ಕಿಚ್ಚು :: ಭಾಗ - ೧೩ (ಕೊನೆಯ ಕಂತು)

ಕಿಚ್ಚು :: ಭಾಗ - ೧೩ (ಕೊನೆಯ ಕಂತು)

ಕಿಚ್ಚು :: ಭಾಗ - ೧೩ (ಕೊನೆಯ ಕಂತು)
 

ಹಿಂದಿನ ಕಂತು : http://sampada.net/blog/kamathkumble/28/12/2010/29735

 

 

೨೪

 

 

ಯಾವುದೇ ಚಿಂತೆ ಇರದ ಮಡದಿ ಮತ್ತು ೩ ವರುಷದ ಒಂದು ಮಗುವಿನೊಂದಿಗೆ ಸುಖದ ಜೀವನ ನಡೆಸುತ್ತಿದ್ದೆ. ಸ್ವರ್ಗವೇ ನಮ್ಮ ಮನೆಯಲ್ಲಿ ನಲಿಯುತ್ತಿತ್ತು.ಹೀಗಿರಲು ಒಂದು ದಿನ ನನ್ನ ರಮ್ಯ ಕಡಲಿನಲ್ಲಿ ಬ್ರಹತ್ ಅಲೆಯೇ ಅಪ್ಪಳಿಸಿತು. ಒಂದೇ ವೇಗದಲ್ಲಿ ಸಾಗುತ್ತಿದ್ದ ಪುಟ್ಟ ಬಾಳನೌಕೆ ಸುಂಟರಗಾಳಿಗೆ ಸಿಕ್ಕಿ ತತ್ತರಿಸಿ ಹೋಯಿತು.

ಜೀವಾವದಿ ಶಿಕ್ಷೆಗೆ ಒಳಗಾಗಿದ್ದ ನನ್ನ ಅಮ್ಮ ಜೀವನದಲ್ಲಿ ನೊಂದು ತನ್ನ ಬಂಧಿಕೋಣೆಯಲ್ಲೇ ಕೊನೆ ಉಸಿರು ಎಳೆದರು ಎಂಬ ವಾರ್ತೆಯನ್ನು ಗಣೇಶಣ್ಣ ಫೋನ್ ಮಾಡಿ ತಿಳಿಸಿದ್ದರು.ಇಲ್ಲಿವರೆಗೆ ನನ್ನ ಪೂರ್ವಾಪರ ತಿಳಿದಿರದ ನನ್ನ ಪತ್ನಿ ಸ್ವರ್ಣಲತಾಳಿಗೆ ಈಗ ನನ್ನ ಹಿನ್ನಲೆ ತಿಳಿಸುವುದು ಅನಿವಾರ್ಯವಾಗಿತ್ತು.

ಊರಿನಲ್ಲಿ ಸೂರಿರದೆ ನಾನು ರಾಮುನೊಂದಿಗೆ ಅವನ ಕೋಣೆಯಲ್ಲೇ ೨ ವಾರ ಕಳೆದೆ. ವಸುಗಾಗಿ ಆ ಎರಡು ವಾರದಲ್ಲಿ ಹುಡುಕದ ಸ್ಥಳವಿರಲಿಲ್ಲ, ಆದರೆ ಅವಳು ನನಗೆ ಸಿಗಲೇ ಇಲ್ಲ. ಅದೇ ಸಮಯದಲ್ಲಿ ನಾನು ಹುಟ್ಟಿ ಬೆಳೆದ ಮನೆಗೆ ಒಂದು ಬಾರಿ ಭೇಟಿ ನೀಡಿ ಅವರ ದಿನಚರಿಯನ್ನು ದೂರದಿಂದಲೇ ನೋಡಿದೆ, ವಸಂತನು ೫  ನೇ ತರಗತಿಯಲ್ಲಿ ಓದುತ್ತಿದ್ದನು, ನನ್ನ ಹಿರಿ ತಂಗಿ ಧನು ೬ ಕ್ಕೆ ಶಾಲೆ ನಿಲ್ಲಿಸಿ ಅಕ್ಕ ಪಕ್ಕದವರ ಮನೆಗೆಲಸಕ್ಕೆ ಹೋಗಿ ಉಳಿದ ೭ ಮಂದಿಯ ಹೊಟ್ಟೆಯ ಭಾರ ಹೊತ್ತಿದ್ದಳು, ನಾನು ಅವಳ ಮುಂದೆ ಹೋದಾಗ ನನ್ನ ಸಂಭಂದವನ್ನೇ ನಿರಾಕರಿಸಿದಳು.ನನ್ನೆವರೆಂದು ಇದ್ದ ಎಲ್ಲರೂ ನನ್ನಿಂದ ದೂರವಾದ ಮೇಲೆ ಊರಿನಲ್ಲಿ ಇರಲು ಮನಸಿರಲಿಲ್ಲ, ಉರು ಬಿಟ್ಟು ಮತ್ತೆ ಮುಂಬೈ ಸೇರಿದೆ.

