ರೈತರ ಗೋಳ ಕೇಳುವವರಾರು...

ರೈತರ ಗೋಳ ಕೇಳುವವರಾರು...

ಮರೆತಿರಾ...ಇಂದು ನಮ್ಮ ರೈತರ ದಿನ,

‘ನೀ ಕೊಡೆ ನಾ ಬಿಡೆ’ ಇದು ಇಂದಿನ ಸರ್ಕಾರ (ಹಿಂದಿನ ಸರ್ಕಾರಗಳೇನೂ ಹೊರತಲ್ಲ) ಮತ್ತು ರೈತರ ನಡುವಿನ ಕಿತ್ತಾಟ. ಇದರಲ್ಲಿ ಗೆಲುವು ದುಷ್ಟ ಸರ್ಕಾರಗಳದ್ದೆ. ಭೂಮಿ ಕೊಟ್ಟು ಕೊಟ್ಟು ರೈತರು ದಣಿದಿದ್ದಾರೆ. ಮಾತ್ರವಲ್ಲ, ಇಂದಿನ ರೈತರು ಸರ್ಕಾರ ಯಾವ ಯಾವ ನೆಪದಲ್ಲಿ ಜಮೀನೆಲ್ಲವನ್ನೂ ಆಕ್ರಮಿಸಿಕೊಳ್ಳುತ್ತದೋ ಎಂಬ ಆತಂಕದಲ್ಲಿಯೇ ಇದ್ದಾರೆ.

ಹಲವಾರು ಗ್ರಾಮಗಳ ಸಾವಿರಾರು ಎಕರೆ ಫಲವತ್ತಾದ ಜಮೀನುಗಳೆಲ್ಲ ಐಟಿ, ಬಿಟಿ ಮತ್ತು ಜವಳಿ ಪಾರ್ಕುಗಳ ಪಾಲಾಗಿವೆ. ಅಭಿವೃದ್ಧಿ ನೆಪದಲ್ಲಿ ನಡೆಯುತ್ತಿರುವ ಭೂ ಸ್ವಾಧೀನದಿಂದ ಕೃಷಿಕರ ಆರ್ಥಿಕ ಸ್ಥಿತಿಯಷ್ಟೇ ಅಲ್ಲ ರೈತರ ಸಾಂಸ್ಕೃತಿಕ ಬದುಕೂ ಪಲ್ಲಟವಾಗುತ್ತಿದೆ. ಆರ್ಥಿಕತೆ ಕೆಟ್ಟರೆ ಸರಿಪಡಿಸಬಹುದು, ಬದುಕೇ ಕೆಟ್ಟರೆ ದೇಶ ವಿನಾಶದ ಕಡೆಗೆ ಹೋಗಲಿದೆ. ಹೀಗೆ ಭೂಸ್ವಾಧೀನ ಒಂದೆಡೆ ರೈತರಿಗೆ ಕಂಟಕವಾಗಿದ್ದಾರೆ. ಇನ್ನೊಂದೆಡೆ ರೈತರಿಗೆ ನೆರವಾಗಬೇಕಾದ ಕೃಷಿ ವಿವಿಗಳೇ ಕುಲಾಂತರಿ ತಳಿಗಳನ್ನು ಅಭಿವೃದ್ಧಿಸಡಿಸುತ್ತಿವೆ.

ಇಷ್ಟೆಲ್ಲ ಗೊಂದಲ, ನೋವುಗಳ ನಡುವೆ ಮತ್ತೊಂದು ಕಿಸಾನ್ ದಿವಸ್ ನಮ್ಮ ರೈತರೆದರು ನಿಂತಿದೆ. ದಿನಾಚರಣೆ ಎಂದರೆ ಸಂಭ್ರಮ, ಸಂತಸದ ಸಂಕೇತ. ಆದರೆ ಇಷ್ಟೆಲ್ಲ ಆತಂಕಗಳ ನಡುವೆ ಸಂಭ್ರಮವನ್ನು ತಂದುಕೊಳ್ಳುವುದಾದರೂ ಎಲ್ಲಿಂದ. ಕನಿಷ್ಠ ಮುಂದಿನ ದಿನಾಚರಣೆಯ ಹೊತ್ತಿಗಾದರೂ ಈ ಎಲ್ಲ ಆತಂಕಗಳು ಮರೆಯಾಗಬಹುದು. ಅಂಥ ವಾತಾವರಣ ಸೃಷ್ಟಿಯಾಗಲು, ಇಡೀ ರೈತ ಸಮುದಾಯ ಇವತ್ತಿನ ದಿನಾಚರಣೆಯಲ್ಲಿ ಸಂಕಲ್ಪ ಮಾಡಬೇಕಿದೆ.

