ನನ್ನ ಚಪ್ಪಲಿ ಅವಾಂತರ..

ನನ್ನ ಚಪ್ಪಲಿ ಅವಾಂತರ..

ಮೊನ್ನೆ ಏಕೋ ಇದ್ದಕ್ಕಿದ್ದಂತೆ ನಮ್ಮೂರಿಗೆ ಹೋಗೋ ಮನಸಾಯ್ತು. ಶುಭ ಕಾರ್ಯಕ್ಕೆ ತಡ ಏಕೆ ಹೊರಟೇ ಬಿಟ್ಟೆ.ರೈಲ್ನಲ್ಲಿ ಹೋಗುವುದೋ ಅಥವಾ ಬಸ್ಸಿನಲ್ಲೋ ಅನ್ನುವ ವಿಚಾರವಾಗಿ ಬಹಳ ಗಹನವಾಗಿ ಯೋಚಿಸಿದ ನಂತರ ರೈಲೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಮುಂಗಡ ಸ್ಥಳ ಇದೆಯಾ ಎಂದು ವಿಚಾರಿಸಿದೆ. ನನ್ನ ಅದೃಷ್ಟಕ್ಕೆ ಶಯನಾಸನಗಳು ಖಾಲಿ ಇದ್ದವು. ಒಂದು ಸ್ಥಳ ಕಾಯ್ದಿರಿಸಿದೆ.

ರಾತ್ರಿ ೧೧:೪೫ ಕ್ಕೆ ರೈಲು. ಬಸ್ಸು ಸಿಗಲಾರದೆಂದು ೧೦:೧೫ ಕ್ಕೇ ಮನೆಯಿಂದ ಹೊರಟೆ. ಕೆಲವೊಮ್ಮೆ ಗಂಟೆಗಟ್ಟಲೆ ಕಾದರೂ ಬರದ ಬಸ್ಸು ಅಂದು ನಾನಿಂತ ಐದೇ ನಿಮಿಷಕ್ಕೆ ಬಂತು. ೧೦:೪೫ರ ಒಳಗಾಗಿ ನಾನು ರೈಲ್ವೇ ಸ್ಟೇಷನ್ನಲ್ಲಿದ್ದೆ. ೧೧ ಗಂಟೆಗೆ ಸರಿಯಾಗಿ ಟ್ರೈನ್ ಬಂತು. ರಾತ್ರಿ ಹನ್ನೊಂದಾದರೂ ತಂಪಾಗದ ವಾತವರಣ ಬೇಸಿಗೆ ಕಾಲದ ಮುನ್ಸೂಚನೆ ನೀಡುತ್ತಿತ್ತು. ನನ್ನದು ಅಪ್ಪರ್ ಬರ್ತ್ ಬೇರೆ , ಅಲ್ಲಿ ಗಾಳಿ ಕಡಿಮೆ ಹಾಗು ಸೆಖೆ ಜಾಸ್ತಿ. ಹೇಗಪ್ಪ ಮೇಲೆ ಮಲಗೋದು ಅಂತ ಯೋಚಿಸುತ್ತಿರುವಾಗಲೇ ನನ್ನ ಕೆಳಗಿನ ಆಸನದ ಜನ ಬಂದರು. (ಇಬ್ಬರು ಹೆಂಗಸರು ಮತ್ತು ಒಬ್ಬ ಹುಡುಗ ಪ್ರಾಯಶಃ ೧೦ನೆ ತರಗತಿ ಅನ್ಸುತ್ತೆ) . ನಾನು ನನ್ನ ಚಪ್ಪಲಿ ಕಳಚಿ ನನ್ನ ಆಸನದಲ್ಲಿ ಒರಗಿಕೊಂಡೆ. ನಿದ್ದೆ ಯಾವಾಗ ಬಂತೋ ಗೊತ್ತಿಲ್ಲ, ಮಧ್ಯೆ ಯಾಕೋ ಎಚ್ಚರ ಆಯ್ತು. ನನ್ನ ಚಪ್ಪಲಿ ಕೆಳಗಡೆ ಇದೆಯಾ ಅಂತ ಖಚಿತಪಡಿಸಿಕೊಂಡು ಮತ್ತೆ ಮಲಗಿದೆ.