ರಾಮರಾಯರ ಮೇಲೆ ಅಂದು ಅವರು ನನಗೆ ಊರಿಗೆ ಹೋಗಲು ಬಿಡದ ಕಾರಣ ಇಲ್ಲದ ಧ್ವೆಶವಿತ್ತು, ಅದೇ ಕಾರಣಕ್ಕಾಗಿ ಅವರ ಹೋಟೆಲಿನ ಕೆಲಸ ಬಿಟ್ಟಿದ್ದೆ. ಮುಂಬೈನ ಜೀವನಕ್ಕೆ ಹೊಂದಿಕೊಂಡಿದ್ದ ನನಗೆ ಹೊಸ ಕೆಲಸ ಹುಡುಕುವುದು ಕಷ್ಟವಾಗಲಿಲ್ಲ, ಅವರ ಬೆಂಗಳೂರಿನ ಪ್ರತಿಸ್ಪರ್ಧಿ ಪ್ರಭಾತ್ ಹೋಟೆಲ್ ನವರು ಆಗತಾನೆ ಮುಂಬೈನಲ್ಲಿ ಹೊಸ ಹೋಟೆಲ್ ಶುರು ಮಾಡಿರುವ ವಿಚಾರ ತಿಳಿಯಿತು. ಪ್ರಭಾತ್ ಹೋಟೆಲ್ ನ ಮಾಲೀಕ ಪ್ರಭಾಕರ್ ರಾಮರಾಯರ ದಾಯಾದಿ. ಅವರ ಹೋಟೆಲ್ ನಲ್ಲಿ ಕೆಲಸ ಗಿಟ್ಟಿಸಿಕ್ಕೊಂಡೆ.

ಅರ್ಥವಿರದ ಸಂಪಾದನೆ ನನ್ನದಾಗಿತ್ತು,ಎಲ್ಲಾ ಖರ್ಚು ಹೋಟೆಲ್ನಲ್ಲಿ ಸಾಗುತಿತ್ತು. ಹಣದ ಮೋಹ ಕಮ್ಮಿ ಯಾಗಿತ್ತು, ಸಂಪಾದಿಸಿದ ಹಣ ಮನೆಯವರು ಸ್ವೀಕರಿಸಲು ಒಲ್ಲೆ ಅಂದ ಮೇಲೆ ಯಾರಿಗಾಗಿ ಸಂಪಾದಿಸಲಿ ಎಂಬ ಭಾವವು ಹುಟ್ಟಿತು,ಅದೇ ಸಮಯದಲ್ಲಿ ಮುಂಬೈನ ಒಂದು ಅನಾಥಾಶ್ರಮದ ಸಂಪರ್ಕ ಬೆಳೆಯಿತು. ನನ್ನ ಸಂಪಾದನೆಯನ್ನು ಆ ಅನಾಥರ ಬಾಳಿಗೆ ಕೊಡಲು ಶುರು ಮಾಡಿಕ್ಕೊಂಡೆ.

