ವಿಷವಿಲ್ಲದ ಹಾವು; ಹಲ್ಲಿಲ್ಲದ ಮುಂಗಸಿ; ಕಾಳಗ ಜಿದ್ದಾ-ಜಿದ್ದಿ!

ವಿಷವಿಲ್ಲದ ಹಾವು; ಹಲ್ಲಿಲ್ಲದ ಮುಂಗಸಿ; ಕಾಳಗ ಜಿದ್ದಾ-ಜಿದ್ದಿ!

ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನ ಶೂನ್ಯದಲ್ಲಿ ಮುಗಿದುಹೋಯಿತು. ವಿರೋಧ ಪಕ್ಷದವರಿಗೆ ಘಟ್ಟಿಸುವ ಉತ್ಸಾಹವಿರಲಿಲ್ಲ; ಆಳುವವರಿಗೆ ಎದುರಿಸುವ ತಾಖತ್ ಇರಲಿಲ್ಲ! ಅಧಿವೇಶನವನ್ನು ಕಾಟಾಚಾರಗೊಳಿಸುವಲ್ಲಿ ಇಬ್ಬರೂ ಯಶಸ್ವಿಯಾದರು!


                ವಿಷವಿಲ್ಲದ ಹಾವು; ಹಲ್ಲಿಲ್ಲದ ಮುಂಗುಸಿ; ಜಿದ್ದಾ-ಜಿದ್ದೀ ಹೋರಾಟ! ಈ ಭಂಡ-ಷಂಡತನವೇ ಬಜೆಟ್ ಅಧಿವೇಶನಕ್ಕೂ ಮುಂದುವರೆಯುತ್ತದಂತೆ; ಅದು “ನಮ್ಮ ಕರ್ಮ”!


                ಜಂಟೀ ಸದನ ಸಮಿತಿ, ಕೇಂದ್ರ ತನಿಖಾ ದಳ, ಕೇಂದ್ರ ವಿಚಕ್ಷಣಾ ದಳಗಳಿಗೆ ಅಂಜುವ ಮಾನ-ಮರ‍್ಯಾದೆ ಪ್ರಜ್ಞೆ ಇಂದಿನ ರಾಜಕೀಯಕ್ಕಿದೆಯೇ?! ‘ಇಲ್ಲ’ದ್ದಕ್ಕೆ ನಾಚುವ ಸ್ವಂತಿಕೆ-ಸ್ವಾತಂತ್ರ್ಯಗಳಾದರೂ ಸನ್ಮಾನ್ಯ ಶಾಸಕ-ಸಂಸದವರೇಣ್ಯರಿಗಿರುತ್ತದೆಯೇ?! ಇವರ ಜುಟ್ಟು ಏನಿದ್ದರೂ ಯಾವುದೊ ಕೊಚ್ಚೆ, ಕೆಸರು, “ರಾಡಿ”ಗಳಲ್ಲಿ ಸಿಕ್ಕುಗಟ್ಟಿರುವುದಲ್ಲವೇ?!


ಇಂಥದೆಲ್ಲಾ ನಮ್ಮಂಥಾ ಸಮಾನ್ಯರವರೆಗೆ ತಲುಪುವುದು “ಮಾಧ್ಯಮ”ವೆಂಬ ಮಾಯಾಜಾಲದ ಮೂಲಕವೇ. ಇವುಗಳಲ್ಲಿ ನಾವು ‘ಓದುವ’, ‘ನೋಡುವ’ ವರದಿ-ವಿಶ್ಲೇಷಣೆಗಳು, ಜನಮನ ಅಭಿಪ್ರಯಗಳು - ಎಲ್ಲವೂ ಪ್ರಾಮಾಣಿಕವೇ? ಅಭಿಪ್ರಾಯದ ಪ್ರಾಮಾಣಿಕತೆ, ಅಭಿವ್ಯಕ್ತಿಯ ಸ್ವಾರಸ್ಯ, ಚಮತ್ಕಾರಗಳಿಗಿಂತಾ ಅಜ್ಞಾತ ಬಾಸ್‌ಗಳನ್ನು ಪ್ರೀತಿಪಡಿಸುವ ರೀತಿ-ನೀತಿಗಳನ್ನೇ “ಪತ್ರಿಕಾ ಧರ್ಮ”ವಾಗಿ ನಾವಿಂದು ಕಾಣುವುದು! ಇಲ್ಲಿನ ವರದಿ-ವಿವರ-ವಿಶ್ಲೇಷಣೆಗಳಲ್ಲಿ ಆತ್ಮಸಾಕ್ಷಿಯ ಮೆಹನತ್ತಿನದೆಷ್ಟೋ? ಕಾಸಿನ ಗೊಬ್ಬರದ “ರಾಡಿ”ಗಳಿಗೆ  ಹುಟ್ಟಿದವೆಷ್ಟೋ? – ಆ ಶಿವನೇ ಬಲ್ಲ! ಅದೇ ಶಿವನೇ ನಮ್ಮ ಪ್ರಜಾಸತ್ತೆಯನ್ನು ಕಾಪಾಡಬೇಕಾದವನು ಸಹ!

Comments