ಸಿ.ಅಶ್ವಥ್ - ಮರೆಯಾದ ಮಹಾಚೇತನ.

ಸಿ.ಅಶ್ವಥ್ - ಮರೆಯಾದ ಮಹಾಚೇತನ.

ಡಿಸೆಂಬರ್ ೨೯, ೨೦೦೯ ಕನ್ನಡ ಕಲಾರಂಗಕ್ಕೊಂದು ಬರಸಿಡಿಲೊಂದು ಎರಗಿದ ದಿನ. ನಾಡಿನ ಜನತೆ ಹೊಸ ವರ್ಷದ ಆಚರಣೆಯ ಸಿದ್ಧತೆಯಲ್ಲಿದ್ದಾಗ ಬಂದ ಈ ಸುದ್ದಿ ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಹೌದು ಅಂದು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಂಚಿನ ಕಂಠದ ಗಾಯಕ "ತರವಲ್ಲ ತಗಿ ನಿನ್ನ ತಂಬೂರಿ, ಶ್ರಾವಣ ಬಂತು ಕಾಡಿಗೆ, ಎದೆ ತುಂಬಿ ಹಾಡುವೆನು..." ಈ ಅಧ್ಬುತ ಹಾಡುಗಳ ಗಾಯಕ ಸಿ.ಅಶ್ವಥ್ ಇಹಲೋಕದ ಯಾತ್ರೆಯನ್ನು ಮುಗಿಸಿ ಎಂದೂ ಮರಳಿ ಬಾರದ ಲೋಕಕ್ಕೆ ಹೊರಟು ಹೋದರು.


ತಮ್ಮ ಅಧ್ಬುತ ಕಂಠದಿಂದಲೇ ಜನಪ್ರಿಯರಾಗಿದ್ದ ಅಶ್ವಥ್ ಅವರು ಜನಿಸಿದ್ದು ೨೯ ಡಿಸೆಂಬರ್ ೧೯೩೯ ರಂದು. ವಿಜ್ಞಾನದಲ್ಲಿ ಪದವಿ ಪಡೆದು ನಟರ ITI  ನಲ್ಲಿ ೨೭ ವರ್ಷಗಳ ಸೇವೆ ಸಲ್ಲಿಸಿ ೧೯೯೨ ರಲ್ಲಿ ನಿವೃತ್ತಿ ಹೊಂದಿದರು. ಕುವೆಂಪು ಅವರ ನಾಟಕ ಒಂದಕ್ಕೆ ಹಿನ್ನಲೆ ಸಂಗೀತ ನೀಡುವ ಮೂಲಕ ರಂಗಪ್ರವೇಶ ಮಾಡಿದ ಅಶ್ವಥ್ ಅವರು ಹಿಂತಿರುಗಿ ನೋಡಲೇ ಇಲ್ಲ. ರಂಗಭೂಮಿ, ಸುಗಮ ಸಂಗೀತ, ಚಿತ್ರರಂಗ ಈ ಮೂರರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ವತಂತ್ರವಾಗಿ ಮೊದಲು ಅವರು ಸಂಗೀತ ನೀಡಿದ ಚಿತ್ರ ಕಾಕನ ಕೋಟೆ ಅವರು ಸಂಗೀತ ನೀಡಿದ ಅಧ್ಬುತ ಚಿತ್ರಗಳಲ್ಲಿ "ಮೈಸೂರು ಮಲ್ಲಿಗೆ", "ಸಂತ ಶಿಶುನಾಳ ಶರೀಫ" ಬಹಳ ಜನಪ್ರಿಯ ಪಡೆದ ಚಿತ್ರಗಳು.


ಸಿ.ಅಶ್ವಥ್ ಅವರು ಸಂಗೀತ ನೀಡಿ ಡಾ.ರಾಜಕುಮಾರ್ ಅವರು ಹಾಡಿದ ಎಲ್ಲಾದರೂ ಇರು ಎಂತಾದರೂ ಇರು ಯಾವ ಮಟ್ಟದಲ್ಲಿ ಜಯಪ್ರಿಯತೆ ಪಡೆಯಿತು ಎಂದು ಎಲ್ಲರಿಗೂ ತಿಳಿದೇ ಇದೆ. ಸಿ.ಅಶ್ವಥ್ ಅವರು ಬರೀ ಕರ್ನಾಟಕವಷ್ಟೇ ಅಲ್ಲದೆ ದೇಶ ವಿದೇಶಗಳಲ್ಲೂ ತಮ್ಮ ಸಂಗೀತದಿಂದ ಸೈ ಎನಿಸಿಕೊಂಡಿದ್ದರು. ಏಪ್ರಿಲ್ ೨೦೦೫ ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ "ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಜನ ಸೇರಿದ್ದೇ ಅಶ್ವಥ್ ಅವರ ಜನಪ್ರಿಯತೆಗೆ ಸಾಕ್ಷಿ.


ಡಿಸೆಂಬರ್ ೨೯, ೨೦೦೯ಕ್ಕೆ ಅಶ್ವಥ್ ಅವರಿಗೆ ೭೦ ವಸಂತಗಳು ತುಂಬಿ ೭೧ನೆ ವಸಂತಕ್ಕೆ ಕಾಲಿಡುತ್ತಿದ್ದ ಆ ಸುಸಂದರ್ಭದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸುತ್ತೂರು ಸ್ವಾಮೀಜಿಗಳು ಹಾಗು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರ ಉಪಸ್ಥಿತಿಯಲ್ಲಿ ಅಶ್ವಥ್ ಅವರನ್ನು ಸನ್ಮಾನಿಸಲು ಅಭಿಮಾನಿಗಳು, ಸ್ನೇಹಿತರು ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ವಿಧಿಲಿಖಿತ ಬೇರೆಯೇ ಆಗಿತ್ತು. ಬಹಳ ದಿನದಿನ ಅನಾರೋಗ್ಯದಿಂದ ಬಳಲುತ್ತಿದ್ದ ಅಶ್ವಥ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದೇ ಇಹಲೋಕದ ಯಾತ್ರೆ ಮುಗಿಸಿದ್ದರು.
ಇಂದಿಗೆ ಸರಿಯಾಗಿ ಅಶ್ವಥ್ ಅವರು ನಮ್ಮನ್ನಗಲಿ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ಆ ಮಹಾಚೇತನನಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನನ್ನು ಪ್ರಾರ್ಥಿಸೋಣ.

Comments