ಮುಸ್ಸಂಜೆಯ ಮಾತುಗಳು

ಮುಸ್ಸಂಜೆಯ ಮಾತುಗಳು

ಮತ್ತೊಂದು ವರ್ಷ ಅದರ ಮುಸ್ಸಂಜೆಯಲ್ಲಿದೆ. ಒಂದು ವೇಳೆ ಜೀವ ಜಗತ್ತಿನ ಅವಸಾನವಾಗುವುದಾದರೆ ಭೂಮಿಯಲ್ಲಿರುವವರಿಗೆ ಇನ್ನು ಕೇವಲ ಒಂದು ವರ್ಷ ಬದುಕಲು ಅವಕಾಶ. ಸ್ಪೇಸ್ ಶಿಪ್ಪುಗಳನ್ನು ತೆಗೆದುಕೊಳ್ಳಬಲ್ಲವರಿಗೆ ಅದು ಕೊನೆಯಲ್ಲ, ಬದುಕು ಮುಂದುವರಿಯಲಿದೆ. ಸುಮ್ಮನೆ ಹೇಳಿದೆ ಅಷ್ಟೇ. ನನಗಂತೂ ೨೦೧೨ರಲ್ಲಿ ಏನೂ ಆಗುವುದಿಲ್ಲ ಎಂಬ ಭರವಸೆ ಇದೆ. ಈ ಲೇಖನ ತಪ್ಪುಗಳೊಂದಿಗಿನ ಕಳೆದ ಮತ್ತೊಂದು ವರ್ಷದ ಅವಲೋಕನ. ಸಂಸ್ಕೃತದಲ್ಲಿ ಹೇಳುವಂತೆ ’ಸಿಂಹಾವಲೋಕನ’, ಸಿಂಹವು ನಡೆಯುತ್ತಾ ತಾನು ಬಂದ ದಾರಿಯನ್ನೊಮ್ಮೆ ನೋಡುವುದಂತೆ, ಸಂಪೂರ್ಣವಲ್ಲದಿದ್ದರೂ ಇದೂ ಒಂಥರಾ ಹಾಗೆಯೇ.

೨೦೧೦ರಲ್ಲಿ ತಿಂದ ಚಿಕನ್, ಪಿಜ್ಜಾಗಳು, ಬರ್ಗರುಗಳು, ಕೋಕ್ ಮತ್ತು ಸ್ಯಾಂಡ್ ವಿಚ್ಚುಗಳ ಸಂಖ್ಯೆ ಮೊದಲಿಗಿಂತ ಕಡಿಮೆಯಾಗದಿದ್ದರೂ ಗ್ಯಾಸಿನ ಮೇಲೆ ಮಾಡಿದ ಕೆಲವು ಪ್ರಯೋಗಗಳಿಂದ ನನ್ನ ಹೊಟ್ಟೆಗೆ ಲಾಭವಾಗಿದ್ದಂತೂ ನಿಜ. ಅದರಲ್ಲೂ ಟಿವಿಯಿಂದ ಮತ್ತು ಗೆಳೆಯರಿಂದ ಸಿಕ್ಕ ರೆಸಿಪಿಗಳಿಂದ ತಯಾರಿಸಿದ ಚೆಟ್ಟಿನಾಡ್ ಮಸಾಲ, ಕ್ಯಾರೆಟ್ ಹಲ್ವಾ ಮತ್ತಿತರ ಸಾಂಬಾರಿನ ಬೇರೆ ಬೇರೆ ವರ್ಶನ್ನುಗಳಿಂದ ಖಾರವಾದರೆ ಬೈಗುಳ, ಒಳ್ಳೆಯದಾಗಿದ್ದರೆ ಹೊಗಳಿಕೆ ಕೇಳಿ ಸುಖ ದುಃಖ ಜೀವನದ ಪರಮ ಅಂಗವೆನ್ನುವುದನ್ನು ಅರ್ಥ ಮಾಡಿಕೊಂಡೆ. ಆದರೆ ನಾನೇಕೆ ಅಡುಗೆಯಿಂದಲೇ ಆರಂಭಿಸಿದೆ ಅಂದ್ಕೋಬೇಡಿ, ಆಹಾರವೆನ್ನುವುದು ಮನುಷ್ಯನ ಮೂಲಭೂತ ಅಗತ್ಯವೂ ತಿನ್ನುವುದು ಸ್ವಾಭಾವಿಕ ಗುಣವೂ ಆದ್ದರಿಂದ ಅದನ್ನು ಕೊನೆಯಲ್ಲಂತೂ ಬರೆಯಲು ಸಾಧ್ಯವಿಲ್ಲ. ಹಾಗೇನಾದರೂ ಆದರೆ ಅದಕ್ಕೆ ಅವಮಾನಿಸಿದಂತೆ ಅಲ್ಲವೇ?

