ಸಸ್ಯದಂತಹ ಸೌರಶಕ್ತಿ ಘಟಕ
ಸಸ್ಯದಂತಹ ಸೌರಶಕ್ತಿ ಘಟಕ
ಸಸ್ಯವು ಇಂಗಾಲದ ಡಯಾಕ್ಸೈಡ್ ಮತ್ತು ನೀರನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸಿಕೊಳ್ಳುತ್ತದೆ.ಇದೇ ಆಧಾರದಲ್ಲಿ ತಯಾರಿಸಿದ ಘಟಕವೊಂದು, ನೀರು ಮತ್ತು ಅಂಗಾರಾಮ್ಲವನ್ನು ಜಲಜನಕ ಅಥವಾ ಇಂಗಾಲದ ಮಾನಾಕ್ಸೈಡ್ ಮಿಶ್ರಣವನ್ನು ಉತ್ಪಾದಿಸುತ್ತದೆ.ಜಲಜನಕವನ್ನು ಇಂಧನಕೋಶದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದು.
ಇಂತಹ ಘಟಕದಲ್ಲಿ ಕ್ವಾರ್ಟ್ಸ್ ಕಿಟಕಿಯ ಮೂಲಕ ಬಿಸಿಲನ್ನು ಕೇಂದ್ರೀಕರಿಸಿ,ಇಂಗಾಲಾಮ್ಲ ಮತ್ತು ನೀರಿನ ಮಿಶ್ರಣವನ್ನು ಯಂತ್ರದೊಳಗೆ ಪಂಪ್ ಮಾಡಲಾಗುತ್ತದೆ.ಕ್ವಾರ್ಟ್ಸ್ ಕಿಟಕಿಯಿಂದ ಬರುವ ಬರುವ ಬಿಸಿಲು,ಸೀರಿಯಮ್ ಆಕ್ಸೈಡ್ ಪದರ(ಸೀರಿಯಾ) ಇರುವ ಕೊಟಡಿಯನ್ನು ಪ್ರವೇಶಿಸುತ್ತದೆ.ಇಲ್ಲಿ ಪ್ರವೇಶಿಸುವ ನೀರು ಮತ್ತು ಇಂಗಾಲಾಮ್ಲದ ಮಿಶ್ರಣ ತಣ್ಣಗಾಗುವ ಕಾರಣ,ಸೀರಿಯಾ ಪದರವು ತಂಪಾಗಿ,ಆಮ್ಲಜನಕವನ್ನು ಹೀರಿಕೊಳ್ಳುತ್ತದೆ.ಇದರಿಂದ ಇಂಗಾಲಾಮ್ಲ ಮತ್ತು ನೀರು ಜಲಜನಕ ಮತ್ತು ಇಂಗಾಲದ ಮಾನಾಕ್ಸೈಡ್ ಆಗಿ ಬದಲಾಗುತ್ತದೆ.ಈ ಘಟಕದ ದಕ್ಷತೆಯು ಸುಮಾರು ಹತ್ತೊಂಭತ್ತು ಪ್ರತಿಶತ ಇರುತ್ತದೆ ಎಂದು ಅಂದಾಜಿಸಲಾಗಿದೆ.ಇದನ್ನು ಅಭಿವೃದ್ಧಿ ಪಡಿಸಿ,ಮಿಥೇನ್ ಉತ್ಪಾದಿಸಲೂ ಬಳಸಬಹುದು ಎನ್ನುವುದು ಈ ವಿಧಾನವನ್ನು ಅಭಿವೃದ್ಧಿ ಪಡಿಸಿದ ಅಮೆರಿಕಾ ಮತ್ತು ಸ್ವಿಸ್ ಸಂಶೋಧಕರ ಲೆಕ್ಕಾಚಾರ.