ಆ ಅನಾಥಾಶ್ರಮದಲ್ಲಿ ಅದೆಷ್ಟೋ ನತದೃಷ್ಟರಿದ್ದರು, ಅಂಥವರಲ್ಲಿ ಸ್ವರ್ಣಲತಾ ಒಬ್ಬಳು. ಕನ್ನಡದ ಹುಡುಗಿ. ಅವಳೂ ಹುಚ್ಚು ಪ್ರೀತಿಯ ಮಾಯಾ ಬಲೆಗೆ ಸಿಕ್ಕಿ ಮುಂಬೈ ಸೇರಿದವಳು. ಪ್ರೀತಿಯ ನಾಟಕ ಆಡಿ ಯಾವನೋ ಮಹಾನುಭಾವ ಅವಳನ್ನು ದೇಹಮಾರಾಟದ ಧಂದೆಗೆ ಮಾರಿದ್ದ, ಅಲ್ಲಿಂದ ಹೇಗೋ ತಪ್ಪಿಸಿಕ್ಕೊಂಡು ಬಂದ ಆ ಹುಡುಗಿ ಈ ಆಶ್ರಮ ಸೇರಿದ್ದಳು. ಎಲ್ಲಾ ಅನಾಥರಲ್ಲಿ ತೋರಿಸುತ್ತಿದ್ದ ಪ್ರೀತಿಯನ್ನು ಅವಳಲ್ಲಿಯೂ ತೋರಿಸಿದ್ದೆ ಆದರೆ ದಿನ ಕಳೆದಂತೆ ಒಬ್ಬೊರಿಗೊಬ್ಬರು ಅನ್ಯೋನ್ಯರಾಗುತ್ತ ಹೋದೆವು, ಜವಾಬ್ಧಾರಿ ಹೊತ್ತ ಪ್ರಭುದ್ದ ಮನಸ್ಸು ಪ್ರಭುದ್ದ ಪ್ರೀತಿ,ಅದರ ಗಾಂಭೀರ್ಯ, ಮತ್ತು ಆಘಾತತೆ ಅರ್ಥ ಮಾಡಿಕ್ಕೊಂಡಿತ್ತು.

ವಸುಂದರ ಮತ್ತು ನನ್ನಲ್ಲಿನ ಹದಿಹರೆಯದ ಹುಚ್ಚು ಪ್ರೀತಿ ಅದಾಗಿರಲಿಲ್ಲ, ಒಬ್ಬರನ್ನೊಬ್ಬರು ಅಗಲಿ ಇರಲಾರದ ಪ್ರೌಡ ಪ್ರೀತಿ ಅದಾಗಿತ್ತು. ಇಲ್ಲಿ ನಮ್ಮ ಪ್ರೀತಿಗೆ ಶತ್ರುಗಳ ಕಾಟವು ಇರಲಿಲ್ಲ.
ಮುಂದಿನ ೨ ವರ್ಷದಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡಾದ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದೆವು, ಅನಾಥಾಶ್ರಮದವರ ಮಧ್ಯಸ್ತಿಕೆಯಲ್ಲಿ ಮದುವೆಯೂ ಆಯಿತು.

ಸುಖಸಂಸಾರವನ್ನು ಶುರುಮಾಡಿದೆವು.ಪುಟ್ಟ ಜೀವನ್ ನ ಆಗಮನವೂ ಆಯಿತು,ಇವೆಲ್ಲದರ ನಡುವೆ ನನ್ನ ಹಿಂದಿನ ದಿನಗಳು ಮೆಲ್ಲನೇ ಮರೆಯಾದವು.

ಇಲ್ಲಿವರೆಗೆ ನನ್ನ ಹಿನ್ನಲೆಯನ್ನು ನಾನು ಅವಳಲ್ಲಿ ಹೇಳಿರಲಿಲ್ಲ ಆದರೆ ಇವತ್ತು ಬಂದ ಗಣೇಶಣ್ಣನ ಕರೆ ಸ್ವರ್ಣಲತಾಳಿಗೆ ನನ್ನ ಪೂರ್ವಾಪರ ಹೇಳಲೇ ಬೇಕಾಯಿತು, ಅವಳಲ್ಲಿ ನನ್ನ ಹದಿಹರೆಯದಲ್ಲಿ ನಡೆದ ಎಲ್ಲಾ ಕಥೆ, ನನ್ನ ವಸುಂದರನ ಪ್ರೀತಿ, ಮನೆಯವರ ವಿರೋಧ, ಇದೇ ವಿಚಾರಕ್ಕಾಗಿ ನಡೆದ ಅಪ್ಪನ ಕೊಲೆ , ಅಮ್ಮನ ಸೆರೆವಾಸ, ಮುಂಬೈ ಜೀವನ, ವಸುಂದರನ ಅಗಲಿಕೆ, ಅವಳ ಹೆತ್ತವರ ಅವಸಾನ ಎಲ್ಲವನ್ನು ಹೇಳಿದೆ.