ಆಮೇಲೆ ಎಚ್ಚರವಾದಾಗ ರೈಲು ಶಿವಮೊಗ್ಗದಲ್ಲಿ ನಿಲ್ಲುತ್ತಿತ್ತು. ಕೆಳಗಡೆ ಆಸನದ ಮಹನೀಯರು ಮತ್ತು ಮಹಿಳೆಯರು ಹೋಗಲೆಂದು ನನ್ನ ಸೀಟ್ನಲ್ಲೆ ಕಾದೆ. ಅವರೆಲ್ಲ ಹೋದನಂತರ ಮೇಲಿಂದಲೇ ನನ್ನ ಚಪ್ಪಲಿಗಾಗಿ ಹುಡುಕಿದೆ, ಕಾಣಲಿಲ್ಲ . ಗಾಬರಿಯಾಗಿ ಕೆಳಗಡೆ ಇಳಿದು ನೋಡಿದೆ, ಒಂದು ಸೀಟ್ ನ ಮೂಲೆಯಲ್ಲಿ ಒಂದು ಚಪ್ಪಲಿ ಸಿಕ್ಕಿತು. ಕಳ್ಳತನವಾಗಿಲ್ಲ ಅನ್ನೋ ಧೈರ್ಯ ಬಂತು. ಇನ್ನೊಂದು ಚಪ್ಪಲಿಗಾಗಿ ಹುಡುಕಾಡಿದೆ, ಊಹೂಂ ಇರಲಿಲ್ಲ. ಇನ್ನೊಂದು ಸೀಟ್ ನ ಕೆಳಗಡೆ ನೋಡಿದರೆ ನನ್ನ ಚಪ್ಪಲಿಯ ರೀತಿಯದ್ದೇ ಇನ್ನೊಂದು ಚಪ್ಪಲಿ ಇತ್ತು. ಆಗ ನನಗೆ ಅರ್ಥ ಆಯಿತು . ಓಹೋ ಕೆಳಗಡೆ ಸೀಟ್ ನಲ್ಲಿ ಮಲಗಿದ್ದ ಆ ೧೦ನೆ ತರಗತಿಯ ಹುಡುಗ ನನ್ನ ಒಂದು ಚಪ್ಪಲಿ ಹಾಗೂ ಅವನ ಇನ್ನೊಂದು ಚಪ್ಪಲಿ ಹಾಕಿಕೊಂಡು ಹೋಗಿದ್ದಾನೆ ಅಂತ !. ಅವನನ್ನು ಮನಸ್ಸಿನಲ್ಲಿ ಒಂದಿಷ್ಟು ಬೈದುಕೊಂಡು ಅವನ ಚಪ್ಪಲಿಯನ್ನು ಸರಿಯಾಗಿ ನೋಡಿದೆ ಎರಡೂ ಎಡಗಾಲಿನ ಚಪ್ಪಲಿ !! .ಅವನು ಎರಡೂ ಬಲಗಾಲಿನ ಚಪ್ಪಲಿ ಹಾಕಿಕೊಂಡು ಹೋಗಿದ್ದ (ಬುದ್ದಿವಂತ ಮಹಾಶಯ).ಸುಮ್ಮನೆ ಅವನ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡು ನೋಡಿದೆ, ಅವನ ಚಪ್ಪಲಿ ತುಂಬಾ ಸಣ್ಣ !!!.

ರೈಲ್ವೇ ನಿಲ್ದಾಣದ ಸ್ಥಿತಿ ನೋಡಿ ಬರಿಗಾಲಲ್ಲಿ ನನಗೆ ಹೋಗಲು ಮನಸಾಗಲಿಲ್ಲ. ಆಕಡೆ ಈಕಡೆ ನೋಡಿ ಯಾರೂ ನೋಡಿಲ್ಲ ಅನ್ನೋದನ್ನ ಖಾತ್ರಿ ಪಡಿಸಿಕೊಂಡು ಮನೆ ಕಡೆ ನಡೆದೆ. ನಂತರ ಮಾಡಿದ ಮೊದಲನೆ ಕೆಲಸ ಅಂದ್ರೆ ಹೊಸ ಚಪ್ಪಲಿ ಖರೀದಿಸಿದ್ದು.

Rating
No votes yet