತಂದೆಯವರ ಕಾರ್ಯ ನೀನು ಮಾಡ ಬೇಕಾದದ್ದು ಧರ್ಮ,ತಕೋ ಈ ೧೦೦ ರುಪಾಯಿ, ಬೇರೆ ಕಾಸಿಲ್ಲ ಕಣಪ್ಪಾ...  "ಎನುತ್ತ ಇವತ್ತು ಬೆಳಗ್ಗೆ ಸಿಕ್ಕ ೧೦೦ ರುಪಾಯಿಯ ನೋಟನ್ನು ನನ್ನ ಕೈಯಲ್ಲಿಟ್ಟ.

ಮನೆಗೆ ಬರಬೇಕಿದ್ದ ಸಂಭ್ರಮ ಮಾಯವಾಗಿತ್ತು, ನಾವು ಮಾಡಿದ್ದು ತಪ್ಪು ಎಂದು ನನ್ನ ಎದೆ ಸರಾಸರಿಗಿಂತ ನೂರು ಪಟ್ಟು ವೇಗವಾಗಿ ಬಡಿಯುತ್ತಿತ್ತು.ವಸುಂದರ ತನ್ನಿಂದಲೇ ಹೀಗಾಯ್ತು, ನಾನು ದುರಾದೃಷ್ಟೆ ಎನುತ್ತಾ ಕೊರಗುತಿದ್ದಳು. ಕೈಯಲ್ಲಿರುವ ಕಾಸು ಇಬ್ಬರ ಟಿಕೆಟ್ ಗೆ ಸಾಕಾಗುವಷ್ಟೇ ಇತ್ತು ವಿನಃ ರಾತ್ರಿಯ ಉಟಕ್ಕೆ ಸಾಲುತಿರಲಿಲ್ಲ, ಮನೆಯಲ್ಲಿನ ಧವಸವು ಮುಗಿದು ಹೋಗಿತ್ತು.ಖಾಲಿ ಹೊಟ್ಟೆಯಲ್ಲೇ ಮೆಜೆಸ್ಟಿಕ್ ಕಡೆಗೆ ಹೋಗುವ ಬಸ್ ಹತ್ತಿದೆವು.

ಮುಂದಿನ ಭಾಗ:: http://sampada.net/blog/kamathkumble/19/12/2010/29556

 

 

Rating
No votes yet

Comments