ದೊಡ್ಡ ಬ್ಯಾನರಿನ ಉತ್ತಮ ಚಿತ್ರಗಳನ್ನೆಲ್ಲಾ ಮಲ್ಟಿಪ್ಲೆಕ್ಸಿನಲ್ಲಿ ಅಥವಾ ಥಿಯೇಟರಿನಲ್ಲಿ ನೋಡಿದರೆ ಕೆಲವೊಂದನ್ನು ನೋಡಲು ಕಂಪೆನಿಯ ಲ್ಯಾಪ್ ಟಾಪ್ ಕೂಡ ಸಹಕರಿಸಿದೆ. ಕಂಪೆನಿಯ ಈ ಅಸೆಟ್ ಇರುವ ಅತ್ಯಂತ ಲಾಭ ಇದುವೇ. ಆದರೆ ಸಿನೆಮಾ ನನ್ನ ಎರಡನೇ ಪ್ಯಾರಾದಲ್ಲೇ ಯಾಕೆ ಬಂತು, ಅದು ಬದುಕಿನ ಎರಡನೇ ಪ್ರಮುಖ ಅಂಶವೇ? ಎಲ್ಲಿಯವರೆಗೆ ಬದುಕು ಐಶಾರಾಮವಾಗಿ ಬದಲಾಗುವುದಿಲ್ಲವೋ ಅಥವಾ ಯಾರಾದರೂ ನಿಮ್ಮ ಟಿಕೆಟ್ ಸ್ಪಾನ್ಸರ್ ಮಾಡುವುದಿಲ್ಲವೋ ಅಲ್ಲಿಯವರೆಗೆ ಅಲ್ಲ. ಹಾಗಿದ್ದಲ್ಲಿ ನನ್ನ ಬದುಕು ಐಶಾರಾಮದ ಬದುಕೇ? ತುಂಬಾ ಪ್ರಶ್ನೆಗಳು ತಲೆ ಹಾಳು ಮಾಡುತ್ತವೆ ಅದಕ್ಕೆ ಆ ಕುರಿತು ತಲೆ ಕೆಡಿಸಿಕೊಳ್ಳುವುದು ಬೇಡ. ಶಾಪಿಂಗ್ ಮಾತ್ರ ಎಂದಿನಂತೆ ಇತ್ತು. ಅಗತ್ಯವಿರಲಿ ಇಲ್ಲದಿರಲಿ ಯಾರು ಯೋಚಿಸುತ್ತಾರೆ! ಆದರೆ ಪ್ರತಿ ತಿಂಗಳು ಕ್ರೆಡಿಟ್ ಕಾರ್ಡಿನ ಬಿಲ್ ಕಟ್ಟಬೇಕಾಗಿರುವುದರಿಂದ ’ಶಾಪಹಾಲಿಕ್’ ಅಂತೂ ಆಗಿಲ್ಲ.