ಸ್ವರ್ಣಲತಾಳ ಪಾಲಿಗೆ ಈಗ ನಾನು, ಅವಳನ್ನು ೮ ವರ್ಷ ಹಿಂದೆ ಮೋಸಮಾಡಿದ ಆ ಮಹಾನುಭಾವ ಇಬ್ಬರೂ ಒಬ್ಬರಂತೆ ಕಂಡೆವು , ನನ್ನಲ್ಲಿ  ಅವಿತಿದ್ದ ರಾಕ್ಷಸ ಅವಳ ಕಣ್ಣಿಗೆ ಬಿದ್ದ, ಆ ರಾಕ್ಷಸ ಮತ್ತೆ ನಮ್ಮ ಸುಖಸಂಸಾರದ ಬಾಳನೌಕೆಯನ್ನು ಮುಳುಗಿಸಿ ಬಿಟ್ಟ. ೫ ವರುಷದ ಗಂಡ ಹೆಂಡತಿ ಎಂಬ ಮತ್ತೊಂದುಕ್ಕೊಂಡಿ ನನ್ನ ಜೀವನ ಸರಪಳಿಯಿಂದ ಕಳಚಿಕ್ಕೊಂಡಿತು, ೩ ವರುಷದ ಜೀವನ್ ನೊಂದಿಗೆ ನನ್ನಿಂದ ದೂರ ಹೋದಳು.


೨೫
 


ನನ್ನ ಈ ೨೫ ವರುಷದಲ್ಲಿ ಹದಿಯರೆಯದಲ್ಲಿ ವಸುಂದರ ಹಚ್ಚಿದ ಪ್ರೇಮಜ್ಯೋತಿ ಜೀವನವನ್ನೇ ಸುಟ್ಟು ಹಾಕಿತ್ತು, ನಾನು ಯಾವ ಹೆಜ್ಜೆ ಇಟ್ಟರು ಅದು ಅಲ್ಲಿ ತನ್ನ ಅಸ್ತಿತ್ವ ತೋರಿಸುತಿತ್ತು, ಇಬ್ಬರ ಮನೆಯವರನ್ನೂ ಅವರ ಜೀವನವನ್ನೂ ಅದು ಬಲಿ ತೆಗೆದುಕ್ಕೊಂಡಿತ್ತು, ನನ್ನಿಬ್ಬರ ಆ ಹುಚ್ಚು ಕೋತಿ ಮನಸ್ಸಿನ ಹದಿಹರೆಯ ಇಡಿ ಜೀವನ ಸುಡುವ ಕಿಚ್ಚಾಯಿತು , ಸ್ವರ್ಣಲತಾ ನನ್ನನ್ನು ಬಿಟ್ಟು ಹೋದ ಬಳಿಕ ಪ್ರೀತಿ-ಪ್ರೇಮದಲ್ಲಿ ನಂಬಿಕೆ ಹೊರಟು ಹೋಯಿತು. ಜೀವನ ಬೇರೆಯವರ ಸೇವೆಗೆ ಮೀಸಲಿಟ್ಟೆ, ಬೇರೆಯವರ ನಗುವಲ್ಲಿ ನನ್ನ ನಗುವನ್ನು ಕಾಣಲು ಆರಂಭಿಸಿದೆ.ಹೋಟೆಲ್ ನಲ್ಲಿ ಮಾಣಿಯಾಗಿ ದುಡಿಯುವುದನ್ನು ಬಿಟ್ಟೆ, ನನ್ನದೇ ಆದ ಅನ್ನಪೂರ್ಣ ಕೆಟೆರರ್ಸ್ ಶುರು ಮಾಡಿಕ್ಕೊಂಡೆ.ಮದುವೆ ಮುಂಜಿಯಲ್ಲಿ ಬರುತ್ತಿದ್ದ ಲಾಭವನ್ನು ಮುಂಬೈನ ಅದೆಷ್ಟೋ ಹಸಿದ ಅನಾಥ ಹೊಟ್ಟೆ ತುಂಬಿಸುವಲ್ಲಿ ವಿನಿಯೋಗಿಸಲು ಆರಂಭಿಸಿದೆ. ನನ್ನ ಜೀವನದಲ್ಲಿ ಸಹಾಯಹಸ್ತದ ಸಾರ್ಥಕತೆ ನೋಡಲು ಆರಂಭಿಸಿದೆ.