-----------------------------------------
ಹೊಸ "ಬರಹ"
ಜನಪ್ರಿಯ "ಬರಹ" ತಂತ್ರಾಂಶದ ಹೊಸ ಆವೃತ್ತಿ 10.3 ಈಗ ಸಿದ್ಧವಾಗಿದೆ. ಈಗ ಬರಹವನ್ನು ಇಳಿಸಿಕೊಳ್ಳಲು,ನೋಂದಾಯಿಸಿಕೊಳ್ಳಬೇಕಾಗುತ್ತದೆ.ಹೆಸರು,ಊರು,ಮಿಂಚಂಚೆ,ಭಾಷೆ ಇವುಗಳ ಬಗೆಗಿನ ಮಾಹಿತಿಯನ್ನು ನೀಡಿ ನೋಂದಾಯಿಸಬೇಕು.ಬರಹ ತಂತ್ರಾಂಶದಲ್ಲಿ ಬರಹ ಎಡಿಟರ್,ಬರಹಪ್ಯಾಡ್ ಎಡಿಟರ್ ಎಂಬ ಭಾರತೀಯ ಭಾಷೆಗಳಲ್ಲಿ ಟೈಪಿಸಲು ಸಹಾಯ ಮಾಡುವ ತಂತ್ರಾಂಶ ಹಾಗೂ ಬರಹ ಐ ಎಂ ಇ ಎನ್ನುವ ಯಾವುದೇ ಅಂತರ್ಜಾಲ ಪುಟ ಅಥವಾ ತಂತ್ರಾಂಶದಲ್ಲಿ ಯುನಿಕೋಡಿನಲ್ಲಿ ಭಾರತೀಯ ಭಾಷೆಗಳನ್ನು ಟೈಪಿಸಲು ಅನುವು ಮಾಡುವ ತಂತ್ರಾಂಶಗಳು ಅಡಕವಾಗಿವೆ.ಪದಗಳನ್ನು ಕಾಗುಣಿತ ಪ್ರಕಾರ ವಿಂಗಡಿಸುವ,ಭಾಷಾಂತರಿಸುವ,ಆನ್-ಲೈನ್ ನಿಘಂಟು ಬಳಸಿಕೊಂಡು,ಪದಗಳ ಅಕ್ಷರವನ್ನು ಪರಿಶೀಲಿಸುವ ಸವಲತ್ತುಗಳೀಗ ಹಣ ತೆತ್ತವರಿಗೆ ಮಾತ್ರಾ ಸಮಯದ ಮಿತಿಯಲ್ಲದೆ ಸಿಗುತ್ತವೆ.ಇವುಗಳಿಗೆ ಹನ್ನೊಂದು ಡಾಲರು ತೆರಬೇಕಾಗುತ್ತದೆ.ಬರಹ ಎಸ್ಡಿಕೆ ಎನ್ನುವ ಭಾಷಾ ತಂತ್ರಾಂಶ ಅಭಿವೃದ್ಧಿ ಸಾಧನವೂ ಲಭ್ಯವಿದೆ.ಶೇಷಾದ್ರಿ ವಾಸು ಅವರು ತಮ್ಮ ಜನಪ್ರಿಯ ಪದಸಂಸ್ಕಾರಕವನ್ನು ನಿರಂತರವಾಗಿ ಉತ್ತಮ ಪಡಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.
--------------------------------------
ಬಾಹ್ಯಾಕಾಶದಲ್ಲಿ ಆಂಡ್ರಾಯಿಡ್ ಫೋನ್
ಗೂಗಲ್ ತನ್ನ ನಕ್ಸಸ್ ಸ್ಮಾರ್ಟ್ ಫೋನ್‌ಗಳನ್ನು ಬಾಹ್ಯಾಕಾಶದಲ್ಲಿ ಪರೀಕ್ಷಿಸಿದೆ.ಆಗಸದಲ್ಲಿ ಬುಗ್ಗೆಗಳಿಗೆ ಇವನ್ನು ಸಿಕ್ಕಿಸಿ,ತೇಲಿ ಬಿಟ್ಟು ಪರೀಕ್ಷಿಸಲಾಗಿದೆ.ಇಪ್ಪತ್ತು ಸಾವಿರ ಅಡಿ ಎತ್ತರದಲ್ಲಿ ಸ್ಮಾರ್ಟ್‌ಪೋನ್‌ಗಳು ತೊಂದರೆ ಕೊಡದೆ ಕೆಲಸ ಮಾಡುತ್ತವೆ.ಅರುವತ್ತು ಸಾವಿರ ಅಡಿ ತಲುಪಿದ ಬುಗ್ಗೆಗಳಿಗೆ ಕಟ್ಟಿದ ಫೋನ್‌ಗಳು ಕೆಲಸ ಮಾಡದಿದ್ದದ್ದು ಕಂಡು ಬಂತು.ಮತ್ತೆ ಬುಗ್ಗೆಗಳು ಕೆಳಗಿಳಿದಾಗ ಕೆಲಸ ಮಾಡಲು ಶುರು ಮಾಡಿದುವಂತೆ.ಅರುವತ್ತು ಸಾವಿರ ಅಡಿ ಎಂದರೆ,ವಿಮಾನಗಳೂ ಅಷ್ಟೆತ್ತರ ಹಾರವು.ಸ್ಮಾರ್ಟ್ ಫೋನ್‌ಗಳು ಕೆಲಸ ಮಾಡುತ್ತವೋ ಎಂದು ನೋಡುವುದರ ಜತೆಗೆ,ಇವನ್ನು ಸಣ್ಣ ಉಪಗ್ರಹಳಂತೆ ಬಳಸುವುದನ್ನು ಪರೀಕ್ಷಿಸುವುದು ಗೂಗಲ್‌ನ ಉದ್ದೇಶವಾಗಿರಬಹುದು ಎನ್ನುವುದು ಗುಮಾನಿ.