ನನ್ನ ಕೇಬಲ್ ಆಪರೇಟರ್ (ಅವನ ಬಳಿ ಅಂತ ಸೌಲಭ್ಯವೇನಾದರೂ ಇದ್ದರೆ) ನಾನೀಗ ವಾರ್ತಾ ಚಾನಲುಗಳನ್ನು ಹೆಚ್ಚಾಗಿ ನೋಡುತ್ತಿರುವುದನ್ನು ಗಮನಿಸಿರಬಹುದು, ನಿಜಕ್ಕೂ ಈಗೀಗ ದಿನದ ಬೆಳಗ್ಗೆ ’ಸಿಎನ್ ಎನ್ ಐಬಿಎನ್’ ಅಥವಾ ’ಟೈಮ್ಸ್ ನೌ’ ಒಮ್ಮೆಯಾದರೂ ಕಣ್ಣು ಹಾಯಿಸಿಯೇ ಬರುವುದು. ಇದಕ್ಕೆ ಪ್ರಮುಖ ಕಾರಣ ಪ್ರತ್ಯೇಕವಾಗಿ ತಿಳಿಸಬೇಕಾಗಿಲ್ಲ ಅಲ್ಲವೇ! ಇದು ನನ್ನಲ್ಲಾಗಿರುವ (ಒಳ್ಳೆಯದೋ ಕೆಟ್ಟದ್ದೋ) ಮಹಾನ್ ಬದಲಾವಣೆ. ರಾಜಕಾರಣ ಕಬ್ಬಿಣದ ಕಡಲೆಯೇನಲ್ಲ ಎಂಬುದನ್ನು ನಾನು ಯೋಚಿಸಿದ್ದನ್ನೇ ಟಿವಿಯಲ್ಲಿ ಚರ್ಚಿಸುತ್ತಿರುವಾಗ ಅನಿಸುತ್ತದೆ. ಆದರೆ ಹೊರಗೆ ನಿಂತು ನೋಡಿದರೆ ರಾಜಕಾರಣ ತಮಾಷೆಯಾಗಿಯೂ ಅದ್ಭುತವಾಗಿಯೂ ಕಾಣುತ್ತದೆ! ಕೆಲವೊಮ್ಮೆ ಮುಖದಲ್ಲಿ ನಗುವನ್ನು ತರಿಸಿದರೂ(ಕಾಮನ್ ವೆಲ್ತ್) ಕೆಲವೊಮ್ಮೆ ಕಣ್ಣೀರು ತರಿಸುತ್ತದೆ(ಈರುಳ್ಳಿ). ಪ್ರಜಾಪ್ರಭುತ್ವವೆನ್ನುವುದು ನಮ್ಮ ದೇಶ ಕಂಡ ಅತಿ ದೊಡ್ಡ ದುರಂತ. ಪೇಪರುಗಳಲ್ಲಿ ಅಲ್ಲ ಅದನ್ನು ಕಾರ್ಯ ರೂಪಕ್ಕೆ ತಂದುದರಲ್ಲಿ. ಆದರೆ ಬ್ರಿಟೀಶರ ಕೈಯಲ್ಲಿ ಗುಲಾಮರಾಗಿರುವುದಕ್ಕಿಂತಲೂ ಇದು ಎಷ್ಟೋ ಪಾಲು ಒಳ್ಳೆಯದು ಎಂದೆನಿಸುತ್ತದೆ.

ರಜೆಗಳು ಎಂದಿನಂತೆ ಚೆನ್ನಾಗಿದ್ದವು. ಕೆಲವಂತೂ ಬದುಕಿಡೀ ನೆನೆದು ನೆನೆದು ನೆನೆ ಹಾಕಿದರೂ ಮೊಳಕೆಯೊಡೆಯುವಂಥವು. ಸಣ್ಣ ಪುಟ್ಟ ಆನಂದದ ಕ್ಷಣಗಳು ನನ್ನಂಥ ಸಾಮಾನ್ಯ ಮನುಷ್ಯನಿಗೆ ಅತ್ಯಂತ ಆಪ್ಯಾಯಮಾನವಾದವು. ಕೆಲಸದ ನಡುವೆ ವಾರಾಂತ್ಯದ ತಿರುಗಾಟ, ಬರ್ತ್ ಡೇ ಪಾರ್ಟಿಗಳು, ಸಿಸಿಡಿ ಕಾಫಿಗಳು ಮತ್ತೆಷ್ಟೋ ಸುಮಧುರ ನೆನಪುಗಳು ಮತ್ತೆ ಮತ್ತೆ ಮೆಲುಕು ಹಾಕುವಂಥವು. ಅದರಲ್ಲೂ ಟೈಟ್ ಶೆಡ್ಯೂಲ್ ಗಳಲ್ಲಿ ಕೆಲಸ ಮಾಡಿದ ಪ್ರಾಜೆಕ್ಟುಗಳ ಮಧ್ಯೆಯಂತೂ ಇದು ಸ್ವರ್ಗ ಸುಖ! ಈಗೀಗ ಸುತ್ತಾಟ ಸ್ವಲ್ಪ ಕಡಿಮೆಯಾಗಿದ್ದರೂ ಅಪರೂಪಕ್ಕೊಮ್ಮೆ ಹೊರಗೆ ಹೋದಾಗ ತುಂಬಾ ಖುಷಿಯಾಗುತ್ತದೆ.

