ಉಪ್ಪಿಯ "ಸೂಪರ್"...ಸೂಪರ್..
ಶನಿವಾರ ಸಂಜೆ ಸಮಯ ಕಳೆಯಲು ಉಪ್ಪಿಯ ಸೂಪರ್ ಸಿನಿಮಾ ನೋಡಲು ಹೋಗಿದ್ದೆ. ಉಪ್ಪಿ ನನ್ನ ಅಚ್ಚುಮೆಚ್ಚಿನ ಕಲಾವಿದ. ಆತನ ಕ್ರಿಯಾಶೀಲತೆ, ವಿಭಿನ್ನತೆ ನನಗೆ ಬಹಳ ಇಷ್ಟ. ಅದೂ ಅಲ್ಲದೆ ಹತ್ತು ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡಿರುವ ಚಿತ್ರ. ನಾನು ಆತನ ಕಡೆಯ ಚಿತ್ರ ನೋಡಿದ್ದು ರಕ್ತ ಕಣ್ಣೀರು. ಆಮೇಲೆ ಬಂದ ಆತನ ಬಹುಪಾಲು ಚಿತ್ರಗಳು ರೀಮೇಕ್ ಆದ್ದರಿಂದ ನೋಡಿರಲಿಲ್ಲ. ಹಾಗಾಗಿ ಬಹಳ ನಿರೀಕ್ಷೆಯೊಂದಿಗೆ ಸೂಪರ್ ಸಿನಿಮಾ ನೋಡಲು ಹೋದೆ. ಚಿತ್ರ ಮುಗಿಸಿ ಬಂದ ಮೇಲೆ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. Uppi is Back with a Bang .
ಮೂಲತಹ ಇದೊಂದು ದೇಶಪ್ರೇಮದ ಚಿತ್ರ. ಹಾಗೆಂದು ಹಳೆಯ ಕಾಲದ ವಿಷಯದ್ದಲ್ಲ. ಈಗಿನ ಯುವ ಜನಾಂಗದ ದೇಶಪ್ರೇಮದ ಚಿತ್ರ. ಚಿತ್ರದ ಶೀರ್ಷಿಕೆ ಯಿಂದ ಹಿಡಿದು ಕೊನೆಯ ದೃಶ್ಯದವರೆಗೂ ಉಪ್ಪಿ ತಮ್ಮ ಕರಾಮತ್ತು ತೋರಿಸಿದ್ದಾರೆ. title card ನಲ್ಲಿ ಮಾಡಿರುವ ಹೊಸತನ ಅಂದರೆ ಒಂದೊಂದು ವಿಭಾಗವನ್ನು ಹೆಸರಿಸಿರುವ ರೀತಿ ಉದಾಹರಣೆಗೆ ನಿರ್ಮಾಪಕರು ಗೆ ನಿರ್ನಾಮಕರು, ನಿರ್ದೇಶಕರು ಗೆ ನಿರುದ್ದೇಶಕರು, ಹೀಗೆ ಪ್ರತಿಯೊಂದು ವಿಭಾಗಕ್ಕೂ ವಿಚಿತ್ರವಾಗಿ ಹೆಸರಿಸಿದ್ದಾರೆ. ಮೊದಲಿಗೆ ಆತ ಬೆಂಗಳೂರನ್ನು ತೋರಿಸಿರುವ ರೀತಿ ಮೆಚ್ಚಬೇಕಾದ್ದು. ಆತನ ಕಲ್ಪನೆ ಅದ್ಭುತ. ಭಾರತದ ರೂಪಾಯಿಗೆ ೮೦ ಪೌಂಡ್ ಬೆಲೆ, ವಿದೇಶಿಗರು ಭಾರತದಲ್ಲಿ ಭಿಕ್ಷೆ ಬೇಡುವ ರೀತಿ, ವಿದೇಶಿಗರು ಇಲ್ಲಿ ಬಂದು ಕಾರು ಚಾಲಕರಾಗಿ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯಲು ಕಿತ್ತಾಡುವ ಪರಿ, ಭಾರತದ ಹಣವನ್ನು ಕೊಟ್ಟರೆ ಮಾತ್ರ ಕರೆದೊಯ್ಯುವೆ ಎಂಬ ಸಂಭಾಷಣೆ, ಕನ್ನಡ ಬರದ ಒಬ್ಬ ವಿದೇಶಿಗನನ್ನು ಅವಿದ್ಯಾವಂತ ಎಂದು ಬೈಯ್ಯುವ ಪರಿ, ಇದೆಲ್ಲ ಪ್ರತಿಯೊಬ್ಬ ಭಾರತೀಯನ ಮನಸ್ಸಿನ ಆಸೆ ಎಂಬುದನ್ನು ಉಪ್ಪಿ ತೆರೆ ಮೇಲೆ ಚಿತ್ರಿಸಿದ್ದಾರೆ.