---------------------------------
"ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ" ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,"ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ" ಪುಸ್ತಕ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಪುಸ್ತಕದ ಲೇಖಕ ಭವಾನಿಶಂಕರ್.ಪುಸ್ತಕದ ಬಗೆಗಿನ ವಿವರಗಳಿಗೆ http://smckannada.blogspot.com
*ಪಾಡ್‌ಕಾಸ್ಟಿಂಗ್ ಅಂದರೇನು?
*ಕನ್ನಡದ ಪ್ರಮುಖ ಪಾಡ್‌ಕಾಸ್ಟಿಂಗ್ ಯಾವುದು?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS11 ನಮೂದಿಸಿ ).
(ಕಳೆದ ವಾರದ ಸರಿಯುತ್ತರಗಳು:
*ವರ್ಷ 2010 ಅತ್ಯಂತ ಪ್ರಮುಖ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆ ಎಂದರೆ ಐಪ್ಯಾಡ್ ಅಂತಹ ಸಾಧನಗಳ ಬಿಡುಗಡೆ ಎಂದು ಸೂಚಿಸಿ ಬಹುಮಾನ ಗೆದ್ದವರು ಅಂಕಿತ್,ಬೆಂಗಳೂರು.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*ರಾಬಿನ್ ಉತ್ತಪ್ಪ ತಮ್ಮ ಹೆಸರನ್ನು ಆನಿಯನ್ ಉತ್ತಪ್ಪ ಎಂದು ಬದಲಾಯಿಸಿ,ಐಪಿಎಲ್‌ನ ಅತಿ ದುಬಾರಿ ಆಟಗಾರ ಎನಿಸಿಕೊಂಡರು.
*ವ್ಯಕ್ತಿಯ ಬಗ್ಗೆ ಹೆಚ್ಚು ಕುತೂಹಲ ಬೇಡ..ಆತನ ಚಿಂತನೆಗಳ ಕಡೆ ಹೆಚ್ಚು ಕುತೂಹಲವಿರಲಿ..
*ವೊಡ್ಕಾದ ಪ್ಲಸ್ ಪಾಯಿಂಟ್ ಎಂದರೆ ಅದು ನೋಡಲು ನೀರಿನ ಹಾಗಿದೆ..ಮತ್ತು ನೀರಿನ ಬಾಟಲ್ ತರಗತಿಗೂ ಒಯ್ಯಬಹುದು...
*ನೀವಿಲ್ಲಿ ಎಷ್ಟು ಸಮಯದಿಂದ ಕೆಲಸ ಮಾಡುತ್ತಿದ್ದೀರಿ? ಕೆಲಸ ಮಾಡದಿದ್ದರೆ ಕಿತ್ತೆಸೆಯುತ್ತೇವೆ ಎಂದು ಬೆದರಿಸಿದ ಬಳಿಕ..!
*ಕ್ಯಾಲರಿ ಎನ್ನುವುದು ನಮ್ಮ ವಾರ್ಡ್ರೋಬ್‌ಗೆ ರಾತ್ರಿಯ ಕಾಲ ನುಗ್ಗಿ,ನಮ್ಮ ಅಂಗಿಯನ್ನು ಬಿಗಿಯುವಂತೆ ಹೊಲಿಯುವ ಜೀವಿ..
-------------------------------------------------
ಉದಯ ಇಟಗಿಯವರ "ಬಿಸಿಲಹನಿ"
ಉದಯ್ ಇಟಗಿಯವರು ಇಂಗ್ಲೀಷ್ ಪ್ರಾಧ್ಯಾಪಕರು.ಮೂಲತ: ಮುಧೋಳದವರಾದ ಇವರೀಗ ಲಿಬಿಯಾ ದೇಶದ ಸಭಾ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಕಲಿಸುತ್ತಿದ್ದಾರೆ.ಕನ್ನಡದ ಇವರ ಬ್ಲಾಗ್ ಬರಹಗಳ ತಾಣ http://bisilahani.blogspot.comದಲ್ಲಿ ತಾನೇಕೆ ಕನ್ನಡದಲ್ಲಿ ಬರೆಯುತ್ತೇನೆ ಎಂಬ ಬಗ್ಗೆಯೂ ಚರ್ಚಿಸಿದ್ದಾರೆ.ಸದ್ಯ ಬೇರೆ ಭಾಷೆಗಳ ಕವನಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸಕ್ಕೂ ಕೈಹಾಕಿದ್ದಾರೆ.ಕನ್ನಡದ ಅಂತರ್ಜಾಲ ತಾಣಗಳಲ್ಲಿ ಬರೆಯುವುದಿವರ ಮೆಚ್ಚಿನ ಹವ್ಯಾಸ.ಕೆಂಡಸಂಪಿಗೆ,ಸಂಪದ ತಾಣಗಳಲ್ಲಿ ಇವರು ಸಕ್ರಿಯ.