ಕಳೆದ ವರ್ಷದ ಪ್ರತಿ ಅನುಭವವನ್ನು ಬರೆಯುವುದು ಸಾಧ್ಯವಿಲ್ಲ. ನನ್ನ ಮೆದುಳಿನ ಸ್ಟೋರೇಜ್ ಸೆಲ್ಲುಗಳೂ ಅಷ್ಟೇನೂ ಸಮರ್ಥವಲ್ಲ. ಕೆಲವು ನೆನಪಿದ್ದರೂ ಬರೆಯಲಾಗುವುದಿಲ್ಲ. ಆದರೆ ಈ ವರ್ಷ ’ನನಗೆ ಇದೇನಾ ಬೇಕಾಗಿರುವುದು?’ ’ಅಮ್ ಐ ಮೇಡ್ ಇಟ್ ಲಾರ್ಜ್(ರಾಯಲ್ ಸ್ಟಾಗ್ ಜಾಹೀರಾತಿನಿಂದ ಪ್ರೇರಿತ) ಎಂಬ ಮೂರ್ಖ ಪ್ರಶ್ನೆಗಳನ್ನು ಕೇಳಿ ನನಗೆ ಈಗ ಏನನ್ನಾದರೂ ಸಾಧಿಸಬೇಕೆಂಬ ಆಸೆ ಹುಟ್ಟಿದೆ. ಅದು ನಾನು ಕಾಣುತ್ತಿರುವ ಕನಸುಗಳನ್ನು ಸಾಕಾರಗೊಳಿಸುವುದು. ಇದು ನನ್ನ ಹೊಸ ವರ್ಷದ ರಿಸೊಲ್ಯೂಶನ್, ಆ ಶಬ್ದದಲ್ಲಿ ವಿಶ್ವಾಸವಿರದಿದ್ದರೂ!

ಎಲ್ಲರಿಗೂ ಪ್ರತಿ ವರ್ಷವೂ ಸುಖ ದುಃಖದ ಸಮ್ಮಿಲನವಾಗಿರುತ್ತದೆ. ನನಗೂ ಹಾಗೆಯೇ. ಆದರೆ ಮರೆಯಲಾಗದಿದ್ದರೂ ನೋವು ಕೊಡುವ ನೆನಪುಗಳನ್ನು ಮರೆಯಲು ಯತ್ನಿಸಬೇಕಿದೆ. ಆದರೂ ನೆನಪುಗಳು ಬದುಕಿನ ಅಮೃತ ಇದ್ದ ಹಾಗೆ. ಒಂದೊಮ್ಮೆ ನಾವು ಅತ್ತ ಕ್ಷಣಗಳನ್ನು ನೆನೆಸಿದಾಗಲೆಲ್ಲಾ ನಗು ಬರುತ್ತದೆ, ನಕ್ಕ ಕ್ಷಣಗಳೆಲ್ಲಾ ’ಈಗಿಲ್ಲವಲ್ಲಾ’ ಎಂದು ಅಳು ಬಂದು ಬಿಡುತ್ತದೆ. ಆದರೆ ನೆನಪುಗಳು ಎಂದಿಗೂ ವೃಂದಾವನದಂತೆ. ಅವು ನಿಮ್ಮನ್ನು ಭೂತಕಾಲದೊಂದಿಗೆ ಜೋಡಿಸುತ್ತವೆ. ಕೆಟ್ಟದಿರಲಿ ಒಳ್ಳೆಯದಿರಲಿ, ಖುಶಿಗೆ ಅಥವಾ ಮಾಡಿದ ತಪ್ಪುಗಳ ಪುನರಾವರ್ತನೆ ಆಗದಂತೆ ನೆನಪುಗಳು ಎಚ್ಚರಿಸುತ್ತವೆ. ನನಗಂತೂ ಹೊಸವರ್ಷವೆನ್ನುವುದು ಹಳೆಯದನ್ನು ಒಮ್ಮೆ ಮೆಲುಕು ಹಾಕಿ ಹೊಸ ನಡೆಯಿಡುವ ದಿನವೇ ಆಗಿದೆ. ನಿಮಗೆ?

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.

ಮೂಲ ಆಂಗ್ಲ ಬರಹ ಬ್ಲಾಗಿನಲ್ಲಿ

Rating
No votes yet

Comments