ರಂಗೈಯ್ಯನ ಲಡ್ಡೂ ಪರ್ಸಾದ ಪುರಾಣ !!!! ಚಿತ್ರವಿಲ್ಲದ ಈ ಕಥೆ.

ರಂಗೈಯ್ಯನ ಲಡ್ಡೂ ಪರ್ಸಾದ ಪುರಾಣ !!!! ಚಿತ್ರವಿಲ್ಲದ ಈ ಕಥೆ.

ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ '' ಡಿ'' ನೌಕರ  ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ಕರೀತಿದ್ರು.ಆದರೂ ಇವನು ಒಮ್ಮೊಮ್ಮೆ ಇದ್ದಕ್ಕಿದಂತೆ ಎರಡು ,ಮೂರು ದಿನಗಳು ಪತ್ತೆ ಇರುತ್ತಿರಲಿಲ್ಲ , ನಂತರ ಕಚೇರಿಗೆ ಬಂದು  " ಹೇ ಹೇ ಹೇ ಸಾ ನಾನು ದೇವಸ್ಥಾನಕ್ಕೆ  ಒಗಿದ್ದೆ ಸಾ" ಅಂತಾ ತಲೆಕೆರೀತಾ ಬಂದು , "ಸಾ ಪರಸಾದ ತಂದೀವ್ನಿ ತಗಳಿ  ಸಾ" ಅಂತಾ , ಎಲ್ಲರಿಗೂ ಪರಸಾದ ಹಂಚೋವ್ನು.ಇಷ್ಟೆಲ್ಲಾ ಇದ್ರೂ ತಾನು ಕಚೇರಿಯಲ್ಲಿ ಡ್ಯೂಟಿಯಲ್ಲಿ ಇದ್ದಾಗ ಬೇಗ   ಕೆಲಸ ಮುಗಿಸೋವ್ನು  . ಹೀಗೆ ಸಾಗಿತ್ತು ಇವನ ಕಾರ್ಯ ವೈಖರಿ.ಒಮ್ಮೆಯಂತೂ    ಒಂದು ವಾರ ಪತ್ತೆ ಇಲ್ಲದೆ ನಂತರ ಆಫಿಸ್ ಗೆ ಬಂದೂ ಸಾ ಮನೆವ್ರಾ ಕೂಡ ತಿರುಪತಿ ಗೆ ಹೋಗಿದ್ದೆ " ಹಿ ಹಿ ಹಿ ಬೇಜಾರ್ ಮಾಡ್ಕಾ ಬ್ಯಾಡಿ" ಅಂತಾ ಪೂಸಿಹೊಡೆದು  ಗೋಗರೆದು ಆಫಿಸ್ನವ್ರ್ಗೆಲ್ಲಾ  ಲಡ್ಡೂ ಜೊತೆ  ಮೈಸೂರ್ ಪಾಕು ಹಂಚಿದಾ !! ನಾವು ಕೆಲವರು ಅಲ್ಲಾ ರಂಗಯ್ಯ ತಿರುಪತಿಯಲ್ಲಿ ಲಡ್ಡೂ ಜೊತೆ ಮೈಸೂರು ಪಾಕು ಕೊಡೋಕೆ ಯಾವಾಗ ಶುರುಮಾಡಿದರೂ ಅಂತಾ ಹಾಸ್ಯ ಮಾಡಿ ನಕ್ಕೆವು.       " ಹೇ ಹೇ ಬುಡಿ ಸಾ ತಮಾಸೆ ಮಾಡ್ಬ್ಯಾಡಿ" ಅಂತಾ ಆಚೆ ಹೋದ.ನಂತರ  ಯಥಾ ಸ್ಥಿತಿ . ಹಾಗೆ ಒಮ್ಮೆ ನಾನು ನನ್ನ ಸ್ನೇಹಿತನ ಸಹೋದರಿ  ಮದುವೆ     ಗಾಗಿ ರಜಾ ಹಾಕಿ ತೆರಳಿದ್ದೆ .  ಮದುವೆ ಮನೆಯಲ್ಲಿ ಯಾಂತ್ರಿಕವಾಗಿ  ಉಡುಗೊರೆ  ನೀಡಿ  ಊಟಕ್ಕೆ ಬಂದು ಕುಳಿತೆ , ಅರೆ ಇದೇನಿದು ಅಂತಾ ನೋಡಿದರೆ ನಮ್ಮ ರಂಗಯ್ಯ ನನ್ನ ಮುಂದಿನ ಸಾಲಿನ ತುದಿಯಲ್ಲಿ ಊಟಕ್ಕೆ ಕುಳಿತಿದ್ದ.