ಪ್ರತಿ ಹೆಜ್ಜೆಯಲ್ಲೂ ಆ ಹದಿಹರೆಯದ ಹುಚ್ಚು ಪ್ರೀತಿ ನೆನಪಾಗುತಿತ್ತು, ಅಂದು ನಾವು ಆ ಹುಚ್ಚು ನಿರ್ಧಾರ ತೆಗೆಯದೆ ಇದ್ದರೆ ನಾನು - ವಸು ಸುಖ ಜೀವನ ನಡೆಸುತ್ತಿದ್ದೆವು ಎಂದು ಪ್ರತಿ ಕ್ಷಣ ಮನ ಕೊರಗುತ್ತಿತ್ತು, ಆ ಹುಚ್ಚು ಪ್ರೀತಿಯೇ ಸರ್ವಸ್ವ ಎಂಬ ವಾದ ಎಲ್ಲಾ ಸಂಭಂದವನ್ನು ಸುಟ್ಟು ಹಾಕಿತ್ತು, ನನ್ನವರು ಎನಿಸಿದವರು ನನ್ನಿಂದ ದೂರವಾದರು. ನಮ್ಮ ಜೀವನದ ಕನಸು ಕಾಣುವ ವಯಸ್ಸಲ್ಲಿ ಜೀವನವೇ ಇದು ಎಂದು ನಿರ್ಧಾರ ತೆಗೆದುಕ್ಕೊಂಡಿದ್ದೆವು, ಅದೇ ನಿರ್ಧಾರ ನಮ್ಮಿಬ್ಬರ ಜೀವನಕ್ಕೆ ಮುಳ್ಳಾಯಿತು. ಮನಸ್ಸು ಶರೀರ ಜವಾಬ್ಧಾರಿ ತೆಗೆದು ಕೊಳ್ಳುವಷ್ಟು ಪಕ್ವ ವಾಗಿರಲಿಲ್ಲ ಆ ವಯಸ್ಸಿನ್ನಲ್ಲಿ ಜವಾಬ್ಧಾರಿಯನ್ನು ವಿನಾಕಾರಣ ನಮ್ಮ ಮೈಮೇಲೆ ಎಳೆದು ಕೊಂಡಿದ್ದೆವು  ಆ ಭಾರ ಹೊರಲಾಗದೆ ಇಬ್ಬರೂ ಕುಸಿದು ಬಿದ್ದೆವು.

ಇಬ್ಬರ ನಡುವೆ ಏನಾದರು ವೈಮನಸ್ಯ ಬಂದಾಗ ಸಮಾಧಾನಿಸಲು ಮತ್ತು ಆ ವೈಮನಸ್ಯ ಬಗೆಹರಿಸಲು ಯಾರು ನಮ್ಮಿಬ್ಬರ ನಡುವೆ ಇರದೇ ಹೋದರು, ಗಾಳಿ ಬರುವ ದಿಕ್ಕಿಗೆ ಬಾಗುವ ಜ್ಯೋತಿಯಂತಹ  ಪುಟ್ಟ ಮನಸ್ಸು, ಬದುಕ ಪರೀಕ್ಷೆ ಎದುರಿಸಲಾಗದೆ ನಂದಿ ಹೋಯಿತು, ಹಿರಿಯರು ನಮ್ಮಿಬ್ಬರ ಪ್ರೀತಿಗೆ ಕಾವಲಿದ್ದರೆ ಆ ದೀಪವನ್ನು ನಂದದಂತೆ ನೋಡಿಕ್ಕೊಳ್ಳುತ್ತಿದ್ದರು. ನಂದುವ ದೀಪಕ್ಕೆ ಆಸರೆ ನೀಡುವ ದೂರವಾದ ಸಂಭಂದದ ಕೈಗಳು ಕೊನೆಗೂ ಬಾರದೆ ಹೋಯಿತು.ಮುಳುಗುವ ಜೀವನ ನೌಕೆ ಅದರಷ್ಟಕ್ಕೆ ಮುಳುಗಿತೇ ವಿನಃ ಮತ್ತೆ ಸುಳಿ ದಾಟಲು ಸಾಧ್ಯವಾಗಲಿಲ್ಲ.

ಜವಾಬ್ಧಾರಿ ಹೊರಬೇಕಾದ ಮಗನ ಬೇಜವಾಬ್ಧಾರಿ ನಿರ್ಧಾರಕ್ಕೆ ವಿನಾಕಾರಣ ಅಪ್ಪ ಅಮ್ಮ ನ ಜಗಳ ನಡೆದು ಹೋಯಿತು, ಪ್ರೀತಿಗೆ ಮನೆಯಜಮಾನ ಬಲಿಯಾದರೆ ಜವಾಬ್ಧಾರಿ ಹೊತ್ತ ಹೆತ್ತಮ್ಮ ಖೈದಿ ಯಾದಳು, ತಂಗಿ ತಮ್ಮಂದಿರ ಬಾಳು ಬೀದಿಗೆ ಬಂತು.