------------------------------------------
ಓದುಗರ ಅನಿಸಿಕೆ:ಹ್ಯಾಕರ್ ಎಂದರೇನು?
ಹ್ಯಾಕರ್ ಶಬ್ದವನ್ನು ನುಸುಳುಗಾರ ಎಂದು ಕನ್ನಡೀಕರಿಸಿ ನೀಡಿರುವ ವಿವರಣೆಯ ಬಗ್ಗೆ ಕಾರ್ಕಳದ ತಂತ್ರಜ್ಞ ವಾಸುದೇವ ಕಾಮತ್ ತಕರಾರು ತೆಗೆದಿದ್ದಾರೆ.ಹ್ಯಾಕರ್ ಶಬ್ದವನ್ನು ಜಾಲವನ್ನು ಬೇಧಿಸುವಾತ ಎಂಬರ್ಥದಲ್ಲಿ ಬಳಸುವುದು ಸರಿಯಲ್ಲ-ತಾನು ಹ್ಯಾಕರ್ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿರುವವ.ಹ್ಯಾಕರ್ ಎಂದರೆ,ತನ್ನ ಜಾಣ್ಮೆಯನ್ನು ಬಳಸಿ ಯಾವುದೇ ಸಮಸ್ಯೆಯನ್ನು ಬಗೆಹರಿಸುವವ ಎನ್ನುವ ಅರ್ಥಕೊಡುತ್ತದೆ.ಉದಾಹರಣೆಗೆ ವೈ-ಫೈ ಕಾರ್ಡ್ ಕಂಪ್ಯೂಟರಿನಲ್ಲಿ ಕೆಲಸ ಮಾಡದಿದ್ದರೆ,ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಮಾರ್ಪಡಿಸಿ,ಕಾರ್ಡ್ ಸರಿಯಾಗಿ ಕೆಲಸ ಮಾಡುವಂತೆ ಮಾಡುವಂತಹ ಕೆಲಸಕ್ಕೆ ಹ್ಯಾಕ್ ಎನ್ನುವರು.ಇದನ್ನು ಸಾಧಿಸುವಾತ ಹ್ಯಾಕರ್ ಎನಿಸುವನು ಎನ್ನುವುದವರ ವಿವರಣೆ.ನುಸುಳುಗಾರ ಎನ್ನುವುದು ಕಂಪ್ಯೂಟರ್ ಅಥವ ಜಾಲವನ್ನು ಬೇಧಿಸುವ crackerಗೆ ತತ್ಸಮಾನ ಪದ-ಹ್ಯಾಕರ್‌ಗೆ ಅಲ್ಲ ಎನ್ನುವ ಅನಿಸಿಕೆ ವ್ಯಕ್ತಪಡಿಸಿದ್ದಾರೆ.ಇಂಗ್ಲೀಷ್ ಶಬ್ದಗಳಿಗೆ ಮೂಲದಲ್ಲಿ ಇದ್ದ ಅರ್ಥಗಳು ಕಾಲಾಂತರದಲ್ಲಿ ಬದಲಾಗುತ್ತವೆ.ಸಾಮಾನ್ಯ ಜನರು,ಮಾಧ್ಯಮಗಳಲ್ಲಿ ಅದು ಯಾವ ಅರ್ಥದಲ್ಲಿ ಬಳಸಲ್ಪಡುತ್ತದೆ ಎನ್ನುವುದನ್ನು ಗಣನೆಗೆ ತೆಗೆದುಕೊಂಡರೆ,ಈಗ ಹ್ಯಾಕರ್ ಶಬ್ದವನ್ನು ವ್ಯಾಪಕವಾದ ಅರ್ಥದಲ್ಲಿ ಬಳಸಲಾಗುತಿದೆ.ಅದನ್ನು ವಾಸುದೇವ್ ಹೇಳುತ್ತಿರುವಂತೆ ಸೀಮಿತವಾಗಿ ಬಳಸಲಾಗುತ್ತಿಲ್ಲವೆನಿಸುತ್ತದೆ.
Udayavani Unicode
Udayavani
*ಅಶೋಕ್‌ಕುಮಾರ್ ಎ