ಉತ್ಸಾಹಗೀತೆ

ಉತ್ಸಾಹಗೀತೆ

ಕವನ

ಉತ್ಸಾಹಗೀತೆ

ಗಗನ ಚುಕ್ಕಿಗಳಂತೆ ಮಿನುಗುತಿಹ ಕಂಗಳಲಿ
ಹೊಳೆ ಹೊಳೆದು ತೋರುತಿದೆ ಭಾರತರ ಕನಸು
ನಲಿವ ಭರ ಗರಿಬಿಚ್ಚಿ ಹಾರುತಿದೆ ಮನಸು ||೧||

ಅಡಿ ಮುಡಿಯ ತನಕ ಎಡೆಬಿಡದೆ ತುಂಬಿದೆ ಹಸಿವು
ಲೋಕ ಲೋಕವ ನುಂಗಿ ತೇಗಬೇಕೆಂದು
ಸಾಕೆನ್ನದೆಲ್ಲವನು ನೋಡಬೇಕೆಂದು ||೨||

ಹಾರು ಹಕ್ಕಿಗಳಲ್ಲಿ ಈಜು ಮೀನುಗಳಲ್ಲಿ
ಓಡುವುದು ಜಿಂಕೆಗಳ ಓಟದಲಿ ಮುಂದು
ಎದೆಗುಡಿಯ ತೋರಣಕೆ ಹಬ್ಬವೆಂದೆಂದು ||೩||

ಬಣ್ಣ ಬಣ್ಣದ ಜಾಲ ಸೃಷ್ಟಿ ವೈಭವದಲ್ಲಿ
ಇಷ್ಟಕೂ ಮಿಗಿಲಾದ ದೃಷ್ಟಿಯೇ ಮೂಲ  
ಇಷ್ಟದೊಳು ದೃಷ್ಟಿಯನು ಇಟ್ಟವರ ನೋಡ ||೪||

ಭೇದವುನ್ನತಿಗಿಲ್ಲ  ಬೆಳಕು ಕತ್ತಲೆಯಲ್ಲ
ಬಾಲತನದೊಳಗಿನಿತು ದೋಷವಿಲ್ಲ
ಸಾಧನೆಯ ಒಳಿತಿನಲಿ ಮೆರೆವುದೆಲ್ಲ ||೫||

ಕಣ್ಣಿನಲಿ ಸೂರ್ಯನೂ  ಕೆನ್ನೆಯಲಿ ಚಂದ್ರನೂ
ಮೈ ಮನಗಳೊಳಗೆಲ್ಲ  ಉತ್ಸಾಹ ತುಂಬಿ
ಹುರುಪುಳ್ಳ ಕಿರಿಯರಲಿ ಭರವಸೆಯ ನಂಬಿ ||೬||

( ಶಾಲಾ ಮಕ್ಕಳ ಆಟ ಪಾಠಗಳನ್ನು ನೋಡುತ್ತಾ ಬರೆದ ಕವನ )
                                                                                                               - ಸದಾನಂದ  

Comments