ಉಪ್ಪಿ ಭಾರತದ ಬಗ್ಗೆ ಹೇಳುವ ಪ್ರತಿಯೊಂದು ಸಂಭಾಷಣೆಯು ಅದ್ಭುತ. ವಿದೇಶದಲ್ಲಿದ್ದುಕೊಂಡು ವಿದೇಶಿಗರನ್ನೇ ಆತ ಹೀಯಾಳಿಸುವ ದೃಶ್ಯವಂತೂ ಆಹಾ ಕಣ್ಣಿಗೆ ಪರಮಾನಂದ ನೀಡಿತು. ಹೇಗೆ ಬ್ರಿಟಿಷರು ನಮ್ಮ ಹೋರಾಟಗಾರರನ್ನು ಖೈದಿಗಳನ್ನಗಿ ಮಾಡಿ ಅವರನ್ನು ಚಿತ್ರಹಿಂಸೆ ಮಾಡುತ್ತಿದ್ದರೋ ಅದೇ ರೀತಿಯಲ್ಲಿ ಅವರದೇ ನಾಡಿನಲ್ಲಿ ಆಟದ ನೆಪ ಹೇಳಿ ಅವರಿಗೂ ಅದೇ ರೀತಿ ಮಾಡಿ ಸೇಡು ತೀರಿಸಿಕೊಳ್ಳುವ ಪರಿ ಸೂಪರ್. ಭಾರತ ದೇಶ, ಭಾರತ ನಾರಿ, ಭಾರತೀಯ ಸಂಸ್ಕೃತಿ ಪ್ರತಿಯೊಂದನ್ನು ಆತ ವಿವರಿಸುವ ರೀತಿ ತುಂಬಾ ಚೆನ್ನಾಗಿದೆ. ಅಷ್ಟೇ ಅಲ್ಲ ಪ್ರಸ್ತುತ ರಾಜಕಾರಣದ ಬಗ್ಗೆಯೂ ಚಿತ್ರಿಸಿ ತಮ್ಮದೇ ಶೈಲಿಯಲ್ಲಿ ಉಗಿದು ಉಪ್ಪು ಹಾಕಿದ್ದಾರೆ.
ಭಾನುವಾರದ ವಿ.ಕ ನಲ್ಲಿ ಸೂಪರ್ ಚಿತ್ರ ಒಂದು ವಾರಕ್ಕೆ ೬ ಕೋಟಿ ಗಳಿಸಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿದೆ ಎಂಬುದನ್ನು ಓದಿ ಖುಷಿಯಾಯಿತು. ಒಟ್ಟಿನಲ್ಲಿ ಶೀರ್ಷಿಕೆಗೆ ತಕ್ಕ ಹಾಗೆ ಸಿನಿಮಾ ಕೂಡ ಸೂಪರ್. ಉಪ್ಪಿ ಕೂಡ ಸೂಪರ್..