ಮಾತಾಡು ಮಗುವೆ ಏನಾಗಿದೆ ನಿನಗೆ

ಮಾತಾಡು ಮಗುವೆ ಏನಾಗಿದೆ ನಿನಗೆ

ಕವನ

ಮುನ್ನುಡಿ: ಅದೇಕೋ...ಇತ್ತೀಚಿಗೆ ಕನ್ನಡಿಗರು ತಮ್ಮ ಮಕ್ಕಳೊಂದಿಗೆ ಕೂಡ ಇಂಗ್ಲಿಷ್ ನಲ್ಲಿ ಮಾತಾಡುವ ಒಂದು ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದು ಹೀಗೇ ಮುಂದುವರಿದರೆ,ಪ್ರಾಯಶಃ ನಾವೇ ಕನ್ನಡದ ಅಳಿವಿಗೆ ಕಾರಣವಾಗುತ್ತೀವಿ. ಇದು ನಾವು ತಾಯಿಗೆ ಮಾಡುವ ಒಂದು ಅಪರಾಧವೆಂದೇ ಪರಿಗಣಿಸಲ್ಪಡುತ್ತದೆ.


 ಈ ಪಾಪಕ್ಕೆ ನಮ್ಮ ಮಕ್ಕಳು ಕೂಡ ನಮ್ಮನ್ನು ಕ್ಷಮಿಸುವುದಿಲ್ಲ. ಮುಂದಿನ ಪೀಳಿಗೆಗೆ ಕನ್ನಡತನವನ್ನು ಪಸರಿಸಿ ಹೋಗುವ ಕಾರ್ಯ ನಾವೇ ಮಾಡಬೇಕಿದೆ......


 ಈ ಕನ್ನಡ ರಾಜ್ಯೋತ್ಸವಕ್ಕೆ, ಏನಾದರು ಬರೆಯಬೇಕು ಅಂತ ಅಂದುಕೊಂಡಾಗ, ಈ ವಿಷವವೇ ಸೂಕ್ತ ಅಂತ ಅನಿಸಿತು.....


 


  


ಮಾತಾಡು ಮಗುವೆ ಏನಾಗಿದೆ ನಿನಗೆ


ಕನ್ನಡ ಋಣವು ಕಾಡಿಲ್ಲವೆ ನಿನಗೆ......


 


ತುತ್ತು ತುತ್ತಲಿ ಕನ್ನಡ ಬೆರೆಸಿ


ಉಣಿಸುವ ತಾಯರು ಎಲ್ಲಿಹರಿಂದು....


 ಮಾತು ಮಾತಲಿ ಕನ್ನಡತನ ಕಲಿಸುವ


 ತಂದೆಯರು ಎಲ್ಲಿಹರು ಇಂದು.....


 


ಮನೆ ಮನೆಯಲ್ಲಿ ಒಂದು ಕನ್ನಡ ಶಾಲೆಯ


ಕಟ್ಟುವ ಗುರುಗಳು ಎಲ್ಲಿಹರಿಂದು....


ಮನ ಮನದಲಿ ಹೊಕ್ಕಿ ಕನ್ನಡತನ


ಕೆಣಕುವ ಗುರುಗಳು ಎಲ್ಲಿಗೆ ಹೊಗಿಹರಿಂದು.....


 


ಮಾತಾಡು ಮಗುವೆ ಏನಾಗಿದೆ ನಿನಗೆ


ಕನ್ನಡ ಕೋಟಿ ಆಣೆಯು ನಿನಗೆ.....


 


ಕಣ್ಣಲಿ ಕನ್ನಡ ಕಿಚ್ಚೇ ಇಲ್ಲದ


ಮಕ್ಕಳು ಯಾಕೆ ಬಂದಿಹರಿಲ್ಲಿ


ಕನ್ನಡವೇ ಹರಿಯದ ದೇಹಗಳಲಿ


ಪ್ರಾಣವು ಇರುವುದು ಇನ್ನೆಲ್ಲಿ....


 


ಮತ್ತೆ ಹುಟ್ಟಲೀ ವೀರ ಮಕ್ಕಳು


ಎದ್ದು ನಿಲ್ಲಲೀ ನಮ್ಮ ಒಕ್ಕಲು...


ಕಾಳಿಂಗನ ತವರಿದು ಮರೆಯಲೇ ಬೇಡ


ಹುಳುಗಳ ಹಾಗೇ ನಡೆಯಲೇ ಬೇಡ.....


 


ಮಾತಾಡು ಮಗುವೆ ಏನಾಗಿದೆ ನಿನಗೆ


ತಾಯಿಯ ಅಳಲು ಕೇಳದೆ ನಿನಗೆ......


  


ದಾಸರು ಹಾಡಿರೋ ರಚನೆಗಳಲ್ಲಿ


ಶರಣರು ಬರೆದಿರೋ ವಚನಗಳಲ್ಲಿ...


ಕನ್ನಡ ಕುಣಿಯುವ ದೇಹಗಳಲ್ಲಿ


ಕನ್ನಡತನ ಮಿಡಿಯುವ ಒಡಲುಗಳಲ್ಲಿ.....


ಬೆಳೆಯಲಿ ಮಕ್ಕಳು ಇವುಗಳ ಹೀರಿ


ಉಳಿಯಲಿ ತಾಯಿ ಎಲ್ಲರ ಮೀರಿ.....


 


ನೀನಾಡುವ ಮಾತೇ....ಮಾತೆಗೆ ವಸ್ತ್ರ


ನಿನ್ನಲಿ ಮಿಡಿಯುವ ಕನ್ನಡತನ ಅಸ್ತ್ರ....


ವಿಶ್ವ ಕಿಚ್ಚನೇ. ... ..ಕೊಚ್ಚುವ ರಭಸ


ಕನ್ನಡವಂದೇ ..ಬೆಳೆಯುವ ದಿವಸ....


ತಾಯಿಯು ಅಂದೇ...ಬೆಳೆಯುವ ದಿವಸ...


ತಾಯಿಯು ಅಂದೇ..ಮೆರೆಯುವ ದಿವಸ....


 


ದ್ವೈತ ಅದ್ವೈತವು ಸೇರಿದ ನಾಡು


ಕೊಂಕಣ ತುಳುವರ ಕೊಡವರ ನಾಡು


ನಮ್ಮದು ಇದು ಕರುನಾಡು....


ನಮ್ಮೆಲ್ಲರದು ಇದು ಕರುನಾಡು.....


 


ಮಾತಾಡು ಮಗುವೆ ಏನಾಗಿದೆ ನಿನಗೆ


ಕನ್ನಡ ಬೆಳೆಸುವ ಕಾರ್ಯವು....ನನಗೆ ನಿನಗೆ.....