ಪ್ರಸ್ತುತ ಸ್ಥಿತಿ:
1. ರಾಜ್ಯದಲ್ಲಿನ ಪ್ರಸ್ತುತ ಸರ್ಕಾರದ ರೈತ ವಿರೋಧಿ ಧೋರಣೆ
2. ಅಭಿವೃದ್ಧಿ ನೆಪದಲ್ಲಿ ಫಲವತ್ತಾದ ಕೃಷಿ ಯೋಗ್ಯ ಭೂಮಿ ಸರ್ಕಾರದ ಪಾಲು
3. ಮಾಹಿತಿ ತಂತ್ರಜ್ಞಾನದ ಬಣ್ಣದ ನೆರಳಲ್ಲಿ ರೈತರ ಹಿತಾಸಕ್ತಿಯ ಅಲಕ್ಷ್ಯ
4. ಪಲ್ಲಟವಾಗುತ್ತಿರುವ ರೈತರ ಸಾಂಸ್ಕೃತಿಕ ಬದುಕು
5. ರೈತರಿಗೆ ಸಹಾಯಧನ ಒದಗಿಸುವಲ್ಲಿ ಸರ್ಕಾರ ವಿಫಲ
6. ನಗರ ಕೇಂದ್ರಿತ ಅಭಿವೃದ್ದಿ ಯೋಜನೆಗಳತ್ತ ಮಾತ್ರ ಸರ್ಕಾರದ ಗಮನ
7. ಕೃಷಿ ಸಂಬಂಧಿತ ತರಬೇತಿಗಳ ಕೊರತೆ
8. ರೈತರ ಆತ್ಮಹತ್ಯೆ

ಏನಾಗಬೇಕಿದೆ:
1. ಬಹಳ ಹಿಂದೆಯೇ (ಅಕ್ಟೋಬರ್, 2006) ಅಂದಿನ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರು ಸರ್ಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿದ್ದರು, ಇಂದಿಗೂ ಅದು ಕಾರ್ಯಗತಗೊಂಡಿಲ್ಲ.
2. ರೈತರ ಕುಂದು ಕೊರತೆಗಳನ್ನು ನಿವಾರಿಸಲು ಅಧಿಕಾರಿಗಳು ತಿಂಗಳಿನಲ್ಲಿ ಒಂದು ದಿನವನ್ನು ಮೀಸಲಾಗಿಡಬೇಕು.
3. ತಿಂಗಳಲ್ಲಿ ಒಂದು ದಿನ ಜಿಲ್ಲಾಧಿಕಾರಿ ಕಚೇರಿಯಿಂದ ಹಿಡಿದು ತಹಸಿಲ್ದಾರ ಕಚೇರಿಯ ತನಕ ಅಧಿಕಾರಿಗಳು ರೈತರ ಕುಂದು ಕೊರತೆಗಳನ್ನು ಕೇಳಿ ಸ್ಥಳದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು.
4. ಹೊಸ ಕೃಷಿ ನೀತಿ ರೂಪಿಸುವಾಗ ಆದಷ್ಟು ರೈತ ಪರ ನೀತಿಗಳನ್ನು ರೂಪಿಸಬೇಕು.
5. ಪ್ರತಿ ವರ್ಷ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ದಿನದ ರೈತ ಪ್ರತಿನಿಧಿಗಳ ಸಭೆ ನಡೆಸಬೇಕು
6. ರೈತರಿಗೆ ಉಚಿತವಾಗಿ ಬಸ್ ಮತ್ತು ರೈಲುಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಲು ಅವಕಾಶ
7. ಪ್ರಗತಿಪರ ರೈತರನ್ನು ಗುರುತಿಸಿ ಗೌರವಿಸಬೇಕು
8. ರೈತರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಭೆಗಳನ್ನು ನಡೆಸುವುದು
9. ಸರ್ಕಾರ ಗ್ರಾಮೀಣ ಕೇಂದ್ರಿತ ಅಭಿವೃದ್ದಿ ಯೋಜನೆಗಳತ್ತ ಹೆಚ್ಚು ಗಮನ ಹರಿಸಬೇಕು
9. ರೈತರ ಸಾಂಸ್ಕೃತಿಕ ಬದುಕು ಬರಿದಾಗದಂತೆ ಕಾಪಾಡುವುದು
10. ಹೊಸ ಚಟುವಟಿಕೆಗಳ ಸಂಕಲ್ಪ, ಹಳೆಯ ಕೆಲಸಗಳ ಸಿಂಹಾವಲೋಕನ, ಹೋರಾಟದ ರೂಪು ರೇಷೆ...

ಹೀಗೆ ವಿವಿಧ ವಿಚಾರಗಳು ಇನ್ನು ಮುಂದೆಯಾದರೂ ಚರ್ಚೆಯಾಗಲಿ ಎಂಬುದೆ ನನ್ನ ಆಶಯ.