ಮಗಳ ನಿರ್ಧಾರದಿಂದ ಅಮ್ಮ ಹುಚ್ಚಿ ಆದರೆ ಅಪ್ಪ ತನ್ನ ದೇಹಕ್ಕೆ ತಾನೆ ಶಿಕ್ಷಿಸಿಕ್ಕೊಂಡ, ಮಗಳಿಗಾಗಿ ಸಂಪಾದಿಸಿದ ಸರ್ವಸ್ವ ತಮ್ಮನ ಪಾಲಾಯಿತು. ಸುಖದ ಸುಪ್ಪತ್ತಿನಲ್ಲಿದ್ದ ಮಗಳು ಕಾಲ ಕೆಳಗಿನ ಕಸವಾದಳು.

ಸಹಾಯಕ್ಕೆ ಬಂದ ಯಶೋದಮ್ಮ ನಮ್ಮಿಬ್ಬರ ಹುಚ್ಚು ಪ್ರೀತಿಗೆ ವಿನಾಕಾರಣ ಮನಸ್ಸಿನ ಗೊಂದಲದ ಸುಳಿಯ ಮೀನಾದರು, ರಾಮರಾಯರು ಸಂಧರ್ಭ ಕೊಟ್ಟ ಶಿಕ್ಷೆಗೆ ಮಗನಂತಹ ನನ್ನ-ಅವರ  ಸಂಭಂದಕ್ಕೆ ತೆರೆ ಎಳೆಸಿಕ್ಕೊಂಡರು.

ನನ್ನನ್ನು ನಂಬಿ ಹೆಂಡತಿಯಾಗಿ ಬಂದ ಸ್ವರ್ಣಲತಾ ನನ್ನ ನಿಜ ಅಸ್ತಿತ್ವ ತಿಳಿದ ಬಳಿಕ ಶತ್ರುವಾಗಿ ನನ್ನಿಂದ ದೂರವಾದಳು.

ಒಂದು ಪುಟ್ಟ ಜ್ಯೋತಿ ಇಬ್ಬರ ಜೀವನವನ್ನೇ ಸುಟ್ಟು ಬಿಟ್ಟ ಕಿಚ್ಚಾಯಿತು.

ನನ್ನ ಬಿಟ್ಟು ಹೋದ ವಸುಂದರ ತನ್ನ ಓದನ್ನು ಮುಂದುವರಿಸಿದಳು, ಬೆಳಗ್ಗಿನ ಹೊತ್ತಲ್ಲಿ ಕೆಲಸಕ್ಕೆ ಹೋಗಿ ಸಂಜೆ ತರಗತಿಯಲ್ಲಿ ಕಾಲೇಜ್ ಮುಗಿಸಿದಳು, IAS  ಅನ್ನು ಪಾಸ್ ಮಾಡಿದಳು, ತನ್ನ ಬಾಲ್ಯದ ಕನಸನ್ನು ನನಸು ಮಾಡಿದಳು.



೨೬

ಇಬ್ಬರೂ  ಜೊತೆಯಾಗಿ ಕಳೆದ ಆ ೨೫ ವರ್ಷಗಳು ಹಾಗೆಯೇ ತೆಲಿಹೊದಂತೆ ಆಯಿತು, ಈಗ ಒಬ್ಬರು ಇನ್ನೊಬ್ಬರಿಗೆ ಅಪರಿಚಿತರಾಗಿ ನಿಂತಿದ್ದೆವು. ನಡುವಿನಲ್ಲಿ ಪ್ರೇಮಿ - ಪ್ರಿಯತಮೆಯ ಸಂಭಂದವಿರಲಿಲ್ಲ,ಆ ಸಂಭಂದ ಈ ೨೫ ವರ್ಷದಲ್ಲಿ ಕೊನೆಯಾಗಿತ್ತು. ಮನಸ್ಸಲ್ಲಿರುವ ವಸುಂದರನ ಪ್ರೀತಿಯು ಮನಸ್ಸಲ್ಲಿದ್ದರೆಯೇ ಸೂಕ್ತ, ವ್ಯಕ್ತ ಪಡಿಸಿದರೆ ಎಲ್ಲಿ ಪುನಃ ಅದು ಆಹುತಿ ತೆಗೆದು ಕೊಂಡಿತೋ ಎಂಬ ಭಯವಿತ್ತು ಮನದಲ್ಲಿ.

ಅವಳೂ ನನ್ನನ್ನು ಅವಳ ಮನಸ್ಸಿನಲ್ಲಿಡಲು ಬಯಸಿದ್ದಳು, ಅವಳಲ್ಲಿಯೂ ನನ್ನದೇ ಭಯ ಮನೆಮಾಡಿತ್ತು. ಇಬ್ಬರಿಗೂ ಒಬ್ಬರೊಬ್ಬರ ಭೂತದ ೨೫ ವರ್ಷದ ಬಗ್ಗೆ ಮಾತಾಡಲು ಮನಸಿರಲಿಲ್ಲ,
ಇಬ್ಬರೂ ವರ್ತಮಾನನದ ಜೀವನದಲ್ಲಿ ಸುಖ ಕಾಣುತ್ತಿದ್ದೆವು, ಇಬ್ಬರಲ್ಲೂ ಎಲ್ಲಿ ಭೂತದ ಬೂತ ಭವಿಷ್ಯದ ಭವಿಷ್ಯವನ್ನು ನುಂಗಿ ಹಾಕೀತೋ ಎಂಬ ಪ್ರಶ್ನೆ ಪೀಡಿಸುತ್ತಿತ್ತು.

ನಾನು ಹೋಗಿರುವ ಕೆಲಸ ಅಂದರೆ ಹಣ ಪಾವತಿ ಬಗ್ಗೆ ಕೇಳುವ ಮೊದಲೇ ಅವಳೂ ಚೆಕ್ ಹರಿದು ನನ್ನ ಕೈಯಲ್ಲಿಟ್ಟಳು. ನಾನು ಧನ್ಯವಾದ ಒಪ್ಪಿಸಲು , ಅವಳ ಆ ಕೋಣೆಯಲ್ಲಿ ನೇತು ಹಾಕಿದ್ದ ಯಶೋದಮ್ಮನ ನಗು ಮತ್ತೆ ಶೋಭಿಸಿತು.

ಚೆಕ್ ನಲ್ಲಿ ಆವಳು ವಸುಂದರ ರಾಜಾರಾಂ ಎಂದು ಸಹಿ ಹಾಕಿದ್ದಳು, ಆವಳು ಮದುವೆ ಆಗಿದ್ದಾಳೆ ಅಂದುಕೊಂಡಿರಾ ..? ಇಲ್ಲ ರಾಜಾರಾಂ ಎಂದರೆ ಅವಳ ತಂದೆಯ ಹೆಸರು.ಸಂಭಂದ ಕಳಚಿದ ಆ ತಂದೆಯನ್ನು ತನ್ನ ಹೆಸರಲ್ಲಿ ಜೋಡಿಸಿದ್ದಳು ಆ ಮಹಾನಾಯಕಿ. ಸಂಭಂದ ಬೆಸೆಯಲು ಬಂದ ಹೆಸರಿಗೆ ಹೆಸರಾಗ ಬೇಕಿದ್ದ ಜನಾರ್ಧನ್ ಯಾರಲ್ಲೂ ಜೋಡಿ ಯಾಗದೆ ಹೋದ.

ಚೆಕ್ ನೊಂದಿಗೆ ಹೊರಬರಲು ೮೦ ರ ಆ ಫಿಯೆಟ್ ೨೫ ವರ್ಷದ ಕೊಳೆ ತೊಳೆದು ಶುಭ್ರವಾಗಿ ನಿಂತಿತ್ತು. ಅರುವತ್ತರ ಆ ವ್ಯಕ್ತಿಯ ಮುಖದಲ್ಲಿ ಏನನ್ನೋ ಸಾಧಿಸಿದ ಕಳೆ ಕಾಣುತಿತ್ತು.


**************************************    ಮುಕ್ತಾಯ *********************************************************
 ಹಿನ್ನುಡಿ : ನಿಜ ಜೀವನದಲ್ಲಿ ಘಟಿಸಿದ ಒಂದು ಪುಟ್ಟ ಘಟನೆಯು ಈ ಕಥೆಗೆ ಪ್ರೇರಣೆ.

ನಿಮ್ಮ
ಕಾಮತ್ ಕುಂಬ್ಳೆ





Rating
No votes yet

Comments