ಪಕ್ಕದಲ್ಲಿ ಒಂದು ಬ್ಯಾಗು ಬೇರೆ ಇತ್ತು.ಪಾಪ ಇಲ್ಯಾಕೆ ಇವನನ್ನು ಮಾತಾಡಿಸಿ ತೊಂದ್ರೆ  ಕೊಡೋದು ಅಂತಾ ಯೋಚಿಸಿ ಊಟ ಮಾಡಲು ಶುರು ಮಾಡಿದೆ. ಊಟ ಎಲ್ಲಾ ಸಾಂಗವಾಗಿ  ಮುಗಿತೂ . ಕೈತೊಳೆಯುವ ಸರದಿ ಬಂದು ಅಲ್ಲಿ ರಶ್ ಆಗುವ ಮೊದಲು ಕೈ ತೊಳಿಯೋಣ ಅಂತಾ ಬೇಗ ಕೈ ತೊಳೆಯುವ   ಕೆಲಸ ಮುಗಿಸಿದೆ. ಅಲ್ಲೇ ಇದ್ದ ಸ್ನೇಹಿತ " ಬಾರೋ ಲೋ ಯಾಕೆ ಓಡ್ತಿಯಾ" ಅಂತಾ ತಡೆದು  ಮಾತಾಡ್ತಾ ನಿಲ್ಲಿಸಿಕೊಂಡ . ಊಟ ಮಾಡಿದ ಎಲ್ಲಾ ಜನರು ಊಟ ಮುಗಿಸಿ ತೆರಳಿದ್ದರು ,ಆದ್ರೆ ಒಬ್ಬ ವ್ಯಕ್ತಿ ಮಾತ್ರಾ ಎಲ್ಲಾ ಎಲೆಗಳಲ್ಲಿ ಉಳಿದಿದ್ದ ಲಡ್ಡು  ತೆಗೆದು ತನ್ನಾ ಬ್ಯಾಗಿಗೆ ತುಂಬಿ ಕೊಳ್ಳುತ್ತಿದ್ದಾ!!. ಅರೆ ಇದೇನು ಅಂಥಾ ನೋಡಿದ್ರೆ ಅವನೇ ನಮ್ಮ ಕಚೇರಿ ರಂಗಯ್ಯ !! ಅವನ ಜೊತೆ ಇದ್ದ ಬ್ಯಾಗು ಆಗಲೇ ಹೊಟ್ಟೆ ತುಂಬಾ ಲಡ್ಡು ಗಳನ್ನೂ ತುಂಬಿಕೊಂಡು ಜೋಲಾಡುತಿತ್ತು.           ನಾನು ಅವನಿಗೆ  ತಿಳಿಯದಂತೆ   ನೋಡ್ತಾ ಇದ್ದೆ !! ಎಲಾ ಇವನ ಅಂದು ಕೊಂಡು, ಮನದಲ್ಲಿ ಶಪಿಸುತ್ತಾ ಮನೆಹಾದಿ ಹಿಡಿದೇ.ಮಾರನೆದಿನ ಯಥಾ ಸ್ತಿತಿ "" ಹಿ ಹಿ ಹಿ ಸಾ ನಿನ್ನೆ ಚಾಮುಂಡಿ ಬೆಟ್ಟಕ್ಕೆ  ಹೋಗಿದ್ದೆ ಸಾ!!! ತಕಳಿ ಪರ್ಸಾದ" ಅಂತಾ ಒಳಗೆ ಬಂದಾ .ಬಂದಿತ್ತು ಕೆಟ್ಟ ಸಿಟ್ಟು!!! ಆದರೂ ಇವನಿಗೆ ಬುದ್ದಿ ಕಲಿಸೋಣ ಅಂದು ಕೊಂಡು "ಇರು ರಂಗಯ್ಯ ಎಲ್ಲರ ಜೊತೆ ತಿನ್ನೋಣ!!"  ಅಂದು ಎಲ್ಲರನ್ನೂ ಬರಹೇಳಿ ಒಟ್ಟಿಗೆ ಸೇರಿಸಿದೆ ,"ಈಗ ಬಾ ರಂಗಯ್ಯ ನಿನ್ ಪರ್ಸಾದ ಹಂಚುವಂತೆ ಅಂಥಾ ಅಂದೇ. "ಅವನು ಖುಷಿಯಾಗಿ ಬ್ಯಾಗಿನಿಂದಾ ತೆಗೆದು ಪೇಪರ್ ಮೇಲೆ ಸುರಿದ !!! ಅರೆ ಅದೇ ನಿನ್ನೆ ಮದುವೆ  ಮನೆ ಲಡ್ಡು ಗಳ  ಕರಾಮತ್ತು ಇಲ್ಲಿ ಬಂದಿತ್ತು !! "ಸಾ ಪರ್ಸಾದ ಕೊಡ್ಲಾ "ಅಂದಾ , " ತಡಿ ರಂಗಯ್ಯ ನಿನ್ ಪರ್ಸಾದದ ಮಹಿಮೆ ಹೇಳ್ತೀನಿ ಆಮೇಲೆ ಕೊಡಿವಂತೆ" ಅಂದು, ಕಚೇರಿ ಸ್ನೇಹಿತರಿಗೆ "ನೋಡ್ರಯ್ಯ ನಮ್ಮ ರಂಗಯ್ಯ ಪಾಪ ಇಷ್ಟು ದಿನಾ ಪುಣ್ಯ ಕ್ಷೇತ್ರ ದರ್ಶಿಸಿ ನಮಗೆ ಪರ್ಸಾದ ಕೊಟ್ಟಿದ್ದಾನೆ. ಇವತ್ತು ಅವನ ಪುಣ್ಯಕ್ಕೆ ನಮ್ಮ ಕಾಣಿಕೆಕೊಡೋಣ" ಎಂದೇ.  ಅವನಿಗೆ ಅಚ್ಚರಿಯಾಗಿ "ಹೇ ಹೇ ಹೇ ಯಾನು ಬ್ಯಾಡ ಬುಡಿ ಸಾ ಅಂದಾ !!." "ಇರು ರಂಗಯ್ಯ ಅಂತಾ ಹೇಳಿ ಅವನು ನಿನ್ನೆ ಮಧುವೆ ಮನೆಯಲ್ಲಿ  ಮಾಡಿದ ಘನ ಕಾರ್ಯದ ವಿವರಣೆಯನ್ನು ಎಲ್ಲರಿಗೂ ದರ್ಶನ ಮಾಡಿಸಿ ರಂಗಯ್ಯನ ಪರ್ಸಾದದ ಮಹಿಮೆ ಸಾರಿದೆ. ಇಷ್ಟುದಿನ ಎಲ್ಲರನ್ನೂ  ಮಂಗಗಳನ್ನಾಗಿ ಮಾಡಿದ್ದ ರಂಗಯ್ಯ  ಇಂದು ತಾನೇ ಮಂಗಯ್ಯ ಆಗಿದ್ದಾ !! ಆಗ ನೋಡಬೇಕಿತ್ತು ಎಲ್ಲರ ಮುಖವನ್ನು !! ಆಹಾ ಪ್ರಸಾದ ಅಂಥಾ ಭಕ್ತಿ ಇಂದ ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸಿ ದೇವರ ಪ್ರಸಾದವೆಂದು ತಿಳಿದು ಮನೆಗೂ ತೆಗೆದುಕೊಂಡು ಹೋಗಿ  ಧನ್ಯತೆ ಮೆರೆಯುತ್ತಿದ್ದ ಆ  ಮಖಗಳು ಕಿವುಚಿಕೊಂಡು ಅವನಿಗೆ ಶಾಪಾ ಹಾಕಿ ಎರಡೆರಡು ತದುಕಲು ಮುಂದಾಗಿದ್ರೂ . ಅವನಿಗೂ ಈ ಅನಿರೀಕ್ಷಿತ ಬೆಳವಣಿಗೆ ಇಂದಾಗಿ ಸರಿಯಾದ ಮಂಗಳಾರತಿ ಎತ್ತಿಸಿಕೊಳ್ಳುವ ಸರದಿಯಾಗಿತ್ತು. ಇನ್ಮುಂದೆ ಹೀಗೆ ಮಾಡುವುದಿಲ್ಲ ವೆಂದು ಪ್ರಮಾಣ ಮಾಡಿ ಕ್ಷಮೆಕೋರಿದ .ಏನೋ ಹಾಳಾಗ್ಲಿ ಅಂತಾ ಎಲ್ಲರು ತಲಾ ಒಂದೊಂದು ಮಾತಾಡಿ ತಮಗೆ ತಾವೇ ಸಮಾಧಾನ ಪಟ್ಟುಕೊಂಡರು. ಆದರೂ ಈ ಪುಣ್ಯಾತ್ಮಾ ಪ್ರತೀಭಾರಿ ನಮಗೆ ಚಳ್ಳೆ ಹಣ್ಣು ತಿನ್ನಿಸಿ  ಇಂತಹ ಪರ್ಸಾದ ತಿನ್ನಿಸಿ ತನ್ನ ಮಹಿಮೆ ಸಾರಿ ನಮ್ಮನ್ನು ಮೂರ್ಖ ರನ್ನಾಗಿ ಮಾಡಿದ್ದ. ಹಿಂಗಿತ್ತು ನೋಡಿ ನಮ್ಮ ರಂಗಯ್ಯನ ಲಡ್ಡೂ ಪರ್ಸಾದ ಪುರಾಣ.