ಡಾ.ವಿಷ್ಣುವರ್ಧನ

ಡಾ.ವಿಷ್ಣುವರ್ಧನ

ಬರೀ ಸಂಪತ್ ಕುಮಾರ್ ಎಂದರೆ ಬಹಳಷ್ಟು ಮಂದಿಗೆ ಯಾರೆಂದು ಗೊತ್ತಾಗುವುದಿಲ್ಲ. ಅದೇ ವಿಷ್ಣುವರ್ಧನ್ ಎಂದರೆ ಗೊತ್ತಿರದೇ ಇರದ ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ ಆತ ನೀಡಿದ ಅಮೂಲ್ಯ ಕೊಡುಗೆ. ಮೂರು ದಶಕಕ್ಕೂ ಹೆಚ್ಚು ಕಾಲ ಬೆಳ್ಳಿ ಪರದೆಯ ಮೇಲೆ ರಾರಾಜಿಸಿದ ಅದ್ಭುತ ಸ್ಪುರದ್ರೂಪಿ ನಟ ಡಾ. ವಿಷ್ಣುವರ್ಧನ್.


ವಿಷ್ಣುವರ್ಧನ್ ಹುಟ್ಟಿದ್ದು ಮೈಸೂರಿನ ಚಾಮುಂಡಿಪುರಂ ನಲ್ಲಿ ಸೆಪ್ಟೆಂಬರ್ ೧೮ ೧೯೫೦ ರಂದು. ಗಿರೀಶ್ ಕಾರ್ನಾಡ್ ನಿರ್ದೇಶನದ ವಂಶವೃಕ್ಷ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಪತ್ ಕುಮಾರ್, ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ವಿಷ್ಣುವರ್ಧನ ಆದರು. ನಾಗರಹಾವು ತಂದು ಕೊಟ್ಟ ಯಶಸ್ಸು ಚಿಗುರು ಮೀಸೆಯ ಹುಡುಗ ರಾಮಾಚಾರಿ ಪಾತ್ರದಲ್ಲಿ ಮಿಂಚಿದ ವಿಷ್ಣುವರ್ಧನ್ ಗೆ ಒಂದು ಭದ್ರ ನೆಲೆ ಒದಗಿಸಿಕೊಟ್ಟಿತು. ಅಲ್ಲಿಂದ ವಿಷ್ಣು ತಿರುಗಿ ನೋಡಲೇ ಇಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡರು.  ಮೂರು ದಶಕಗಳಲ್ಲಿ ೨೦೦ ಚಿತ್ರಗಳಲ್ಲಿ ನಟಿಸಿ ಡಾ.ರಾಜಕುಮಾರ್ ನಂತರ ಕನ್ನಡದಲ್ಲಿ ಹೆಚ್ಚು ಜನಮನ್ನಣೆ ಪಡೆದ ನಟ ಎಂಬ ಖ್ಯಾತಿಗೆ ಪಾತ್ರವಾಗಿದ್ದರು.


ವಿಷ್ಣು ಅಭಿನಯ ಎಂದರೆ ಅಭಿಮಾನಿಗಳಿಗೆ ಒಂದು ರೀತಿ ಕುಶಿ. ಯಾವುದೇ ಪಾತ್ರವಾದರೂ ಆ ಪಾತ್ರಕ್ಕೆ ಜೀವ ತುಂಬುವಂತ ನಟ ವಿಷ್ಣು. ಆತನ ಸಂಭಾಷಣೆಯ ಶೈಲಿ, ಆತನ ಕೈ ಕಡಗ ತಿರುಗಿಸುವ ಶೈಲಿ ಎಲ್ಲವೂ ವಿಭಿನ್ನ. ವಿಷ್ಣು ಅವರ ಅಧ್ಬುತ ಅಭಿನಯಕ್ಕೆ ಕನ್ನಡಿ ಹಿಡಿದ ಚಿತ್ರಗಳೆಂದರೆ ನಾಗರಹಾವು, ಭೂತಯ್ಯನ ಮಗ ಅಯ್ಯು,ಬಂಧನ, ಮುತ್ತಿನಹಾರ, ನಾಗರ ಹೊಳೆ, ನಿಷ್ಕರ್ಷ, ಯಜಮಾನ, ಆಪ್ತಮಿತ್ರ ಇನ್ನೂ ಹಲವಾರು. ಆಪ್ತರಕ್ಷಕ ವಿಷ್ಣು ಅಭಿನಯದ ಕೊನೆಯ ಚಿತ್ರ.  ವಿಷ್ಣು ಅವರ ಚಿತ್ರಗಳೆಂದರೆ ಮನೆಮಂದಿಯೆಲ್ಲ ಕುಳಿತು ನೋಡುವ ಚಿತ್ರಗಳಾಗಿತ್ತು. ವಿಷ್ಣು ಅವರು ಬೆಳ್ಳಿ ತೆರೆಯಷ್ಟೇ ಅಲ್ಲದೆ ಕಿರುತೆರೆಯಲ್ಲಿ ನಮ್ಮ ಕರಾಟೆಕಿಂಗ್ ಶಂಕರಣ್ಣ ನಿರ್ದೇಶಿಸಿದ ಮಾಲ್ಗುಡಿ ಡೇಸ್ ನಲ್ಲೂ ಅಭಿನಯಿಸಿದ್ದರು. ವಿಷು ಅವರು ನಟನೆಯಷ್ಟೇ ಅಲ್ಲದೆ ಗಾಯನದಲ್ಲೂ ಮಿಂಚಿದ್ದರು. ವಿಷ್ಣು ಅವರು ಹಾಡಿದ ನನ್ನ ಮೆಚ್ಚಿನ ಹಾಡುಗಳು ಜಿಮ್ಮಿಗಲ್ಲು ಚಿತ್ರದಿಂದ ತುತ್ತು ಅನ್ನ ತಿನ್ನೋಕೆ, ಹಾಗೆ ಮೋಜುಗಾರ ಸೊಗಸುಗಾರ ಚಿತ್ರದ ಕನ್ನಡವೇ ನಮ್ಮಮ್ಮ.


ಈ ಆಪ್ತಮಿತ್ರ ನಮ್ಮನ್ನಗಲಿ ಇಂದಿಗೆ ಸರಿಯಾಗಿ ಒಂದು ವರ್ಷ. ಅವರು ಇಂದು ನಮ್ಮೊಡನೆ ಇಲ್ಲದಿದ್ದರೂ ಅವರ ಚಿತ್ರಗಳ ಮೂಲಕ ಅವರು ಇನ್ನೂ ಜೀವಂತವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ

Comments